“ಮನಸ್ಸು ಹೊರವಸ್ತುಗಳೊಡನೆ ನಿಕಟ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ. ತನ್ನ ಆಂತರಿಕಭಾವನೆಗಳನ್ನು ಆ ವಸ್ತುಗಳಲ್ಲಿ ಆರೋಪಿಸುತ್ತದೆ. ನಮ್ಮ ಬಯಕೆಗಳೇ ವಸ್ತುಗಳ ರೂಪದಲ್ಲಿ ಕಾಣಿಸಿಕೊಳ್ಳುವುದೂ ಅಸಂಗತವಲ್ಲ. ಮನಸ್ಸೇ ವಸ್ತುಗಳನ್ನು ಕಲ್ಪಿಸಿಕೊಂಡು ಅದನ್ನು ಹೊರಪ್ರಪಂಚದಲ್ಲಿ ಅಭಿವ್ಯಕ್ತಗೊಳಿಸುವುದರಿಂದ ‘ವಿಷಯಿ’ ಮತ್ತು ‘ವಿಷಯ’ಗಳು ಒಂದೇ. ಅವುಗಳಲ್ಲಿ ಭೇದವಿರುವುದಿಲ್ಲ” ಅನ್ನುತ್ತಾರೆ ಶ್ರೀ ಶಂಕರರು.
(ಆಕರ: ವಿವೇಕ ಚೂಡಾಮಣಿ)
ಮನಸ್ಸಿಗಿಂತ ಬೇರೆ, ಅವಿದ್ಯೆಯು ಇಲ್ಲವೇ ಇಲ್ಲ. ಮನಸ್ಸೇ ಸಂಸಾರಬಂಧಕ್ಕೆ ಕಾರಣವಾದ ಅವಿದ್ಯೆ. ಮನಸ್ಸು ನಷ್ಟವಾದರೆ ಎಲ್ಲವೂ ನಾಶವಾಗುತ್ತದೆ. ಅದು ಜಾಗೃತವಾದಾಗ ಎಲ್ಲವೂ ವಿಜೃಂಭಿಸುತ್ತದೆ. ಯಾವುದೊಂದು ವಸ್ತುವೂ ಇಲ್ಲದಿರುವ ಸ್ವಪ್ನಾವಸ್ಥೆಯಲ್ಲಿ ಮನಸ್ಸೇ ತನ್ನ ಶಕ್ತಿಯಿಂದ ಭೋಕ್ತೃವೇ ಮೊದಲಾದ ಅನುಭವ ಪ್ರಪಂಚವನ್ನು ಸೃಷ್ಟಿಸುತ್ತದೆ. ಜಾಗ್ರದಾವಸ್ಥೆಯಲ್ಲಿಯೂ ಹಾಗೆಯೇ. ಅದರಲ್ಲಿ ಯಾವ ವಿಶೇಷವೂ ಇರುವುದಿಲ್ಲ. ಇವೆಲ್ಲವೂ ಮನಸ್ಸಿನ ಆಡಂಬರವಷ್ಟೇ.
ನಿದ್ರೆಯ ಸಮಯದಲ್ಲಿ ಮನಸ್ಸು ಲಯವಾಗಿರುವಾಗ ಯಾವ ವಸ್ತುವೂ ಇರುವುದಿಲ್ಲವೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಮನುಷ್ಯನಿಗೆ ಸಂಸಾರವು ಮನಸ್ಸಿನಿಂದ ಕಲ್ಪಿತವಾಗಿರುವುದೇ ಹೊರತು ಯಥಾರ್ಥವಾಗಿರುವುದಿಲ್ಲ. ಮೋಡವು ಗಾಳಿಯಿಂದ ದೂಡಲ್ಪಟ್ಟು ಬರುತ್ತದೆ. ಪುನಃ ಗಾಳಿಯಿಂದಲೇ ಒಯ್ಯಲ್ಪಡುತ್ತದೆ. ಅದರಂತೆ ಬಂಧವೂ, ಮೋಕ್ಷವೂ ಮನಸ್ಸಿನಿಂದಲೇ ಕಲ್ಪಿತವಾಗಿರುತ್ತವೆ. ದೇಹವೇ ಮೊದಲಾದ ಸಮಸ್ತ ವಿಷಯಗಳಲ್ಲಿ ಆಸಕ್ತಿಯನ್ನು ಉಂಟುಮಾಡಿ, ಹಗ್ಗದಿಂದ ಪಶುವನ್ನು ಕಟ್ಟುವಂತೆ ಮನಸ್ಸು ಮನುಷ್ಯನನ್ನು ಕಟ್ಟಿಹಾಕುತ್ತದೆ. ಅನಂತರ ಈ ಮನಸ್ಸೇ, ವಿಷದಲ್ಲಿ ನಮಗೆ ದ್ವೇಷವು ಹೇಗಿರುತ್ತದೋ ಹಾಗೆಯೇ, ವಿಷಯಗಳಲ್ಲಿ ವಿರಸವನ್ನು ಉಂಟುಮಾಡಿ ಜೀವನನ್ನು ಬಂಧದಿಂದ ಬಿಡಿಸುತ್ತದೆ.
ಆದ್ದರಿಂದ ಈ ಜೀವನ ಬಂಧನಕ್ಕೆ ಅಥವಾ ಮೋಕ್ಷಕ್ಕೆ ಮನಸ್ಸೇ ಕಾರಣ. ರಜೋಗುಣದಿಂದ ಮಲಿನವಾಗಿರುವಾಗ ಈ ಮನಸ್ಸೇ ಬಂಧಕ್ಕೆ ಕಾರಣವಾಗಿರುತ್ತದೆ. ರಜಸ್ತಮೋಗುಣಗಳಿಲ್ಲದೆ ಶುದ್ಧವಾಗಿರುವಾಗ ಮನಸ್ಸು ಮೋಕ್ಷಕ್ಕೆ ಕಾರಣವಾಗುತ್ತದೆ. ವಿವೇಕವೈರಾಗ್ಯಗಳ ಉತ್ಕರ್ಷದಿಂದ ಮನಸ್ಸು ಶುದ್ಧವಾಗಿ ಮುಕ್ತಿಗೆ ಯೋಗ್ಯವಾಗುತ್ತದೆ. ಆದುದರಿಂದ ಬುದ್ಧಿವಂತನಾದ ಮುಮುಕ್ಷುವು ಮೊದಲು ಅವೆರಡನ್ನೂ ದೃಢಪಡಿಸಿಕೊಳ್ಳಬೇಕು.
ಮನಸ್ಸೇ ಸಂಸಾರಿಗೆ ಸ್ಥೂಲ-ಸೂಕ್ಷ್ಮ ರೂಪವಾದ ಎಲ್ಲಾ ವಿಷಯಗಳನ್ನೂ ಉಂಟುಮಾಡುತ್ತದೆ ಹಾಗೂ ಶರೀರ, ವರ್ಣ, ಆಶ್ರಮ, ಜಾತಿ ಇವುಗಳನ್ನೂ ಗುಣ, ಕ್ರಿಯೆ, ಹೇತು, ಫಲ ಇವುಗಳನ್ನೂ ನಿರಂತರವಾಗಿ ಉಂಟುಮಾಡುತ್ತದೆ. ಕನಸಿನಲ್ಲಿ ನಾವು ಕಾಣುವ ಸ್ಥೂಲ, ಸೂಕ್ಷ್ಮ ವಸ್ತುಗಳೂ, ವಿಷಯಗಳೂ ಭಾವಭಾವನೆಗಳೂ ಎಲ್ಲವನ್ನೂ ಹೇಗೆ ಮನಸ್ಸೇ ಸೃಜಿಸಿರುವುದೋ ಹಾಗೆಯೇ ಎಚ್ಚರಸ್ಥಿತಿಯಲ್ಲೂ ಎಚ್ಚರದ ಪ್ರಪಂಚ, ಅದರ ಭೋಕ್ತೃ-ಎಲ್ಲವನ್ನೂ ಮನಸ್ಸು ತಾನೇ ಕಲ್ಪಿಸುತ್ತದೆ.
