ಎಣೆಯಿಲ್ಲದೀ ಐಸಿರಿಯ ತುಂಬೆ ನಮ್ಮೀ ವ್ರತವು ಸಾರ್ಥಕವು । ಧನುರ್ ಉತ್ಸವ ~ 3

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ. ಇದು ಮೂರನೇ ಕಂತು.

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಮೂರನೇಯ ದಿನ

ಬೆಳೆದು ವಿಶ್ವವನಳೆದ ಉತ್ತಮನ ಹೆಸರ್ಹಾಡಿ

ನಾವ್ ನಮ್ಮ ವ್ರತವ ಮಜ್ಜನವ ಮಾಡಿದೊಡೆ

ಬರ ಇಂಗಿ ನಾಡಲ್ಲಿ ಮೂರು ಹದ ಮಳೆ ಹುಯಿದು

ಬೆಳೆದೆತ್ತರದ  ಕೆಂಭತ್ತ ಪೈರಿನಲಿ ಮೀನುಗಳು ಕುಪ್ಪಳಿಸೆ

ಚೆಲುವೆ ನೈದಿಲೆ ಹೂಗಳಲಿ ದುಂಬಿಗಳು ಮತ್ತಲಿರೆ

ಗಾಬರಿಗೊಳದೆ ಹೊಕ್ಕಿರ್ದು ತುಂಬು ಕೆಚ್ಚಲ ಹಿಡಿದು ಕರೆದೊಡೆ

ಕೊಡವ ತುಂಬುವ ಔದಾರ್ಯದಾ ದೊಡ್ಡ ಹಸುಗಳು

ಎಣೆಯಿಲ್ಲದೀ ಐಸಿರಿಯ ತುಂಬೆ ನಮ್ಮೀ ವ್ರತವು ಸಾರ್ಥಕವು

-ಬಿಂದಿನಗವಲೆ ನಾರಾಯಣಸ್ವಾಮಿ (ಪಂತುವರಾಳಿ ರಾಗ – ತ್ರಿಪುಟ ತಾಳ)

“ಪಾವೈ ನೋಂಬು” (ಗೋದಾ ವ್ರತ)  ದಿನ ಮುಂಜಾವಿನಲ್ಲೇ ಎದ್ದು ಮಿಂದು, ಮೂರು ಲೋಕಗಳನ್ನೂ ತನ್ನ ಪಾದಕಮಲಗಳಿಂದ ಅಳೆದ ಉತ್ತಮ ವಾಮನನ ನಾಮವನು ಹಾಡಿದರೆ, ದೇಶವೆಲ್ಲ ಕುಂಭವೃಷ್ಟಿಯಾಗುತ್ತದೆ.

ಸೊಂಪಾದ ಭತ್ತದ ತೆನೆಗಳ ನಡುವೆ ಗೆಂಡೆ ಮೀನುಗಳು ಜಿಗಿದು ಆಡುತ್ತವೆ. ತಾವರೆಯ ಹೂವಿನಲ್ಲಿ ದುಂಬಿಗಳು ನಿದ್ರೆಮಾಡುತ್ತವೆ. ಕ್ಷಾಮ ಎಂಬ ಸ್ಥಿತಿಯೇ ಇಲ್ಲದಿರುತ್ತದೆ.

ದಾರಾಳ ಗುಣವುಳ್ಳ ಹಸುಗಳೆಲ್ಲಾ, ತಮ್ಮ ಬಳಿ ಸ್ವಲವೂ ಹಾಲನ್ನು ಉಳಿಸಿಕೊಳ್ಳದೆ ಬಿಂದಿಗೆ ತುಂಬ ಹಾಲು ಸ್ರವಿಸುತ್ತದೆ.

