ಬದುಕಿಗೆ ಸುದೀರ್ಘ ಪ್ರಸ್ತಾವನೆ ಬೇಕಿಲ್ಲ, ಪುಟ್ಟದೊಂದು ಮುನ್ನುಡಿ ಸಾಕು! : ಓಶೋ

ಈ ಕ್ಷಣವನ್ನು ಪೂರ್ಣವಾಗಿ ಬದುಕಿ, ಅದರ ಎಲ್ಲ ತೀವ್ರತೆಯಲ್ಲಿ ಒಂದಾಗಿ. ಈ ಪೂರ್ಣತೆ ಮತ್ತು ತೀವ್ರತೆ ನಿಮ್ಮನ್ನು ಮುಂದಿನ ಕ್ಷಣಕ್ಕೆ ಯಾವ ಅಪಾಯವಿಲ್ಲದೆ ದಾಟಿಸುತ್ತವೆ. ಒಮ್ಮೆ ನಿಮಗೆ ಕ್ಷಣವನ್ನು ಅದರ ಎಲ್ಲ ಪೂರ್ಣತೆ, ತೀವ್ರತೆಯಲ್ಲಿ ಬದುಕಬಹುದು ಎನ್ನುವ ನಿಜ ಮನವರಿಕೆಯಾದರೆ ಬದುಕಿನ ರಹಸ್ಯ ನಿಮ್ಮ ಎದುರು ಅನಾವರಣಗೊಳ್ಳುತ್ತದೆ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ನೀವು ಜಾರ್ಜ್ ಬರ್ನಾಡ್ ಶಾ ನ ನಾಟಕಗಳನ್ನು ಓದಿರುತ್ತೀರಿ, ನೋಡಿರುತ್ತೀರಿ. ನಾಟಕಕ್ಕಿಂತ ಅವನ ಪ್ರಸ್ತಾವನೆಗಳು ಮೂರು ಪಟ್ಟು ಸುದೀರ್ಘ. ಎಲ್ಲ ಗೆಳೆಯರು, ಹಿತೈಷಿಗಳು ಬರ್ನಾಡ್ ಶಾ ಗೆ ಈ ವಿಷಯವಾಗಿ ತಿಳಿ ಹೇಳಿದ್ದರು,

“ ನಿನ್ನ ಸುದೀರ್ಘ ಪ್ರಸ್ತಾವನೆಗಳು ತ್ರಾಸದಾಯಕ. ಈ ಪ್ರಸ್ತಾವನೆಯನ್ನು ಬದಿಗಿಟ್ಟು ನಾಟಕ ಮಾತ್ರ ಓದಿದೆವಾದರೆ, ಏನೋ ಮಿಸ್ ಆದ ಅನುಭವ. ಶಾ ನಂಥ ಶ್ರೇಷ್ಠ ಪ್ರತಿಭೆ ಇಂಥ ಸುದೀರ್ಘ ಪ್ರಸ್ತಾವನೆಯನ್ನ ಯಾವುದೋ ಮುಖ್ಯ ಕಾರಣವಿಲ್ಲದೆ ಬರೆದಿರಲಾರ ಎನ್ನುವ ಭಾವನೆ ಆದರೆ ಪ್ರಸ್ತಾವನೆ ಓದಿದರೆ ಅದು ತುಂಬ ದಣಿವು ಉಂಟು ಮಾಡುವಂಥದು, ಪ್ರಸ್ತಾವನೆ ಓದಿ ಮುಗಿಸಿ ನಾಟಕಕ್ಕೆ ಬರುವಷ್ಟರಲ್ಲಿ ಪುಸ್ತಕವನ್ನು ಬಿಸಾಕುವಷ್ಟು ಸಿಟ್ಟು, ತುಂಬ ಹಿಂಸೆ ನಿನ್ನ ಪ್ರಸ್ತಾವನೆಗಳು. “

ಇಷ್ಟು ಸುದೀರ್ಘ ಪ್ರಸ್ತಾವನೆಯ ಅವಶ್ಯಕತೆ ಇಲ್ಲ, ಒಂದು ಪುಟ್ಟ ಮುನ್ನುಡಿ ಸಾಕು.

ಆದ್ದರಿಂದಲೇ ಒಂದೆರಡು ನಿಮಿಷಗಳಲ್ಲಿ ಪರಿಚಯ, ವಾರ್ಮ್ ಅಪ್ ಎಲ್ಲ ಮುಗಿಸಿಕೊಂಡು ನಿಜವಾದ ನಾಟಕಕ್ಕೆ ಸಿದ್ಧರಾಗಿ, ಈ ನಾಟಕವನ್ನು ಅನುಭವಿಸಿ, ಎಂಜಾಯ್ ಮಾಡಿ.

ವಿಷಯಗಳು, ಸಂಗತಿಗಳು ಬಹುತೇಕ ಸರಳ ಆದರೆ ಬುದ್ದಿ-ಮನಸ್ಸು (ಮೈಂಡ್) ಅನವಶ್ಯಕವಾಗಿ ಅವನ್ನು ಸಂಕೀರ್ಣಗೊಳಿಸುತ್ತಿದೆ. ಏಕೆಂದರೆ ಇವು ಸಂಕೀರ್ಣವಾಗಿರದೇ ಹೋದರೆ ಮೈಂಡ್ ಗೆ ಪ್ರಾಮುಖ್ಯತೆ ಕಡಿಮೆ. ಅವು ಇದ್ದ ಹಾಗೇ ಸರಳವಾಗಿ ಇದ್ದುಬಿಟ್ಟರೆ ಮೈಂಡ್ ನ ಅವಶ್ಯಕತೆಯೂ ಇಲ್ಲದಿರಬಹುದು. ಹಾಗೆಯೇ ಬದುಕು ಕೂಡ ಬಹಳ ಸರಳ, ಅದನ್ನು ಅದು ಇರುವ ಹಾಗೆಯೇ ಜೀವಿಸುವ ಧೈರ್ಯ ನಮಗಿದ್ದರೆ. ಆಗ ಈ ಬುದ್ಧಿ-ಮನಸ್ಸುಗಳನ್ನು ನಾವು ಪೂರ್ಣವಾಗಿ ತ್ಯಜಿಸಿಬಿಡಬಹುದು. ಬುದ್ಧಿ-ಮನಸ್ಸುಗಳ ಹತೋಟಿಯನ್ನು ಮೀರಿ ಬದುಕನ್ನ ಸಹಜವಾಗಿ ಬಾಳುವುದನ್ನೇ ನಾನು ಸನ್ಯಾಸ ಎನ್ನುತ್ತೇನೆ.

ಪ್ರತೀ ಕ್ಷಣದಿಂದ ಕ್ಷಣಕ್ಕೆ ಬದುಕುತ್ತ ಹೋಗೋಣ. ನೇರವಾಗಿ ಬದುಕಿನ ರಂಗಸ್ಥಳ ಪ್ರವೇಶ ಮಾಡಿ ಸೀದಾ ನಾಟಕಕ್ಕಿಳಿಯೋಣ. ಯಾಕೆ ರಿಹರ್ಸಲ್ ಮಾಡುತ್ತ ಕಾಲವನ್ನ ವ್ಯರ್ಥ ಮಾಡೋದು ? ಆ ಕ್ಷಣ ಎದುರಾದಾಗ ನಿಮ್ಮ ಪ್ರಜ್ಞೆ ಜಾಗೃತವಾಗಿ ಆ ಕ್ಷಣವನ್ನು ಎದುರಿಸುವುದು, ಆ ಕ್ಷಣಕ್ಕೆ ಪ್ರತಿಕ್ರೀಯೆ ನೀಡುವುದು. ಆದರೆ ಜನ, ಆ ಕ್ಷಣವೊಂದನ್ನು ಎದುರಿಸಲು ಇಡಿ ಜೀವನದುದ್ದಕ್ಕೂ ತಯಾರಿ ಮಾಡಿಕೊಳ್ಳುತ್ತ ಬದುಕಿನ ಸ್ವಾರಸ್ಯವನ್ನು ಕಳೆದುಕೊಳ್ಳುತ್ತಾರೆ.

ನಮಗೆ ನಮ್ಮ ಮುಂದಿನ ಕ್ಷಣದ ಬಗ್ಗೆ ನಿಶ್ಚಿತತೆ ಕೂಡ ಇಲ್ಲ. ಹಾಗಿರುವಾಗ ತಯಾರಿ ಎಂಥದು, ಯಾವುದಕ್ಕಾಗಿ ?

ಬದುಕನ್ನ ಬದುಕಿ ಅಥವಾ ತಯಾರಿಯಲ್ಲಿ ಕಾಲ ವ್ಯರ್ಥ ಮಾಡಿ. ಬದುಕಬೇಕಾಗಿದ್ದರೆ, ಈ ಕ್ಷಣದಲ್ಲಿ ಬದುಕಿ. ಅಥವಾ ನಾಳೆಗಾಗಿ ತಯಾರಿಯಲ್ಲಿ ತೊಡಗಿಕೊಳ್ಳಿ. ಆದರೆ ನೆನಪಿರಲಿ. ‘ನಾಳೆ’ ಎನ್ನುವುದು ಇಲ್ಲವೇ ಇಲ್ಲ. ನಾಳೆಯ ಜಾಗದಲ್ಲಿ ನಿಮ್ಮನ್ನು ಎದುರುಗಳ್ಳಲಿರುವುದು ಸಾವು. ಜಾಣ ಮನುಷ್ಯ ಬದುಕನ್ನ ಬದುಕುವುದರಲ್ಲಿ ಸದಾ ಮಗ್ನನಾಗಿರುತ್ತಾನೆ, ಅವನಿಗೆ ತಯಾರಿಯಲ್ಲಿ, ಶಿಸ್ತಿನಲ್ಲಿ ನಂಬಿಕೆಯಿಲ್ಲ.

ಈ ಕ್ಷಣವನ್ನು ಪೂರ್ಣವಾಗಿ ಬದುಕಿ, ಅದರ ಎಲ್ಲ ತೀವ್ರತೆಯಲ್ಲಿ ಒಂದಾಗಿ. ಈ ಪೂರ್ಣತೆ ಮತ್ತು ತೀವ್ರತೆ ನಿಮ್ಮನ್ನು ಮುಂದಿನ ಕ್ಷಣಕ್ಕೆ ಯಾವ ಅಪಾಯವಿಲ್ಲದೆ ದಾಟಿಸುತ್ತವೆ. ಒಮ್ಮೆ ನಿಮಗೆ ಕ್ಷಣವನ್ನು ಅದರ ಎಲ್ಲ ಪೂರ್ಣತೆ, ತೀವ್ರತೆಯಲ್ಲಿ ಬದುಕಬಹುದು ಎನ್ನುವ ನಿಜ ಮನವರಿಕೆಯಾದರೆ ಬದುಕಿನ ರಹಸ್ಯ ನಿಮ್ಮ ಎದುರು ಅನಾವರಣಗೊಳ್ಳುತ್ತದೆ.

ನಿಮಗೆ ಕೊಡಲಾಗಿರುವುದು ಒಂದು ಕ್ಷಣವನ್ನು ಮಾತ್ರ, ಎರಡು ಕ್ಷಣಗಳು ಜೊತೆ ಜೊತೆಗೆ ಯಾವತ್ತೂ ನಿಮಗೆ ದಕ್ಕಲಾರವು. ಒಂದು ಕ್ಷಣವನ್ನು, ಅದರ ಎಲ್ಲ ಪೂರ್ಣತೆ, ತೀವ್ರತೆಯೊಂದಿಗೆ ಬದುಕುವ ರಹಸ್ಯ ನಿಮಗೆ ಗೊತ್ತಾಯಿತೆಂದರೆ, ಬದುಕಿನ ಇಡೀ ರಹಸ್ಯ ನಿಮಗೆ ಗೊತ್ತಾದಂತೆ.

(ಚಿತ್ರ ಕೃಪೆ: ಓಶೋ ಕಾರ್ಟೂನ್ಸ್ )

Leave a Reply