ಧನುರ್ ಉತ್ಸವ ವಿಶೇಷ ಸರಣೀಯ ಏಳನೇ ಕಂತು ಇಲ್ಲಿದೆ…
ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ
ಧನುರ್ ಉತ್ಸವ ಹತ್ತನೆಯ ದಿನ
ಪ್ರತದಿ ಸ್ವರ್ಗವನು ಪ್ರವೇಶಿಸುತಿಹ ತಾಯೇ
ಮಾತಾಡಬಾರದೆ ಕದ ತೆರೆಯದೊಡಂ
ನರುಗಂಪ ತುಳಸಿಯ ಮುಡಿಯ ನಾರಾಯಣನು
ನಮ್ಮಿಂದ ಸ್ತುತಿಸೆ ಇಷ್ಟಾರ್ಥಗಳ ತರುವ ಪುಣ್ಯಾತ್ಮನಿಂ
ಹಿಂದೊಂದು ದಿನ ಯಮನ ಬಾಯಿಗೆ ಬಿದ್ದ ಕುಂಭಕರ್ಣನುಂ
ಸೋತು ನಿನಗೆ ಗಾಢ ನಿದ್ರೆಯ ಅವ ಕೊಟ್ಟನೋ
ಅತಿ ಆಲಸ್ಯ ಉಳ್ಳವಳೇ ಆಭರಣದಂತಿರುವವಳೇ
ಎಚ್ಚರಗೊಂಡು ಬಂದು ತೆರೆಯೆ ನಮ್ಮೀ ಪವಿತ್ರ ವ್ರತವು ಸಾರ್ಥಕವು
-ಬಿಂಡಿಗನವಿಲೆ ನಾರಾಯಣಸ್ವಾಮಿ (ಆಸಾವೇರಿ ರಾಗ – ಆದಿ ತಾಳ)
“ಸ್ತ್ರೀ ವ್ರತವಿದ್ದು, ಆ ಪುಣ್ಯದಿಂದ ಸ್ವರ್ಗಕ್ಕೆ ಹೋಗಲು ಬಯಸುವ ಹೆಣ್ಣೇ ..! ಆಮ್ಮನಾಗಿ…!
ಬಾಗಿಲು ತೆರೆಯದೆ ಹೋದರೂ ಮಾತನಾಡಕೂಡದೇ ಏನು…!
ಪರಿಮಳ ತುಂಬಿದ ತುಳಸಿಮಾಲೆಯ ಧರಿಸಿ ನಾರಾಯಣನನ್ನು ನಾವು ಹೊಗಳಿ ಹಾಡಿದರೆ ನಮಗೆ ಪುಣ್ಯ ನೀಡಲು ಸಿದ್ಧವಾಗಿದ್ದಾನೆ….!
ಧೀರ್ಘ ನಿದ್ರೆಯನು ವರವಾಗಿ ಪಡೆದು, ನಂತರ ರಾವಣನಿಗಾಗಿ ಯುದ್ಧ ಮಾಡಿ ಮಡಿದ ಕುಂಭಕರ್ಣ, ಅವನ ಧೀರ್ಘ ಶಯನವ ನಿನಗೆ ವರವಾಗಿ ಕೊಟ್ಟನೇನು?
ಗಾಢ ನಿದ್ದೆಯಲಿರುವವಳೇ ! ಸುಂದರ ಆಭರಣದಂತೆ ಇರುವವಳೇ…!
ನಿದ್ದೆಯಿಂದೆದ್ದು ಬಾಗಿಲು ತೆರೆಯುವಂತವಳಾಗು…!”
ತನ್ನ ಗೆಳತಿಯರನ್ನು, ಕನ್ಯೆ ಕರೆಯುತ್ತಾಳೆ….!
“ಹಿಂದೊಂದು ದಿನ ಯಮನ ಬಾಯಿಗೆ ಬಿದ್ದ ಕುಂಭಕರ್ಣನುಂ…”
“ರಾವಣನ ತಮ್ಮನಾದ ಕುಂಭಕರ್ಣ, ತನ್ನ ಸಹೋದರನಿಗಾಗಿ ರಾಮನ ಜತೆ ಯುದ್ಧಮಾಡಿ ಸ್ವರ್ಗ ಸೇರಿದವನು. ಅವನು ಮರಣಿಸುವಾಗ, ಅವನ ವರವಾದ ಧೀರ್ಘ ನಿದ್ರೆಯನ್ನು ನಿನಗೆ ಉಡುಗೊರೆಯಾಗಿ ಕೊಟ್ಟು ಬಿಟ್ಟನೋ..? ಎಂದು ನಿದ್ದೆಯಿಂದ ಎಚ್ಚರವಾಗದ ಗೆಳತಿಯ ಬಳಿ ಕೇಳುತ್ತಾಳೆ ಗೋದೈ ಆಂಡಾಳ್.