ಹೀಗೆ ಅಳಿಯದ ಸಂಪತ್ತು ಎಲ್ಲ ಕಡೆ ತುಂಬಿರಲು, ನಾರಾಯಣನನ್ನು ಹಾಡೋಣ ಬನ್ನಿರೇ” ಎಂದು ಕರೆಯುತ್ತಾಳೆ ಗೋದೈ ಆಂಡಾಳ್…!

“ಬೆಳೆದು ವಿಶ್ವವನಳೆದ ಉತ್ತಮನ ಹೆಸರು ಹಾಡಿ…..”

ಪರಂದಾಮನ ಹತ್ತು ಅವತಾರಗಳಲ್ಲಿ ಗೋದೈಯ ಮನಸ್ಸಿಗೆ ಬಹಳ ಹಿಡಿಸಿದ ಅವತಾರ ವಾಮನವತಾರ.  ಆ ವಾಮನನ್ನು ಹೊಗಳಿ ಹಾಡುವ ಹಾಡು ಇದು….! ‘ಬೆಳೆದು ವಿಶ್ವವನಳೆದ ಉತ್ತಮನ ಹೆಸರು ಹಾಡಿ’ ಎಂದೂ ‘ಆಗಸದ ಮಧ್ಯವನು ಕತ್ತರಿಸಿ ಬೆಳೆದು ಲೋಕವನಳೆದ ದೇವದೇವನೇ’ ಎಂದೂ ‘ಅಂದು ಈ ಜಗವ ಅಳದೆ’ ಎಂದೂ ತಿರುಪ್ಪಾವೈಯಿನ ಮೂವತ್ತು ಹಾಡುಗಳಲ್ಲಿ ಈ ವಾಮನ ಅವತಾರವನ್ನು ಮಾತ್ರ ಮೂರು ಸಲ ಹಾಡುತ್ತಾಳೆ ಗೋದೈ.

ಅಂತಹ ಸೊಗಸೇನಿದೆ ಈ ವಾಮನ ಅವತಾರದಲ್ಲಿ….?

ಅಸುರ ಹಿರಣ್ಯನ ಮಗನಾದ ಭಕ್ತ ಪ್ರಹಲ್ಲಾದನ ಮೊಮ್ಮಗ ಮಹಾಬಲಿ ಚಕ್ರವರ್ತಿ ಒಬ್ಬ ಶ್ರೇಷ್ಠ ಶಿವ ಭಕ್ತ. ಒಬ್ಬ ರಾಜನಾಗಿ ತನ್ನ ಕರ್ತವ್ಯದಿಂದ ಚಾಚೂ ತಪ್ಪದವನು. ತನ್ನ ಒಳ್ಳೆಯ ಆಡಳಿತದಲ್ಲಿ ಪ್ರಜೆಗಳ ಮನಸ್ಸಿನಲ್ಲಿ ನಿರಂತರವಾಗಿ ಉಳಿದವನು. ತನ್ನ ಸದ್ಗುಣಗಳಿಂದ ದೇವರಿಗೂ ಮೇಲಾದವನಾಗಿ ಭಾವಿಸಲ್ಪಟ್ಟವನು. ಆದರೆ, ಅದೇ ಅವನನ್ನು ಗರ್ವದಲ್ಲಿ ಮೆರೆಯುವಂತೆ ಮಾಡಿ, ದೇವತೆಗಳನ್ನು ಆಳಲು ತನಗೆ ಇಂದ್ರ ಪದವಿ ಬೇಡಿ ಒಂದು ಯಾಗವನ್ನು ಆಚರಿಸಲು ತೊಡಗುತ್ತಾನೆ.

