ಅಲೆಮಾರಿತನವೊಂದು ಸುಂದರ ಧ್ಯಾನ!

“ಡಿಜಿಟಲ್ ಅಲೆಮಾರಿ, ಒಂಟಿ ತಿರುಬಿಕ್ಕಿ, ಯೋಗ , ಧ್ಯಾನ, ಕುಂಡಲಿನಿ, ಮೋಕ್ಷ ಎಲ್ಲವೂ ಎಂತಹ ಸೊಗಸಾದ ಸಮಕಾಲೀನ ಸಾಂಪ್ರದಾಯಿಕ ಹಾಸ್ಯಗಳಾಗಿಬಿಟ್ಟಿವೆ! ನನ್ನ ಪಾಲಿಗೆ ತಿರುಗಾಟ ಶರಣಾಗತಿಯ ಉತ್ಕೃಷ್ಟ ಚಿಂತನ ಮಾರ್ಗವಷ್ಟೇ” ಅನ್ನುತ್ತಾರೆ ಚಾರಣಗಿತ್ತಿ, ಪ್ರವಾಸಿ, ಹವ್ಯಾಸಿ ಬರಹಗಾರ್ತಿ ಕಾಂತಿ ಹೆಗ್ಡೆ

ರಿಷಿಕೇಶದ ಹೊರಗಿರುವ ಗುಹೆಯೊಂದರಲ್ಲಿ ಆಕಸ್ಮಿಕವಾಗಿ ಸಂತರೊಬ್ಬರ ಸಮ್ಮುಖದಲ್ಲಿ ಆ ದಿನ ಕುಳಿತಿದ್ದೆ. ನಿಮ್ಮ ಕುಂಡಲಿನಿ ಜಾಗೃತವಾಗಿದೆಯೇ? ಎಂದು ಅವರು ಹಾಸ್ಯಾಸ್ಪದವಾಗಿ ಕೇಳುತ್ತಲೇ, ನಾನು ಇರಬಹುದು ಗೊತ್ತಿಲ್ಲ ಎಂದು ನಕ್ಕಿದ್ದೆ.

ಡಿಜಿಟಲ್ ಅಲೆಮಾರಿ, ಒಂಟಿ ತಿರುಬಿಕ್ಕಿ, ಯೋಗ , ಧ್ಯಾನ, ಕುಂಡಲಿನಿ, ಮೋಕ್ಷ ಎಲ್ಲವೂ ಎಂತಹ ಸೊಗಸಾದ ಸಮಕಾಲೀನ ಸಾಂಪ್ರದಾಯಿಕ ಹಾಸ್ಯಗಳಾಗಿಬಿಟ್ಟಿವೆ! ನನ್ನ ಪಾಲಿಗೆ ತಿರುಗಾಟ ಶರಣಾಗತಿಯ ಉತ್ಕೃಷ್ಟ ಚಿಂತನ ಮಾರ್ಗವಷ್ಟೇ. “ಶರಣಾಗತಿ” ಯನ್ನೇ ಗೀತೆಯ ತುಂಬೆಲ್ಲ ಶ್ರೀಕೃಷ್ಣ ಅರ್ಜುನನಿಗೆ ಸಾಧ್ಯಂತವಾಗಿ ಉಪದೇಶಿಸುತ್ತಾನೆ.