ರಾಮಯಣದಲ್ಲಿ ಕುಂಭಕರ್ಣ ಒಂದು ಅಪರೂಪದ ಪಾತ್ರ.
ಆರು ತಿಂಗಳು ನಿದ್ದೆ; ಆರು ತಿಂಗಳು ಎಚ್ಚರ ಎಂಬ ವರವನ್ನು ಪಡೆದುಕೊಂಡು ಬಂದ ಅಸುರ ಕುಂಭಕರ್ಣ. ಬುದ್ಧಿ ಚಾತುರ್ಯ ಉಳ್ಳವನು; ಗುಣವಂತ; ವಾತ್ಸಲ್ಯ ತುಂಬಿದವನು..!
ಸದಾ ನಿದ್ದೆ ಮಾಡುತ್ತಿರುವವನನ್ನು ಎಬ್ಬಿಸಿ, “ಯುದ್ಧಕ್ಕೆ ಹೊರಡು…” ಎಂದು ರಾವಣ ಹೇಳಿದಕೂಡಲೇ, ಏನನ್ನೂ ಕೇಳದೆ ರಾಮನಿಗೆ ವಿರುದ್ಧವಾಗಿ ರಣರಂಗದಲ್ಲಿ ನಿಂತವನು ಅವನ ತಮ್ಮನಾದ ಕುಂಭಕರ್ಣ.
ಕಾರಣ..? ಋಣಕ್ಕೆ ಒಳಗಾದವನು!
ರಾಮಯಣದಲ್ಲಿ ಋಣಕ್ಕೆ ಕಟ್ಟುಬದ್ದವನಾಗಿ ಎಂದು ಕುಂಭಕರ್ಣನನಿಗೆ ಹೇಳುವಾಗ, ಜತೆಯಲ್ಲೇ ಮಹಾಭಾರತದಲ್ಲಿ ಕರ್ಣನನ್ನು ನೆನಪು ಮಾಡಿಕೊಳ್ಳುವುದು ಯಾಕೆಂದು ತಿಳಿಯುವುದಿಲ್ಲ…! ಋಣ ಮಾತ್ರವಲ್ಲ; ಮಾಡಿದ ತ್ಯಾಗ ಮಾತ್ರವಲ್ಲ; ಅವರ ಹೆಸರಿನಲ್ಲಿರುವ ‘ಕರ್ಣ’ ಹೋಲಿಕೆ ಸಹ ಅದಕ್ಕೆ ಕಾರಣವಾಗಿರಬಹುದು!
ಕರ್ಣ…!
ಪ್ರೀತಿ, ಕರುಣೆ ಅಂತ್ಯವಿಲ್ಲದ ದಾನ ಗುಣ ಎಂಬ ಸರ್ವಸ್ವವೂ ಸಂಗಮಿಸಿರುವ ಮಾಹಾವೀರ.
ತನ್ನನ್ನು ‘ಸಾರಥಿಯ ಮಗ’ ಎಂದು ಕೃಪಾಚಾರ್ಯರು ರಾಜನ ಸಭೆಯಲ್ಲಿ ಅವಮಾನ ಮಾಡಿದಾಗ, ತನ್ನನ್ನು ಅಂಗ ದೇಶದ ರಾಜನಾಗಿ ಪಟ್ಟಾಭಿಷೇಕ ಮಾಡಿದ ದುರ್ಯೋಧನನನ್ನು ಗೆಳೆಯನಾಗಿ ಮಾತ್ರವಲ್ಲ, ತನ್ನ ದೇವರಾಗಿಯೂ ಒಪ್ಪಿಕೊಂಡವನು ಕರ್ಣ.
