ಕಂಡಿದ್ದನ್ನು ಖಾತ್ರಿಪಡಿಸಿಕೊಳ್ಳುವುದು: ಗೀತೆಯಲ್ಲಿ ಅರ್ಜುನ ಕಲಿಸುವ ಪಾಠ

ಕೆಲವೊಮ್ಮೆ ನಾವು ಉದ್ವೇಗದಿಂದ ಅತಿಶಯವಾಗಿ ಮಾತನಾಡುತ್ತೇವೆ. ಇಲ್ಲಿ ಅರ್ಜುನ ತಾನು ಉದ್ವೇಗದಿಂದ ಮಾತನಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಆತ ಖಷಿಗಳು, ದೇವರ್ಷಿ ನಾರದರು ಹೇಳಿರುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾನೆ.

ಭಗವದ್ಗೀತೆಯ ಹತ್ತನೇ ಅಧ್ಯಾಯದಲ್ಲಿ ಒಂದು ಶ್ಲೋಕ ಬರುತ್ತದೆ. ಇದರಲ್ಲಿ  ಅರ್ಜುನನು ಶ್ರೀ ಕೃಷ್ಣನನ್ನು ಕುರಿತು;

ಪರಮ್‌ ಬ್ರಹ್ಮ ಪರಮ್‌ ಧಾಮ ಪವಿತ್ರಮ್‌ ಪರಮಮ್‌ ಭವಾನ್॥ ಪುರುಷಮ್‌ ಶಾಶ್ವತಮ್‌ ದಿವ್ಯಮ್‌ ಆದಿದೇವಮ್‌ ಅಜಮ್‌ ವಿಭುಮ್॥ ಆಹುಃ ತ್ವಾಮ್‌ ಋಷಯಃ ಸರ್ವೇ ದೇವ ಖುಷಿ ನಾರದಃ ತಥಾ। ಅಸಿತಃ ದೇವಲಃ ವ್ಯಾಸಃ ಸ್ವಯಂ ಚ ಏವ ಬ್ರವೀಷಿ ಮೇ॥

– ಎಂದು ಕೃತಜ್ಞತಾಪೂರ್ವಕವಾಗಿ ಸ್ತುತಿಸುತ್ತಾನೆ. “ಪೂಜ್ಯನಾದ ನೀನು ಹಿರಿದಕ್ಕಿಂತ ಹಿರಿಯ ತತ್ವ ಹಿರಿಯ ಆಸರೆ. ಪಾವನಗಳಿಗೂ ಪಾವನ. ನಿನ್ನನ್ನು ಗುಣಪೂರ್ಣನಾದ, ಪರಮ “ಪುರುಷ’ನೆಂದು, ಬದಲಾಗದವನೆಂದು, ಲೀಲಾಮಯನೆಂದು, ಎಲ್ಲ ದೇವತೆಗಳಿಗೂ ಮೊದಲಿಗನೆಂದು, ಜನ್ಮರಹಿತನೆಂದು, ಬಗೆಬಗೆಯ ರೂಪಗಳಿಂದ ಎಲ್ಲೆಡೆ ತುಂಬಿರುವವನೆಂದು ಬಲ್ಲವರೆಲ್ಲ ಹೊಗಳುತ್ತಾರೆ. ದೇವರ್ಷಿ ನಾರದ ಕೂಡ. ಅಸಿತ-ದೇವಲರು ಕೂಡ. ವ್ಯಾಸ ಮುನಿ ಹೇಳಿದ್ದುಂಟು. ಸ್ವತಃ ನೀನೂ ನನಗೆ ಹೇಳುತಿದ್ದೀಯೆ’ ಎನ್ನುವುದು ಈ ಶ್ಲೋಕದ ಯಥಾರ್ಥ.

