ಮಾವನಾ ಮಗಳೇ ಮಾಣಿಕದ ಚಿಲುಕವನು ತೆರೆಯೆ : ಧನುರ್ ಉತ್ಸವ ~ 9

ಧನುರ್ ಉತ್ಸವ ವಿಶೇಷ ಸರಣೀಯ ಏಳನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಒಂಭತ್ತನೇಯ ದಿನ

ಶುದ್ಧ ಮಾಣಿಕ್ಯದಾ ಮಾಳಿಗೆಯ ಸುತ್ತಲೂ ದೀಪಗಳು ಬೆಳಗುತಿರೆ

ಧೂಪ ಪರಿಮಳಿಸುತಿರೆ ಶಯನ ಮೆತ್ತೆಯ ಮೇಲೆ ಕಣ್ಮುಚ್ಚಿರುವ

ಮಾವನಾ ಮಗಳೇ ಮಾಣಿಕದ ಚಿಲುಕವನು ತೆರೆಯೆ

ಸೋದರತ್ತೆಯೇ ಅವಳ ಎಬ್ಬಿಸಿರೆ

ನಿಮ್ಮ ಮಗಳೇನವಳು ಮೂಗಿಯೋ ಇಲ್ಲ ಕಿವಿಡಿಯೋ ಮುಂಜಾನೆ ನಿದ್ದೆಯೋ

ಗಾಢ ನಿದ್ರೆಯ ಮಾಡೆ ಮಂತ್ರವಶಳಾಗಿಹಳೋ

ಮಾಯಾವಿ ಮಾಧವನೆ ವೈಕುಂಠ ಎನುತೆನುತ

ನಾಮ ಹಲವನು ಹೇಳೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ   (ಮೋಹನ ರಾಗ – ಆದಿ ತಾಳ)

ಪರಿಶುದ್ಧವಾದ ಮಾಣಿಕ್ಯದ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ಅರಮನೆಯ ಸುತ್ತ ದೀಪಗಳು ಉರಿಯುತ್ತಿವೆ….  ಸುಗಂಧ ಧೂಪದ ಪರಿಮಳ ಹರಡಿದೆ.

ಅಲ್ಲಿರುವ ಹಾಸಿಗೆಯ ಮೇಲೆ ನಿದ್ರಿಸುತ್ತಿರುವ ಮಾವನ ಮಗಳೇ, ನಿನ್ನ ಮನೆಯ ಬಾಗಿಲುಗಳನ್ನು ತೆರೆದುಬಿಡು.

ಮಾಮಿಯೇ ! ನಿನ್ನ ಮಗಳ ಎಬ್ಬಿಸುವ ಮನಸ್ಸಿಲ್ಲವೇ…?

ನಿನ್ನ ಮಗಳು ಮಾತು ಬಾರದ ಮೂಗಿಯೇ? ಅಥವಾ ಮಾತು  ಕೇಳಸಿಕೊಳ್ಳಲಾಗದ ಕಿವುಡಿಯೇ?

ದೀರ್ಘ ನಿದ್ದೆ ಮಾಡುವವಳೇ ? ಅಥವಾ ನಿದ್ರೆಯ ಮಂತ್ರಕ್ಕೆ ಕಟ್ಟುಪಟ್ಟವಳೇ?

ಆ ಮಾಯ ಕೃಷ್ಣನನ್ನು, ಮಾದವನನ್ನು, ವೈಕುಂಟದಲ್ಲಿ ವಾಸಿಸುವ ವೆಂಕಟೇಶನನ್ನು ನಾವು ಹಾಡುತ್ತಿದ್ದೆವಲ್ಲಾ!

ಇದನ್ನು ಕೇಳಿಯಾದರೂ ನಿನ್ನ ಮಗಳು ಎಚ್ಚರಗೊಳ್ಳಬಾರದೇ?

ಎಂದು ಎಚ್ಚರಗೊಳ್ಳದೆ ನಿದ್ರೆ ಮಾಡುವ ಯಾದವ ಕುಲದ ಹೆಣ್ಣುಗಳನ್ನು ಎಬ್ಬಿಸಲು ಹಾಡುತ್ತಾಳೆ ಗೋದೈ ಆಂಡಾಳ್.