ಎಂಥಹ ಸೂಕ್ಷ್ಮ, ಅರ್ಥಪೂರ್ಣ ಆದಾಗ್ಯೂ ಆಚರಣೆಗೆ ಕಷ್ಟಸಾಧ್ಯ ಮನಸ್ಥಿತಿ ಶರಣಾಗತಿ. ನಮ್ಮನ್ನು ಸಂಪೂರ್ಣವಾಗಿ ಸರ್ವೋಚ್ಛ ಧೀ ಶಕ್ತಿಗೆ ಸಮರ್ಪಿಸಿಕೊಂಡು ನಿರಾಳವಾಗಿ ಬದುಕಿಬಿಡುವುದು. ಪ್ರತಿ ಜೀವಿಯ ಅಂತಿಮ ಧ್ಯೇಯ ಶರಣಾಗತಿ. ಭೂತ, ಭವಿಷ್ಯತ್ತಿನ ಕೋಟಲೆಗಳ ತೊಟ್ಟು ಕಳಚಿ ಕಾಲನ ವರ್ತಮಾನವೇ ಸಂಪೂರ್ಣ ಸತ್ಯವೆಂದೇ ನಂಬಿದ ಪರಿಪೂರ್ಣ ಶರಣಾಗತಿ. ವರ್ತಮಾನವೂ ಕಾಲದ ಕಾಲಿಗೆ ಸಿಕ್ಕಿ ಭವಿಷ್ಯತ್ತಿನಲ್ಲಿ ಭೂತವಾಗುವ ಅಕಾಲ್ಪನಿಕ ಸತ್ಯದ ಸಾಕ್ಷಾತ್ಕಾರ ಶರಣಾಗತಿ. ಮಾನಸಿಕ ದೈಹಿಕ ಆಸೆಗಳ, ಸಂಬಂಧಗಳ ಬೇರು ಕಿತ್ತು ನಿರುಮ್ಮಳವಾಗಿ ತೇಲುತ್ತಾ ಸಾಗಿಬಿಡುವ ವಾಸ್ತವ ಶರಣಾಗತಿ. ಧ್ಯಾನವೆಂಬ ಆಚರಣೆಯ ಧ್ಯೇಯ ಶರಣಾಗತಿ.

ಹೀಗೊಂದು ಶರಣಾಗತಿಯ ಭಾವ ಉದ್ಭವವಾಗುವ ಉತ್ಕೃಷ್ಟ ಧ್ಯಾನಸ್ಥಿತಿ “ನಾನು, ನನ್ನದು, ನನ್ನಿಂದಲೇ” ಎಂಬುದನ್ನು ಮರೆತು ಕಾಲನ ಕೈ ಗೆ ನನ್ನನ್ನು ಸಮರ್ಪಿಸಿಕೊಂಡಾಗಲೇ. ತನ್ನದೆಲ್ಲವನ್ನೂ ಬಿಟ್ಟು ಆತ್ಮಾವಲೋಕನದ ಕದ ತೆರೆದು, ರೂಪಾಂತರಗಳನ್ನೂ ಮನಸ್ಪೂರ್ವಕವಾಗಿ ಒಪ್ಪಿಕೊಂಡು-ಅಪ್ಪಿಕೊಂಡು ನಾನು ಸರ್ವ ಸಾಮಾನ್ಯ ಅಣುವೆಂಬ ಅರಿವು ಮೂಡಿಸಿಕೊಳ್ಳುವುದೇ ಶರಣಾಗತಿ.

ಗೀತೆ ಪುರಾಣವೋ, ಇತಿಹಾಸವೋ ವಿಶ್ಲೇಷಣೆಗೆ ಬಿಟ್ಟಿದ್ದು. ಶ್ರೀಕೃಷ್ಣ ವ್ಯಾಸರು ಸೃಷ್ಟಿಸಿದ ಕಾಲ್ಪನಿಕ ಪಾತ್ರವೋ, ಸರ್ವೋಚ್ಚ ದೇವರೋ ಎಂಬುದು ಅವರವರ ಭಾವಕ್ಕೆ ಬಿಟ್ಟ ನಂಬುಗೆ. ನಾವೆಲ್ಲರೂ ಮಂಡಿಯೂರಿ ಕುಳಿತ ಅರ್ಜುನರು ಮಾತ್ರ. ಶ್ರೀಕೃಷ್ಣ ಅರ್ಜುನನಿಗೆ ಗೀತೆಯನ್ನು ಉಪದೇಶಿಸಲು ಕುರುಕ್ಷೇತ್ರವನ್ನೇ ಯಾಕೆ ಆಯ್ದುಕೊಂಡ ? ಅರಮನೆಯ ವಿಶಾಲ ಕೋಣೆಗಳು, ಅದರೊಳಗಿನ ಬೆಳ್ಳಿ ಮಂಚ, ಚಿನ್ನದ ಕುರ್ಚಿ, ನೆಲಕ್ಕೆ ಹಾಸಿದ ರತ್ನಗಂಬಳಿ, ಬಳಿಯಲ್ಲಿ ಬಳುಕುವ ಲಲನೆಯರು, ಕೋಣೆಯಿಂದ ಹೊರಗಿಣುಕಿದರೆ ಸುತ್ತಲೂ ಹುಲ್ಲು ಹಾಸು. ಇಂಥದ್ದೊಂದು ಸುಂದರ ವ್ಯವಸ್ಥೆ ಅರ್ಜುನನಿಗೆ “ನಾನು” ಎನ್ನುವ ಅಹಂ ಬಿಟ್ಟು ಶರಣಾಗತಿಯ ಪಾಠವನ್ನು ಕಲಿಸುತ್ತಿತ್ತೇ ? ಹತ್ತೂರಿನಾಚೆ, ಸಪ್ತಸಾಗರದಾಚೆ ಹಳೆ ಬೇರು ಕಳಚಿ ಹೊಸ ಮಣ್ಣಿನಲ್ಲಿ ನೆಟ್ಟುಕೊಂಡಾಗ, ಮತ್ತೆ ಮತ್ತೆ ನೆಟ್ಟ ಬೇರು ಕಿತ್ತು ಹೊಚ್ಚ ಹೊಸ ಹವಾಮಾನಕ್ಕೆ ತನ್ನ ತಾ ಚಾಚಿಕೊಳ್ಳುತ್ತ ರೂಪಾಂತರಗೊಳ್ಳುವಾಗ, ರೂಪಾಂತರವೂ ಹಳೇ ಮಣ್ಣಿಗಿಂತ ಮತ್ತೂ ಹಿತಕರವಾಗಿ, ಹುಲುಸಾಗಿ ರೆಂಬೆ ಚಾಚುವಾಗ ಅಲೆಮಾರಿ ಅರ್ಜುನನಿಗೆ ಕುರುಕ್ಷೇತ್ರವೂ ಹುಟ್ಟಿನ ಉದ್ದೇಶವನ್ನರಿಯುವ, ಉದ್ದೇಶವನ್ನು ನೆರವೇರಿಸುವ ಕರ್ಮಭೂಮಿಯಾಗೇ ತೋರುತ್ತದೆ.

ಸಿದ್ದಾರ್ಥ! ಅಷ್ಟ-ಐಶ್ವರ್ಯ ಗಳನ್ನೂ ತ್ಯಜಿಸಿ ಗೌತಮ ಬುದ್ದನಾದನಲ್ಲ. ಆ ದಿನ ರಾಜ ಶುದ್ದೋಧನನ ಅಂಕೆಯಾಚೆ ಇನ್ನೂ ದೂರ, ಮತ್ತೂ ದೂರ ಸಿದ್ದಾರ್ಥ ಪ್ರಯಾಣ ಬೆಳೆಸುತ್ತಲೇ ಜೀವನದಲ್ಲೇ ಮೊತ್ತ ಮೊದಲು ಎಂದೂ ಕಾಣದ ವಯೋ ವೃದ್ಧರನ್ನೂ, ರೋಗಿಗಳನ್ನೂ, ಸಾವನ್ನೂ ಕಂಡ. ಸಿದ್ದಾರ್ಥನ ಪಯಣಕ್ಕೆ ಜೊತೆಗಾರ ಸಾರಥಿ ಚೆನ್ನ ಕೃಷ್ಣನೇನೂ ಆಗಿರಲಿಲ್ಲ. ಆದರೂ ಸಾವನ್ನು ಕಂಡ ಸಿದ್ದಾರ್ಥ ಮುಮ್ಮಲ ಮರುಗಿದನೇ ? ಉಹೂ! ವ್ಯಾಕುಲಗೊಂಡ. ಎಲ್ಲವನ್ನೂ ಕಳಚಿ ಸತ್ಯ ಶೋಧನೆಗೆಂದೇ ಅಲೆದ, ಅಲೆದು ಧ್ಯಾನಿಸಿ ಜ್ಞಾನೋದಯ ಸಾಧಿಸಿದ. ಬುದ್ಧನಾದ. ಬುದ್ಧನಾಗುವ ಮೊದಲು ಅಲೆಮಾರಿಯಾದ. ಬುದ್ದನಾದಮೇಲೂ ಅಲೆಮಾರಿತನವನ್ನೇ ಅಪ್ಪಿಕೊಂಡ.

ಬುದ್ಧನಾಗಲು ಅಂತರಂಗದಲ್ಲಿ ಅಲೆಮಾರಿಯಾಗಿರಲೇ ಬೇಕು. ಬಾಹ್ಯದಲ್ಲಿ ಮಂಡಿಯೂರಿದ ಅರ್ಜುನನಾಗಬೇಕು. ಅರ್ಜುನನಾಗದೇ ಬುದ್ಧನಾಗುವುದು ಅಸಾಧ್ಯದ ಮಾತು. ತನ್ನ ತಾ ತೊರೆದು ಕರ್ಮಕ್ಕೆ ಬದ್ಧನಾಗಬೇಕು, ಕರ್ಮಫಲಗಳ ದಾಸನಾಗದೇ.

ಕುರುಕ್ಷೇತ್ರದಲ್ಲಿ ತಾತನನ್ನೂ, ಗುರುವನ್ನೂ, ಸಂಭಂಧಿಗಳನ್ನೂ ಮೀರಿ ಧರ್ಮವನ್ನೇ ರಕ್ಷಿಸುವ ಕರ್ಮದ ಹೊರೆಯನ್ನು ಹೊತ್ತು ಬಂಧ ಮುಕ್ತನಾಗುವುದು ಸುಲಭದ ಮಾತೆ ? ಕೃಷ್ಣ ತಾನು ಅಲೆಮಾರಿಯಾಗದೇ ಕೃಷ್ಣನಾದನೇ?

ಅಲೆಮಾರಿತನ ಬಾಹ್ಯ ಪ್ರಪಂಚವನ್ನರಿಯುವ, ತನ್ನ ತಾನರಿಯುವ ಸುಂದರ ಧ್ಯಾನ. ಧ್ಯಾನ! ಅಂತರಂಗದ ಅಲೆಮಾರಿ. ಬಾಹ್ಯಕ್ಕೆ ತನ್ನನ್ನು ಒಗ್ಗಿಸಿಕೊಳ್ಳುವ, ನಿರ್ವಿಕಾರವಾಗಿ ಬಾಹ್ಯದ ವಾಸ್ತವವನ್ನು ಸ್ವೀಕರಿಸಿ ಬದುಕುವುದಕ್ಕೆ ಸಜ್ಜುಗೊಳಿಸುವ ಸಾಧ್ಯಂತ ಮನಸ್ಥಿತಿ. ನಾ ಹತ್ತುವ ಬೆಟ್ಟವೂ, ಅಲೆವ ಕಿಕ್ಕಿರಿದ ಪೇಟೆಗಳೂ, ಸಿಗುವ ಪ್ರತಿ ಮಂದಿಯೂ ನನ್ನೊಳಗಿನ ಅರ್ಜುನನನ್ನು ಮತ್ತೆ ಮತ್ತೆ ಬಡಿದೆಬ್ಬಿಸುತ್ತಲೇ! ಅಲೆಮಾರಿತನ ಸಾರಥ್ಯವಿಲ್ಲದೆ ಸತ್ಯ ದರ್ಶನ ಸಾಧ್ಯವಾಗಿಸುವ ಅನುಭವೀ ತನ್ನ ತಾನರಿಯುವ ಗುರು ಎಂಬುದು ಖಚಿತವಾಗಿದೆ.

(ಚಿತ್ರ: ಪ್ರವಾಸತಾಣದಲ್ಲಿ ಲೇಖಕಿ ಕಾಂತಿ ಹೆಗ್ಡೆ)

Leave a Reply