ಸಹಿಸಲಾಗದೆ ಹೋದರೆ ಸತ್ಯವೂ ದ್ವೇಷಕ್ಕೆ ಒಳಗಾಗುತ್ತದೆ : ಅಧ್ಯಾತ್ಮ ಡೈರಿ

ತಿರುಳು ಒಂದೇ ಆಗಿದ್ದರೂ ಅದರ ಹೊದಿಕೆಗೆ ತಕ್ಕಂತೆ ನಮ್ಮ ಪ್ರತಿಕ್ರಿಯೆ ಇರುತ್ತದೆ. ಶುಗರ್ ಕೋಟೆಡ್ ಮಾತ್ರೆಗಳ ಹಾಗೆ – ಒಳಗೆ ಕಹಿಯೇ ಇದ್ದರೂ ಅದನ್ನು ಸಾಧ್ಯವಾದಷ್ಟು ಸಹ್ಯಗೊಳಿಸಿಕೊಂಡರಷ್ಟೆ ನಮಗೆ ನುಂಗಲು ಸಾಧ್ಯ | ಅಲಾವಿಕಾ


ಬೀರಬಲ್ಲನ ಕಥೆಯೊಂದು ಹೀಗಿದೆ.
ಒಮ್ಮೆ ಬೀರಬಲ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ, ಅರಳಿಕಟ್ಟೆಯ ಕೆಳಗೆ ಜ್ಯೋತಿಷಿಯೊಬ್ಬನು ತಲೆ ಹೊತ್ತು ಕುಳಿತಿರೋದನ್ನು ನೋಡ್ತಾನೆ. “ಏನಾಯ್ತು?” ಅಂತ ವಿಚಾರಿಸಿದಾಗ. “ನಾನು ಶ್ರೀಮಂತ ವ್ಯಾಪಾರಿಯೊಬ್ಬನಿಗೆ ಜಾತಕ ನೋಡಿ ಹೇಳಿದೆ. ಅವನು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು ನನ್ನ ಮೇಲೇರಿ ಬಂದ. ಅವನ ಆಳುಗಳು ಬಳಿ ಇದ್ದುದನ್ನೆಲ್ಲ ಕಿತ್ತುಕೊಂಡು ಹೋದರು” ಅಂತ ದುಃಖಿಸಿದ.
“ಅಂಥದ್ದೇನು ಇತ್ತು ಅವನ ಜಾತಕದಲ್ಲಿ? ನೀನೇನು ಹೇಳಿದೆ?” ವಿಚಾರಿಸಿದ ಬೀರಬಲ್.
“ಜಾತಕದ ಪ್ರಕಾರ ಅವನ ಕಣ್ಣೆದುರೇ ಅವನ ಕುಟುಂಬದವರು. ಆಪ್ತೇಷ್ಟರೆಲ್ಲ ತೀರಿಹೋಗುತ್ತಾರೆ. ಆತ ಏಕಾಂಗಿಯಾಗಿ ಬದುಕಬೇಕಾಗುತ್ತದೆ. ನಾನು ಅದನ್ನೇ ಹೇಳಿದೆ” ಅಂದ ಜ್ಯೋತಿಷಿ.