ಮಹಾಬಲಿ ಎಂಬ ಅಸುರ, ಇಂದ್ರ ಪದವಿಗೆ ಬಂದರೆ ತನಗೂ, ದೇವತೆಗಳಿಗೂ ಎಷ್ಟೆಲ್ಲ ತೊಂದರೆಗಳು ಉಂಟಾಗಬಹುದೆಂದು ಚಿಂತೆಗೆ ಒಳಗಾದ ಇಂದ್ರ, ಮಹಾಬಲಿಯಿಂದ ತನ್ನನ್ನೂ, ದೇವತೆಗಳನ್ನೂ ರಕ್ಷಿಸಬೇಕೆಂದು ಶ್ರೀಮನ್ ನಾರಾಯಣನ ಬಳಿ ಮೊರೆಹೋಗುತ್ತಾನೆ. ಅಪಾಯವನ್ನು ಅರಿತ ನಾರಾಯಣ, ಅವತಾರ ತಾಳಲು, ತಡಮಾಡದೆ ಆಗಲೇ ಕುಬ್ಜ ವಾಮನನಾಗಿ ರೂಪತಾಳಿ, ಮಹಾಬಲಿ ರಾಜನ ಯಾಗಶಾಲೆಗೆ ಯಾಚಿಸಲು ಬರುತ್ತಾನೆ.

‘ಏನು ಬೇಕು ಕೇಳು, ದಯಪಾಲಿಸುತ್ತೇನೆ…’ ಎಂದ ಮಹಾಬಲಿಯ ಬಳಿ, ತಾನು ತಪಸ್ಸು ಮಾಡಬೇಕಾಗಿರುವುದಾಗಿಯೂ, ತಾನು ತಪಸ್ಸು ಮಾಡುವ ಸಮಯದಲ್ಲಿ ಬಿಕ್ಷೆ ನೀಡುವವರು, ತನ್ನನ್ನು ಸ್ಥಳ ಬದಲಾಯಿಸಲು ಹೇಳಕೂಡದು ಎಂಬುದಕ್ಕಾಗಿಯೂ  ಪ್ರತ್ಯೇಕ ಭೂಮಿ ಬೇಕು ಎಂಬುದನ್ನು, “ನನ್ನ ಕಾಲಿನಿಂದ ಮೂರು ಹೆಜ್ಜೆ ಇಡುತ್ತೇನೆ; ಆ ಮೂರು ಅಡಿಗಳ ಒಳಗೆ ಬರುವ ಭೂಮಿ ಮಾತ್ರ ನನಗೆ ಬೇಕು…” ಎಂದು ವಾಮನ ಕೇಳುತ್ತಾನೆ. ಅಳತೆ ಎಷ್ಟೆಂದು ಹೇಳದೇ ತನ್ನ ಹೆಜ್ಜೆಯಲ್ಲಿ ಮೂರು ಅಡಿ ಭೂಮಿಯನ್ನು ಮಾತ್ರ ಕೇಳುತ್ತಾನಲ್ಲಾ ಎಂದು ಭಾವಿಸಿದ ಮಾಹಾಬಲಿ, “ಇಷ್ಟೊಂದು ಕುಳ್ಳ ಆಕಾರದಲ್ಲಿರುವ ನಿನಗೆ ಮೂರಡಿ ಎಂಬುದು ಬಹಳ ಚಿಕ್ಕದಲ್ಲ, ಅಷ್ಟುಸಾಕೇ…? ಎಂದು ಗೇಲಿಯಾಗಿ ನಗಲು, ತಕ್ಷಣ ಉಳಿದವರು ಮಹಾಬಲಿಯ ಜತೆ ಸೇರಿ ನಗುತ್ತಾರೆ.

ಅವಮಾನದಲ್ಲಿ ತಲೆ ತಗ್ಗಿಸಿ ನಿಂತ ವಾಮನನ ಬಳಿ, “ಚಿಂತೆ ಮಾಡಬೇಡ, ನೀನು ಕೇಳಿದಂತೆಯೇ ಭೂಮಿಯನ್ನು ಅಳೆದು ತೆಗೆದುಕೋ…” ಎಂದು ಮಹಾಬಲಿಯ ಬಳಿ ಹೇಳಲು, ಅದರ  ನಂತರ ನಡೆದದ್ದು ಏನು ಎಂಬುದನ್ನೂ, ಅದು ಮಹಾಬಲಿಯನ್ನೇ ಇಲ್ಲದಂತೆ ಮಾಡಿತು ಎಂಬುದನ್ನೂ ನಾವು ಅರಿತಿದ್ದೇವೆ.