ಭಗವಂತನನ್ನು ದೇವೋತ್ತಮನೆಂದೂ ಪರಮಪುರುಷನೆಂದೂ ಕರೆಯಲಾಗುತ್ತದೆ. ಇಲ್ಲಿಯೂ ಕೂಡ ಅರ್ಜುನ ಕೃಷ್ಣನನ್ನು ‘ಪರಂಬ್ರಹ್ಮ ಪರಂಧಾಮ, ಪರಮಪವಿತ್ರ ನೀನು’ ಎಂದು ಸಂಬೋಧಿಸುತ್ತಾನೆ. ಯಾವುದು ಎಲ್ಲವುದಕ್ಕಿಂತ ದೊಡ್ಡದೋ ಅದು ಬ್ರಹ್ಮ. ಬ್ರಹ್ಮ ಅನ್ನುವ ಪದವನ್ನು ಇನ್ನೂ ಅನೇಕ ಅರ್ಥದಲ್ಲಿ ಬಳಸುತ್ತಾರೆ. ಅದಕ್ಕಾಗಿ ಇಲ್ಲಿ ಸ್ಪಷ್ಟತೆಗಾಗಿ “ಪರಂ ಬ್ರಹ್ಮ’ ಎಂದಿದ್ದಾರೆ. “ಎಲ್ಲಕ್ಕಿಂತ ದೊಡ್ಡವ ಮತ್ತು ನಂಬಿದವರನ್ನು ಎತ್ತರಕ್ಕೇರಿಸುವ ನೀನು ಪರಿಪೂರ್ಣ. ನಾನು ನನ್ನ ವ್ಯಕ್ತಿತ್ವದ ಪೂರ್ಣತೆಯನ್ನು ಕಾಣಲು ನಿನ್ನ ಅನುಗ್ರಹ ಬೇಕು’ ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇನ್ನು ‘ಪರಂ ಧಾಮ’… ‘ಧಾಮ’ ಅಂದರೆ ಆಶ್ರಯ. ಭಗವಂತನನ್ನು ಆಶ್ರಯಿಸದೆ ಇರುವ ಒಂದು ವಸ್ತು ಈ ಜಗತ್ತಿನಲ್ಲಿಲ್ಲ. “ನೀನು ಸರ್ವಸ್ವತಂತ್ರ, ಮತ್ತು ನಾವೆಲ್ಲರೂ ನಿನ್ನ ಅಧೀನ, ನೀನು ಆಶ್ರಯದಾತ ಮತ್ತು ನಾವು ಆಶ್ರಿತರು’ ಎನ್ನುವ ಅರ್ಥದಲ್ಲಿ ಅರ್ಜುನ ಕೃಷ್ಣನನ್ನು ‘ಪರಂ ಧಾಮ’ ಎಂದಿದ್ದಾನೆ.

ತತ್ವಾಭಿಮಾನಿ ದೇವತೆಗಳು ಒಂದೊಂದು ರೂಪದಲ್ಲಿ ನಮಗೆ ಆಶ್ರಯ ನೀಡುತ್ತಾರೆ. ಆದರೆ ಇಂತಹ ದೇವತೆಗಳಿಗೂ ಆಶ್ರಯದಾತನಾಗಿರುವ ಭಗವಂತ ಪರಂ ಧಾಮ. ಸಮಸ್ತ ಜೀವರ ಅನಂತಯಾತ್ರೆಯಲ್ಲಿ ಆಶ್ರಯದಾತನಾಗಿ ಉದ್ಧಾರ ಮಾಡುವ ಭಗವಂತ ಸರ್ವಾಶ್ರಯದಾತ.

ಭಗವಂತ “ಪರಮಪವಿತ್ರ’. ಇಂತಹ ಭಗವಂತನನ್ನು ನಾವು ಪವಿತ್ರತೆಯ ಪ್ರತೀಕವಾದ ಅಗ್ನಿಮುಖೇನ ಉಪಾಸನೆ ಮಾಡುತ್ತೇವೆ. ಅಗ್ನಿ ಸ್ವಯಂ ಪವಿತ್ರ ಮತ್ತು ಅದು ಎಂದೂ ಕೊಳಕಾಗುವುದಿಲ್ಲ. ಅಗ್ನಿ ತನ್ನ ಸ್ಪರ್ಶಕ್ಕೆ ಬಂದ ವಸ್ತುವನ್ನು ಕೊಳೆರಹಿತ ಮಾಡುತ್ತದೆ. ಭಗವಂತ ನಮ್ಮನ್ನು ಮತ್ತು ಪ್ರಪಂಚವನ್ನು ಪಾವನಗೊಳಿಸುವ ಪರಮಶಕ್ತಿ

ಅರ್ಜುನ ಇಲ್ಲಿ ತನ್ನೆಲ್ಲಾ ಭೌತಿಕ ಸಂಬಂಧವನ್ನು ಮೀರಿ ತನ್ನೆದುರು ನಿಂತಿರುವ ಆ ಪರಬ್ರಹ್ಟನನ್ನು ಕಾಣುತ್ತಿದ್ದಾನೆ. “ನನ್ನಲ್ಲಿ ಕೊಳೆ ತುಂಬಿದೆ. ಅಸೂಯೆ ಅಸಹನೆ ತುಂಬಿದೆ. ನಿನ್ನ ಅನುಗ್ರಹದಿಂದ, ಆಶ್ರಯದಿಂದ ನಾನು ಪವಿತ್ರನಾಗಬೇಕು. ನಿನ್ನಿಂದ ನಾನು ಆ ಎತ್ತರಕ್ಕೇರಿ ನನ್ನ ಪೂರ್ಣತೆಯನ್ನು ಪಡೆಯಬೇಕು” ಎನ್ನುವ ಬಯಕೆ ಅರ್ಜುನನ ಈ ಸಂಬೋಧನೆಯಲ್ಲಿದೆ.