“ಗಾಢ ನಿದ್ರೆಯ ಮಾಡೆ ಮಂತ್ರವಶಳಾಗಿಹಳೋ….!”

ಕೃಷ್ಣನ ಮೇಲಿನ ಪ್ರೀತಿಯಿಂದ ಅವನ ನೆನಪಿನಲ್ಲಿ ಹಾಸಿಗೆಯ ಮೇಲೆ ನಿದ್ರಿಸಿಯೂ ನಿದ್ರಿಸದೆಯೂ ಇರುವ ಒಬ್ಬ ಯಾದವ ಹೆಣ್ಣನ್ನು ನೋಡಿ, ಅವನ ಗೆಳೆತಿಯರು, “ಹತ್ತಿಯ ಹಾಸಿಗೆಯ ಮೇಲೆ ಇನ್ನೂ ನಿದ್ರಿಸುತ್ತಿರುವ ಹೆಣ್ಣೇ…! ನೀ ಮಂತ್ರಕ್ಕೆ ವಶವಾಗಿ, ದೀರ್ಘ ಸಮಯ ನಿದ್ರಿಸುತ್ತಿದ್ದೀಯಾ? ಎಂದು ಬೆಳಗಿನ ಜಾವ ಅವಳನ್ನು ಎಚ್ಚರ ಮಾಡಲು ಪ್ರಯತ್ನಿಸುವಾಗ, “ಗಾಢ ನಿದ್ರೆಯ ಮಾಡೆ ಮಂತ್ರ ವಶವಾಗಿಹಳೋ….!” ಎಂದು ಕೇಳುತ್ತಾಳೆ ಗೋದೈ. ಅಂದರೆ ಮಂತ್ರದಿಂದ ಒಬ್ಬರನ್ನು ನಿದ್ರೆ ಮಾಡಿಸಬಹುದು ಎನ್ನುತ್ತಾಳೆ ಅವಳು. ನಿದ್ದೆ ಎಂಬುದು ನಮ್ಮೆಲ್ಲರಿಗೂ ಸಹಜವಾದದ್ದು. ಹಾಗಿರುವಾಗ ಮಂತ್ರದಿಂದ ಒಬ್ಬರನ್ನು ನಿದ್ರೆಮಾಡುವಂತೆ ಮಾಡುವುದೋ, ಅಥವಾ ಎಚ್ಚರಗೊಳಿಸುವುದೋ ಸಾಧ್ಯವೇನು..?

ರಾಮಾಯಣದಲ್ಲಿ ಒಂದು ದೃಶ್ಯವನ್ನು ಓದುವಾಗ, ಮಂತ್ರದಿಂದ ನಿದ್ರೆ ಮಾಡಿಸುವುದು ಸಾಧ್ಯವೆಂದೇ ತೋರುತ್ತದೆ.

ಅಶೋಕವನದಲ್ಲಿ ಸೀತೆ ಕುಳಿತಿದ್ದ ಮರದ ಸುತ್ತ ನಡೆಯುತ್ತಿರುವುದನ್ನೆಲ್ಲಾ, ಹನುಮಂತ ಮರದ ಮೇಲೆ ಅಡಗಿಕೊಂಡು ನೋಡುತ್ತಿರುತ್ತಾನೆ.

ಅರಮನೆಯಲ್ಲಿ ನಿದ್ರಿಸುತ್ತಿದ್ದ ರಾವಣ, ಮಧ್ಯರಾತ್ರಿ ಎಚ್ಚರಗೊಂಡು ಅಶೋಕವನಕ್ಕೆ ಬಂದು ಸೀತೆಯ ಬಳಿ ತನ್ನನ್ನು ಒಪ್ಪಿಕೊಳ್ಳುವಂತೆ ಅಂಗಲಾಚಿದ್ದು, ಸೀತೆ ರಾವಣನನ್ನು ನಿರಾಕರಿಸಿ ಬುದ್ಧಿ ಹೇಳಿದ್ದರಿಂದ ಅವಳನ್ನು ಗದರಿಸಿದ್ದು, ನಂತರ ಕಾವಲಿಗೆ ನಿಂತಿರುವ ರಕ್ಕಸಿಯರ ಬಳಿ ಸೀತೆಯನ್ನು ಶರಣಾಗುವಂತೆ ಆಜ್ಞೆ ನೀಡಿ ಹೋದದ್ದು, ರಾಕ್ಷಸಿಯರು ಸೀತೆಯನ್ನು ಬೆದರಿಸಿದ್ದು, ತ್ರಿಜಟೆಸೀತೆಯ ಬಳಿ ಮಾತನಾಡಿದ್ದು ಎಲ್ಲವೂ ಉಳಿದವರ ಗಮನವನ್ನು ಆಕರ್ಷಿಸದಂತೆ, ಅಂಜನಾ ಪುತ್ರ ಒಂದು ಮರದ ಕೊಂಬೆಯ ಮೇಲೆ ಕುಳಿತುಕೊಂಡು ಗಮನಿಸುತ್ತಿದ್ದನು.