ತನ್ನ ಗೆಳೆಯನಿಗಾಗಿ, ತನ್ನ ಸಹೋದರರೆಲ್ಲರನ್ನೂ ಎದುರಿಸಿ ನಿಂತವನು. ಕುರುಕ್ಷೇತ್ರದಲ್ಲಿ ಪಾಂಡವರಿಗೆ ದೊಡ್ಡ ಸವಾಲಾಗಿ ನಿಂತವನು; ದುರ್ಯೋಧನನಿಗಾಗಿ ತನ್ನ ಪ್ರಾಣವನ್ನೂ ಸಹ ನೀಡಲು ಸಿದ್ಧವಾದವನು.
ಕುರುಕ್ಷೇತ್ರದಲ್ಲಿ ಬಾಣಗಳು ಚುಚ್ಚಿ ಕೆಳಗೆ ಬಿದ್ದಿರುವಾಗ ಬ್ರಾಹ್ಮಣ ರೂಪದಲ್ಲಿ ಯಾಚನೆ ಕೇಳಿಬಂದ ಕೃಷ್ಣನ ಬಳಿ, ಕರ್ಣ “ನನ್ನ ಪ್ರಾಣ ದುರ್ಯೋಧನನಿಗೆ ಸೇರಿದ್ದು..ಅದನ್ನು ಹೊರತು ನನ್ನ ಬಳಿ ಇನ್ನೇನನ್ನಾದರೂ ಕೇಳು” ಎಂದು ಮರಣಾವಸ್ಥೆಯಲ್ಲೂ ದುರ್ಯೋಧನನ ಭಕ್ತನಾಗಿ ಇದ್ದವನು.
ಅಷ್ಟೊಂದು ಪ್ರೀತಿ ದುರ್ಯೋಧನನ ಮೇಲೆ ಕರ್ಣನಿಗೆ…ಆದರೂ ದುರ್ಯೋಧನನಿಗೆ ಗೆಳೆಯನಾಗಿದ್ದ ಕರ್ಣ, ಒಳ್ಳೆಯ ಗೆಳೆಯನಾಗಿದ್ದನೇ ಎಂಬುದೇ ಪ್ರಶ್ನೆ..!?
ದುಷ್ಟತನವನು ಬಿಡಿಸಿ, ಸತ್ಪಥದಲಿ ನಡೆಸಿ, ಕಷ್ಟದಲಿ
ಜೊತೆಗೂಡಿ ದುಃಖಿಸುವವನೇ ಸಖನು (ತಿರುಕ್ಕುರಲ್- 787. ಕನ್ನಡ ಅನುವಾದ: ನ. ಮುನಿಸ್ವಾಮಿ)
ಎನ್ನುತ್ತದೆ ತಿರುಕ್ಕುರಲ್. ಅಂದರೆ ಗೆಳೆಯನನ್ನು ಕೆಟ್ಟ ದಾರಿಯಲ್ಲಿ ಹೋಗದೆ ತಡೆದು, ಅವನನ್ನು ಒಳ್ಳೆಯ ಹಾದಿಗೆ ಕರೆತರುವುದೇ ನಿಜವಾದ ಸ್ನೇಹವಾಗುತ್ತದೆ.
ಧರ್ಮ ಶಾಸ್ತ್ರಗಳನ್ನು ಕಲಿತವನು ಕರ್ಣ. ಆದರೂ, ತನ್ನ ಗೆಳೆಯನನ್ನು ಉತ್ತಮ ಮಾರ್ಗಕ್ಕೆ ಕರೆತರುವುದರಲಿ ತಪ್ಪಿದವನು; ಗೆಳೆಯ ಜೂಜಾಡಿದ್ದನ್ನು ತಡೆಯಲು ತಪ್ಪಿದವನು; ಸಭೆಯಲ್ಲಿ ದ್ರೌಪತಿಯನ್ನು ಅವಮಾನಗೊಳಿಸುವಾಗ ದುರ್ಯೋಧನನ ಹೀನ ಕಾರ್ಯಕ್ಕೆ ಜತೆ ನಿಂತವನು.
ಸಂಧಾನಕ್ಕೆ ಬಂದ ಕೃಷ್ಣನನ್ನು ದುರ್ಯೋಧನ ಅವಮಾನಗೊಳಿಸುವಾಗ ತಾನೂ ಸೇರಿಕೊಂಡು ಕೃಷ್ಣನನ್ನು ಅವಮಾನಗೊಳಿಸಿದವನು.