“ಆಕಾರ ನೋಡಿ ಹೀಯಾಳಿಸಬಾರದು” ಎನ್ನುತ್ತದೆ ತಿರುಕ್ಕುರಳ್. ಬಲಹೀನವಾದವರನ್ನು ಕಂಡು ನಾವು ತೆಗಳಲೋ, ನಗಲೋ ಕೂಡದು ಎಂಬುದನ್ನು ಹೇಳುವುದೇ ವಾಮನನ ಕಥೆ. ಅದೇ ವಿಚಾರವನ್ನು ನಮಗೆ ತಿಳಿಸಿ ಹೇಳುತ್ತದೆ ರಾಮಾಯಣ ಕಾಲದಲ್ಲಿ ನಡೆದ ಮಿತ್ರಬಂಧುವಿನ ಕಥೆಯೂ ಸಹ.

ಸೀತಾ- ರಾಮರ ವಿವಾಹ ಮುಗಿದು ದಂಪತಿಗಳಿಗೆ ಉಡುಗೊರೆ ನೀಡುವ ಸಭೆಯಲ್ಲಿ ಮಿತ್ರಬಂಧು ಎಂಬ  ಚಮ್ಮಾರ ಸಾಲಿನಲ್ಲಿ ನಿಂತಿರುತ್ತಾನೆ. ಅವನು ರಾಮನಿಗಾಗಿ ಒಂದು ಜತೆ ಚಪ್ಪಲಿಯನ್ನು ಕೈಯಲ್ಲಿಟ್ಟುಕೊಂಡು ನಿಂತಿರುತ್ತಾನೆ. ಅವನ ಹಿಂದೆಯೂ ಮುಂದೆಯೂ ಬೆಲೆಬಾಳುವ ಬಳುವಳಿಗಳನ್ನು ಇಟ್ಟುಕೊಂಡು ನಿಂತಿದ್ದವರ ನಡುವೆ, ಅವನ ಚಪ್ಪಲಿಗಳು ತುಚ್ಛವಾಗಿ ಕಾಣುತ್ತದೆ. ಅವರ ಪರಿಹಾಸ್ಯದ ನಗುವಿಗೂ, ಕುಚೋದ್ಯದ ಮಾತುಗಳಿಗೂ ಮನ ನೊಂದು ಕುಗ್ಗಿಹೋಗುತ್ತಾನೆ ಮಿತ್ರಬಂಧು.

ಸ್ವಾಗತ ಮಂಟಪದಲ್ಲಿ, “ನಾನೇ ತಯಾರು ಮಾಡಿದ ಈ ಪಾದುಕೆಗಳ ಹೊರತಾಗಿ ನಿನಗೆ ಉಡುಗೊರೆ ನೀಡಲು ಬಡವನಾದ ನನ್ನ ಬಳಿ ಬೇರೆ ಏನೂ ಇಲ್ಲ…!” ಎಂದು ಕಣ್ಣೀರು ಸುರಿಸಿದ ಮಿತ್ರಬಂಧುವನ್ನು ಆಲಿಂಗಿಸಿಕೊಂಡ ರಾಮಚಂದ್ರ, “ಪ್ರೀತಿಯಿಂದ ನೀನು ಕೊಡುವ ಉಡುಗೊರೆಯ ಮಹಿಮೆಯನ್ನು ಇವರು ಅರ್ಥಮಾಡಿಕೊಂಡಿಲ್ಲ. ನೀನು ನೀಡುವ ಪಾದುಕೆ ಉಳಿದ ಎಲ್ಲದ್ದಕಿಂತಲೂ ಹೆಚ್ಚು ನನ್ನ ಮನಸ್ಸಿಗೆ ಆಪ್ತವಾಗಿದೆ…” ಎಂದು ಹರುಷದಿಂದ ಅವುಗಳನ್ನು ಪಡೆದುಕೊಂಡು, ಅವನಿಗೆ ಉಡುಗೊರೆಗಳನ್ನೂ ಕೊಟ್ಟು ಕಳುಹಿಸುತ್ತಾನೆ. 

