ಖಯಾಮನ ರುಬಾಯಿಗಳು : ಗುಚ್ಛ 3

ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ… | ಕನ್ನಡಕ್ಕೆ ಚಿದಂಬರ ನರೇಂದ್ರ

5

ಗ್ರಹಿಸಬಲ್ಲದಾದರೆ ಹೃದಯ, ಬದುಕಿನ ತಿಳಿವು,
ದೈವದ  ರಹಸ್ಯವನ್ನು  ಕಾಣಿಸುವುದು  ಸಾವು ;
ನಿನಗೇನೂ ಗೊತ್ತಿಲ್ಲ ಇಂದು ನೀನು ನಿನ್ನವನಾಗಿರುವಾಗ.
ಏನು ಗೊತ್ತಾಗುವುದು ನೀನು ಬಿಟ್ಟು ಹೋದಾಗ ಠಾವು?

6

ಸಮುದ್ರಕ್ಕೆ ಎಷ್ಟು ತಾನೆ ಕಟ್ಟುತ್ತೀರಿ ತಡೆಗೋಡೆಗಳನ್ನ ?
ಸ್ಥಾವರಗಳ ನಿರ್ಮಿಸಿ ಎಲ್ಲಿ ಇಡುತ್ತೀರಿ ಜಂಗಮವನ್ನ ?
ಯಾರವರು ನರಕದ ಬಗ್ಗೆ ಹೇಳಿದವರು ಖಯ್ಯಾಮ್ ?
ಯಾವುದದು  ನರಕ, ಸ್ವರ್ಗ ಎನ್ನುತ್ತೀರಿ ಯಾವುದನ್ನ ?

7

ಸನಾತನದ ರಹಸ್ಯಗಳು ನನಗೂ ಗೊತ್ತಿಲ್ಲ ಮತ್ತು ನಿನಗೂ,
ಈ ನಿಗೂಢತೆಯ ಭೇದಿಸುವುದು ನನಗೂ ಸಾಧ್ಯವಿಲ್ಲ ಮತ್ತು ನಿನಗೂ ;
ಇಂದು ನಾವು ಮಾತನಾಡುತ್ತಿರುವುದೆಲ್ಲ ಪರದೆಯ ಈ ಬದಿಯ ವಿಷಯ,
ಕಳಚಿ ಬಿದ್ದಾಗ ಪರದೆ ನನಗೂ ಜಾಗವಿಲ್ಲ ಇಲ್ಲಿ ಮತ್ತು ನಿನಗೂ.

1 Comment

Leave a Reply