ದುರ್ಯೋಧನನ ಸಂತೋಷಕ್ಕಾಗಿ ಅವನ ಕಾರ್ಯದಲ್ಲಿ ಇರುವ ಒಳಿತು, ಕೆಡಕುಗಳನ್ನು ತೂಗಿನೋಡದೆ, ಗೆಳೆಯ ಧರ್ಮದ ಹಾದಿಯನ್ನು ತಪ್ಪಿದಾಗಲೂ ಅವನಿಗೆ ನೆರವು ನೀಡಿದವನು.
ಹಾಗಿರುವಾಗ ಹದಿನೇಳನೆಯ ದಿನದ ಯುದ್ಧದಲ್ಲಿ, ಅರ್ಜುನನ ಗಾಂಡೀವ ಕರ್ಣನನ್ನು ತಾಕಿದಾಗ ಅದರಿಂದ ಅವನ ಪ್ರಾಣವನ್ನು ತೆಗೆಯಲು ಸಾಧ್ಯವಾಗಲಿಲ್ಲ.
ಅರ್ಜುನನ ಗಾಂಡೀವವನ್ನೂ ಮೀರಿ, ಕರ್ಣನ ಪ್ರಾಣವನ್ನು ಕಾಪಾಡಿತು ಅವನು ಮಾಡಿದ ಧರ್ಮದ ಫಲಗಳು.
ತನ್ನ ಧರ್ಮದ ಗತಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲದ ಫಲಗಳೆಲ್ಲವೂ ಭಗವಂತ ಕೃಷ್ಣನಿಗೆ ಧಾನವಾಗಿ ನೀಡಿದ ಮೇಲೆಯೇ ಕರ್ಣನಿಗೆ ಮೋಕ್ಷ ಸಾಧ್ಯವಾಯಿತು. ಕರ್ಣನಿಗೆ ಮೋಕ್ಷ ನೀಡಿದ ಮೇಲೆ ಅರ್ಜುನನಿಗೆ ಕರ್ಣನನ್ನು ಗೆಳಲ್ಲೂ ಸಾಧ್ಯವಾಯಿತು.
ಕೃಷ್ಣನನ್ನೇ ತನ್ನ ಬಳಿ ಯಾಚಿಸಲು ಬರಮಾಡಿಕೊಳ್ಳುವಷ್ಟು ಪುಣ್ಯ ಮಾಡಿದವನಾಗಿ ಇದ್ದಾಗಲೂ, ತಾನು ಶರಣಾದ ವ್ಯಕ್ತಿ ದುರ್ಯೋಧನ ಎಂಬ ತಪ್ಪಾದ ವ್ಯಕ್ತಿಯಾದುದ್ದರಿಂದ ಅವನು ಮಾಡಿದ ಸಕಲ ಒಳಿತುಗಳೂ ವ್ಯರ್ಥವಾಯಿತು.
ಅಲ್ಲಿ ಕೃಷ್ಣಾವತಾರದಲ್ಲಿ ಕೃಷ್ಣ ಬೇಟಿಯಾದದ್ದು ಕರ್ಣನಾದರೆ, ಇಲ್ಲಿ ರಾಮಾವತಾರದಲ್ಲಿ ಎದುರು ನಿಂತವನು ಕುಂಭಕರ್ಣ!
ಹೆಸರಲ್ಲೂ, ತ್ಯಾಗದಲ್ಲೂ ಎಷ್ಟೇ ಹೋಲಿಕೆಗಳಿದ್ದರೂ ಗುಣದಲ್ಲಿ ತದ್ವಿರುದ್ಧವಾದವನು ಕುಂಭಕರ್ಣ. ರಾವಣನ ಬಳಿ ಅವನು ಸೀತೆಯ ಮೇಲಿಟ್ಟಿರುವುದು ಕೆಟ್ಟ ಕಾಮ ಎಂದೂ, ತನ್ನ ಸಹೋದರ ಪರರ ಮಡದಿಯನ್ನು ಅಪಹರಿಸಿ ಬಂದಿದ್ದು ದೊಡ್ಡ ಅಪರಾಧವೆಂದು ಧೂಷಿಸಿದ ನಂತರವೇ ಯುದ್ಧಕ್ಕೆ ಹೊರಡುತ್ತಾನೆ ತಮ್ಮ ಕುಂಭಕರ್ಣ.