ಕಾಲದ ಓಟದಲ್ಲಿ ರಾಮ ವನವಾಸಕ್ಕೆ ಮರದಹಾವುಗೆ ಧರಿಸಿ ಅಯೋಧ್ಯೆಯಿಂದ ಹೊರಡುವಾಗ ಅವನು ತೊಟ್ಟಿದ್ದೂ, ವನವಾಸದಿಂದ ಹಿಂತಿರುಗಿ ಬರುವಂತೆ ಅಣ್ಣನನ್ನು ಭರತ ಕರೆಯುವಾಗ ಅವನು ಬರಲು ನಿರಾಕರಿಸಿ, ತಮ್ಮನಿಗೆ ಕೊಟ್ಟು ಕಳುಹಿಸುವುದು ಮಿತ್ರಬಂಧು ನೀಡಿದ ಅದೇ ಪಾದುಕೆಗಳನ್ನು.

ಯಾವ ಕಾಲುಗಳು ಬಹಳ ಕುಬ್ಜವಾಗಿದೆ ಎಂದು ಮಹಾಬಲಿ ಹಿಯಾಳಿಸಿದನೋ, ಅದೇ ವಾಮನನ ಕಾಲುಗಳೇ, ತ್ರಿವಿಕ್ರಮ ಅವತಾರವಾಗಿ ಬೆಳೆದು ಲೋಕವನ್ನು ಅಳೆದು, ಮೂರನೇಯ ಅಡಿಯನ್ನು ಮಹಾಬಲಿಯ ತಲೆಯ ಮೇಲಿಟ್ಟು ತುಳಿದು, ಅವನ ಗರ್ವವವನ್ನು ಅಳಿಸಿತು. ಅದೇ ರೀತಿಯಲ್ಲಿ, ಯಾವ ಪ್ರಜೆಗಳು ಗೇಲಿ ಮಾಡಿದರೋ, ಅದೇ ಪ್ರಜೆಗಳನ್ನು ನಂತರ ಹದಿನಾಲ್ಕು ವರ್ಷಗಳು ಸಿಂಹಾಸನದ ಮೇಲಿದ್ದು ಆಳಿದ್ದೂ ಸಹ, ಆ ಸರಳ ಮಿತ್ರಬಂಧು ನೀಡಿದ ಅದೇ ಪಾದುಕೆಗಳು.

ಆದರೆ, ಅದಷ್ಟೇ ಅಲ್ಲ, ವಾಮನನ್ನು ಹಾಡುವಾಗಲೆಲ್ಲಾ, ಸುಮ್ಮನೆ ‘ಬೆಳೆದು ಲೋಕವಳೆದವನು’ ಎಂದು ಅವತಾರವನ್ನು ಹಾಡದೆ. ‘ಉತ್ತಮನಾಗಿ ಲೋಕವನಳೆದ ದೇವದೇವನೇ’ ಎಂದು ಉಪಮೆಗಳನ್ನೂ ಗೋದೈ ಸೇರಿಸಿ ಹೇಳುತ್ತಾಳೆ, ಅದು ಯಾಕೆ ? ಅದಕ್ಕೆ ಕಾರಣ ಇದೆ.

ಮನುಷ್ಯರ ಗುಣಕ್ಕೆ ತಕ್ಕಂತೆ ಅವರನ್ನು ಅಧಮಾಧಮ, ಅಧಮ, ಮಧ್ಯಮ, ಉತ್ತಮ ಎಂದು ನಾಲ್ಕು ಬಗೆಯಾಗಿ ವಿಂಗಡಿಸುತ್ತಾರೆ.

1.ತಾನು ಅಳಿದರೂ ಚಿಂತೆಯಿಲ್ಲ, ಮತ್ತೊಬ್ಬರು ಬದುಕಬಾರದು, ಎಂದು ಉಳಿದವರನ್ನು ಕಾರಣವೇ ಇಲ್ಲದೆ ಬದುಕಲು ಬಿಡದೆ ಅಳಿಸುವವನು ಅಧಮಾಧಮ; 2. ತನ್ನನ್ನು ಕಾಯ್ದುಕೊಳ್ಳಬೇಕಾದ ಸ್ಥಿತಿ ಬಂದಾಗ ಅದಕ್ಕಾಗಿ ಉಳಿದವರನ್ನು ಅಳಿಸಿ ತಾನು ಬದುಕಲು ಹಿಂಜರಿಯದವನು ಅಧಮ; 3. ಉಳಿದವರನ್ನು ಬದುಕಲು ಬಿಟ್ಟು ತಾನೂ ಬದುಕುವವನು ಮಧ್ಯಮ; 4. ತಾನು ಅವಮಾನಕ್ಕೊಳಗಾದರೂ, ಅಳಿದರೂ ಪರವಾಗಿಲ್ಲ ಎಂದು ಸ್ವಾರ್ಥಪರನಾಗಿಲ್ಲದೆ ಮತ್ತೊಬ್ಬರನ್ನು ಬದುಕಿಸುವವನು ಉತ್ತಮ ಎನ್ನುತ್ತದೆ ಶಾಸ್ತ್ರ.

ಅದರಂತೆ ನೋಡಿದರೆ, ರಾಮನ ಅವತಾರದಲ್ಲಿ ರಾವಣನೂ, ಕೃಷ್ಣನ ಅವತಾರದಲ್ಲಿ ಕಂಸನೂ ದೇವರಿಂದ ಅಳಿಸಲ್ಪಟ್ಟರು. ಆದರೆ ವಾಮನ ಅವತಾರದಲ್ಲಿ ಮಹಾಬಲಿಯನ್ನು ನಾಶ ಮಾಡದೆ, ಅವನ ಗರ್ವವನ್ನು ಅಳಿಸಿ, ಅವನನ್ನು ಗೆಲ್ಲುತ್ತಾನೆ ತ್ರಿವಿಕ್ರಮ ಭಗವಂತ. ಮತ್ತೆ, ಆ ಅವತಾರದಲ್ಲಿ ತನ್ನನ್ನು ಕಾಪಾಡಬೇಕೆಂದು ಕೇಳಿಕೊಂಡ ಇಂದ್ರನಿಗಾಗಿ, ತಾನು ಅವಮಾನಪಟ್ಟರೂ ಪರವಾಗಿಲ್ಲ ಎಂದು ತನ್ನ ಸುಂದರ ರೂಪವನ್ನು ತ್ಯಜಿಸಿ ತನ್ನನ್ನು ಕುಬ್ಜನಾಗಿ ಕುಗ್ಗಿಸಿಕೊಳ್ಳುತ್ತಾನೆ ಶ್ರೀಮನ್ ನಾರಾಯಣ.