ಕೆಲವೊಮ್ಮೆ ನಾವು ಉದ್ವೇಗದಿಂದ ಅತಿಶಯವಾಗಿ ಮಾತನಾಡುತ್ತೇವೆ. ಇಲ್ಲಿ ಅರ್ಜುನ ತಾನು ಉದ್ವೇಗದಿಂದ ಮಾತನಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಆತ ಖಷಿಗಳು, ದೇವರ್ಷಿ ನಾರದರು ಹೇಳಿರುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾನೆ.

ನಮ್ಮ ಕಲ್ಪನೆ ನಮ್ಮ ಮನಸ್ಸಿನ ಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಮನಸ್ಸಿನಲ್ಲಿ ಉತ್ಸಾಹ ಇದ್ದಾಗ ಏನೇನೋ ಹೊಸ ಹೊಸ ಕಲ್ಪನೆಗಳು ಬರುತ್ತವೆ. ಅವೆಲ್ಲವೂ ಸತ್ಯವಾಗಿರಬೇಕೆಂದಿಲ್ಲ. ಹಾಗಾಗಿ ಅವರವರ ಬುದ್ಧಿಮಟ್ಟಕ್ಕೆ ತಕ್ಕಂತೆ ಅವರವರ ಕಲ್ಪನೆ ಹೊರತು ಭಗವಂತ ಹೇಗಿದ್ದಾನೋ ಹಾಗೆ ನಮ್ಮ ಕಲ್ಪನೆ ಇರುವುದಿಲ್ಲ. ಈ ಕಾರಣದಿಂದ ಇಲ್ಲಿ ಅರ್ಜುನ ತನಗೆ ಬಂದ ವಿಚಾರ ತನ್ನ ಬುದ್ಧಿಮಟ್ಟದ ಕಲ್ಪನೆಯಲ್ಲ, ಇದು ವಸ್ತುಸ್ಥಿತಿ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಒಬ್ಬ ಸಾಧಕನಿಗೆ ದೇವರ ಉಪಾಸನೆಯಲ್ಲಿ ಇದು ಬಹಳ ಮುಖ್ಯ ಅಂಶ. ಏಕೆಂದರೆ ನಾವು ದೇವರ ಬಗ್ಗೆ ಏನು ಕಲ್ಪನೆ ಮಾಡಿದರೂ ಅದು ಕೇವಲ ಕಲ್ಪನೆ ಹೊರತು ಸಾಕ್ಷಾತ್ಕಾರವಲ್ಲ. ಆದ್ದರಿಂದ ನಾವು ಕಂಡಿದ್ದೇ – ಅಂದರೆ ‘ಕಲ್ಪಿಸಿಕೊಂಡಿದ್ದೇ’ ಪರಮ ಸತ್ಯ ಎಂದು ತಿಳಿಯದೆ, ಅಧಿಕೃತ ಪ್ರಮಾಣದೊಡನೆ ತಾಳೆ ಹಾಕಿ ಅದನ್ನು ಖಾತ್ರಿ ಪಡಿಸಿಕೊಳ್ಳಬೇಕು ಅನ್ನುವ ಖಚಿತತೆಯನ್ನು ಅರ್ಜುನ ನಮಗೆ ಈ ಮೂಲಕ ಕಲಿಸುತ್ತಿದ್ದಾನೆ.

1 Comment

  1. ಅರಳಿ ಮರ,ಹೆಸರೇ ಅದ್ಭುತ,ಭಗವದ್ಗೀತೆಯ 15 ನೇ ಅಧ್ಯಾಯದಲ್ಲಿ ಭಗವಂತ ಕೃಷ್ಣ ಅಶ್ವತ್ಥ ವೃಕ್ಷದ ಉಪಮೆಯೊಂದಿಗೆ ಪುರುಷೋತ್ತಮ ಯೋಗದ ಅರ್ಥಸಾರ ಸೃಷ್ಟಿಸಾರ

Leave a Reply