ನೀವಿದ್ದೀರಲ್ಲ ಗುರುವೇ! ~ ಒಂದು ಝೆನ್ ಕಥೆ

 ಸಂಗ್ರಹ ಮತ್ತು ಅನುವಾದ : ಅಲಾವಿಕಾ

ಝೆನ್ ಗುರು ಟುಬೊಕುವಿನ ಆಶ್ರಮದಲ್ಲಿ ಇಬ್ಬರು ಶಿಷ್ಯರಿದ್ದರು. ಅವರಲ್ಲೊಬ್ಬ ಯಾವಾಗಲೂ ಏನು ಪ್ರಶ್ನೆ ಕೇಳಿದರೂ, “ನೀವಿದ್ದೀರಲ್ಲ ಗುರುವೇ!” ಅನ್ನುತ್ತಿದ್ದ. “ಇದನ್ನು ನಾನು ಕಲಿಯುವ ಅಗತ್ಯವೇನಿದೆ? ಪರಿಹಾರ ಹೇಳಲು ನೀವಿದ್ದೀರಲ್ಲ” ಎಂದುಬಿಡುತ್ತಿದ್ದ. ಇನ್ನೊಬ್ಬ ಕಷ್ಟಪಟ್ಟು ಉತ್ತರ ಕಂಡುಕೊಂಡು ಒಪ್ಪಿಸುತ್ತಿದ್ದ.
ಹೇಗಿದ್ದರೂ ಸಹಪಾಠಿ ಉತ್ತರ ತರುತ್ತಾನೆ, ಇಲ್ಲವೇ ಗುರುವೇ ಹೇಳುತ್ತಾರೆ. ನಾನು ಕಲಿತು ಮಾಡುವುದೇನಿದೆ? ಅನ್ನೋದು ಮೊದಲ ಶಿಷ್ಯನ ಉಡಾಫೆಯಾಗಿತ್ತು.

ಒಮ್ಮೆ ಟುಬೊಕು ಇಬ್ಬರನ್ನೂ ರಾಜ್ಯದ ದಕ್ಷಿಣ ಭಾಗದಲ್ಲಿದ್ದ ಬೇರೆ ಬೇರೆ ಊರುಗಳಿಗೆ ಹೋಗಿ ತನ್ನ ಸಂದೇಶ ಮುಟ್ಟಿಸಿಬರಲು ಕಳಿಸಿದ. ಒಂದಷ್ಟು ದೂರದವರೆಗೆ ಇಬ್ಬರು ಶಿಷ್ಯರೂ ಒಂದೇ ದಾರಿಯಲ್ಲಿ ಸಾಗುವುದಿತ್ತು. ಎರಡನೇ ಶಿಷ್ಯ ತನ್ನ ಬಟ್ಟೆಗಂಟಿನ ಜೊತೆಗೆ ಒಂದು ಚಿಮಣಿಯನ್ನೂ ಇಟ್ಟುಕೊಂಡಿದ್ದ. ಮೊದಲನೆ ಶಿಷ್ಯ ತನಗೆ ಚಿಮಣಿಯೇನೂ ಬೇಡವೆಂದ. ನಡೆಯುತ್ತ ನಡೆಯುತ್ತ ಕತ್ತಲಾಯಿತು. ಎರಡನೆಯವನು ತನ್ನ ಚಿಮಣಿಯನ್ನು ಚೀಲದಿಂದ ಹೊರತೆಗೆದ.
ಆ ವೇಳೆಗೆ ದಾರಿಯ ಇಕ್ಕೆಲಗಳಲ್ಲಿ ಊರಿನ ಮೇಲ್ವಿಚಾರಕರು ಪಂಜುಗಳು ಹೊತ್ತಿಸಿದರು. ಮೊದಲನೆ ಶಿಷ್ಯ “ನೋಡಿದೆಯಾ?” ಅನ್ನುವಂತೆ ಹುಬ್ಬು ಹಾರಿಸಿದ.

ಸುಮಾರು ದೂರ ನಡೆದ ಮೇಲೆ ಇಬ್ಬರೂ ಬೇರೆಬೇರೆ ದಾರಿಯಲ್ಲಿ ಸಾಗಬೇಕಾಯ್ತು. ಸ್ವಲ್ಪ ದೂರ ಹೋದ ಮೇಲೆ ಆಯಾ ದಾರಿಗಳು ಊರು ಮುಗಿಸಿ ಪಂಜಿನ ವ್ಯವಸ್ಥೆ ಇಲ್ಲದ ಹಳ್ಳಿಗಳ ಮೂಲಕ ಹರಿದಿದ್ದವು.
ಎರಡನೇ ಶಿಷ್ಯ ಊರು ಮುಗಿಯುವಾಗ ಸಿಕ್ಕ ಪಂಜಿನಿಂದ ತನ್ನ ಚಿಮಣಿಯನ್ನು ಹೊತ್ತಿಸಿಕೊಂಡು ಮುನ್ನಡೆದ. ಕತ್ತಲಾದ ಮೇಲೆ ಅವನಿಗೆ ಯಾವುದೇ ಸಮಸ್ಯೆಯಾಗಲಿಲ್ಲ.

ಮೊದಲನೇ ಶಿಷ್ಯ ಊರು ಮುಗಿದು ಕಾಡು ಎದುರಾಗುವಾಗಲೂ ಪಂಜನ್ನು ತೆಗೆದುಕೊಳ್ಳುವ ಉಸಾಬರಿಗೆ ಹೋಗಲಿಲ್ಲ. ನಡೆಯುತ್ತ ನಡೆಯುತ್ತ ಕಾರ್ಗತ್ತಲು ಆವರಿಸಿತು. ದೀಪದ ಬೆಳಕೂ ಇಲ್ಲದೆ, ಯಾರ ಸಹಾಯವೂ ಇಲ್ಲದೆ, ಕೈ ತಡವುತ್ತಾ ಒಂದು ಮರವನ್ನು ಹುಡುಕಿ, ಅದರ ಮೇಲೆ ಕುಳಿತು, ಭಯದಿಂದ ನಡಗುತ್ತಲೇ ರಾತ್ರಿಯನ್ನು ಕಳೆದ.

ವಾಪಸು ಆಶ್ರಮಕ್ಕೆ ಮರಳಿದ ಮೇಲೆ ಆ ಮೊದಲನೆ ಶಿಷ್ಯ ಮತ್ತೆ ಯಾವತ್ತೂ “ನೀವಿದ್ದೀರಲ್ಲ ಗುರುವೇ” ಅನ್ನುವ ಸಾಹಸ ಮಾಡಲಿಲ್ಲ.

Leave a Reply