ಸೀತಾಮತೆಯ ಬಳಿ ತನ್ನನ್ನು ಪರಿಚಯಿಸಿಕೊಳ್ಳಲು ತಕ್ಕ ಸಮಯ ಬಂದಾಗ, ಹನುಮಂತ ಒಂದು ಮಂತ್ರವನ್ನು ಉಚ್ಚರಿಸಿ, ಸೀತಾ ಮಾತೆಯ ಸುತ್ತ ಕಾವಲಿದ್ದ ರಕ್ಕಸಿಯರನ್ನೆಲ್ಲ ನಿದ್ರಿಸುವಂತೆ ಮಾಡುತ್ತಾನೆ.

‘ಒಬ್ಬರು ನಿದ್ರಿಸಿದರೆ ಮತ್ತೊಬ್ಬರು ಎಚ್ಚರವಿದ್ದು ಕಾವಲು ಕಾಯುವುದಲ್ಲವೇ ಈ ರಾಕ್ಷಸಿಯರ ರೂಡಿ. ಇಂದು ಮಾತ್ರ ಏನು ಒಂದೇ ಸಮಯದಲ್ಲಿ ಎಲ್ಲ ರಾಕ್ಷಸಿಯರು ನಿದ್ರೆಮಾಡುತ್ತಿದ್ದಾರೆ? ಎಂದು ಆಶ್ಚರ್ಯದಿಂದ ಸೀತಾ ಮಾತೆ ರಾಕ್ಷಸಿಯರನ್ನು ನೋಡುತ್ತಿರುವಾಗ, ಹನುಮಂತ ಸೀತಾಮಾತೆಯ ಮುಂದೆ ಜಿಗಿದು,

 “ತಾಯೇ ಲೋಕದ ಸಮಸ್ತ ಭಾಗಗಳಿಗೂ ಹೋಗಿ ತಮ್ಮನ್ನು ಹುಡುಕುವಂತೆ ರಾಮ ಮಹಾಪ್ರಭು ಕಳುಹಿಸಿದ ಅಸಂಖ್ಯಾತರಲ್ಲಿ ನಾನೂ ಒಬ್ಬ. ಪೂರ್ವ ಜನ್ಮದ ತಪಸ್ಸಿನ ಫಲವಾಗಿ ಈ ಸೇವಕ ತಮ್ಮ ಪಾದಕಮಲಗಳನ್ನು  ದರ್ಶನ ಮಾಡುವ ಭಾಗ್ಯವನ್ನು ಪಡೆದೆ” (ಕಂಬರಾಮಾಯಣ, ಸುಂದರಕಾಂಡ) – ಎಂದು ಪಾದಕ್ಕೆ ಎರಗಿದನು. ಹನುಮಂತನು ಹಾಗೆ ಹೇಳಿದ ಮೇಲೆಯೇ, ರಾಕ್ಷಸಿಯರು ತಾವಾಗಿ ನಿದ್ರಿಸಲಿಲ್ಲ, ಅವನ ಮಂತ್ರಕ್ಕೆ ವಶವಾಗಿ ಮೂರ್ಛೆಹೋಗಿದ್ದಾರೆ ಎಂದು ವಿವರಿಸುತ್ತಾನೆ.

