ತಿಳಿವಿನ ಬೆಳಕನ್ನು ಹಂಚುವುದೇ ‘ಉಪದೇಶ’ : ಓಶೋ ಲಹರಿ

ಅಂತರಂಗದಲ್ಲಿ ಯಾವ ತಿಳಿವು ಮೂಡಿದೆಯೋ ಅದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ಉಪದೇಶ. ತಿಳಿವು ಪಡೆದವರಂತೂ ಅದನ್ನು ಹಂಚಿಕೊಳ್ಳಲು ಸಿದ್ಧವಿದ್ದಾರೆ; ಅದನ್ನು ಯಾರಾದರೂ ಪಡೆಯಲು ಬಂದರೆ ಒಳ್ಳೆಯದೇ. ಯಾರೂ ಬರದೇ ಹೋದರೆ ನಷ್ಟವಂತೂ ಇಲ್ಲ.


ಬ್ಬ ವ್ಯಕ್ತಿ ತನ್ನೊಳಗೆ ಪ್ರಕಟವಾಗಿರುವ ಜ್ಞಾನವನ್ನು ಹಂಚಿಕೊಳ್ಳುವುದೇ ಉಪದೇಶ. “ನಾನು ಉಪದೇಶ ನೀಡುತ್ತೇನೆ, ಆದೇಶವನ್ನಲ್ಲ” ಎನ್ನುತ್ತಾನೆ ಮಹಾವೀರ. ಆದೇಶದಲ್ಲಿ ಆಗ್ರಹಪೂರ್ವಕವಾಗಿ ಮತ್ತೊಬ್ಬರ ಮೇಲೆ ಏನನ್ನೋ ಹೇರುವ ಪ್ರಯತ್ನವಿರುತ್ತದೆ. ಅದೊಂದು ಶ್ರಮ, ಅದೊಂದು ಆಯಾಸ. ಮತ್ತೊಬ್ಬರು ಅದನ್ನು ಒಪ್ಪಿಕೊಂಡರೆ ಮಾತ್ರ ಅಲ್ಲಿ ಪ್ರಸನ್ನತೆ. ಇಲ್ಲವಾದರೆ ಅಪ್ರಸನ್ನತೆ. ಆದೇಶದಲ್ಲಿ ಸಫಲತೆ, ಅಸಫಲತೆಗಳೆರಡೂ ಇವೆ. ಆದರೆ ಉಪದೇಶ ಹಾಗಲ್ಲ. ಅದು ಹೇರಿಕೆಯಲ್ಲ, ಹಂಚಿಕೊಳ್ಳುವ ಪ್ರಕ್ರಿಯೆ.

ಅಂತರಂಗದಲ್ಲಿ ಯಾವ ತಿಳಿವು ಮೂಡಿದೆಯೋ ಅದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ಉಪದೇಶ. ತಿಳಿವು ಪಡೆದವರಂತೂ ಅದನ್ನು ಹಂಚಿಕೊಳ್ಳಲು ಸಿದ್ಧವಿದ್ದಾರೆ; ಅದನ್ನು ಯಾರಾದರೂ ಪಡೆಯಲು ಬಂದರೆ ಒಳ್ಳೆಯದೇ. ಯಾರೂ ಬರದೇ ಹೋದರೆ ನಷ್ಟವಂತೂ ಇಲ್ಲ. ಇದು ಹೇಗೆಂದರೆ, ಹಗಲಲ್ಲಿ ಸೂರ್ಯ, ಇರುಳಲ್ಲಿ ಚಂದ್ರ ತಾರೆಗಳು ಆಕಾಶದಲ್ಲಿ ಮೂಡುತ್ತವೆ. ಸೂರ್ಯ ಬಂದಾಗ ಅದರ ಬೆಳಕನ್ನು ಪಡೆಯಿರಿ ಎಂದು ಯಾರೂ ಆಗ್ರಹಿಸುವುದಿಲ್ಲ. ಇರುಳಲ್ಲಿ ಚಂದ್ರ ತಾರೆಯರ ತಂಪನ್ನು – ಸೌಂದರ್ಯವನ್ನು ಅನುಭವಿಸಿ ಎಂದೂ ಒತ್ತಾಯಿಸುವುದಿಲ್ಲ. ನಾವು ಬೇಕಿದ್ದರೆ ಅವನ್ನು ಅನುಭವಿಸಬಹುದು. ಸೂರ್ಯ – ಚಂದ್ರ – ತಾರೆಗಳಂತೂ ಮೂಡುತ್ತವೆ, ಹೋಗುತ್ತವೆ. ಅಷ್ಟೇ.

