ಮರಣ ಭಯದಿಂದ ಬಿಡುಗಡೆ ಹೊಂದುವುದು… : ರಮಣರ ವಿಚಾರಧಾರೆ

ಮನಸ್ಸು ನಿವೃತ್ತಿ ಮಾರ್ಗಕ್ಕೆ ತಿರುಗಿದಾಗ ಅದು ಈಶ್ವರನ ಅನುಗ್ರಹಕ್ಕೆ ಪಾತ್ರವಾಗುವುದು‌. ಈ ಅನುಗ್ರಹವು ಮನಸ್ಸನ್ನು ಅಂತರ್ಮುಖ ಗೊಳಿಸಿ ಅದನ್ನು ಪರವಸ್ತುವಿನಲ್ಲಿ ಸೇರಿಸಿ ಬಿಡುತ್ತದೆ . ಆಗ ಎಲ್ಲಾ ಬಂದ ವಾಸನೆಗಳು ‘ನಾನು ‘ ಎನ್ನುವ ಅಹಂಕಾರವು ನಾಶವಾಗುತ್ತದೆ ; ಉಳಿಯುವುದು ಮರಣ ರಹಿತವಾದ ಆತ್ಮವೇ! । ಓದುಗರ ಸಂಗ್ರಹದಿಂದ…

ಮರಣ ಭಯವು ಎಲ್ಲರಿಗೂ ಯಾವಾಗಲಾದರೂ ಉಂಟಾಗುತ್ತದೆ; ಆದರೆ ಅದರಿಂದ ಏನು ಉಪಯೋಗವಾಗದೆ ಹೋಗುತ್ತದೆ , ಮರಣ ಭಯದಿಂದ ತಾತ್ಕಾಲಿಕವಾಗಿ ಉಂಟಾಗುವ ‘ಸ್ಮಶಾನ ವೈರಾಗ್ಯ ‘ ಆಹಾರವೇ ಮೊದಲಾದ ಭೋಗ್ಯ ವಸ್ತುಗಳನ್ನು ಅನುಭವಿಸುವುದರಿಂದ ಮರೆತುಹೋಗುತ್ತದೆ. ಎಲ್ಲೋ ಕೆಲವರು ವಿಚಾರಶೀಲರಾದ ಸದ್ಗುಣಿಗಳು ಅದನ್ನು ಮರೆಯದೆ ಕೂಡಲೇ ಅದಕ್ಕೆ ಪರಿಹಾರ ಮಾರ್ಗವನ್ನು ಹುಡುಕಿ ಮರಣಭಯದಿಂದ ಬಿಡುಗಡೆ ಹೊಂದುವರು.

ಪ್ರಪಂಚ ಮಾಯೆಯಲ್ಲಿ ಅಜ್ಞಾನದಲ್ಲಿ ಸಿಕ್ಕಿಕೊಂಡಿರುವ ಮನುಷ್ಯರಿಗೆ ಅದರಿಂದ ಪಾರಾಗಲು ಪ್ರಾಪಂಚಿಕ ಜೀವನದ ದುಃಖ ದುರಿತಗಳ ಸೋಪಾನಗಳು; ರಮಣ ಮಹರ್ಷಿಗಳು ಹೇಳುತ್ತಾರೆ ” ಒಬ್ಬನು ನಿದ್ರಿಸಿ ಕನಸು ಕಾಣುವಾಗ ಅವನು ಕಾಣುವುದೆಲ್ಲವೂ ಪ್ರಿಯವಾಗಿರುವವರೆಗೂ ಅವನು ಕನಸಿನಿಂದ ಎಚ್ಚರ ಹೊಂದುವುದಿಲ್ಲ. ದುಃಖಕರ ವಾದ ನೋಟಗಳು ಮಾತ್ರವೇ ಅವನಿಗೆ ಎಚ್ಚರವನ್ನು ಉಂಟುಮಾಡುತ್ತದೆ ಅದರಂತೆಯೇ ಪ್ರಪಂಚವು ಸುಖಕರವಾಗಿ ರುವಂತೆ ತೋರುತ್ತಿರುವವರೆಗೆ ಯಾರೂ ಪ್ರಪಂಚದ ಮಾಯೆಯಿಂದ ಎಚ್ಚೆತ್ತು ತನ್ನ ನಿಜ ಸ್ವರೂಪವನ್ನು ಅರಿಯಲು ಯತ್ನಿಸುವುದಿಲ್ಲ. ಸಂಸಾರದ ದುಃಖಗಳು, ಮರಣ ಭಯ ಮೊದಲಾದವುಗಳ ಅನುಭವವಾದರೆ ಅವನು ಅವುಗಳಿಂದ ಪಾರಾಗಲು ಯತ್ನಿಸುತ್ತಾನೆ “.

ಮರಣವು ಕಟ್ಟಿದ್ದು ಎಂದು ಗೊತ್ತಿದ್ದರೂ ಅದು ಕಣ್ಣೆದುರಿಗೆ ಆಗದಿದ್ದರೆ ಅದರ ಭಯವು ತೀವ್ರವಾಗಿ ಉಂಟಾಗದು. ಆದ್ದರಿಂದ ಜೀವನವು ದುಃಖಮಯ ಎನ್ನುವ ಅನುಭವದ ಅರಿವೇ ವೈರಾಗ್ಯಕ್ಕೆ ಕಾರಣವಾಗಿ ನಿವೃತ್ತಿ ಮಾರ್ಗಕ್ಕೆ ಒಬ್ಬನನ್ನು ತಿರುಗಿಸುತ್ತದೆ. ಅತ್ಯಂತ ಉದಾತ್ತ ಗುಣಗಳುಳ್ಳ ಎಲ್ಲೋ ಕೆಲವರು ಮಾತ್ರ ಮರಣದ ಬಗ್ಗೆ ಚಿಂತಿಸುವ ಮಾತ್ರದಿಂದಲೇ ಜ್ಞಾನ ಮಾರ್ಗಕ್ಕೆ ತಿರುಗಿ ಬಿಡುಗಡೆಯನ್ನು ಹೊಂದುವರು ಇದಕ್ಕೆ ಭಗವಾನ್ ಬುದ್ಧ ಮತ್ತು ರಮಣ ಮಹರ್ಷಿಗಳು ಉದಾಹರಣೆಗಳು.

ಹೀಗೆ ಮನಸ್ಸು ನಿವೃತ್ತಿ ಮಾರ್ಗಕ್ಕೆ ತಿರುಗಿದಾಗ ಅದು ಈಶ್ವರನ ಅನುಗ್ರಹಕ್ಕೆ ಪಾತ್ರವಾಗುವುದು‌. ಈ ಅನುಗ್ರಹವು ಮನಸ್ಸನ್ನು ಅಂತರ್ಮುಖ ಗೊಳಿಸಿ ಅದನ್ನು ಪರವಸ್ತುವಿನಲ್ಲಿ ಸೇರಿಸಿ ಬಿಡುತ್ತದೆ . ಆಗ ಎಲ್ಲಾ ಬಂದ ವಾಸನೆಗಳು ‘ನಾನು ‘ ಎನ್ನುವ ಅಹಂಕಾರವು ನಾಶವಾಗುತ್ತದೆ ; ಉಳಿಯುವುದು ಮರಣ ರಹಿತವಾದ ಆತ್ಮವೇ!

ಅಹಂಕಾರವೆಂದರೆ “ಶರೀರವೇ ಆತ್ಮ ” ಎನ್ನುವ ಹುಸಿ ಅರಿವು . ಅದು ಇರುವವರೆಗೆ ಶರೀರಕ್ಕೆ ಉಂಟಾಗುವ ಮರಣವನ್ನು ತನ್ನ ಮರಣವಾಗಿ ಎಣಿಸಲಾಗುತ್ತದೆ. ಆ ಭಾವನೆ ಅಳಿದಾಗ ಮರಣ ಎನ್ನುವ ಭಾವನೆಯೇ ನಿರ್ಮೂಲವಾಗುತ್ತದೆ ಅನ್ನುತ್ತಾರೆ ಶ್ರೀ ರಮಣರು.

Leave a Reply