ಹಾಗೆ ಮಂತ್ರದಿಂದ ಯಾರನ್ನು ಬೇಕಾದರೂ ನಿದ್ರೆಗೆ ಒಳಪಡಿಸಬಹುದು ಎಂದರೆ, ಮಂತ್ರದಿಂದ ಒಬ್ಬರನ್ನು ಎಚ್ಚರಗೊಳಿಸಲೂಬಹುದು ಅಲ್ಲವೇ? ಅದರಲ್ಲೂ ಸುಪ್ಪತ್ತಿಗೆಯಲ್ಲಿ, ಕೃಷ್ಣ ಎಂಬ ಮಂತ್ರಕ್ಕೆ ವಶವಾಗಿ ನಿದ್ರಿಸುತ್ತಿರುವ ಗೋಕುಲದ ಹೆಣ್ಣುಗಳನ್ನು ನಿದ್ರೆಯಿಂದ ಎಚ್ಚರಗೊಳಿಸುವುದು ಬಹಳ ಸುಲಭ, ಅಲ್ಲವೇ?

ದೇಶಾಂತರ ಹೊರಟ ಗಂಡನ ಕುದುರೆಯ ಗೊರಸಿನ ಶಬ್ಧ ಊರಿನ ಗಡಿಯಲ್ಲಿ ಕೇಳುವಾಗಲೇ ನಿದ್ದೆಯಿಂದ ಎಚ್ಚರಗೊಳ್ಳುತ್ತಾಳಂತೆ ಪ್ರೀತಿಯ ಮಡದಿ…. ಹಾಗೆಯೇ ನಿದ್ರಿಸುತ್ತಿರುವ ಯಾದವ ಕುಲದ ಸ್ತ್ರೀಯರು “ಮಾಮಯ, ಮಾಯವ, ವೈಕುಂಠ” ಎಂಬ ಶ್ರೀನಿವಾಸನ ಶ್ರೀನಾಮವೇ ಅವಳನ್ನು ನಿದ್ರೆಯಿಂದ ಎಚ್ಚರಗೊಳಿಸುವ ಮಂತ್ರವಂತೆ!

ಆ ಹೆಣ್ಣಿಗೆ ನಿದ್ರಿಸುವ ಮಂತ್ರವೂ, ಎಚ್ಚರಗೊಳ್ಳುವ ಮಂತ್ರವೂ ಕೃಷ್ಣ ನಾಮವಾಗಿಯೇ ಇರುವುದರಿಂದ ಅವಳಿಗೆ ನಿದ್ರೆಯೂ ಎಚ್ಚರವೂ ಭಿನ್ನವಾದ ಸ್ಥಿತಿಗಳಲ್ಲ. ಎರಡೂ ಒಂದೇ. ಎರಡರಲ್ಲೂ ಕೃಷ್ಣನೇ  ತುಂಬಿ ನಿಂತಿದ್ದಾನೆ ಎಂದೂ ಅರ್ಥ ಮಾಡಿಕೊಳ್ಳಬಹುದು!

ಹೌದು…. ಉಳಿದ ಎಲ್ಲರೂ, ತಮ್ಮನ್ನು ತೃಪ್ತಿಗೊಳಿಸಿಕೊಳ್ಳುವುದಕ್ಕಾಗಿ ದೇವರನ್ನು ಪೂಜಿಸಿದರೆ ಇವಳು ಮಾತ್ರ ಆ ದೇವರು ತೃಪ್ತಿಪಡಬೇಕೆಂದು ಕೃಷ್ಣನನ್ನು ಆರಾಧಿಸುತ್ತಾಳೆ.

ಇದೇ ಭಕ್ತಿಗೂ ಕರ್ಮಕ್ಕೂ ಇರುವ ಭಿನ್ನತೆ. ಕರ್ಮ ಎಂಬುದು ನಮ್ಮ ಭಾವನೆಗಳ ತೃಪ್ತಿಯ ಸ್ಥಿತಿ. ಆದರೆ ಭಕ್ತಿ ಎಂಬುದು ದೇವರನ್ನು ತೃಪ್ತಿಗೊಳಿಸುವುದು.