ಬೀರಬಲ್ ನಗುತ್ತಾ “ಅದೇ ವಿಷಯವನ್ನು ಹೀಗೂ ಹೇಳಬಹುದಲ್ಲ!?” ಎನ್ನುತ್ತಾ ಬೀರಬಲ್ ಜ್ಯೋತಿಷಿಯ ಕಿವಿಯಲ್ಲಿ ಉಸುರಿದ. “ಇದನ್ನು ವೇಷ ಮರೆಸಿಕೊಂಡು ಹೋಗಿ ಆ ಶ್ರೀಮಂತನಿಗೆ ಹೇಳು. ಬಹುಮಾನಗಳನ್ನು ಕೊಟ್ಟು ನಿನಗೆ ಆದರ ತೋರದೆಹೋದರೆ ಮತ್ತೆ ಹೇಳು!” ಅಂದ.
ಜ್ಯೋತಿಷಿ ವೇಷ ಮರೆಸಿಕೊಂಡು ಶ್ರೀಮಂತನ ಬಳಿ ಹೋದ. ಕವಡೆ ಕುಲುಕಿ ಅವನೆದುರು ಹಾಕಿ ಬೆರಳುಗಳನ್ನು ಮಡಚಿ ಹೇಳಿದ “ಹುಜೂರ್! ನಿಮ್ಮ ಅದೃಷ್ಟವೋ ಅದೃಷ್ಟ!! ನಿಮ್ಮ ಆಯಸ್ಸಿನ ಬಲ ಅದ್ಭುತವಾಗಿದೆ!! ನಿಮ್ಮ ಬಂಧು ಬಾಂಧವರು, ಆಪ್ತೇಷ್ಟರು ಎಲ್ಲರಿಗಿಂತ ನೀವು ಬಹುಕಾಲ ಬದುಕುತ್ತೀರಿ” ಅಂದ.
ಇದನ್ನು ಕೇಳಿ ಶ್ರೀಮಂತನಿಗೆ ಖುಷಿಯಾಯಿತು. “ಎಂಥಾ ಸಂತಸ ನೀಡುವ ವಿಚಾರ ಇದು! ಮೊನ್ನೆ ಒಬ್ಬ ಹಾಳು ಭಾಷೆಯ ಜ್ಯೋತಿಷಿ ಏನೆಂದ ಗೊತ್ತೆ?” ಅನ್ನುತ್ತಾ ತಲೆ ಕೊಡವಿಕೊಂಡು ಈತನಿಗೆ ಬಹುಮಾನಗಳನ್ನು ನೀಡಿ ಕಳುಹಿಸಿದ.
ಸರಿಯಾಗಿ ಗಮನಿಸಿ. ವಾಸ್ತವದಲ್ಲಿ ಜ್ಯೋತಿಷಿ ಹೇಳಿದ ಎರಡೂ ಮಾತುಗಳ ಅರ್ಥ ಒಂದೇ. ಶ್ರೀಮಂತನ ಆಯಸ್ಸು ಜಾಸ್ತಿ ಮತ್ತು ಆತನ ಕುಟುಂಬದ ಇತರರ ಆಯಸ್ಸು ಕಡಿಮೆ. ದೀರ್ಘಾಯುಗಳು ಅಲ್ಪಾಯುಷಿಗಳು ಸಾವಿನ ನಷ್ಟವನ್ನು ಭರಿಸಲೇಬೇಕಾಗುತ್ತದೆ. ಇದನ್ನೇ ಮೊದಲ ಸಲ ಹೇಳುವಾಗ ಜ್ಯೋತಿಷಿ “ನಿನ್ನ ಕುಟುಂಬದವರೆಲ್ಲ ನಿನ್ನ ಕಣ್ಣೆದುರೇ ಸಾಯುತ್ತಾರೆ” ಅಂದ. ಬೀರಬಲ್ಲನ ಸಲಹೆಯಂತೆ ಎರಡನೇ ಬಾರಿ ಹೇಳುವಾಗ “ನೀನು ನಿನ್ನ ಕುಟುಂಬದವರೆಲ್ಲರಿಗಿಂತ ಹೆಚ್ಚು ಕಾಲ ಬದುಕುತ್ತೀಯ” ಅಂದ.