ತಾನು ಎಚ್ಚರವಾಗಿದ್ದಾಗ ಇವೆಲ್ಲವೂ ನಡೆದಿದ್ದರೆ ಅವನ್ನೆಲ್ಲ ತಡೆಯಬಹುದಿತ್ತು ಎಂದು ಬಹಳ ಮನದಲ್ಲಿ ನೊಂದು ಕೊಳ್ಳುತ್ತಾನೆ. ರಾವಣನಿಗೆ, ಸೀತೆಯನ್ನು ಬಿಟ್ಟುಬಿಡುವಂತೆ ಒತ್ತಾಯಮಾಡುತ್ತಾನೆ ಕುಂಭಕರ್ಣ.
ರಾವಣ ಅವನ ಬುದ್ಧಿವಾದವನ್ನು ಒಪ್ಪಿಕೊಳ್ಳದಾಗ “ಗೆದ್ದು ನಾನು ಬರುತ್ತೇನೆ ಎಂದು ಹೇಳಳಾರೆ… ವಿಧಿ ದೊಡ್ಡದು” ಎಂದು ಹೇಳಿ ಸಾಯುತ್ತೇನೆ ಎಂದು ತಿಳಿದೂ ಸಹ ರಾಮನ ವಿರುದ್ಧ ಯುದ್ಧ ಮಾಡಲು ಮುಂದೆ ನಿಂತವನು.
ಕರ್ಣನಿಗಿಂತ ಕುಂಭಕರ್ಣ ಉನ್ನತ ಸ್ಥಾನದಲ್ಲಿ ನಿಲ್ಲುವುದು ಇಲ್ಲೇ.
ಯುದ್ಧಕಾಂಡದಲ್ಲಿ ರಾಮನಿಗೆ ಎದುರಾಗಿ ಯುದ್ಧಕ್ಕೆ ನಿಲ್ಲುವಾಗ, ಅವನು ಮೊಟ್ಟಮೊದಲು ಕಂಡದ್ದು ತನ್ನ ತಮ್ಮ ವಿಭೀಷಣನನ್ನು.
ಕುಂಭಕರ್ಣ ನಿದ್ರೆ ಮಾಡಲು ಹೋಗುವಾಗ ತಮ್ಮ ವಿಭೀಷಣ ತನ್ನೊಂದಿಗೆ ಇದ್ದನು. ನಿದ್ದೆಯಿಂದ ಎದ್ದು ನೋಡಿದಾಗ ಎದುರು ಗುಂಪಿನಲ್ಲಿ ರಾಮ, ಲಕ್ಷ್ಮಣ, ಸುಗ್ರೀವರ ಜತೆ ನಿಂತಿದ್ದಾನೆ.
ರಣರಂಗದಲ್ಲಿ ವಿಭೀಷಣ ತನ್ನ ಕಡೆಗೆ ಬರುವುದನ್ನು ನೋಡಿ ಕುಂಭಕರ್ಣ, ಎಲ್ಲಿ ತನ್ನ ನೋಡಿದ ತಕ್ಷಣ ತನ್ನ ತಮ್ಮ, ವಾತ್ಸಲ್ಯದಿಂದ ತನ್ನೊಂದಿಗೆ ಜತೆಗೂಡಿ, ರಾವಣನಿಗಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಎಂದು ಕಳವಳಗೊಳ್ಳುತ್ತಾನೆ.