ಭಗವಂತನನ್ನು ತೃಪ್ತಿಗೊಳಿಸುವುದು ಹೇಗೆ ಎಂದರೆ, ನಾವು ಎಂದು ನಮ್ಮ ಸಂತೋಷಕ್ಕಲ್ಲದೆ ಉಳಿದವರ ಸಂತೋಷಕ್ಕೆ ಕಾರ್ಯಗಳನ್ನು ಮಾಡುತ್ತೇವೆಯೋ ಆಗೆಲ್ಲಾ ಭಗವಂತ ತೃಪ್ತಿ ಹೊಂದುತ್ತಾನಂತೆ.

ತನ್ನ ಅವಶ್ಯಕತೆಗಾಗಿ ಭಗವಂತನನ್ನು ಪೂಜಿಸುವ ವ್ಯಕ್ತಿಗೇ ಸಕಲ ಒಳಿತುಗಳನ್ನು ಮಾಡುವ ಪರಂದಾಮ, ಅವನನ್ನು ಹರ್ಷಗೊಳಿಸುವ ಮಟ್ಟಿಗೆ ಆರಾಧಿಸುವವನಿಗೆ ಏನೆಲ್ಲ ನೀಡಿ ದಯಪಾಲಿಸ ಬಲ್ಲ ಎಂದು ಆಲೋಚಿಸಿ ನೋಡಿ. ಹಾಗೆಯೇ ಭಗವಂತನನ್ನು ತೃಪ್ತಿಗೊಳಿಸುವ ಭಕ್ತನಿಗೆ ಏನಾಯಿತು ಎಂಬುದನ್ನು ಶ್ರವಣಕುಮಾರನ ಕಥೆ ನಮಗೆ ತಿಳಿಸುತ್ತದೆ.

ಒಮ್ಮೆ ಆಧಿಶೇಷನ ಮೇಲೆ ಶಯನಿಸುತ್ತಿದ್ದ ಪರಂದಾಮನಿಗೆ ಹಸಿವುಂಟಾಯಿತು. ಪಕ್ಕದಲ್ಲಿದ್ದ ಶ್ರೀಲಕ್ಷ್ಮಿಯ ಬಳಿ, ‘ಹಸಿವಾಗುತ್ತಿದೆ ದೇವಿ…’ ಎಂದು ಭಗವಂತ ಹೇಳುವುದನ್ನು ಕೇಳಿ ದೇವತೆಗಳಿಗೆಲ್ಲ ಆಶ್ಚರ್ಯ ಉಂಟಾಯಿತು.

ದೇವಲೋಕದಲ್ಲಿ ಹಸಿವು ಎಂಬ ಮಾತಿಗೆ ಅವಕಾಶವೇ ಇಲ್ಲ. ದೇಹವನ್ನೂ, ಭಾವನೆಗಳನ್ನೂ ಗೆದ್ದವರು ದೇವತೆಗಳು. ಆದರೂ ಭಗವಂತ ತನಗೆ ಹಸಿವಾಗುತ್ತಿದೆ ಎಂದು ಹೇಳುವುದನ್ನು ಕೇಳಿದ ದೇವತೆಗಳು, ಅವರ ಹಸಿವನ್ನು ಹಿಂಗಿಸಲು, ಹಾಲು, ಹಣ್ಣು, ನವಧಾನ್ಯಗಳು ಎಂದು ಸಕಲವನ್ನೂ ತೆಗೆದುಕೊಂಡು ಪರಂದಾಮನ ಬಳಿಗೆ  ಬರುತ್ತಾರೆ.

ಎಲ್ಲವನ್ನೂ ಸೇವಿಸಿದ ಭಗವಂತನಿಗೆ ಮತ್ತೆ ಮತ್ತೆ ಹಸಿವು ಹೆಚ್ಚಾಯಿತೆ ಹೊರತು ಕಡಿಮೆಯಾಗಲಿಲ್ಲ.