ಉಪದೇಶದ ಅರ್ಥವೆಂದರೆ, ನನ್ನೊಳಗೆ ಪ್ರಕಟವಾಗಿರುವ ಜ್ಞಾನದಲ್ಲಿ ನೀವು ಭಾಗಿಯಾಗಿರಿ ಎಂದು. ಆದ್ದರಿಂದಲೇ ನಾನು ಹೇಳುತ್ತೇನೆ, ಗಮನವಿಡಿ, ಜ್ಞಾನಿಗಳ ನುಡಿಗಳು ಇಲ್ಲದಿದ್ದರೆ ಉಪನಿಷತ್ತುಗಳಾಗಲೀ ಭಗವದ್ಗೀತೆ – ಬೈಬಲ್ – ಕುರಾನ್ ಆಗಲೀ ಯಾವುದೂ ಇರುತ್ತಿರಲಿಲ್ಲ. ಜ್ಞಾನಿಗಳ ನುಡಿಗಳು ಹಂಚಲ್ಪಟ್ಟಿದ್ದರಿಂದಲೇ ಇಂದು ನಾವು ಹೀಗಿದ್ದೇವೆ. ಇಲ್ಲವಾದರೆ ನಮ್ಮಲ್ಲಿ ಅಧ್ಯಾತ್ಮ ಚಿಂತನೆ ಮೊಳೆಯುತ್ತಿರಲೇ ಇಲ್ಲ. ನಾವು ಕಾಡಿನಲ್ಲಿಯೇ ಇರುತ್ತಿದ್ದೆವು. ಪ್ರಾಣಿಗಳಂತೆ ಇರುತ್ತಿದ್ದೆವು.

ಆದರೆ ನಾವಿಂದು ಕಾಡಿನಿಂದ, ಪ್ರಾಣಿಗಳ ಹಂತದಿಂದ ದೂರ ಬಂದಿದ್ದೇವೆ. ವಿಕಸನದ ಹಾದಿಯಲ್ಲಿ ನಡೆದಿದ್ದೇವೆ. ಈ ದಾರಿಯನ್ನು ನಮಗೆ ತೋರಿದ್ದು ಜ್ಞಾನಿಗಳ ಅಂತರಂಗದ ಬೆಳಕು. ಅದನ್ನು ಅವರು ಉಪದೇಶಗಳ ಮೂಲಕ ಇತರರೊಂದಿಗೆ ಹಂಚಿಕೊಂಡಿದ್ದರಿಂದ ಹಲವು ಹಣತೆಗಳು ಹೊತ್ತಿಕೊಂಡವು. ತಲೆಮಾರುಗಳು ಬೆಳಕಾಗುತ್ತ ನಡೆದವು.

ಜ್ಞಾನ ಪಡೆದ ಹಣತೆಯಂತೂ ಬೆಳಗುತ್ತ ಇರತ್ತದೆ. ಅದನ್ನು ನಮ್ಮ ಹಣತೆಗೆ ಸೋಕಿಸಿಕೊಂಡು ನಾವೂ ಬೆಳಕಾಗಬಹುದು. ನಿಮ್ಮ ಮೇಲೆ ಹೇರಿಕೆಯೇನಿಲ್ಲ. ಬೆಳಕಂತೂ ಇರುತ್ತದೆ. ಅದನ್ನು ಪಡೆಯುವುದು, ಬಿಡುವುದು ನಿಮ್ಮ ಆಯ್ಕೆ.

Leave a Reply