ಮನಸ್ಸು ಹೊರವಸ್ತುಗಳೊಡನೆ ನಿಕಟ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ. ತನ್ನ ಆಂತರಿಕಭಾವನೆಗಳನ್ನು ಆ ವಸ್ತುಗಳಲ್ಲಿ ಆರೋಪಿಸುತ್ತದೆ. ನಮ್ಮ ಬಯಕೆಗಳೇ ವಸ್ತುಗಳ ರೂಪದಲ್ಲಿ ಕಾಣಿಸಿಕೊಳ್ಳುವುದೂ ಅಸಂಗತವಲ್ಲ. ಮನಸ್ಸೇ ವಸ್ತುಗಳನ್ನು ಕಲ್ಪಿಸಿಕೊಂಡು ಅದನ್ನು ಹೊರಪ್ರಪಂಚದಲ್ಲಿ ಅಭಿವ್ಯಕ್ತಗೊಳಿಸುವುದರಿಂದ ‘ವಿಷಯಿ’ ಮತ್ತು ‘ವಿಷಯ’ಗಳು ಒಂದೇ. ಅವುಗಳಲ್ಲಿ ಭೇದವಿರುವುದಿಲ್ಲ. ಮನಸ್ಸಿನಿಂದ ಹೊರಬಂದ ಕಾಲ್ಪನಿಕ ವಸ್ತುಗಳೇ ಪ್ರಪಂಚದ ನಾನಾತ್ವಕ್ಕೆ ಕಾರಣವಾಗುತ್ತವೆ. ಅವಕ್ಕೆ ನಿಜವಾಗಿಯೂ ಅಸ್ತಿತ್ವವಿರುವುದಿಲ್ಲ. ‘ವಿಷಯಿ’ಯು ಇಲ್ಲವಾದಾಗ ಬಾಹ್ಯವಸ್ತುಗಳು ಇಲ್ಲವಾಗುವುವು. ಬಾಹ್ಯವಸ್ತುಗಳ ವೀಕ್ಷಣೆಯ ಮೂಲಕ ಮನಸ್ಸು ತನ್ನನ್ನು ತಾನೇ ವೀಕ್ಷಿಸುತ್ತದೆ. ಮಗುವು ತನ್ನ ಹೆಬ್ಬೆರಳನ್ನು ತಾನೇ ಚೀಪುತ್ತಾ ಆನಂದಪಡುವಂತೆ, ಪ್ರೇಕ್ಷಕನಾದ ವಿಷಯಿಯು ವಸ್ತುರೂಪದ ವಿಷಯವನ್ನು ನೋಡಿ ಅದರ ಅನುಭವವನ್ನು ಪಡೆಯುತ್ತದೆ. ಮಗುವು ಚೀಪುತ್ತಿರುವ ಹೆಬ್ಬೆರಳನ್ನು ಬಾಯಿಂದ ತೆಗೆದರೆ ಅದು ಅಳಲು ಪ್ರಾರಂಭಿಸುತ್ತದೆ. ಹಾಗೆಯೇ ನಮ್ಮಿಂದ ಬಾಹ್ಯವಸ್ತುಗಳನ್ನು ಕಸಿದುಕೊಂಡರೆ, ನಾವೂ ದುಃಖಿಸುತ್ತೇವೆ. ಇದು ಮನಸ್ಸಿನ ಕ್ರಿಯೆ.
ಸಂಗರಹಿತನೂ, ಜ್ಞಾನಸ್ವರೂಪನೂ ಆದ ಈ ಆತ್ಮನನ್ನು ಮನಸ್ಸೇ ದೇಹ, ಇಂದ್ರಿಯ, ಪ್ರಾಣಗಳೆಂಬ ಹಗ್ಗಗಳಿಂದ ಚೆನ್ನಾಗಿ ಕಟ್ಟಿಹಾಕಿ, ತನ್ನ ಕರ್ಮಗಳಲ್ಲಿಯೂ ಮತ್ತು ಅವುಗಳ ಫಲೋಪಭೋಗಗಳಲ್ಲಿಯೂ “ನಾನು”, “ನನ್ನದು” ಎಂಬ ಭಾವನೆಗಳಿಂದ ಯಾವಾಗಲೂ ಒದ್ದಾಡುವಂತೆ ಮಾಡುತ್ತದೆ.
ಆದುದರಿಂದ ತತ್ತ್ವದರ್ಶಿಗಳಾದ ಜ್ಞಾನಿಗಳು ಮನಸ್ಸನ್ನೇ ಅವಿದ್ಯೆಯೆಂದು ಕರೆಯುತ್ತಾರೆ. ಗಾಳಿಯಿಂದ ಮೇಫಸಮೂಹವು ಅಲೆದಾಡುವಂತೆ ಮನಸ್ಸಿನಿಂದಲೇ ವಿಶ್ವವೆಲ್ಲವೂ ಸುತ್ತುತ್ತಿರುವುದು. ಆದುದರಿಂದ ಮುಮುಕ್ಷವು ಪ್ರಯತ್ನಪೂರ್ವಕವಾಗಿ ಶುದ್ಧಿಗೊಳಿಸಿಕೊಳ್ಳಬೇಕು. ಅದು ಶುದ್ಧವಾದರೆ ಮುಕ್ತಿಯು ಅಂಗೈಯಲ್ಲಿರುವ ಸಿದ್ಧವಾಗುವುದು.