ಅಧ್ಯಾತ್ಮ ಡೈರಿ : ಮಡಕೆಯೊಳಗೆ ಕೈಹಾಕಿದ ಮಂಗನ ಸ್ಥಿತಿ ನಮ್ಮದು

ಸಂಬಂಧದ ಸವಿಯನ್ನು ನಾವು ಉಣ್ಣಬೇಕು. ಹಾಗೆ ಉಣ್ಣಬೇಕೆಂದರೆ ಅದನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಮಡಕೆಯನ್ನು ಬೋರಲು ಹಾಕಿದರೆ ಒಳಗಿರುವ ತಿನಿಸು ಹೊರಗೆ ಬರುತ್ತದೆ ಎಂದು ಯೋಚಿಸುವ ವ್ಯವಧಾನವೂ ನಮಗಿರುವುದಿಲ್ಲ. ನಾವು ಸಂಬಂಧವನ್ನು ಹಿಡಿದಿಟ್ಟುಕೊಂಡು ಅನುಭವಿಸಲು ಬಯಸುತ್ತೇವೆ ~ ಅಲಾವಿಕಾ

ಒಂದು ಮಂಗ ಮಡಕೆಯಲ್ಲಿ ಕೈ ಹಾಕಿದೆ. ಮಡಕೆಯೊಳಗಿನ ತಿಂಡಿಯನ್ನು ತೆಗೆದುಕೊಳ್ಳಲು ಅದು ಕೈ ಹಾಕಿದ್ದು. ಆದರೀಗ ಕೈಯನ್ನು ಹೊರಗೆ ತೆಗೆಯಲಾಗದೆ ಪರದಾಡುತ್ತಿದೆ. ಕೀಚ್ ಕೀಚ್ ಎಂದು ಕೂಗುತ್ತಾ ಆತಂಕದಲ್ಲಿ ಕುಣಿದಾಡುತ್ತಿದೆ. ಅದರ ಈ ‘ಮಂಗಾಟ’ವನ್ನು ಕಂಡು ಸುತ್ತಲಿನ ಸಹಜೀವಿಗಳು ಕಂಗಾಲು. ಮಂಗ ಏನು ಮಾಡಿದರೂ ಕೈಯನ್ನು ಮಡಕೆಯಿಂದ ಹೊರಗೆ ತೆಗೆಯಲಾಗುತ್ತಿಲ್ಲ!
ಒಂದಷ್ಟು ಸಹಜೀವಿಗಳು ಬಂದು ಅದೂ ಇದೂ ಸಲಹೆ ನೀಡಿದವು. ವರ್ಕೌಟ್ ಆಗಲಿಲ್ಲ. ಕೈಯನ್ನು ಮಡಕೆಯೊಳಗಿಂದ ಹೊರಗೆ ತೆಗೆಯಲು ಸಾಧ್ಯವಾಗುತ್ತಲೇ ಇಲ್ಲ!!

ಈ ಗದ್ದಲವನ್ನು ನೋಡಿ ಜಾಣ ಪ್ರಾಣಿಯೊಂದು ಬಂದಿತು. ಸನ್ನಿವೇಶವನ್ನು ಗಮನಿಸಿತು. “ಮಡಕೆಯೊಳಗೆ ಕೈ ಹಾಕಿದ್ಯಾಕೆ?” ಎಂದು ಮಂಗನನ್ನು ಪ್ರಶ್ನಿಸಿತು. ಮಂಗ ತಲೆ ತಗ್ಗಿಸಿ “ತಿಂಡಿ ತೆಗೆದುಕೊಳ್ಳಲಿಕ್ಕೆ” ಅಂದಿತು.
“ಮೊದಲು ನಿನ್ನ ಮುಷ್ಟಿ ಬಿಚ್ಚು, ಕೈ ಹೊರಗೆ ಬರುತ್ತದೆ” ಅಂದಿತು ಜಾಣ ಪ್ರಾಣಿ.
ಮಂಗ ಮುಷ್ಟಿ ಬಿಚ್ಚಿ ಕೈ ಮೇಲೆಕ್ಕೆ ಎಳೆದುಕೊಂಡ ಕೂಡಲೇ ಮಡಕೆಯಿಂದ ಅದು ಹೊರಬಂತು!!