ಆದರೆ, ತನ್ನನ್ನೂ ರಾಮನ ಬಳಿಗೆ ಕರೆದುಕೊಂಡು ಹೋಗುವುದಕ್ಕಾಗಿಯೇ ವಿಭೀಷಣ ಬಂದಿದ್ದಾನೆ ಎಂಬುದನ್ನು ಅರಿತಕೂಡಲೇ,
“ಇದು ನ್ಯಾಯವಲ್ಲ ಎಂದು ಅರಿತಿದ್ದರೂ, ತಂದೆ, ತಾಯಿ ಯಾರೆಂದು ಅರಿಯದ ನನ್ನನ್ನು ಸಾಕಿ, ಬೆಳೆಸಿ ವೀರನಾಗಿಸಿ ‘ಯುದ್ದಕ್ಕೆ ಹೊರಡು…’ ಎಂದು ಆಜ್ಞೆ ನೀಡಿದ ರಾವಣನ ಋಣ ತೀರಿಸಲೇ ನಾನು ಇಲ್ಲಿದ್ದೇನೆ. ಎದುರಲ್ಲಿ ರಾಮ ಲಕ್ಷ್ಮಣರ ಜತೆ ನನ್ನ ವಿಧಿಯೂ ಜತೆಯಾಗಿಯೇ ನಿಂತಿದೆ. ನಾನು ಸಾಯುತ್ತೇನೆ ಎಂದು ತಿಳಿದೇ ರಾವಣನಿಗೆ ಸಹಕಾರವಾಗಿ ಇಲ್ಲಿ ನಿಂತಿದ್ದೇನೆ “ಎನ್ನುತ್ತಾನೆ ಕುಂಭಕರ್ಣ. (ಕಂಬರಾಮಾಯಣ)
ಮತ್ತೆ, ಅಂತಹ ಪರಿಸ್ಥಿತಿಯಲ್ಲೂ ಎಲ್ಲಿ ತನ್ನ ಮಾತು ತನ್ನ ತಮ್ಮನನ್ನು ದ್ರೋಹಿ ಎಂದು ಹೇಳುವಂತೆ ಇರಬಾರದೆಂದು, “ಧರ್ಮದ ಹಾದಿಯಲ್ಲಿ ನಡೆಯುವವನು ನೀನು! ನೀನು ರಾಮನ ಜತೆಯಲ್ಲಿರುವುದೇ ನಿನಗೆ ಧರ್ಮ. ತಾಯಿ ತಂದೆ ಇಲ್ಲದ ನಮ್ಮನ್ನು ಸಾಕಿ ಸಲಹಿದ ಹಿರಿಯ ಅಣ್ಣನಿಗಾಗಿ ನಾನು ಯುದ್ಧ ಮಾಡಿ ಸಾಯುವುದೇ ನನಗೆ ಧರ್ಮ. ನನ್ನ ಬಗ್ಗೆ ಚಿಂತೆ ಮಾಡದೆ ಹೋಗು. ಅಣ್ಣ ಧರ್ಮ ತಪ್ಪಿ ನಡೆದುದ್ದರಿಂದ ಅವನ ಜತೆಯಲ್ಲಿ ನಾವೆಲ್ಲರೂ ಮರಣಿಸುತ್ತೇವೆ ಎಂಬುದು ನನಗೆ ಗೊತ್ತು. ಆದರೆ, ಎಲ್ಲ ಮುಗಿದ ನಂತರ ನಮ್ಮ ಪ್ರಜೆಗಳನ್ನು ರಕ್ಷಿಸಲು ನೀನಿರುವೆ ಎಂಬ ನೆಮ್ಮದಿಯಲ್ಲಿ ನಾನು ಸಾಯುತ್ತೇನೆ ಎಂದು ತಮ್ಮ ವಿಭೀಷಣನಿಗೆ ಸಮಾಧಾನ ಮಾಡುತ್ತಾನೆ ಕುಂಭಕರ್ಣ.
ಮತ್ತೆ, ಯುದ್ಧದಲ್ಲಿ ಪೂರ್ಣ ಮಗ್ನನಾಗಿ ಧೀರನಾಗಿ ಹೋರಾಡಿ ರಾಮನ ಬಾಣಕ್ಕೆ ತುತ್ತಾದಾಗ, ರಾಮನ ಬಳಿ ಕೊನೆಯದಾಗಿ ವರ ಒಂದನ್ನು ಕೇಳುತ್ತಾನೆ ಕುಂಭಕರ್ಣ.
“ನ್ಯಾಯ ನೀತಿ ತಪ್ಪದ ನನ್ನ ತಮ್ಮ ವಿಭೀಷಣನಿಗೆ ಆಶ್ರಯ ನೀಡಬೇಕೆಂದೂ, ನಿನ್ನನ್ನೂ, ನಿನ್ನ ತಮ್ಮ ಲಕ್ಷ್ಮಣನನ್ನೂ, ಹನುಮಂತನನ್ನೂ ವಿಭೀಷಣ ಎಂದಿಗೂ ಅಗಲಕೂಡದೆಂದು ನನಗೆ ವರ ನೀಡುವಂತಾವನಾಗು ಎನ್ನುತ್ತಾ ರಾವಣನಿಗೆ ತಮ್ಮನಾಗಿಯೂ, ವಿಭೀಷಣನಿಗೆ ಅಣ್ಣನಾಗಿಯೂ ತನ್ನ ಜವಾಬ್ಧಾರಿಯನ್ನು ಒಳ್ಳೆಯ ರೀತಿಯಲ್ಲಿ ಮಾಡಿ ಮುಗಿಸಿ ಪ್ರಾಣ ನೀಗುತ್ತಾನೆ.
