ಅರಳುವುದು ನಿನ್ನ ಪಾಳು ಮರುಭೂಮಿ…. : ಒಂದು ಮಕ್’ಫಿ ಪದ್ಯ

ಮೂಲ: ಮಕ್’ಫಿ (ಜೆಬುನ್ನಿಸಾ) | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ಪತಂಗ,
ನಿನ್ನ ಭರವಸೆಯ ರೆಕ್ಕೆಗಳನು
ಸುಡುವಷ್ಟು ತೀಕ್ಷ್ಣವಾಗಿಲ್ಲ
ಈ ಜ್ವಾಲೆ.
ಅರಮನೆಯ ಕೋಣೆಗಳನು
ಬೆಳಗಿಸಲು ಸಾಧ್ಯವಿಲ್ಲ
ಈ ಪಂಜಿಗೆ.

ಕಣ್ಣಂಚು ತುಳುಕಿ
ಮುತ್ತಿನ ಸರ ಕಡಿದಂತೆ
ಹನಿಗಳು ಚೆಲ್ಲಾಪಿಲ್ಲಿ…
ಆಯ್ದು ಪೋಣಿಸಲಿ ಹೇಗೆ ಮತ್ತೆ,
ನನ್ನ ಗುಟ್ಟಿನ ಕಂಠೀಹಾರ !
ಕೇಳು ನನ್ನ ದುರಂತ ಕಥೆ,
ಪ್ರೇಮದಲಿ ವಿದಾಯ ದೀರ್ಘ…
ಕಾದು ಮುಗಿಯದು,
ನಾನು ಮುಗಿದರೂ…
ನಿಟ್ಟುಸಿರಿಗೆ ಕೊನೆಯಲ್ಲಿ?

ಸಾಕಿ,
ನಿನ್ನ ಮಧು ಬಟ್ಟಲಿಗೆ ಸಾಧ್ಯವೇ,
ನನ್ನ ಸಂತೈಸುವುದು?
ವಿರಹ, ತೀರದ ದಾಹ;
ರಕ್ತವೇ ನನಗೆ ನಶೆಯ ಮದಿರೆ.

ಪ್ರೇಮ ಕಥೆಗಳ ಹೀಗೆ,
ಹಾಡುತ್ತ ಹೋಗುವೆನು;
ಬೆಸುಗೆ ಬೆಸೆಯಲಿ ಬಂಧ,
ನೊಂದ ಎದೆಗೆ!

ಕಡಲ ಸುಳಿಗಾಳಿಯಲಿ ಅಲ್ಲೋಲಕಲ್ಲೋಲ…
ಮುರಿದು ಬಿದ್ದಿದೆ ದೋಣಿ;
ಈಗ,
ತಡಿಯಲ್ಲಿ ಕಾದಿದ್ದ ಮನೆಯೂ ಉಧ್ವಸ್ತ!

ಏನಾದರಾಗಲಿ
ಮಕ್‍ಫಿ,
ಅಂತರಂಗದಲಿ ಅನುಕಂಪೆಯ ಕಿಡಿ
ಹೊತ್ತಿದೆಯೋ ನೋಡು ;
ಅರಳುವುದು ನಿನ್ನ ಪಾಳು ಮರುಭೂಮಿ,
ಜನ್ನತಿನ ಅಂಗಳದ ಹೂದೋಟವಾಗಿ !

Leave a Reply