ಪರಂದಾಮ ಆಹಾರವನ್ನು ಬೇಡಿ ಬೇಡಿ ಉಣುತ್ತಲೇ ಇದ್ದನು. ಭಗವಂತನ ಘೋರ ಹಸಿವಿಗಾದ ಕಾರಣವನ್ನು ಹುಡುಕಿದ ಬ್ರಹ್ಮ, “ಭಗವಂತನೇ… ನಿನ್ನ ನಿಜವಾದ ಭಕ್ತನೊಬ್ಬ ಭೂಮಿಯಲ್ಲಿ ಹಸಿವಿನಿಂದ ಬಳಲುತ್ತಿದ್ದಾನೆ.. ಅವನ ಹೆಸರು ಶ್ರವಣಕುಮಾರ. ಅವನ ಹಸಿವೇ ನಿನ್ನನ್ನು ಹಿಂಸಿಸುತ್ತಿದೆ. ಅವನ ಹಸಿವು ಹಿಂಗಿದರೆ ನಿನ್ನ ಹಸಿವೂ ಶಮನವಾಗುತ್ತದೆ” ಎನ್ನುತ್ತಾರೆ.

ಭೂಲೋಕದಲ್ಲಿ, ಶ್ರವಣಕುಮಾರ ಎಂಬವಿಷ್ಣು ಭಕ್ತ, ಅನಾರೋಗ್ಯದಿಂದಿರುವ ತನ್ನ ವೃದ್ಧ ತಂದೆಗೂ, ಕಣ್ಣು ಕಾಣದ ತನ್ನ ತಾಯಿಗೂ ಸೇವೆ ಮಾಡುವುದರಲ್ಲಿ ಒಂದು ವಾರಕಾಲ ತನ್ನನ್ನೇ ಮರೆತಿರುತ್ತಾನೆ. ಹೆತ್ತವರಿಗಾಗಿ ದುಡಿಯುವುದರಲ್ಲಿ ತಾನು ಹಸಿವಿನಿಂದ ಇರುವುದು ಸಹ ಅವನ ನೆನಪಿನಿಂದ ಅಗಲಿರುತ್ತದೆ.

ನಿಜವಾಗಲೂ ತೀವ್ರವಾದ ವಿಷ್ಣು ಭಕ್ತನಾದ ಶ್ರವಣಕುಮಾರ  ತನ್ನ ತಂದೆ ತಾಯಿಗೆ ಅದೇ ಭಕ್ತಿಯಿಂದ ಸೇವೆ ಮಾಡುತ್ತಿದ್ದದರಿಂದ, ಭಗವಂತ ಅವನ ಹಸಿವನ್ನು ತಾನು ಸ್ವೀಕರಿಸಿದ್ದರಿಂದ, ಶ್ರವಣಕುಮಾರನಿಗೆ ಹಸಿವು ಎಂಬ ಭಾವನೆಯೇ ಇಲ್ಲದೆ ಹೋಯಿತು.

ಜೀವಗಳಲ್ಲಿ ಜ್ಞಾನೇಂದ್ರಿಯನಾಗಿ ಘನೀಕರಿಸಿರುವ ಪರಂದಾಮ ಅವನ ದೇಹಕ್ಕೆ ಸಂಬಂಧಿಸಿದ ಹಸಿವಿನ ಭಾವನೆಯನ್ನು ಅರಿತು, ಅದನ್ನು ತಾನು ಸ್ವೀಕರಿಸಿದುದಲ್ಲದೆ ಅವನ ಹಸಿವನ್ನು ಹಿಂಗಿಸಲು ಮುಂದಾದನು.

ತನ್ನ ದೇವಿಯೊಂದಿಗೆ ಭೂಲೋಕಕ್ಕೆ ಹೋಗಿ, ಶ್ರವಣಕುಮಾರನಿಗೆ ಇಷ್ಟವಾದ ಆಹಾರವನ್ನು ಮಾಡಿ, ಕಣ್ಣು ಕಾಣದ ತಾಯಿ, ವಯಸ್ಸಾದ ತಂದೆ ಮತ್ತು ಶ್ರವಣಕುಮಾರರಿಗೆ ಬಡಿಸಿ ಅವನ ಹಸಿವನ್ನು ಹಿಂಗಿಸಿ ಕೊಂಡನಂತೆ ನಮ್ಮ ಪರಂದಾಮ.

ಈ ಕಥೆಯಲ್ಲಿ, ಕಥೆಯನ್ನು ದಾಟಿಯೂ ಅಲ್ಲೊಂದು ವೈಜ್ಞಾನಿಕ ಸತ್ಯ ಇದೆ.