ಎರಡು ಅವತಾರಗಳು…
ಎರಡು ಋಣಾತ್ಮಕ ಕರ್ತವ್ಯಗಳು
ಇಬ್ಬರು ಕರ್ಣರು…
ಕುಂಭಕರ್ಣನೋ ಒಳಿತು ಕೆಡುಕುಗಳನ್ನು ಪರೀಕ್ಷಿಸಿ ರಾಮನಿಗೆ ಎದುರಾಗಿ ಯುದ್ಧವನ್ನು ನಿಲ್ಲಿಸಬೇಕೆಂದು ರಾವಣನಿಗೆ ಸಲಹೆ ನೀಡುವ ಉತ್ತಮನು. ರಾವಣ ತನ್ನ ಸಲಹೆಯನ್ನು ಸ್ವೀಕರಿಸದಿದ್ದಾಗ ಸಹೋದರನಿಗಾಗಿ ರಾಮನ ಎದುರು ಯುದ್ದಕ್ಕೆ ಇಳಿಯುವ ಉತ್ತಮನು.
ಕರ್ಣನೋ, ಗೆಳೆಯನ ಸಂತೋಷಕ್ಕಾಗಿ ಗೆಳೆಯನ ಕಾರ್ಯದಲ್ಲಿರುವ ಒಳಿತು ಕೆಡುಕುಗಳನ್ನು ಪರೀಕ್ಷಿಸದೆ, ಗೆಳೆತನಕ್ಕಾಗಿ ಕೊನೆಯವರೆಗೂ ನೆರವು ನೀಡಿದವನು.
ಇಬ್ಬರು ಮತ್ತೊಬ್ಬರಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರು. ಆದರೂ ಕರ್ಣನಿಗೆ ಮೋಕ್ಷವನ್ನು ಮಾತ್ರವೇ ನೀಡಿದ ಭಗವಂತ ಕುಂಭಕರ್ಣನಿಗೆ ಮೋಕ್ಷದ ಜತೆಗೆ, ಅವನ ವಂಶವನ್ನು ಕಾಯುವ ವರವನ್ನೂ ಸೇರಿಸಿಯೇ ದಯಪಾಲಿಸುತ್ತಾನೆ.
‘ವಿರೋಧಿಗೂ ವರವನ್ನು ದಯಪಾಲಿಸುವ ಒಳ್ಳೆಯ ಹೃದಯವೇ’ ಎಂಬ ಮಾತಿನಂತೆ ಕುಂಭಕರ್ಣನ ತಮ್ಮನನ್ನು ತನ್ನ ತಮ್ಮನಾಗಿ ಒಪ್ಪಿಕೊಳ್ಳುತ್ತಾನೆ, ಆ ಭಗವಂತ.
“ನಿನ್ನೊಂದಿಗೆ ಏಳಾದೆವು”* (ಕಂಬರಾಮಾಯಣ) (ರಾಮ, ಲಕ್ಷ್ಮಣ, ಭಾರತ , ಶತ್ರುಘ್ನ, ಗುಹ, ಸುಗ್ರೀವ, ವಿಭೀಷಣ) ಎಂದು ಗೆಳೆಯ ವಿಭೀಷಣನನ್ನು ಸಹೋದರನಾಗಿ ಸ್ವೀಕರಿಸಿ, ಲಂಕೆಗೆ ರಾಜನಾಗಿಸುತ್ತಾನೆ.
“ಹೀಗೆ ವೈರಿಗೂ ಕೃಪೆ ತೋರುವ ಉತ್ತಮನಾದ ನಮ್ಮ ಪರಂದಾಮನನ್ನು, ಪರಿಮಳ ಭರಿತ ತುಳಸಿಮಾಲೆಯನ್ನು ಧರಿಸಿದ ನಾರಾಯಣನನ್ನು ವಂಧಿಸಿ ಅವನ ಹಿರಿಮೆಯ ಹಾಡಿ ನಿದ್ದೆಯಿಂದ ಎದ್ದು ಬರುವೆಯಂತೆ …” ಎಂದು ಹತ್ತನೇಯ ದಿನ ಕರೆಯುತ್ತಾಳೆ ಗೋದೈ ಆಂಡಾಳ್.
ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.