ಗೋಡೆ ದಿಟ್ಟಿಸುವ ‘ಝೆನ್’ ಗುರು ಬೋಧಿಧರ್ಮನ ಕಿರುವೃತ್ತಾಂತ

ಬೋಧಿಧರ್ಮನ ನಿರ್ವಾಣದ ನಂತರ ಆತ ಪರಿಚಯಿಸಿದ ಧ್ಯಾನ ಪದ್ಧತಿ ಮತ್ತು ಉಪದೇಶಗಳು ಚೀನಾದಲ್ಲಿ “ಚಾನ್‌’ ಎಂಬ ಹೆಸರಿನಿಂದ ಜನಪ್ರಿಯಗೊಂಡಿತು. ಮುಂದೆ ಜಪಾನ್‌ಗೆ ಹರಡಿ, ಅಲ್ಲಿಯೂ ಅಪಾರ ಮನ್ನಣೆ ಪಡೆಯಿತು. ಜಪಾನೀಯರು ಇದನ್ನು “ಝೆನ್‌’ ಎಂದು ಕರೆದು ತಮ್ಮದಾಗಿಸಿಕೊಂಡರು | ಅಲಾವಿಕಾ

“ಬೌದ್ಧ ಧರ್ಮದ ಮೊದಲ ತತ್ವವೇನು?’

“ಕೊನೆ ಮೊದಲಿಲ್ಲದ ಸೊನ್ನೆ!”

“ನನ್ನೆದುರು ನಿಂತು ಮಾತ ಭಾಡುತ್ತಿರುವವನು ಯಾರು?”

“ನನಗಂತೂ ತಿಳಿಯದು”

“ನಾನು ಬುದ್ಧನ ಶಾಸನವನ್ನು ಹರಡಿದ್ದೇನೆ. ಸಾವಿರಾರು ಭಿಕ್ಷುಗಳಿಗೂ ಭಿಕ್ಷುಣಿಯರಿಗೂ ಆಶ್ರಯವಾಗಿದ್ದೇನೆ. ಹೇಳು, ನಾನು  ಕೂಡಿಹಾಕಿರಬಹುದಾದ ಪುಣ್ಯ ಎಷ್ಟು?”

“ಇದರಿಂದ ನಿಮಗೆ ಪುಣ್ಯ ಒಂದಿಷ್ಟೂ ಒದಗುವುದಿಲ್ಲ!”

ಈ ಸಂಭಾಷಣೆ ನಡೆದಿದ್ದು ಚೀನಾದ ಚಕ್ರವರ್ತಿ ಹಾಗೂ ದಕ್ಷಿಣ ಭಾರತದ ಒಬ್ಬ ಬೌದ್ಧ ಸನ್ಯಾಸಿಯ ನಡುವೆ.

ಬೋಧಿಧರ್ಮ ಮತ್ತು ‘ವೂ’ ಚಕ್ರವರ್ತಿ ಇವರ ನಡುವೆ ನಡೆದ ಮಾತುಕತೆಯಿಂದ ಇಬ್ಬರಿಗೂ ಸಂತೋಷವಾಗಲಿಲ್ಲ. ಆ ಚಕ್ರವರ್ತಿ ಬೌದ್ಧ ಧರ್ಮದ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದನಾದರೂ ಅಹಂಕಾರದಿಂದ ಕೂಡಿದ್ದ. ಜೊತೆಗೆ, ಕುಳ್ಳಗಿನ – ಬೊಜ್ಜು ಬೆಳೆದ ಮೈ, ತಲೆಯಿಂದ ಇಳಿದು ಮೈಯೆಲ್ಲ ಮುಚ್ಚಿರೆವ ಕೇಸರಿ ಬಣ್ಣದ ಹೊದಿಕೆ, ಕುರುಚಲು ಗಡ್ಡ, ಬಿರುಗಣ್ಣು, ನಡೆನುಡಿಯಲ್ಲಿನ ಒರಟುತನಗಳೆಲ್ಲದರಿಂದ ಕೂಡಿದ್ದ ಬೋಧಿಧರ್ಮನ ಬಗ್ಗೆ ಅವನಿಗೆ ತಾತ್ಸಾರವೇ ಇತ್ತು. (ಬೌದ್ಧ ಬಿಕ್ಖುವಿನ ಬಗ್ಗೆ ಅವನ ಕಲ್ಪನೆ ಇದಕ್ಕೆ ತೀರಾ ವಿರುದ್ಧವಾಗಿತ್ತು!) ಬೋಧಿಧರ್ಮನಾದರೂ ಅಷ್ಟೇ. ಮಾತು ಬಹಳ ಕಡಿಮೆ. ನಿಂತರೆ ನಿಂತೇ ಬಿಡುವ, ಗಂಟೆಗಟ್ಟಲೆ  ದಿನಗಟ್ಟಲೆ ಕೊರಡಿನಂತೆ ಉಳಿಯುವಂಥ ವಿಚಿತ್ರ ಮನುಷ್ಯ.

ಆತನನ್ನು ಚಕ್ರವರ್ತಿ ಬೌದ್ಧ ಧರ್ಮೋಪದೇಶಕ್ಕೆಂದು ಕರೆಸಿಕೊಂಡಿದ್ದನಾದರೂ ಉಳಿಸಿಕೊಳ್ಳುವ ಉತ್ಸಾಹ ತೋರಿಸಲಿಲ್ಲ. ಬೋಧಿಧರ್ಮನಿಗೂ ಅಲ್ಲಿ ಉಳಿಯುವ ಮನಸ್ಸಾಗದೆ ಉತ್ತರ ಚೀನಾದ ಕಡೆ ಹೊರಟ. ಊರ ಹೊರಗಿನ ಯಾಂಗ್‌ ತ್ಸಿಕಿಯಾಂಗ್‌ ನದಿಯ ಬಳಿ ಬಂದು, ಅಲ್ಲಿದ್ದ ಜೊಂಡು ಹುಲ್ಲಿನ ಕಡ್ಡಿಯೊಂದನ್ನು ಕಿತ್ತು, ಅದನ್ನು ನೀರಿನ ಮೇಲಿರಿಸಿ, ತಾನು ಅದರ ಮೇಲೇರಿ ನಿಂತು, ನದಿಯನ್ನು ದಾಟಿ ಆಚೆ ದಡವನ್ನುಸೇರಿದ. ಹುಲ್ಲಿನ ಕಡ್ಡಿಯನ್ನು ದೋಣಿಯಂತೆ ನಡೆಸಿದ ಪವಾಡ ಅಲ್ಲಿನ ಜನರಿಗೆಲ್ಲ ಅಚ್ಚರಿಯೆನಿಸಿತು. ಇದ್ದಕ್ಕಿದ್ದಂತೆ ಬೋಧಿ ಧರ್ಮನ ಪ್ರಖ್ಯಾತಿ ದೇಶದಲ್ಲೆಲ್ಲ ಹರಡಿತು. ಅವನ ಸುತ್ತ ಜನ ನೆರೆಯಲಾರಂಭಿಸಿದರು. ಉಪದೇಶಕ್ಕಾಗಿ ಅವನ ಬಳಿ ಬಂದವರು ಕಡಿಮೆಯೇ; ಪವಾಡಕ್ಕೆ ಮಾರುಹೋಗಿ ಬಂದವರೇ ಹೆಚ್ಚು!  ಚೀನಾದಲ್ಲಿ ಬೋಧಿ ಧರ್ಮನ ಜೈತ್ರಯಾತ್ರೆ ಆರಂಭವಾಗಿದ್ದು ಹೀಗೆ.

ಬೋಧಿಧರ್ಮ ಮೂಲತಃ ತಮಿಳುನಾಡಿನವನೆಂದು ಹೇಳಲಾಗುತ್ತದೆ. ಈತನ ತಾಯಿ ಪಲ್ಲವ ರಾಜವಂಶದ ಹೆಣ್ಣುಮಗಳು. ಬೌದ್ಧಗುರು ಪ್ರಜ್ಞಾತಾರಾ ಅವರಿಂದ ಬೌದ್ಧ ತತ್ವಗಳ ಬೋಧನೆ ಪಡೆದ ಬೋಧಿಧರ್ಮ ಅದರ ಪ್ರಸಾರಕ್ಕಾಗಿ ಪೂರ್ವ ದೇಶಗಳ ಕಡೆಗೆ ಹೊರಟ. ಚೀನಾದ ಚಕ್ರವರ್ತಿ ಆತನನ್ನು ಬರಮಾಡಿಕೊಂಡರೂ ತನ್ನಲ್ಲಿ ಉಳಿಸಿಕೊಳ್ಳಲಿಲ್ಲ. ಉತ್ತರ ಚೀನಾಕ್ಕೆ ಸಾಗಿದ ಬೋಧಿಧರ್ಮ ಅಲ್ಲಿನ ಜನರೊಂದಿಗೆ ಬೆರೆತ. ಅವರಿಗೆ ಯುದ್ಧಕಲೆಯನ್ನೂ ಔಷಧ ವಿದ್ಯೆಗಳನ್ನೂ ಕಲಿಸಿಕೊಟ್ಟ. ಜನಸಾಮಾನ್ಯರ ನಡುವ ಅಪಾರ ಗೌರವ ಗಳಿಸಿಕೊಂಡ. ಆತನ ಖ್ಯಾತಿ ದೂರದವರೆಗೂ ಹಬ್ಬತೊಡಗಿತು. ಮುಂದೆ ಆತ ಹೊನಾನ್‌ ಪ್ರದೇಶದಲ್ಲಿ ಸುಂಗ್‌- ಶೆನ್‌ ಎಂಬ ಬೆಟ್ಟದ ಮೇಲೆ ನೆಲೆಸಿದ. ಮಾತುಕತೆಯಿಲ್ಲದೆ ಪಡಸಾಲೆಯೊಂದರ ಗೋಡೆ ಕಡೆ ಮುಖಮಾಡಿ ಪದ್ಮಾಸನದಲ್ಲಿ ಕುಳಿತು, ಗೋಡೆಯನ್ನೆ ಎವೆಯಿಕ್ಕದೆ ನೋಡುತ್ತ ಧ್ಯಾನಮಗ್ನನಾದ. ಹೀಘೇ ದಿನ ಕಳೆದವು. ತಿಂಗಳುಗಳೂ ಉರುಳಿದವು. ಗೋಡೆಗೆ ಮುಖ ಮಾಡಿ ಕುಂತವನು ಏಳಲೇ ಇಲ್ಲ! ಅವನು ಕುಳಿತ ಭಂಗಿ ಒಂದಿಷ್ಟೂ ಬದಲಾಗಲಿಲ್ಲ. ಹೀಗೆ ಗೋಡೆ ದಿಟ್ಟಿಸುತ್ತ ಅವನು ಕಳೆದಿದ್ದು ಪೂರಾ ಒಂಬತ್ತು ವರ್ಷಗಳು. ಬೋಧಿಧರ್ಮನ ಈ ಧ್ಯಾನ ಪದ್ಧತಿ ಇಂದು “ಜಾಜೆನ್’ ಎಂದು ಕರೆಯಲ್ಪಡುತ್ತದೆ. (Zazen – wall gazing meditation)

ಧ್ಯಾನದಿಂದ ಎದ್ದಮೇಲಷ್ಟೆ ಅವನು ಕಣ್ಣು ಗುಡ್ಡೆಯನ್ನು ಅಲುಗಾಡಿಸಿದ್ದು. ಇಷ್ಟು ದೀರ್ಥ  ಕಾಲ ಸೆಟೆದುಕೊಂಡು ನಿಂತಿದ್ದ ಕಣ್ಣು ರೆಪ್ಪೆಗಳು ಈಗ ಕಳಚಿ ಬಿದ್ದು ಬಿಟ್ಟವು. ಇನ್ನು ಅವನು ಕಣ್ಣು ಮುಚ್ಚುವಂತೆಯೇ ಇಲ್ಲ! ಅಲ್ಲಿಯ ಜನರು ಈತನನ್ನು “ಗೋಡೆ ದಿಟ್ಟಿಸುವ ಸನ್ಯಾಸಿ” ಎಂದು ಕರೆಯತೊಡಗಿದರು. ಮುಂದೆ ಬೋಧಿಧರ್ಮನು ಅಲ್ಲಿಂದ ಹೊರಟು ಲೊ-ಯುಂಗ್‌ ಎಂಬ ಪ್ರದೇಶಕ್ಕೆ ಬಂದ. ಅಲ್ಲಿದ್ದ ಯುಂಗ್‌ ಸ್ನಿಂಗ್ಸೂ ವಿಹಾರದಲ್ಲಿ ತಂಗಿದ. ಆತ ತನ್ನ ಕಡೆಗಾಲದ ಒಂಭತ್ತು ವರ್ಷಗಳನ್ನು ಕಳೆದಿದ್ದೂ ಇಲ್ಲಿಯೇ. ಅವನ ಉಪದೇಶ ಕೇಳಲು ಜನ ಹಾತೊರೆದು ಬರುತ್ತಿದ್ದರು. ಬೋಧಿ ಧರ್ಮನ ಸರಳ ಬೋಧನೆ ಹಾಗೂ ವಿಶಿಷ್ಟ ಧ್ಯಾನ ಪದ್ಧತಿಗಳು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು.

ಬೋಧಿಧರ್ಮನು ಗೌತಮ ಬುದ್ಧನಿಂದ ನೇರವಾದ ಪರಂಪರೆಯಲ್ಲಿ 28ನೆಯ ಗುರುವೆಂದು ಪರಿಗಣಿಸಲ್ಪಡುತ್ತಾನೆ. ಈತನ ಉಪದೇಶಗಳನ್ನು ನಾಲ್ಕು ಸಾಲುಗಳಲ್ಲಿ ಹೇಳಬಹುದಾದರೆ;

“ಶ್ರುತಿಯಿಂದ ಹೊರತಾದುದು, ಸಂಪ್ರದಾಯದಿಂದ ದೂರವಿರುವುದು; ಮಾತಿನ ಮೇಲೆ, ಅಕ್ಷರದ ಮೇಲೆ ನಿಂತಿಲ್ಲದ್ದು; ಮನುಷ್ಯನ ಹೃದಯಕ್ಕೆ ಕನ್ನಡಿ ಹಿಡಿಯುವುದು, ತನ್ನ ಸ್ವಭಾವವನ್ನೆ ನೋಡಿಕೊಳ್ಳುವುದು; ಬುದ್ಧನಾಗುವುದು”

“ಮನುಷ್ಯನ ಎಲ್ಲ ಯೋಚನೆಗಳಿಗೂ ಹೃದಯವೇ ಮೂಲ. ಅಲ್ಲೇ ಬುದ್ಧತ್ವ ಇರುವುದು. ಬೋಧಿ ಒದಗುವುದು ಅಲ್ಲಿಂದಲೇ. ಉಪದೇಶ ಬುದ್ಧಿಗಲ್ಲ, ಹೃದಯಕ್ಕೆ. ಹೃದಯಕ್ಕೆ ತಿಳುವಳಿಕೆ ಬಂದರೆ ಇಡೀ ಬಾಳೇ ಬದಲಾಗುತ್ತದೆ” ಅನ್ನುತ್ತಾನೆ ಬೋಧಿಧರ್ಮ.

ಬೋಧಿಧರ್ಮ ಸಾಧಕರಿಗೆ ಮೂರು ವಿಚಾರಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದನು.

“ಸರಿಯಾದ ಗುರುವಿನಿಂದ ಉಪದೇಶ ಪಡೆಯಿರಿ; ಪ್ರತಿಯೊಂದು ಪ್ರಾಣಿಯಲ್ಲಿಯೂ ಬುದ್ಧ ಸ್ವಭಾವ ಇದೆಯೆಂದು ನಂಬಿ; ಈ ತತ್ವವನ್ನು ಈ ಕೂಡಲೇ ನಿಮ್ಮ ಅನುಭವಕ್ಕೆ ತಂದುಕೊಳ್ಳಿ”.

ಬೋಧಿಧರ್ಮ ಅನುಭವವೇ ಮುಖ್ಯವೆಂದು ನಂಬಿದ್ದರಿಂದ ಅವನು ಯಾವ ಉಪದೇಶ ಗ್ರಂಥಗಳನ್ನೂ ಬರೆಯಲಿಲ್ಲ. ಆದರೆ ಅವನ ಉಪದೇಶಗಳನ್ನು ಕಲೆಹಾಕಿ ಅವನ ಪಟ್ಟಶಿಷ್ಯ ಹುಯ್ -ಖೆ ಬರಹ ರೂಪಕ್ಕಿಳಿಸಿದ. ಡಜು ಹುಯ್ ಖೆ ಹೆಸರಿನ ಈತನಾದರೂ ಬೋಧಿಧರ್ಮನ ಶಿಷ್ಯತ್ವ ಪಡೆಯಲು ತನ್ನ ಕೈಯನ್ನೇ ಕತ್ತರಿಸಿ ತನ್ನ ಅಭೀಪ್ಸೆಯನ್ನು ಸಾಬೀತುಪಡಿಸಿದಾತ. ಶಿಷ್ಯರ ಆಯ್ಕೆಯ ವಿಷಯದಲ್ಲಿ ಬೋಧಿಧರ್ಮ ಎಷ್ಟು ಕಠಿಣವಾಗಿದ್ದ ಅನ್ನುವುದಲ್ಲೆ ಹುಯ್ ಖೆ ಯ ಈ ಪ್ರಕರಣ ಒಂದು ನಿದರ್ಶನ.

ಹುಯ್ ಖೆ ದಾಖಲಿಸಿದ ಪ್ರಕಾರ ಬೋಧಿಧರ್ಮನ ಬೋಧೆಯಲ್ಲಿ ಮೂಲತತ್ವ ಮತ್ತು ಅಭ್ಯಾಸಗಳೆಂಬ ಎರಡು ವಿಭಾಗಗಳಿವೆ. ಮೂಲತತ್ವವೆಂದರೆ, ಬದುಕಿರುವ ಎಲ್ಲ ಪ್ರಾಣಿಗಳಲ್ಲೂ ಒಂದೇ ಒಂದು ಸ್ವಭಾವವಿದೆ ಎಂಬ ನಂಬಿಕೆ. ಈ ಸ್ವಭಾವವೇ ಬುದ್ಧಸ್ವಭಾವ. ಅಭ್ಯಾಸದಲ್ಲಿ ನಾಲ್ಕು ಬಗೆಗಳು. ಮೊದಲನೆಯದು ತೃಪ್ತಿ. ಎರಡನೆಯದು ಕರ್ಮವನ್ನು ಕುರಿತದ್ವು ಮೂರನೆಯದು ಯಾವುದನ್ನೂ ಅರಸದಿರುವುದು. ಹಾಗೂ ನಾಲ್ಕನೆಯದು ಅಹಂಕಾರಪಡದಿರುವುದು.

ಬೋಧಿಧರ್ಮನ ನಿರ್ವಾಣದ ನಂತರ ಆತ ಪರಿಚಯಿಸಿದ ಧ್ಯಾನ ಪದ್ಧತಿ ಮತ್ತು ಉಪದೇಶಗಳು ಚೀನಾದಲ್ಲಿ “ಚಾನ್‌’ ಎಂಬ ಹೆಸರಿನಿಂದ ಜನಪ್ರಿಯಗೊಂಡಿತು. ಮುಂದೆ ಜಪಾನ್‌ಗೆ ಹರಡಿ, ಅಲ್ಲಿಯೂ ಅಪಾರ ಮನ್ನಣೆ ಪಡೆಯಿತು. ಜಪಾನೀಯರು ಇದನ್ನು “ಝೆನ್‌’ ಎಂದು ಕರೆದು ತಮ್ಮದಾಗಿಸಿಕೊಂಡರು.

ಹಾಗಂದ ಮಾತ್ರಕ್ಕೆ ಬೋಧಿಧರ್ಮ ಪೂರ್ವದೇಶಗಳಲ್ಲಿ ನೆಲೆಸಿದ್ದಾಗ ಹೂವಿನ ಹಾಸಿನ ಸ್ವೀಕೃತಿಯನ್ನೇ ಪಡೆದಿದ್ದ ಎಂದಲ್ಲ. ಚೀನೀಯರು ಇವನನ್ನು “ನೀಲಿಕಣ್ಣಿನ ಅನಾಗರಿಕ” (Blue eyed Barbarian) ಎಂದೂ ಕರೆದಿದ್ದರು! ಈತನ ಒಂಭತ್ತು ವರ್ಷಗಳ ‘ಗೋಡೆ ದಿಟ್ಟಿಸುವ ಧ್ಯಾನ” ಪ್ರಚುರಗೊಂಡ ನಂತರ ಜನ ಇವನನ್ನು “ಗೋಡೆ ದಿಟ್ಟಿಸುವ ಬ್ರಾಹ್ಮಣ” ಎಂದು ಕರೆದರು. (Wall gazing Brahmin). ಆದರೆ ಜಪಾನ್‌ನಲ್ಲಿ ಮಾತ್ರ ಬೋಧಿಧರ್ಮ ‘ದರುಮ’ ಎಂಬ ಹೆಸರಿಂದ ಪ್ರೀತಿ ಮತ್ತು ಖ್ಯಾತಿ ಎರಡನ್ನೂ ಪಡೆದ. ಆದರೆ ಇವರೆಲ್ಲರೂ ಬೋಧಿಧರ್ಮನನ್ನು ಚಿತ್ರಿಸುವುದು ಮಾತ್ರ ಬಿರುಗಣ್ಣಿನ ಒರಟು ರೂಪದ ಬೆದರು ಬೊಂಬೆ ಹಾಗೆಯೇ! ಆ ದೇಶಗಳಲ್ಲಿ “ದರುಮ ಡಾಲ್” ಇಂಥಾ ರೂಪದಲ್ಲಿ ಸಾಕಷ್ಟು ಚಾಲ್ತಿಯಲ್ಲಿದೆ.

ಇಂಥಾ ಬೋಧಿಧರ್ಮನ ಅಂತ್ಯ ಹೇಗಾಯಿತು ಅನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ. ಕೆಲವರು ಆತ ಭಾರತಕ್ಕೆ ಮರಳಿದನೆಂದೂ ಕೆಲವರು ಆತ ಹಾಗೇ ಅಂತರ್ಧಾನನಾದನೆಂದೂ ಹೇಳುತ್ತಾರೆ.

ಆದರೆ ಬೋಧಿ ಧರ್ಮನ ಅಂತ್ಯದ ಬಗ್ಗೆ ಹೀಗೊಂದು ಜನಪ್ರಿಯ ದಂತಕತೆಯಿದೆ:

ಸುಂಗ್‌-ಯುನ್‌ ಎಂಬ ಭಿಕ್ಖು ಧರ್ಮಗ್ರಂಥಗಳನ್ನು ಸಂಗ್ರಹಿಸಲೆಂದು ಮಧ್ಯ ಏಷ್ಯಕ್ಕೆ ಹೋಗಿದ್ದ. ತನ್ನ ಕೆಲಸವನ್ನುತೀರಿಸಿಕೊಂಡು ಚೀನಾಕ್ಕೆ ಹಿಂದಿರುಗುವಾಗ ಪಾಮಿರ್‌ ನಾಡಿನಲ್ಲಿದ್ದ ‘ವೈ’ ಎಂಬಲ್ಲಿ ಬೋಧಿ ಧರ್ಮನನ್ನು ಭೇಟಿಮಾಡಿದ. ಬೋಧಿ ಧರ್ಮನು ಸನ್ಯಾಸಿಗಳು ಹಿಡಿದುಕೊಳ್ಳುವ ದಂಡವನ್ನು ಹೆಗಲ ಮೇಲೆ ಹೊತ್ತಿದ್ದ. ಅದರ ತುದಿಯಿಂದ ಅವನ ಒಂದು ಚಪ್ಪಲಿ ನೇತಾಡುತ್ತಿತ್ತು. ಇದು ಈ ಭಿಕ್ಖುವಿಗೆ ಸೋಜಿಗವೆನಿಸಿತು. ಆತ ಚೀನಾಕ್ಕೆ ಹಿಂದಿರುಗಿದ ಮೇಲೆ ಅವನಿಗೆ ತಿಳಿಯಿತು, ಬೋಧಿಧರ್ಮ ತೀರಿಕೊಂಡು ಆಗಲೇ ಮೂರು ವರ್ಷಗಳು ಕಳೆದಿವೆಯೆಂದು! ತಾನು ಕಂಡುದನ್ನು ಅಲ್ಲಿನ ಜನರಿಗೆ ತಿಳಿಸಿದಾಗ ಬೋಧಿಧರ್ಮನ ಶಿಷ್ಯರು ಹ್ಸಿಯುಂಗ್‌ ಛು-ಆನ್‌-ಶನ್‌ ಬೆಟ್ಟದ ಮೇಲೆ ಆತನ ಕಳೇಬರವನ್ನು ಹುಗಿದಿದ್ದ  ಸಮಾಧಿಯನ್ನು ತೆರೆದು ನೋಡಿದರು. ಅಲ್ಲಿ ಆತನ ಶರೀರವೇ ಇರಲಿಲ್ಲ. ಅಲ್ಲಿದ್ದುದು ಕೇವಲ ಒಂದು ಚಪ್ಪಲಿ ಮಾತ್ರ!

ಬೋಧಿಧರ್ಮನು ಒಟ್ಟು ಅರವತ್ತಮೂರು ವರ್ಷಗಳ ಕಾಲ ಚೀನಾದಲ್ಲಿದ್ದನೆಂದು ಹೇಳಲಾಗುತ್ತದೆ. ಆತನ ಸ್ಮರಣೆಗಾಗಿ “ಖುಂಗ್‌ ಕುಆನ್”’ ಎಂಬ ಹೆಸರಿನ ಸ್ಮಾರಕ ಭವನವೊಂದನ್ನು ಹ್ಸಿಯುಂಗ್‌ ಬೆಟ್ಟದ ತಪ್ಪಲಿನಲ್ಲಿ ಕಟ್ಟಿಸಲಾಗಿತ್ತು. 9ನೇಶತಮಾನದಲ್ಲಿ ಈ ಸ್ಮಾರಕ ಭವನವನ್ನು ಬೌದ್ಧ ವಿರೋಧಿಗಳು ನೆಲಸಮ ಮಾಡಿದ್ದರು. ಆದರೆ ಅನತಿ ಕಾಲದಲ್ಲಿಯೇ ಚಕ್ರವರ್ತಿಯ ಆಡೇಶದ ಮೇಲೆ ಅದನ್ನು ಪುನರ್ನಿರ್ಮಾಣ ಮಾಡಲಾಯಿತು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.