ಅಷ್ಟು ಮಾತ್ರವಲ್ಲ, ಬ್ರಹ್ಮಚಾರಿಗಳಿಗೆ ಮಾತ್ರ ಯಾಚನೆ ಮಾಡುವ ಹಕ್ಕುಂಟು ಎಂಬುದರಿಂದ, ತನ್ನ ಮಡದಿಯನ್ನೂ ತೊರೆದು ಬ್ರಹ್ಮಚಾರಿಯಾಗಿ ಹೊರಡುತ್ತಾನೆ. ಬಿಕ್ಷೆ ಬೇಡುವಾಗ ಒಬ್ಬನ ವಿದ್ಯೆ, ಪ್ರಶ್ನೆ, ಹಿರಿಮೆ, ಚಾತುರ್ಯ ಮತ್ತು ಜಯ ಎಂಬ ಐದೂ ದೇವತೆಗಳು ಅವನನ್ನು ಬಿಟ್ಟು ನಿರಂತರವಾಗಿ ಆಗಲಿ ಬಿಡುತ್ತಾರಂತೆ. ಇಷ್ಟೆಲ್ಲಾ ತಿಳಿದಿದ್ದರೂ ವರವನ್ನು ಮಾತ್ರವೇ ನೀಡುವ ಪರಂದಾಮ, ಇಂದ್ರನಿಗಾಗಿ ಯಾಗಶಾಲೆಯಲ್ಲಿ ಯಾಚಿಸಿ ನಿಲ್ಲುತ್ತಾನೆ.

ಯಾವಾಗಲೂ ಕೊಡುವವನ ಮುಂದೆ ಪಡೆಯುವವನು ಕುಗ್ಗಿ ನಿಲ್ಲುತ್ತಾನೆ ಎಂಬುದನ್ನೂ ವಾಮನ ಅವತಾರ ಹೇಳುತ್ತದೆ.

ಮಹಾಬಲಿಯ ಜತೆ ಯುದ್ಧ ಮಾಡಿ, ಅವನನ್ನು ಸುಲಭವಾಗಿ ಗೆದ್ದಿರಬಹುದು. ಅಥವಾ ಚಕ್ರಾಯುಧದಿಂದ ಮಹಾಬಲಿಯನ್ನು ವಧೆ ಮಾಡಿಬಹುದು. ಆದರೆ ಪಾದಕಮಲಗಳ ಸ್ಪರ್ಶದಿಂದ ಎಲ್ಲ ಜೀವರಾಶಿಗಳಿಗೂ ಭಕ್ತಿ, ಜ್ಞಾನ, ವೈರಾಗ್ಯ ಮುಂತಾದವು ಬೆಳೆಯಬೇಕು  ಎಂಬ ಉದ್ದೇಶದಿಂದ ಜಗತ್ತಿನಲ್ಲಿರುವ ಜೀವರಾಶಿಗಳೆಲ್ಲದರ ತಲೆಯ ಮೇಲೆ ಅಂದರೆ ಒಳ್ಳೆಯವರು, ಕೆಟ್ಟವರು, ಮಾನವರು- ಮೃಗಗಳು, ನಾಸ್ತಿಕ, ಆಸ್ತಿಕ, ವಿದ್ಯಾವಂತ,  ಅವಿದ್ಯಾವಂತ, ಬಡವ, ಸಿರಿವಂತ ಎಂಬ ಬೇಧಭಾವವಿಲ್ಲದೆ ಅವನ ಪಾದಕಮಲದಿಂದ ಸ್ಪರ್ಶಿಸಲು ಮಹಾಬಲಿಯನ್ನೂ, ದೇವತೆಗಳನ್ನೂ ಬಳಸಿಕೊಂಡನು ಭಗವಂತ. ಆದ್ದರಿಂದಲೇ ಈ ಅವತಾರದಲ್ಲಿ ಉತ್ತಮ ಎಂದು ಹೊಗಳಿ ಹಾಡುತ್ತಾಳೆ ಗೋದೈ ಆಂಡಾಳ್…!

‘ರೂಪ ನೋಡಿ ಹಿಯಾಳಿಸಬೇಡ’ ಎಂಬುದು ಮಾತ್ರವಲ್ಲ, ಮಾನವನೋ ಮಹೇಶನೋ ಯಾರೇ ಆದರೂ ಸ್ವಾರ್ಥ ನೋಡದೆ ಉಳಿದವರಿಗೆ ಒಳಿತು ಮಾಡುವಾಗ ಮಾತ್ರವೇ ಅವರು ಉತ್ತಮ ಎಂಬ ಹೆಸರನ್ನು ಗಳಿಸಬಹುದು ಎಂಬುದೇ ವಾಮನ ಅವತಾರ ನಮಗೆ ಕಳಿಸಿಕೊಡುವ ಪಾಠ.