ಮೊದಲನೆ ಹೇಳಿಕೆಯಲ್ಲಿ ನಕಾರಾತ್ಮಕ ಭಾವನೆಗಳನ್ನು ಬಡಿದೆಬ್ಬಿಸುವ ‘ಸಾವು’, ಎರಡನೆ ಹೇಳಿಕೆಯಲ್ಲಿ ಸಕಾರಾತ್ಮಕ ಸಂತಸವನ್ನು ನೀಡುವ ‘ಬದುಕು’ ಅನ್ನುವ ಪದಪ್ರಯೋಗವೇ ಪ್ರಧಾನ. ಅದಕ್ಕೆ ತಕ್ಕಂತೆ ಹೊಮ್ಮಿತ್ತು ಶ್ರೀಮಂತನ ಪ್ರತಿಕ್ರಿಯೆ.

ನಾವಾದರೂ ನಮ್ಮ ಅನುದಿನದ ಬದುಕಿನಲ್ಲಿ ಹೀಗೆಯೇ ಮಾಡುತ್ತೇವೆ ಅಲ್ಲವೆ? ತಿರುಳು ಒಂದೇ ಆಗಿದ್ದರೂ ಅದರ ಹೊದಿಕೆಗೆ ತಕ್ಕಂತೆ ನಮ್ಮ ಪ್ರತಿಕ್ರಿಯೆ ಇರುತ್ತದೆ. ಶುಗರ್ ಕೋಟೆಡ್ ಮಾತ್ರೆಗಳ ಹಾಗೆ – ಒಳಗೆ ಕಹಿಯೇ ಇದ್ದರೂ ಅದನ್ನು ಸಾಧ್ಯವಾದಷ್ಟು ಸಹ್ಯಗೊಳಿಸಿಕೊಂಡರಷ್ಟೆ ನಮಗೆ ನುಂಗಲು ಸಾಧ್ಯ. ಬೀರಬಲ್ ಜ್ಯೋತಿಷಿಗೆ ಗುಟ್ಟಿನಲ್ಲಿ ಹೇಳಿದ್ದೂ ಅದನ್ನೇ.

ನಾವು ಮಾತಾಡುವಾಗ ಸಾಧ್ಯವಾದಷ್ಟೂ ಸೂಕ್ಷ್ಮವಾಗಿರಬೇಕು. ಕೇಳುತ್ತಿರುವವರಲ್ಲಿ ನಕಾರಾತ್ಮಕ ಚಿಂತನೆಗಳನ್ನಾಗಲೀ ಹಿಂಸ್ರಮನಸ್ಕತೆಯನ್ನಾಗಲೀ ಬಿತ್ತುವಂತೆ ಇರಬಾರದು. ಇರುವ ವಿಷಯವನ್ನೇ ಹೇಳುತ್ತಿದ್ದರೂ – ಅದು ಒಳ್ಳೆಯದೇ ಆಗಿರಲಿ, ಕೆಟ್ಟದೇ ಆಗಿರಲಿ; ಅದನ್ನು ಅಭಿವ್ಯಕ್ತಿಸುವ ಬಗೆ ಸಹಿಷ್ಣುವಾಗಿದ್ದರೆ ಲಾಭ ಹೆಚ್ಚು. ಆದ್ದರಿಂದ, ನಿಜವಾದುದನ್ನೇ ಹೇಳಿ, ಸಾಧ್ಯವಾದಷ್ಟು ಸಹ್ಯವಾಗಿ ಹೇಳಿ. ಸಹಿಸಲಾಗದೆ ಹೋದರೆ, ಸ್ವತಃ ಸತ್ಯವೂ ಜನರ ನಡುವೆ ತನ್ನ ಸತ್ವ ಕಳೆದುಕೊಳ್ಳುತ್ತದೆ. ಅಥವಾ ದ್ವೇಷಕ್ಕೆ ಒಳಗಾಗುತ್ತದೆ. ನಮ್ಮ ಮಾತು ಸತ್ಯವನ್ನು ದ್ವೇಷಿಸುವವರ ಸಂಖ್ಯೆ ಹೆಚ್ಚು ಮಾಡುವಂತಿರಬಾರದು, ಅನುನಯಿಸಿ ಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡಬೇಕು. ಅಲ್ಲವೆ?

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply