ತರುಣನನ್ನು ಬೇಸ್ತು ಬೀಳಿಸಿದ ಮಿಲರೇಪ | Tea time story

ತರುಣನ ಕೋರಿಕೆಗೆ ಮಿಲರೇಪ ನಕ್ಕುಬಿಟ್ಟರು. ತಾನು ಅಂಥದ್ದೇನೂ ಮಂತ್ರ ತಂತ್ರ ಇಲ್ಲವೆಂದು ಹೇಳಿಬಿಟ್ಟರು. ತರುಣನಿಗೆ ಅವರು ಸುಳ್ಳು ಹೆಳುತ್ತಿದ್ದಾರೆ ಅನ್ನಿಸಿತು...


ಮ್ಮೆ ತರುಣ ವಿದ್ಯಾರ್ಥಿಯೊಬ್ಬ ಹಿಮ ಬೆಟ್ಟದ ಮೇಲೆ ಕುಳಿತಿದ್ದ ಮಿಲರೇಪರನ್ನು ಹುಡುಕಿಕೊಂಡು ಬಂದ. ಅವನು ಮಿಲರೇಪರ ಕುರಿತಾಗಿ ಸಾಕಷ್ಟು ಸಂಗತಿಗಳನ್ನು ಕೇಳಿದ್ದ. ಅವರೊಬ್ಬ ಮಹಾತಾಂತ್ರಿಕರೆಂದು ಬೆಟ್ಟದ ಕೆಳಗಿನ ಕಣಿವೆಯಲ್ಲಿ ಮನೆಮಾತಾಗಿದ್ದರು. ಆ ತರುಣ ತಾನು ಅವರಿಂದ ಒಂದಾದರೂ ಮಂತ್ರ ಪಡೆಯಲೇಬೇಕು ಎಂದು ನಿಶ್ಚಯಿಸಿ ಬಂದಿದ್ದ.
ತರುಣನ ಕೋರಿಕೆಗೆ ಮಿಲರೇಪ ನಕ್ಕುಬಿಟ್ಟರು. ತಾನು ಅಂಥದ್ದೇನೂ ಮಂತ್ರ ತಂತ್ರ ಇಲ್ಲವೆಂದು ಹೇಳಿಬಿಟ್ಟರು. ತರುಣನಿಗೆ ಅವರು ಸುಳ್ಳು ಹೆಳುತ್ತಿದ್ದಾರೆ ಅನ್ನಿಸಿತು. ಅಥವಾ ಅವರು ತನ್ನ ಛಲವನ್ನು ಪರೀಕ್ಷಿಸುತ್ತಿರಬಹುದು ಎಂದೂ ಅವನು ಯೋಚಿಸಿದನು. ಮಿಲರೇಪರ ಬೆನ್ನು ಬಿದ್ದು ಕಾಡಿದನು. ನಾಲ್ಕೈದು ದಿನಗಳನ್ನು ಅಲ್ಲೇ ಹಿಮ ಬೆಟ್ಟದ ಮೇಲೇ ಕಳೆದನು.
ಅವನ ರಗಳೆ ತಡೆಯಲಾಗದೆ ಮಿಲರೇಪ ಒಂದು ಎಲೆಯ ಮೇಲೆ ಏನೋ ಗೀಚಿ ಕೊಟ್ಟರು. ಅದನ್ನು ಕೊಟ್ಟು ಏನನ್ನಾದರೂ ಹೇಳುವ ಮೊದಲೇ ತರುಣ ಮಂತ್ರ ಸಿಕ್ಕಿದರೆ ಸಾಕು ಎಂದು ಅದನ್ನು ಕಿತ್ತುಕೊಂಡು ಓಡುತ್ತಾ ಬೆಟ್ಟ ಇಳಿಯತೊಡಗಿದನು. ಮಿಲರೇಪ ಅವನ ಹಿಂದೆಯೇ ಓಡಿದರೂ ಪ್ರಯೋಜನವಾಗಲಿಲ್ಲ. ಬೆಟ್ಟದ ಇಳಿಜಾರಿನಲ್ಲಿ ನಿಂತು ಹಿಂದಿರುಗಿ ನೋಡಿದ ತರುಣನನ್ನು ಕುರಿತು, “ನಾನು ಬಹಳ ಮುಖ್ಯವಾದ ಸಂಗತಿ ಹೇಳಲು ಮರೆತೆ! ಆ ಮಂತ್ರವನ್ನು ಕಲಿಯುವುದೇನೋ ಸರಿ. ಆದರೆ ಯಾವ ಕಾರಣಕ್ಕೂ ಕೋತಿಗಳನ್ನು ನೀನು ನೆನೆಯಬಾರದು” ಎಂದರು.
ಆ ತರುಣ ನಗುತ್ತಾ “ನಾನ್ಯಾಕೆ ಕೋತಿಯನ್ನು ನೆನೆಯಲಿ ಸ್ವಾಮಿ!? ನನ್ನ ಈವರೆಗಿನ ಜೀವಮಾನದಲ್ಲಿ ಒಮ್ಮೆಯೂ ಕೋತಿಗಳನ್ನು ನೆನೆದಿಲ್ಲ. ಈಗ ಹೇಗೆ ನೆನೆಯಲಿ” ಎಂದು ಉಡಾಫೆಯಿಂದ ಕೆಳಕ್ಕಿಳಿಯತೊಡಗಿದನು. ಇಳಿಯುತ್ತ ಇಳಿಯುತ್ತ ಕತ್ತಲಾಗತೊಡಗಿತು. ಅವನ ದಾರಿಗೆ ಅಡ್ಡಲಾಗಿ ಕೋತಿಗಳು ಓಡಾಡುತ್ತಿರುವಂತೆ ಅವನು ಭಾವಿಸತೊಡಗಿದ. ತಲೆ ಎತ್ತಿದರೆ ಮರಗಳ ಮೇಲೂ ಕೋತಿಗಳು. ಎಷ್ಟು ತಲೆ ಕೊಡವಿದರೂ ಅವು ಹೋಗಲೊಲ್ಲವು. ಹೋದರೂ ಒಂದು ಕ್ಷಣದಲ್ಲಿ ಪುನಃ ಹಾಜರು!
ತರುಣ ಮನೆಗ ಹೋಗಿ ಧ್ಯಾನಕ್ಕೆ ಕುಂತ. ಆಗಲೂ ಅವನ ಮನೆ ಮನಸ್ಸಿನ ತುಂಬ ಕೋತಿಗಳೇ. ರಾತ್ರಿ ಮಲಗುವಾಗಲೂ ಅವನಿಗೆ ಕೋತಿಗಳದ್ದೇ ಜಪ!! ಅವನಿಗೆ ಹುಚ್ಚೇ ಹಿಡಿದಂತಾಯಿತು. “ಕೋತಿಗಳನ್ನು ಯಾವ ಕಾರಣಕ್ಕೂ ನೆನೆಯಬೇಡ” ಎಂದು ಮಿಲರೇಪ ಹೇಳಿದಾಗಿಂದ ಅವನು ಬರೀ ಕೋತಿಗಳನ್ನೇ ನೆನೆಯತೊಡಗಿದ್ದ
ಮಾರನೇ ದಿನ ಸೂರ್ಯನ ಕಿರಣಗಳು ಗುಹೆಯ ಒಳಗೆ ತೂರಿ ಮಿಲರೇಪನನ್ನು ಎಬ್ಬಿಸುವ ಹೊತ್ತಿಗೆ ಅದರ ಬಾಗಿಲಲ್ಲಿ ಒಂದು ಎಲೆ ನೇತಾಡುತ್ತಿತ್ತು. ಅದರಲ್ಲಿ ಹಿಂದಿನ ಸಂಜೆ ಮಿಲರೇಪ ತರುಣನಿಗೆ ಗೀಚಿಕೊಟ್ಟಿದ್ದ ಮಂತ್ರವಿತ್ತು!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

  1. ಮನವೆಂಬ ಮರ್ಕಟ ಎಂದುಹೇಳುವುದು ಬಹುಶಃ ಇದಕ್ಕೇ ಇರಬಹುದು. ಯಾವುದು ಬೇಡವೆಂದು ಹೇಳುತ್ತೇವೆಯೋ ಅದನ್ನೇ ಇನ್ನೊಂದು ಕಡೆ ಮನಸ್ಸು ತೀವ್ರವಾಗಿ ಬಯಸತೊಡಗುತ್ತದೆ. ಅತ್ಯುತ್ತಮ ಉದಾಹರಣೆಯಾಗಿ ನೀಡಿದವರು ಮಿಲರೇಪರು.

    Like

Leave a reply to ಪರಶಿವಪ್ಪ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.