ಆದ್ದರಿಂದಲೇ, ತಾನು, ತನ್ನ ಪ್ರಿಯವಾದ ಅವತಾರವಾದ ವಾಮನನನ್ನು, ‘ಬೆಳೆದು ವಿಶ್ವವಳೆದ ಉತ್ತಮ’ ಎಂದು ಕರೆದು ಅವನ ಕೃಪಾಕಟಾಕ್ಷವನ್ನು ಬೇಡುತ್ತಾಳೆ ಗೋದೈ.

ಉತ್ತಮನನ್ನು ಹಾಡಿರುವುದರಿಂದಲೇ ಗೋದೈ ಸಹ, ಜಲ ಸಮೃದ್ಧಿ, ಭೂ ಸಮೃದ್ಧಿ, ಕ್ಷೀರ ಸಮೃದ್ಧಿ ಮುಂತಾದ ಸ್ಥಿರವಾದ ಅಳಿಯದ ಸಂಪತ್ತುಗಳೆಲ್ಲವನ್ನೂ ತನಗಾಗಿ ಕೇಳದೆ, ತಾನು ಬದುಕುವ ದೇಶದ ಪ್ರಜೆಗಳಿಗಾಗಿ ಈ ಹಾಡಿನ ಮುಖೇನ ಕೇಳುತ್ತಾಳೆ. ಆದ್ದರಿಂದ ಹಲವು ದೇವಸ್ಥಾನಗಳಲ್ಲಿ, ಉಳಿದ ಪಾಶುರಗಳಿಗಿಂತ ಇದು ಶ್ರೇಷ್ಠ ಪಾಶುರವಾಗಿ,  

“ಕೊಡವ ತುಂಬುವ ಔದಾರ್ಯದಾ ದೊಡ್ಡ ಹಸುಗಳು…..

ಎಣೆಯಿಲ್ಲದೀ ಐಸಿರಿಯ ತುಂಬೆ…!”  ಎಂದು ಈ ಬಾಸುರದಲ್ಲಿ ಹಾಡಿ, ಅರ್ಚನೆ ಪ್ರಸಾದಗಳನ್ನು ನೀಡುತ್ತಾರೆ.

ಮತ್ತೆ, ಈ ಉತ್ತಮನನ್ನು ಹಾಡಿದರೆ ಬಿರುಗಾಳಿ, ಪ್ರಳಯ ಮುಂತಾದ ಸಂಕಷ್ಟಗಳು ಉಂಟಾಗದಂತೆ, ತಿಂಗಳಿಗೊಮ್ಮೆ ಕುಂಭವೃಷ್ಟಿಯಾಗುತ್ತದೆ ಎಂಬುದನ್ನೂ ತಿಳಿಸಲು, “ಬರ ಇಂಗಿ ನಾಡಲ್ಲಿ ಮೂರು ಹದ ಮಳೆ ಹುಯಿದು” ಎಂದು ಹಾಡುತ್ತಾಳೆ ಗೋದೈ ಆಂಡಾಳ್.

ಆದ್ದರಿಂದ

“ಅಳಿಯದ ಸಂಪತ್ತು ಎಲ್ಲೆಲ್ಲೂ ತುಂಬಿ ತುಳುಕಬೇಕೆಂದರೆ, ಉತ್ತಮನಾದ ವಾಮನನನ್ನು ಹಾಡೋಣ ಬನ್ನಿರೇ…” ಎಂದು ಮೂರನೇಯ ದಿನ ಸಖಿಯರನ್ನು ಕರೆಯುತ್ತಾಳೆ ಗೋದೈ ಆಂಡಾಳ್.

Leave a Reply