ಇಂದಿನ ಸುಭಾಷಿತ, ಮಹಾಭಾರತದಿಂದ…
ಜರಾಮೃತ್ಯೂ ಹಿ ಭೂತಾನಾಂ ರವಾದಿತಾರೌ ವೃಕಾವಿವ।
ಬಲಿನಾಂ ದುರ್ಬಲಾನಾಂ ಚ ಹ್ರಸ್ವಾನಾಂ ಮಹತಾಮಪಿ॥
ಮಹಾಭಾರತ । ಶಾಂತಿಪರ್ವ 027
ಅರ್ಥ: ಮುಪ್ಪು ಮತ್ತು ಸಾವುಗಳೆರಡೂ ತೋಳಗಳಂತೆ ಬಂದೆರಗುವ ನಿಶ್ಚಿತ ಸಂಗತಿಗಳು. ಇದಕ್ಕೆ ದುರ್ಬಲರೂ ಹೊರತಲ್ಲ, ಶಕ್ತಿಶಾಲಿಗಳೂ ಹೊರತಲ್ಲ. ಇವು ಎಲ್ಲರನ್ನೂ ಹಿಡಿದೇ ತೀರುವವು.
ತಾತ್ಪರ್ಯ: ನಮ್ಮ ಜೀವನದ ಪ್ರತಿಯೊಂದು ಕಷ್ಟ ಸಂಕಟಗಳಿಗೂ ನಾವು ಶಾಶ್ವತರು ಅನ್ನುವ ಭ್ರಮೆ ಅಥವಾ ನಾವು ಶಾಶ್ವತರಲ್ಲ ಅನ್ನುವ ಮರೆವೇ ಕಾರಣ. ನಮ್ಮ ಯೌವನದಲ್ಲಿ ನಾವು ಎಂದೆಂದೂ ಇಷ್ಟೇ ಶಕ್ತಿಶಾಲಿಗಳಾಗಿ ಚಟುವಟಿಕೆಯಿಂದ ಇದ್ದುಬಿಡುತ್ತೇವೆ, ಸುಖಭೋಗ ಅನುಭವಿಸುತ್ತೇವೆ ಎಂದೆಲ್ಲ ಭಾವಿಸುತ್ತೇವೆ. ವಾಸ್ತವದಲ್ಲಿ ನಾವು ಅದೆಷ್ಟೇ ಶಕ್ತಿವಂತರೂ ಶ್ರೀಮಂತರೂ ಆಗಿದ್ದರೂ ಸಾವು, ಅದಕ್ಕಿಂದ ಮೊದಲು ಅದರ ಹೊಸ್ತಿಲಂತಿರುವ ಮುಪ್ಪು ಹಸಿದ ತೋಳಗಳಂತೆ ನಮಗಾಗಿ ಕಾಯುತ್ತಿರುತ್ತವೆ! ಇದನ್ನು ನೆನಪಿಟ್ಟುಕೊಂಡರೆ ನಮ್ಮ ಮದವೂ ಕಡಿಮೆಯಾಗಿ ವಿನಯವಂತಿಕೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.