ಲೆಪ್ಟಿನ್, ಗ್ರೆಲಿನ್ (Leptin- ಮೇದಸ್ಸುಳ್ಳ, ಊತಕದಲ್ಲಿ ಶಕ್ತಿಯನ್ನು ನಿಯಂತ್ರಿಸುವ 167 ಅಮೈನೋ ಆಮ್ಲಗಳನ್ನೊಳಗೊಂಡ ಒಂದು ಸಾವಯವ-  Ghrelin- ಹಸಿವು ತಿಳಿಯಲು ಜಠರ ಉತ್ಪಾದಿಸುವ ಚೋದಕ ) ಮುಂತಾದ ಹಾರ್ಮೋನ್ಗಳ ಗ್ರಂಥಿಗಳು ಆಹಾರ ಸೇವನೆಯನ್ನು ಕಟ್ಟುಪಡಿಸುತ್ತದೆ ಎಂಬುದು ವೈಜ್ಞಾನಿಕವಾಗಿ ನಿರೂಪಣೆಯಾಗಿದೆ. ದೇಹದ ಹಸಿವನ್ನು ಹೆಚ್ಚಿಸುವ ಗ್ರೆಲಿನ್ ಆಹಾರ ಸಂಗ್ರಹಿಸುವ ಹೊಟ್ಟೆಯಲ್ಲಿ ಸ್ರವಿಸುತ್ತದೆ; ಆದರೆ ವಾಸನೆಗೆ ಸಂಬಂಧಿಸಿದ Satiety ಎಂಬ ತೃಪ್ತ ಭಾವನೆಯನ್ನು ನೀಡುವ ಲೆಪ್ಟಿನ್ ಸ್ರವಿಸುವುದೋ, ನಮ್ಮ ಭಾವನೆಗಳೆಲ್ಲವನ್ನೂ ಕಟ್ಟುಪಡಿಸುವ ಮೆದುಳಿನಿಂದ.

ಶ್ರವಣಕುಮಾರನಿಗೆ ಘಟಿಸಿದಂತೆ,  ಭಗವಂತನ ಧ್ಯಾನ, ಭಕ್ತಿ ಎಂದೆಲ್ಲಾ ನಮ್ಮಲ್ಲಿ ಹೆಚ್ಚಾಗುತ್ತದೋ, ಆಗೆಲ್ಲ ದೇಹಕ್ಕೆ ಸಂಬಂಧಿಸಿದ ಹಸಿವು, ದುಃಖ ಮುಂತಾದ ಭಾವನೆಗಳು, ಅವುಗಳಿಗಾದ ಗ್ರಂಥಿಗಳೂ ಕಟ್ಟುಪಟ್ಟು ಮನಸ್ಸಿಗೆ ಸಂಬಂಧಿಸಿದ ಲೆಪ್ಟಿನ್ ಮುಂತಾದ ಗ್ರಂಥಿಗಳ ಮೂಲಕ ತೃಪ್ತಿ ಎಂಬ ಯೋಗಸ್ಥಿತಿಯೂ ಉಂಟಾಗುತ್ತದೆ.

ಅಷ್ಟುಮಾತ್ರವಲ್ಲ, ತಮಿಳರ ಜೀವನದಲ್ಲಿ ಆಹಾರ ಬಡಿಸುವ ಕ್ರಮವೂ ಇಲ್ಲಿ ಸುಂದರವಾಗಿ ಹೇಳಲ್ಪಟ್ಟಿದೆ. ಒಂದು ಮನೆಯಲ್ಲಿ ಅಡುಗೆ ಮಾಡಿದಾಗ ಅದನ್ನು ಮೊದಲು ಮಕ್ಕಳಿಗೂ, ವಯಸ್ಸಾದವರಿಗೂ ನೀಡಿದ ನಂತರವೇ ನಾವು ಉಣಬೇಕು ಎಂಬುದೂ, ಅದೇ ರೀತಿ ಮನೆಯ ಮುಂದೆ ದಾರಿಹೋಕರು ಯಾರಾದರೂ ಆಹಾರಕ್ಕಾಗಿ ಕಾಯುತ್ತಿದ್ದರೆ, ಅವರಿಗೆ ಮೊದಲು ಅನ್ನ ನೀಡಬೇಕೆಂದೂ, ನಂತರವೇ ಮನೆಯಲ್ಲಿ ಇರುವವರಿಗೆ ಬಡಿಸಬೇಕೆಂದೂ, ಆ ದಾರಿಹೋಕರಲ್ಲಿ ಸನ್ಯಾಸಿ, ವಿಶೇಷ ಚೇತನರು ಇದ್ದರೆ ವಿಶೇಷ ಚೇತನರಿಗೆ ಮೊದಲೂ, ಸನ್ಯಾಸಿಗೆ ನಂತರವೂ ಆಹಾರವನ್ನು ನೀಡಬೇಕೆಂಬುದೂ ನಮ್ಮ ಆಹಾರ ನೀಡುವ ಕ್ರಮ ಎನ್ನುತ್ತದೆ  ಸಂಗಂ ಸಾಹಿತ್ಯ.

