ಮಾಸ್ಟರ್ ರ್ಯೊಕನ್ ಎಂಬ ಪುಟ್ಟ ಹುಚ್ಚ : ಓಶೋ ಹೇಳಿದ ಕಥೆ

ಇಡೀ ರಾತ್ರಿ ಆಟ ಬಿಟ್ಟುಹೋದ ಮಕ್ಕಳಿಗಾಗಿ ಹುಲ್ಲಿನ ಬಣಿವೆಯಲ್ಲಿ ಕಾಯುತ್ತಿದ್ದ ಮಾಸ್ಟರ್ ರ್ಯೊಕನ್. ಇಂಥ ಮುಗ್ಧತೆ ಝೆನ್… । ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ರ್ಯೊಕನ್ ಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳೊಡನೆ ಎಷ್ಟು ಒಂದಾಗಿದ್ದನೆಂದರೆ ತಾನೇ ಸ್ವತಃ ಮಗುವಾಗಿಬಿಟ್ಟಿದ್ದ. ಅವ ಜೀಸಸ್ ಹೇಳುವ ಮಗುವಿನಂಥ ಮನುಷ್ಯ. ರ್ಯೊಕನ್ , ಮನುಷ್ಯರು ಇಷ್ಟು ಮುಗ್ಧರಾಗಿರಬಲ್ಲರು ಎಂಬುದನ್ನ ನಂಬಲು ಸಾಧ್ಯವಾಗದಷ್ಟು ಮುಗ್ಧ ಮನುಷ್ಯ. ಅವನೊಳಗೆ ಒಂದಿನಿತೂ ಕಪಟ, ಒಂದಿಷ್ಟೂ ಜಾಣತನವಿರಲಿಲ್ಲ. ಅವನನ್ನು ಪುಟ್ಟ ಹುಚ್ಚ ಎಂದೇ ಸುತ್ತಲಿನ ಜನ ಗುರುತಿಸುತ್ತಿದ್ದರು.

ಮಕ್ಕಳೊಡನೆ ಆಟ ಆಡುವುದು ರ್ಯೊಕನ್ ನ ಅತ್ಯಂತ ಪ್ರೀತಿಯ ಹವ್ಯಾಸಗಳ್ಳಲ್ಲೊಂದು. ಒಂದು ದಿನ ರ್ಯೊಕನ್ ಮಕ್ಕಳೊಡನೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ. ಅಂದು ಅವನದು ಅಡಗಿಕೊಳ್ಳುವ ಪಾಳಿ. ರ್ಯೊಕನ್ ಓಡಿ ಹೋಗಿ ಹೊಲದಲ್ಲಿನ ಹುಲ್ಲಿನ ಬಣಿವೆಯೊಳಗೆ ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡ. ಮಕ್ಕಳು ಹುಡುಕಿ ಹುಡುಕಿ ಸುಸ್ತಾದರು, ಕತ್ತಲಾಗುತ್ತ ಬಂದದ್ದರಿಂದ ಮಕ್ಕಳೆಲ್ಲ ತಮ್ಮ ತಮ್ಮ ಮನೆಗೆ ಹೋಗಿಬಿಟ್ಟರು. ಆದರೆ ಇದ್ಯಾವುದೂ ಗೊತ್ತಿರದ ರ್ಯೊಕನ್ ಹುಲ್ಲಿನ ಬಣಿವೆಯೊಳಗೆ ಬಚ್ಚಿಟ್ಟುಕೊಂಡು ಆಟ ಮುಂದುವರೆಸಿದ್ದ. ಮರುದಿನ ಮುಂಜಾನೆ ಹೊಲದ ಕೆಲಸಕ್ಕೆ ಬಂದ ರೈತ, ಬಣಿವೆಯಲ್ಲಿ ಅಡಗಿಕೊಂಡು ಕುಳಿತಿದ್ದ ರ್ಯೊಕನ್ ನನ್ನು ಗಮನಿಸಿ ಜೋರಾಗಿ ಕೂಗಿದ,

“ ಮಾಸ್ಟರ್ ರ್ಯೊಕನ್ ಇಲ್ಲೇನು ಮಾಡುತ್ತಿದ್ದೀಯ ? “

ರ್ಯೊಕನ್ ಓಡಿ ಬಂದು ರೈತನ ಬಾಯಿ ಮುಚ್ಚಿದ,

“ ಮೆತ್ತಗೆ ಮಾತಾಡು ಮಕ್ಕಳು ಕೇಳಿಸಿಕೊಂಡುಬಿಟ್ಟಾರು. ಈ ಸಲ ನಾನು ಗೆಲ್ಲುವುದು ಖಚಿತ. ಮಕ್ಕಳೊಡನೆ ಬೆಟ್ಸ್ ಕಟ್ಟಿದ್ದೇನೆ. “

ಇಡೀ ರಾತ್ರಿ ಆಟ ಬಿಟ್ಟುಹೋದ ಮಕ್ಕಳಿಗಾಗಿ ಹುಲ್ಲಿನ ಬಣಿವೆಯಲ್ಲಿ ಕಾಯುತ್ತಿದ್ದ ಮಾಸ್ಟರ್ ರ್ಯೊಕನ್. ಇಂಥ ಮುಗ್ಧತೆ ಝೆನ್. ಇಂಥ ಮುಗ್ಧತೆ ದಿವ್ಯವಾದದ್ದು, ಇದಕ್ಕೆ ಒಳ್ಳೆಯದು ಕೆಟ್ಟದ್ದು ಎನ್ನುವ ಭೇದಭಾವವಿಲ್ಲ. ಈ ಜಗತ್ತು ಆ ಜಗತ್ತು ಎನ್ನುವ ತಾರತಮ್ಯವಿಲ್ಲ. ಇಂಥ ಮುಗ್ಧತೆಯೇ ಜಗತ್ತನ್ನು ಕಾಯುವ ಸಾಚಾತನ. ಮತ್ತು ಇಂಥ ಸಾಚಾತನವೇ ಧರ್ಮದ ಮೂಲ ತಿರುಳು.

Leave a Reply