ನಮ್ಮ ಪರಿಸ್ಥಿತಿ ಈ ಮಂಗನಿಗಿಂತ ಬೇರೆಯಲ್ಲ. ನಾವು ಮಡಕೆಯೊಳಗಿನ ತಿಂಡಿಯನ್ನು ಬಿಡಲು ತಯಾರಿಲ್ಲ, ಆದರೆ ಮಡಕೆಯೊಳಗೇ ಕೈಯನ್ನು ಇಟ್ಟುಕೊಂಡಿರಲೂ ತಯಾರಿಲ್ಲ. ತಿಂಡಿಯನ್ನು ತಿನ್ನಬೇಕೆಂದರೆ ಮಡಕೆಯಿಂದ ತಿಂಡಿಯ ಸಮೇತ ಕೈ ಹೊರತೆಗೆಯಲೇಬೇಕು. ಆದರೆ ಮುಷ್ಟಿಗಟ್ಟಿದ ಕೈ ಮಡಕೆಯ ಚಿಕ್ಕ ಬಾಯಿಂದ ಹೊರಗೆ ಬರುವುದಿಲ್ಲ!!

ಇಲ್ಲಿ ತಿಂಡಿ ಅನ್ನುತ್ತಿರುವುದು ಸಂಬಂಧಗಳನ್ನು. ಸಂಬಂಧದ ಸವಿಯನ್ನು ನಾವು ಉಣ್ಣಬೇಕು. ಹಾಗೆ ಉಣ್ಣಬೇಕೆಂದರ ಅದನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಮಡಕೆಯನ್ನು ಬೋರಲು ಹಾಕಿದರೆ ಒಳಗಿರುವ ತಿನಿಸು ಹೊರಗೆ ಬರುತ್ತದೆ ಎಂದು ಯೋಚಿಸುವ ವ್ಯವಧಾನವೂ ನಮಗಿರುವುದಿಲ್ಲ. ನಾವು ಸಂಬಂಧವನ್ನು ಹಿಡಿದಿಟ್ಟುಕೊಂಡು ಅನುಭವಿಸಲು ಬಯಸುತ್ತೇವೆ. ಹಾಗೆ ಹಿಡಿತದಲ್ಲಿ ಇಟ್ಟುಕೊಂಡರೆ ಯಾವ ಸಂಬಂಧವೂ ತನ್ನ ಪರಿಧಿಯನ್ನು ಬಿಟ್ಟು ನಮ್ಮತ್ತ ಬರಲಾರದು. ನಮ್ಮೊಳಗೆ ಇಳಿಯಲಾರದು. ಅದಕ್ಕೆ ಹಿಡಿತವೇ ತಡೆಯಾಗಿಬಿಡುವುದು.

ಆದರೆ ನಾವು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹಿಡಿತವನ್ನು ನಮ್ಮ ಉತ್ಕಟ ಪ್ರೇಮವೆಂದೇ ವಾದಿಸ್ತೇವೆ. ಅದನ್ನು ಮುಚ್ಚಟೆ ಎಂದು ಸಾಧಿಸ್ತೇವೆ. ವಾಸ್ತವದಲ್ಲಿ ನಮ್ಮ ಹಿಡಿತಕ್ಕೆ ಸಿಕ್ಕಿರುವ ಸಂಬಂಧ ಉಸಿರುಗಟ್ಟಿ ಒದ್ದಾಡುತ್ತಾ ಇರುತ್ತದೆ. ತಪ್ಪಿಸಿಕೊಂಡರೆ ಸಾಕು ಅನ್ನಿಸಲೂ ಬಹುದು. ಅದೇ ನಾವು ಸಂಬಂಧವನ್ನು ಅದರ ಪಾಡಿಗೆ ಬಿಟ್ಟರೆ, ಸಹಜವಾಗಿ ಅದು ತನ್ನ ಪರಿಧಿಯಲ್ಲಿರುವ ವ್ಯಕ್ತಿಯನ್ನು ನಿಮ್ಮ ಪರಿಧಿಗೆ ಸೆಳೆದು ತರುವುದು. ನಿಮಗೇನು ಬೇಕೋ ಅದು ದೊರೆಯುವುದು. ಆದರೆ ನಮಗೆ ಅಂಥದೊಂದು ಆಲೋಚನೆಯೇ ಇಲ್ಲ. ನಮಗೆ ಭಯ. ಕೈಬಿಟ್ಟರೆ ಕಳೆದುಹೋಗುತ್ತದೆ ಅನ್ನುವ ಭಯ. ನಾವು ಮುಷ್ಟಿ ಬಿಚ್ಚಲು ತಯಾರಿಲ್ಲ. ಆದ್ದರಿಂದಲೇ ನಮ್ಮಲ್ಲಿ ಚಡಪಡಿಕೆ ಹುಟ್ಟುತ್ತದೆ. ಈ ಭಯದಲ್ಲಿ ನಾವು ಕೆಲವೊಮ್ಮೆ ವಿಕೃತಿಗೂ ಇಳಿಯುತ್ತೇವೆ. ಸಂಬಂಧಿತರನ್ನು, ಸಂಗಾತಿಯನ್ನು ಹಿಂಸೆ ಮಾಡುತ್ತೇವೆ. ಮತ್ತು ಇವೆಲ್ಲವನ್ನೂ ನಾವು ಸಂಬಂಧವನ್ನು ಉಳಿಸಲಿಕ್ಕಾಗಿಯೇ ಮಾಡ್ತಿದ್ದೇವೆಂದು ನಂಬಿಕೊಂಡಿರುತ್ತೇವೆ.

ಇಂಥಾ ಸಂದರ್ಭದಲ್ಲಿ ನಮಗೆ ಎದುರಾಗುವ ಗೆಳೆಯರೂ ಇತರರೂ ಸರಿಯಾದ ಸಲಹೆ ನೀಡುವುದಿಲ್ಲ. ಬಹುತೇಕರು ‘ಸಂಬಂಧ ಉಳಿಸಿಕೊಳ್ಳುವ’ ಬಗ್ಗೆಯೇ ಮಾತನಾಡುತ್ತಾರೆ ಹೊರತು ಅದನ್ನು ಸಾಧ್ಯವಾಗಿಸುವುದು ಎಂಬುದನ್ನು ಹೇಳುವುದಿಲ್ಲ. ಎಲ್ಲೋ ಆ ಜಾಣಪ್ರಾಣಿಯಂಥ ಕೆಲವರಿಗೆ ಮಾತ್ರವೇ ಅದು ತಿಳಿಯುವುದು. “ಹಿಡಿದುಕೊಳ್ಳುವಂಥದ್ದು ಏನೂ ಇಲ್ಲ, ಬಿಡುವಂಥದ್ದೂ ಏನೂ ಇಲ್ಲ” ಎಂಬುದನ್ನು ಅವರು ಬಲ್ಲರು. ಇವೆಲ್ಲ ಒದ್ದಾಟಗಳು ನಾವೇ ಬಿಟ್ಟುಕೊಳ್ಳುವ ಇರುವೆಗಳು ಎಂದು ನಮಗೆ ಅರ್ಥ ಮಾಡಿಸುವರು. ಅಂಥವರ ಸಹವಾಸ ನಮಗೆ ಒದಗಬೇಕಷ್ಟೆ.

ಇಷ್ಟಕ್ಕೂ ಈ ಮಾತು ನಿಜವೇ. ಹಿಡಿದುಕೊಳ್ಳುವಂತದ್ದಾದರೂ ಏನಿದೆ? ಸಂಬಂಧ ಅಂದರೆ ಇಬ್ಬರು ವ್ಯಕ್ತಿಗಳು ಸ್ವತಂತ್ರವಾಗಿರುವುದು ಮತ್ತು ಒಬ್ಬರಿಗೊಬ್ಬರು ಪೂರಕವಾಗಿರುವುದು. ಸ್ವತಂತ್ರವಾಗಿರುವಂಥವಷ್ಟೇ ಪೂರಕವಾಗಿರಬಲ್ಲವು. ಆದ್ದರಿಂದ ನಾವಿಲ್ಲಿ ಬಿಟ್ಟುಕೊಡುವಂತದ್ದು ಕೂಡಾ ಏನಿಲ್ಲ.

Leave a Reply