ಹಾಗೆ ಉಳಿದವರ ಹಸಿವನ್ನು ನೀಗಿಸಿದ ನಂತರ ತಿಂದರೆ ಮಾತ್ರವೇ ಭಗವಂತನಿಗೆ ಹಸಿವು ಹಿಂಗುತ್ತದೆ ಎಂಬುದನ್ನೂ ಶ್ರವಣಕುಮಾರ ಎಂಬ ಭಕ್ತನಿಗೆ ಆಹಾರ ನೀಡಿ, ತನ್ನ ಹಸಿವನ್ನು ಹಿಂಗಿಸಿಕೊಂಡನು ಪರಂದಾಮ ಎಂದೂ ಈ ಕಥೆ ನಮಗೆ ತಿಳಿಸಿ ಹೇಳುತ್ತದೆ.

ಅಂದರೆ, ನಮ್ಮ ಇಂದ್ರಿಯಗಳು ತೃಪ್ತಿ ಹೊಂದುವುದು ಕರ್ಮ ಸ್ಥಿತಿ. ನಮ್ಮ ಇಂದ್ರಿಯಗಳನ್ನೂ, ಇಂದ್ರಿಯಗಳ ಒಡೆಯನಾದ ಭಗವಂತನನ್ನೂ ಒಂದಾಗಿ ತೃಪ್ತಿಪಡಿಸುವುದು ಭಕ್ತಿ ಸ್ಥಿತಿ.

ಕರ್ಮವನ್ನು ಉಳಿದವರಿಗಾಗಿ ಮಾಡುವಾಗ, ಅಂದರೆ ಮತ್ತೊಬ್ಬರಿಗೆ ಸಹಾಯ ಮಾಡಿ, ಅವರು ತೃಪ್ತಿ ಹೊಂದಿ ನಾವು ತೃಪ್ತಿ ಹೊಂದುವಾಗ ಆ ದೇವರೂ ತೃಪ್ತಿ ಹೊಂದುತ್ತಾನೆ.

ಅದನ್ನೇ,

ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ

ಮತ್ತಃ ಸ್ಮೃತಿರ್ಜ್ಞಾನಮಪೋಹನಂಚ

(ಭಗವತ್ ಗೀತೆ 15:15)

ಎನ್ನುತ್ತದೆ ಗೀತೆ.

ಆದ್ದರಿಂದ ದುಃಖ, ಹಸಿವು ಮುಂತಾದುವುಗಳಿಗೆ ನಮ್ಮ ಮನಸ್ಸು ನರಳದೆ, ಮತ್ತೊಬ್ಬರಿಗೆ ಸಹಾಯ ಮಾಡುವುದರಿಂದ ದೇವರನ್ನು ಪ್ರೀತಿಗೊಳಿಸಿ, ಆಳವಾದ ಭಕ್ತಿಯಿಂದ ಮಹಾಮಾಯನಾದ ವೈಕುಂಠನನ್ನು ಆರಾಧಿಸಿ ಅವನ ಕೃಪೆಯನ್ನು ಪಡೆಯಲು ಗೆಳತಿಯರನ್ನು ಒಂಭತ್ತನೇಯ ದಿನಕ್ಕೆ ಕರೆಯುತ್ತಾಳೆ ಗೋದೈ ಆಂಡಾಳ್…!


ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply