ಏನದು, ಶುಕ್ರನೆದ್ದು ಗುರು ನಿದ್ರಿಸುವುದು!? : ಧನುರ್ ಉತ್ಸವ ~ 13

ಧನುರ್ ಉತ್ಸವ ವಿಶೇಷ ಸರಣಿಯ ಹದಿಮೂರನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಹದಿಮೂರನೇಯ ದಿನ

ಹಕ್ಕಿ ಬಾಯಿ ಸೀಳ್ದವನ ದುಷ್ಟ ರಕ್ಕಸನ

ಕತ್ತರಿಸಿ ತೊಡೆದವನ ಕೀರ್ತಿಯನು ಹಾಡುತ್ತೆ

ಹುಡುಗಿಯರೆಲ್ಲ ವ್ರತ ಸ್ಥಳವ ಹೊಕ್ಕಿಹರು

ಶುಕ್ರನುದಯಿಸಿ  ಗುರುವು ಮುಳುಗಿಹನು

ಹಕ್ಕಿಗಳು ಧ್ವನಿಗೈಯುತಿವೆ ನೋಡು ಹೂದುಂಬಿ ಕಣ್ಣವಳೇ

ಕೊರೆವ ತಣ್ಣೀರಿನೊಳು ಮುಳುಗಿ ಮೀಯದೆಯೆ

ಮಲಗಿ ನಿದ್ರಿಸುಹೆಯಾ ಚೆಲುವೆಯೇ ನೀನೀ ಶುಭದಿನದಿ

ವಂಚನೆಯ ತೊರೆದು ಸೇರಿದೊಡೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಅಠಾ ರಾಗ – ರೂಪ ತಾಳ)

“ಹಕ್ಕಿಯ ರೂಪಾತಾಳಿ ಬಂದ ಬಕಾಸುರನ ಬಾಯನ್ನು ಸೀಳಿ ಕೊಂದ ಕೃಷ್ಣ, ರಾವಣನ ಹತ್ತು ತಲೆಗಳನ್ನೂ ಕಡಿದು ಅವನನ್ನು ಸಂಹರಿಸಿದ ರಾಮನನ್ನು ಸ್ತುತಿಸಿ ಹಾಡಿ, ವ್ರತವಿರಲು ಎಲ್ಲ ಹೆಣ್ಣುಗಳು ಬಂದು ಸೇರಿದ್ದಾರೆ!

 ಶುಕ್ರ ಎದ್ದು ಗುರುವೂ ಮರೆಯಾದನು!

ಬೆಳಗಿನ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿವೆ!

ತಾವರೆ ಪುಷ್ಪಗಳಂತಹ ಕಣ್ಣುಗಳನ್ನುಳ್ಳ ಸುಂದರವಾದ ಹೆಣ್ಣೇ, ದೇಹವೂ ಮನಸ್ಸೂ ತಂಪಾಗುವಂತೆ, ತಣ್ಣನೆಯ ನೀರಿನಲ್ಲಿ ಮೀಯುತ್ತಿದ್ದೇವಲ್ಲಾ, ನಮ್ಮೊಂದಿಗೆ ಸೇರಿ ಮೀಯದೆ, ಸುಪ್ಪತ್ತಿಗೆಯಲ್ಲಿ ನೀನು ಮಲಗಿ ನಿದ್ರಿಸಬಹುದೇ?”

ಎಂದು ಗೆಳತಿಯನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ ಗೋದೈ!

 “ಹಕ್ಕಿ ಬಾಯಿ ಸೀಳ್ದವನ ದುಷ್ಟ ರಕ್ಕಸನ ಕತ್ತರಿಸಿ ತೊಡೆದವನ…” ಎಂದು ತೊಡಗುತ್ತದೆ ಹದಿಮೂರನೇಯ ಪಾಶುರ.

ಕೃಷ್ಣನನ್ನು ಕೊಲ್ಲಲು ಕಂಸನಿಂದ ಕಳುಹಿಸಲ್ಪಟ್ಟ ಪೂತನಿ, ಶಕಟಾಸುರ ಮತ್ತು ತೃಣಾವರ್ತ ಮುಂತಾದವರ ನಂತರ ಬಂದ ಅಸುರ ಬಕಾಸುರ. ಬಕ ಎಂದರೆ ಕೊಕ್ಕರೆ ಎಂದು ಅರ್ಥ.

“ಕೃಷ್ಣನನ್ನು ನಾನು ಆಹಾರವಾಗಿ ಉಣ್ಣುತ್ತೇನೆ” ಎಂದು ಕಂಸನ ಬಳಿ ವಚನ ನೀಡಿ, ಗೋಕುಲಕ್ಕೆ ಬಂದ ಬಕಾಸುರ, ಯಮುನಾ ನದಿಯ ತೀರದಲ್ಲಿ ಆಟವಾಡುತ್ತಿದ್ದ ಬಾಲಕ ಕೃಷ್ಣನನ್ನು ಕೊಕ್ಕರೆಯ ರೂಪತಾಳಿ ನುಂಗಲು ಯತ್ನಿಸಿದಾಗ, ಕೊಕ್ಕರೆಯ ದೇಹದೊಳಗೆ ಹೋಗದೆ, ಅದರ ಚಂಚುವನ್ನು ಎರಡಾಗಿ ಸೀಳಿ ಬಕಾಸುರನನ್ನು ಕೊಂದನಂತೆ ಪರಂದಾಮ. “ಹಕ್ಕಿ ಬಾಯ ಸೀಳ್ದವನ…”  ಎನ್ನುತ್ತಾಳೆ ಗೋದೈ.

“ದುಷ್ಟ ರಕ್ಕಸನ ಕತ್ತರಿಸಿ ತೊಡೆದವನ…” ಎಂಬುದು ಅಸುರನಾದ ರಾವಣನ ತಲೆಗಳನ್ನು ಬ್ರಹ್ಮಾಸ್ತ್ರದಿಂದ ಕತ್ತರಿಸಿ ಕೊಂದ ರಾಮನ ಬಗ್ಗೆ ಹೇಳುತ್ತದೆ. ಕಳೆದ ಎರಡು ಹಾಡುಗಳಲ್ಲಿ ರಾಮನನ್ನೂ ಕೃಷ್ಣನನ್ನೂ  ಹೊಗಳಿ ಹಾಡಿದ ಗೋದೈ ಈ ಹಾಡಿನಲ್ಲಿ ರಾಮ – ಕೃಷ್ಣರರನ್ನು ಒಟ್ಟಾಗಿ ಸೇರಿಸಿ  ಹಾಡುತ್ತಾಳೆ. ಹೀಗೆ, ತನ್ನ ಅವತಾರಗಳಲ್ಲೆಲ್ಲಾ ಗರ್ವದಿಂದ  ತುಂಬಿದ ಅನೇಕ ರಕ್ಕಸರನ್ನು ಬಹಳ ಸುಲಭವಾಗಿ ಸಂಹಾರ ಮಾಡಿದ ಭಗವಂತನನ್ನು ಪೂಜಿಸಲು, ಶುಕ್ರ ಎದ್ದು ಗುರು ನಿದ್ರಿಸುವ ಮುಂಜಾವಿನಲ್ಲಿ ಗೆಳೆತಿಯರನ್ನು ಕರೆಯುತ್ತಾಳೆ ಗೋದೈ.

ಏನದು, ಶುಕ್ರನೆದ್ದು ಗುರು ನಿದ್ರಿಸುವುದು ಎನ್ನುತ್ತಾಳೆ ಗೋದೈ ಹೊಸದಾಗಿ? ಗುರು ನಿದ್ರಿಸಿದ ಮಾರನೇಯ ದಿನವಲ್ಲವೇ ಶುಕ್ರ ಬರುತ್ತಾನೆ ಎಂಬುದು ಎಲ್ಲರಿಗೂ ತಿಳಿದದ್ದೇ ಆಗಿದ್ದರೂ, ಅದು ಪಂಚಾಂಗದಲ್ಲಿ ಮಾತ್ರವಂತೆ; ಖಗೋಳ ಶಾಸ್ತ್ರದಲ್ಲಿ ಅದು ಬೇರೆಯೇ ಆಗಿದೆ!

ಗುರು ನಿದ್ರಿಸಿದ ಮೇಲೆ ಶುಕ್ರ ಬರುವುದಾಗಿ ಹೇಳದೇ, ಶುಕ್ರ ಎದ್ದ ಮೇಲೆ, ಗುರು ನಿದ್ರೆಗೆ ಹೋಗುವುದಾಗಿ ಸ್ವಲ್ಪ ಬದಲಾಯಿಸಿ ಹೇಳುವುದರಲ್ಲಿ ಒಂದು ವೈಜ್ಞಾನಿಕ ಅರ್ಥವಿದೆ.

ಮೊದಲು, “ಬಿರುಮಳೆಗೆ ಒಡೆಯ” ಎಂದು ಕರೆದು, ಮಳೆಯ ವೈಜ್ಞಾನಿಕ ಹಿನ್ನೆಲೆಯನ್ನು ನಮಗೆ ತಿಳಿಸಿ ಹೇಳಿದ ಗೋದೈ, ಈ ನಿದ್ರೆಯಿಂದೆಚ್ಚರಿಸುವ ಹಾಡಿನಲ್ಲಿ ನಕ್ಷತ್ರ ಸಂಚಾರದ ವೈಜ್ಞಾನಿಕ ಸತ್ಯವನ್ನು ಹೇಳುತ್ತಾಳೆ. ಈ ವೈಜ್ಞಾನಿಕ ಶಾಸ್ತ್ರದೊಂದಿಗೆ ನಮ್ಮ ಪುರಾಣ ಕಥೆಗಳು ಹೋಲಿಕೆಯಾಗುವುದು ಮತ್ತೊಂದು ವಿಸ್ಮಯ.

ಸಾಮಾನ್ಯವಾಗಿ ರಾತ್ರಿ ಪೂರ್ತಿ ‘ಬ್ರಹಸ್ಪತಿ’ ಎಂಬ Jupiter ಬಾನಲ್ಲಿ ದಿನನಿತ್ಯ ಪ್ರಕಾಶಮಾನವಾಗಿರುತ್ತದೆ. ಆದರೆ ಬೆಳಗಾಗುವುದಕ್ಕೆ ಎರಡೂವರೆ ಗಂಟೆಗೆ ಮೊದಲು Venus ಎಂಬ ಶುಕ್ರ ಹುಟ್ಟುತ್ತಾನೆ. ‘ಶುಭ ಶುಕ್ರ’ ಎಂದು ಹೇಳುವುದರ ಅರ್ಥವೇ ಅದು ಮುಂಜಾವಿನಲ್ಲಿ ಮಾತ್ರವೇ ಬರುತ್ತದೆ ಎಂಬುದರಿಂದ. ಬಹಳ ಪ್ರಕಾಶಮಾನವಾಗಿ ಕಾಣುವ Venus, ಸೂರ್ಯನಿಗೆ ಮೊದಲು ಬಂದು, “ಸೂರ್ಯ ಬರುತ್ತಿದ್ದಾನೆ!” ಎಂದು ಮುನ್ಸೂಚನೆ ನೀಡುವಂತೆ ಮಿನುಗುತ್ತಿರುತ್ತದೆ. ಅದೇ ಸಮಯ ಸೂರ್ಯ ಇರುವ ದಿಕ್ಕಿಗೆ ಸರಿ ಎದುರು, ಗುರು ಎಂಬ Jupiter ಮಂಕಾಗಲು ತೊಡಗಿರುತ್ತದೆ. ಇದನ್ನೇ “ಶುಕ್ರನುದಯಿಸಿ  ಗುರುವು ಮುಳುಗಿಹನು” ಎನ್ನುತ್ತಾಳೆ ಗೋದೈ.

ಬೆಳಗಿನ ಜಾವ ನಾಲ್ಕಕ್ಕೆಲ್ಲಾ ಶುಕ್ರ ಮಿನುಗುವಾಗ ಪಶ್ಚಿಮಕ್ಕೆ ಗುರು ಮರೆಯಾಗುವ ಈ ಘಟನೆಗಳು, ಎಲ್ಲ ತಿಂಗಳುಗಳಲ್ಲಿ ನಡೆದರೂ, ಉಳಿದ ತಿಂಗಳುಗಳಿಗಿಂತ ಧನುರ್ ಮಾಸದಲ್ಲಿ ಬಹಳ ಸ್ಪಷ್ಟವಾಗಿ ಕಾಣಲು ದೊರಕುತ್ತದೆ ಎಂಬುದು ಇದರ ಮತ್ತೊಂದು ವಿಸ್ಮಯವಾದ ವೈಜ್ಞಾನಿಕ ಸತ್ಯ.

ವೈಜ್ಞಾನಿಕ ರೀತಿಯಾಗಿ ಗುರುವೂ, ಶುಕ್ರನೂ ಎದುರು ಬರುವುದರಲ್ಲಿರುವ ಬಗ್ಗೆಯೂ  ಸಂಚರಿಸುವುದರ ಬಗ್ಗೆಯೂ  ಖಗೋಳ ಶಾಸ್ತ್ರ ಮಾತ್ರವಲ್ಲ, ಅದರ ಬಗ್ಗೆ ದೇವ, ಅಸುರ ಪುರಾಣ ಕಥೆಗಳೂ ಹೇರಳವಾಗಿವೆ.

ದೇವ ದೇವತೆಗಳ ಗುರುನಾಥನೇ ಬ್ರಹಸ್ಪತಿ ಎಂಬ ಗುರು.

ಆದರೆ ಶುಕ್ರಾಚಾರ್ಯ ಎಂಬ ಶುಕ್ರನೋ, ದೇವತೆಗಳ ವೈರಿಯಾದ ಅಸುರರ ಗುರು. ಇವರಿಬ್ಬರೂ ತಮ್ಮ ತಮ್ಮ ಕುಲಗಳನ್ನು ಕಾಪಾಡುವ ಕರ್ತವ್ಯದ ಕಾರಣದಿಂದ ಸದಾ ಎದುರುಬದುರು ನಿಂತಿರುತ್ತಾರೆ. ಆದರೆ ಅವರ ಕರ್ತವ್ಯದಲ್ಲಿ ಮಾತ್ರವೇ ಅವರು ಎದುರು ನಿಂತರೆ ಹೊರತು, ತಾವು ಗುರುಗಳಾಗಿ  ತಮಗೆ ಇರಬೇಕಾದ ಸದ್ಗುಣಗಳಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಕಡಿಮೆಯೇನು ಅಲ್ಲ ಎನ್ನುತ್ತದೆ ನಮ್ಮ ಪುರಾಣಗಳು.

ನವಗ್ರಹಗಳಲ್ಲಿ ಒಬ್ಬರಾದ ಬ್ರಹಸ್ಪತಿ ಎಂಬ ದೇವಗುರು ಸಪ್ತ ಋಷಿಗಳಲ್ಲಿ ಒಬ್ಬರು; ಆಂಗೀರಸ ಮುನಿಯ ಮಗನಾದ ಇವರು ನಾಲ್ಕು ವೇದಗಳನ್ನೂ, ಅರವತ್ನಾಲ್ಕು ವಿದ್ಯೆಗಳನ್ನೂ ಕಲಿತಿರುವವರು; ವಿದ್ಯಾರ್ಜನೆ  ಜೊತೆಯಲ್ಲೇ ಮಾಡಿದ ಅಸಂಖ್ಯಾತ ಯಾಗಗಳ ಫಲದಿಂದ ದೇವತೆಗಳಿಗೆಲ್ಲಾ ದೇವ ಗುರುವಾದರು.

ಅದೇರೀತಿಯಲ್ಲಿ, ನವಗ್ರಹಗಳಲ್ಲಿ ಮತ್ತೊಬ್ಬರಾಗಿರುವ ಅಸುರಗುರು ಶುಕ್ರ ಅಥವಾ ಶುಕ್ರಾಚಾರ್ಯ ಭೃಗುವಿನ ಮಗ; ಶುಕ್ರ ಎಂಬ ಹೆಸರಿಗೆ ಸ್ಪಷ್ಟತೆ, ಸ್ವಚ್ಛತೆ, ಶ್ವೇತ, ಪ್ರಕಾಶ ಎಂಬುದೇ ಅರ್ಥ. ಇವರೂ ಸಹ, ದೇವಗುರು ಬ್ರಹಸ್ಪತಿಯಂತೆಯೇ ನಾಲ್ಕು ವೇದಗಳನ್ನೂ, ಎಲ್ಲ ಕಲೆಗಳನ್ನೂ ಚೆನ್ನಾಗಿ ಬಲ್ಲವರು; ಜ್ಞಾನವೂ, ಚೈತನ್ಯವೂ ತುಂಬಿರುವ ಶುಕ್ರ, ದೇವತೆಗಳಿಗೆ ವಿರುದ್ಧವಾಗಿಯೇ ಸದಾ ಕಾರ್ಯನಿರತಾರಗಿರುವ ಅಸುರರೆಲ್ಲರಿಗೂ ಗುರುವಾಗಿ ಬೆಳಗಿದವರು. ಆದರೆ, ಗುರುವೂ ಶುಕ್ರನೂ ತದ್ವಿರುದ್ಧವಾದ ಗುಂಪುಗಳಿಗೆ ಗುರುವಾಗಿದ್ದರೂ ಗುಣದಲ್ಲಿ ಬಹಳ ಶ್ರೇಷ್ಠರು ಎಂಬುದರಿಂದ, ನವಗ್ರಹಗಳಲ್ಲಿ ಇವರಿಬ್ಬರನ್ನು ಮಾತ್ರ “ರಾಜ ಗ್ರಹಗಳು” ಎಂದೇ ಕರೆಯುತ್ತಾರೆ.

ಹೀಗೆ ಎಲ್ಲ ವೈಶಿಷ್ಯಗಳೂ ಇವರಿಬ್ಬರಿಗೆ ಸಹಜವಾಗಿದ್ದರೂ, ದೇವಗುರುವಿಗಿಂತಲೂ, ಅಸುರಗುರು ಶುಕ್ರ ಸ್ವಲ್ಪ ಶ್ರೇಷ್ಠ ಎಂದೇ ತೋರುತ್ತದೆ. ಅದು ಹೇಗೆ ಎಂದು ನೋಡೋಣ.

ದೇವಗುರುವಿಗೆ ಬ್ರಹಸ್ಪತಿ ಎಂಬ ಹೆಸರು ಬರಲು ಕಾರಣ ಅವರು ಸಕಲವನ್ನೂ ಬಲ್ಲ ಬುದ್ಧಿವಂತರು, ಜ್ಞಾನ ಸ್ವರೂಪರು ಎಂಬುದರಿಂದ, ಆದರೆ, ಅಸುರಗುರು ಶುಕ್ರನೋ ಎಲ್ಲಕ್ಕಿಂತಲೂ ಹೆಚ್ಚಾಗಿ ಸತ್ತವರನ್ನು ಬದುಕಿಸುವ ಮೃತ ಸಂಜೀವಿನಿ ಮಂತ್ರವನ್ನು ಅರಿತವರು. ಅಥರ್ವಣ ವೇದಕ್ಕೆ ಒಡೆಯರು. ವಿದ್ಯೆ ಪ್ರಶ್ನೆಗಳಲ್ಲಿ ಶ್ರೇಷ್ಠರು ಮಾತ್ರವಲ್ಲದೆ ‘ಶುಕ್ರನೀತಿ’ ಎಂಬ ಕೃತಿಯನ್ನೂ ರಚಿಸಿದವರು. 

ಇದಷ್ಟೇ ಶುಕ್ರ ಬ್ರಹಸ್ಪತಿಗಿಂತಲೂ ಶ್ರೇಷ್ಠ ಎಂದು ಹೇಳಲು ಕಾರಣವೇ ಎಂದರೆ ಇನ್ನೂ ಹೆಚ್ಚಾಗಿ  ಹೇಳಬಹುದು. ಸ್ವಾಭಾವಿಕವಾಗಿಯೇ ಒಳ್ಳೆಯ ಹೃದಯವಂತರಾದ ದೇವತೆಗಳಿಗೆ ಸದ್ಗುಣಗಳನ್ನು ಬೋಧಿಸಿವುದು ಬಹಳ ಸುಲಭ. ಆದರೆ ಹುಟ್ಟಿನಿಂದಲೇ ಆಸೆ, ಕೋಪ, ದ್ವೇಷ, ಅಸೂಯೆ ಮುಂತಾದ ದುರ್ಗುಣಗಳನ್ನುಳ್ಳ, ದೇವತೆಗಳನ್ನೂ, ಮಾನವರನ್ನೂ ಹಿಂಸಿಸುವುದನ್ನೇ ವೃತ್ತಿಯಾಗಿಸಿಕೊಂಡಿರುವ  ಅಸುರರಿಗೆ ಸದ್ಗುಣಗಳನ್ನು ಬೋಧನೆ ಮಾಡುವ ಅಸುರಗುರು ಶುಕ್ರನಿಗೆ ಕಾರ್ಯಭಾರ ಎಷ್ಟಿರಬಹುದು?

ಅಸುರರ ದುರ್ಗುಣಗಳನ್ನು ನೀಗಿಸಿ ಅವರನ್ನು ಗುಣವಂತರನ್ನಾಗಿಸಲು ಪ್ರಯತ್ನಿಸಿದವರು ಎಂಬುದರಿಂದಲೇ, ದೇವಗುರುವಿಗಿಂತಲೂ ಮೇಲಾದವರೆಂದು ಗೌರವಿಸಲ್ಪಡುತ್ತಾರೆ ಶುಕ್ರ. ಅದಕ್ಕೆ ಗೌರವ ಸಲ್ಲಿಸುವಂತೆಯೇ, ಶುಕ್ರ ಬರುವಾಗ ಗುರು ಹೊರಡುತ್ತಾರೋ ಏನೋ?!

ಮತ್ತೆ, ಈ ಅಸುರಗುರುವಾದ ಶುಕ್ರನಿಗೆ ಒಂದು ಕಣ್ಣಿಲ್ಲ. ಆ ಮತ್ತೊಂದು ಕಣ್ಣನ್ನು ತನ್ನ ಶಿಷ್ಯನ ಒಳಿತಿಗಾಗಿ ಅವರು ಕಳೆದುಕೊಂಡರು ಎಂಬುದು, ಒಂದು ಒಳ್ಳೆಯ ಗುರು ತನ್ನ ಶಿಷ್ಯನಿಗಾಗಿ, ತನ್ನ ಜೀವನವನ್ನೇ ತ್ಯಾಗ ಮಾಡಿದರು ಎಂಬುದಕ್ಕೆ ಬಹಳ ಶ್ರೇಷ್ಟವಾದ ಉದಾಹರಣೆ.

ಹಿರಣ್ಯನ ಕಾಲದಿಂದ ಅವನ ಮರಿಮೊಮ್ಮಗ ಮಹಾಬಲಿಯ ಕಾಲದವರೆಗೆ ಅವರಿಗೆ ಗುರುವಾಗಿದ್ದವರು ಶುಕ್ರ. ಹಾಗೆ ಅವರ ಮಾರ್ಗದರ್ಶನದಿಂದ, ಮೂರು ಲೋಕಗಳನ್ನೂ ಗೆದ್ದು ಧರ್ಮದ ಹಾದಿಯಲ್ಲಿ ನೀತಿಯಿಂದ ಆಡಳಿತ ಮಾಡಿದ ಅಸುರ ಅರಸ ಮಹಾಬಲಿ. ತನ್ನ ಗೆಲುವನ್ನು ಉಳಿಸಿಕೊಳ್ಳುವುದಕ್ಕಾಗಿಯೂ ಇಂದ್ರ ಪದವಿಯನ್ನು ಗಳಿಸಲು, ಯಜ್ಞ ದಾನ ಧರ್ಮಗಳ ಮೂಲಕ ಮಹಾಬಲಿ ಯತ್ನಿಸಿದನು. ಆದರೆ, ಅದು ದೇವತೆಗಳ ಬೆಳವಣಿಗೆಯನ್ನು ನಿರಂತರವಾಗಿ ನಾಶಮಾಡಿಬಿಡುತ್ತದೆ ಎಂಬುದರಿಂದ ಭಗವಂತ ವಾಮನ ಅವತಾರ ತಾಳಿ ಅವನ ಯಾಗವನ್ನು ತಡೆಯಲು ಮಾಡಿದ ಪ್ರಯತ್ನದ ಕಥೆ ನಮಗೆ ತಿಳಿದದ್ದೇ.

‘ಮೂರಡಿ ಭೂಮಿ ಬೇಕು’ ಎಂದು ವಾಮನ, ಮಹಾಬಲಿಯ ಬಳಿ ದಾನ ಕೇಳಿದಾಗ, ಬಂದಿರುವವನು ನಾರಾಯಣನೇ ಎಂಬುದನ್ನು ಅರಿತ ಶುಕ್ರ, ಮಹಾಬಲಿಯ ಬಳಿ ಹೇಳಿ ಅವನು ದಾನ ನೀಡುವುದನ್ನು ತಡೆಯಲು ಪ್ರಯತ್ನಿಸುತ್ತಾರೆ.

ಆದರೆ, ಆ ನಾರಾಯಣನೇ ಬ್ರಾಹ್ಮಣ ವಟುವಾಗಿ ನನ್ನ ಬಳಿ ಬಂದು ಯಾಚಿಸುವಾಗ ನನಗಲ್ಲವೇ ಹಿರಿಮೆ!” ಎಂದು ಮಹಾಬಲಿ, ಶುಕ್ರಾಚಾರ್ಯರ ಸಲಹೆಯನ್ನು ಕೇಳಲು ನಿರಾಕರಿಸುತ್ತಾನೆ.

ಹಾಗೂ, ಮಹಾಬಲಿ ದಾನ ನೀಡುವುದನ್ನು ತಡೆಯಲು ಶುಕ್ರ ದುಂಬಿಯ ರೂಪ ತಾಳಿ ದಾರೆ ಎರೆದುಕೊಡುವ ಕಮಂಡಲದಲ್ಲಿ ನೀರು ಬರದಂತಿರಲು  ಕಮಂಡಲದ ಬಾಯಲ್ಲಿ ಕುಳಿತು ಅಡಚಣೆ ಮಾಡುತ್ತಾರೆ. ಅದನ್ನು ಅರಿತ ವಾಮನ ನೀರು ಬರುವುದಕ್ಕಾಗಿ ಕಮಂಡಲದ ಬಾಯನ್ನು ದರ್ಭೆಯಿಂದ ಚುಚ್ಚಿದ್ದರಿಂದ ದುಂಬಿಯಾಗಿದ್ದ ಶುಕ್ರರ ಒಂದು ಕಣ್ಣು ಕುರುಡಾಯಿತು.

ಮತ್ತೆ  ಮಹಾಬಲಿಯನ್ನು ನಾಶಮಾಡಿದರೂ, ಮೃತ ಸಂಜೀವಿನಿ ಮಂತ್ರವನ್ನು ಅರಿತಿದ್ದ ಶುಕ್ರ ಅವನಿಗೆ ಜೀವ ಬರಿಸುತ್ತಾರೆ ಎಂಬುದರಿಂದಲೇ ಮಹಾಬಲಿಯನ್ನು ಅಳಿಸದೆ ಭೂಮಿಯೊಳಗೆ ಅದುಮಿ ಮರೆಮಾಚಿದನಂತೆ  ಭಗವಂತ.

ಹೀಗೆ ಭಗವಂತನೇ ಹೆದರುವಂತಹ ಪರಾಕ್ರಮವೂ, ಸದ್ಗುಣಗಳೂ ಉಳ್ಳವರಾಗಿ ಬದುಕಿದವರು ಎಂಬುದರಿಂದಲೇ ಈ ಅಸುರಗುರು ಶುಕ್ರ ದೇವಗುರುವಿಗಿಂತಲೂ ಶ್ರೇಷ್ಟವಾದವರು ಎನ್ನುತ್ತಾರೆ.

ತರ್ಕ ರೀತಿಯಾಗಿ ನೋಡಿದರೂ, ಗುರು ಸಾತ್ವಿಕ ಗುಣಗಳಗೆ ಅಧಿಪತಿ. ಶುಕ್ರನೋ ರಜೋ ಗುಣಗಳನ್ನುಳ್ಳವನು, ಅಸುರರ ಅಧಿಪತಿ. ಬ್ರಹ್ಮ ಮುಹೂರ್ತ ಮುಗಿಯುವ ಸಮಯ ಗುರು ಮುಗಿದು, ಮುಂಜಾವಿನಲ್ಲಿ ತಲೆ ಎತ್ತುವ ನಮ್ಮ ರಜೋ ಗುಣಗಳನ್ನು ಅಡಗಿಸಲು, ಮಾರ್ಗ ತೋರಲು  ಶುಭ ಶುಕ್ರನಾದ ಶುಕ್ರ ಬರುವುದು ಸರಿತಾನೇ.

ಹೀಗೆ ಭಕ್ತಿಯಿಂದ ಹಾಡುವ ಹಾಡಿನ ಮೂಲಕ, ವಿಜ್ಞಾನವನ್ನೂ ಸುಂದರವಾಗಿ  ಕೂಡಿಸಿ ಹೇಳಿದ ಗೋದೈ, ಹಾಗೆಯೇ ತಾನು  ಜೀವಿಸಿದ್ದ ಕಾಲವನ್ನೂ ಈ ಹಾಡಿನಲ್ಲಿ ತಿಳಿಸಿದ್ದಾಳೆ ಎನ್ನುತ್ತಾರೆ ವಿಜ್ಞಾನ ತಜ್ಞರು.

“The Conjunction of Jupiter and Venus.”

ಅಂದರೆ ಗುರುವೂ, ಶುಕ್ರನೂ ಆಕಾಶದಲ್ಲಿ ಒಂದೇ ರೇಖೆಯಲ್ಲಿ , ಹತ್ತಿರತ್ತಿರ ಒಂದಾಗಿ ಕಾಣುವ ಘಟನೆಯನ್ನು ಇಂದಿನ ಖಗೋಳಶಾಸ್ತ್ರ ತಂತ್ರಜ್ಞಾನಗಳಿಂದ ಆಗಾಗ ಕಾಣಲು ಸಾಧ್ಯವಾಗುತ್ತದೆ ಎಂದರೂ, ಗೋದೈ ಬದುಕಿದ್ದ ಕಾಲದಲ್ಲಿ, ಬರಿ ಕಣ್ಣಿನಿಂದ ಕಾಣಲು ಸಾಧ್ಯ ಎಂಬುದು ಎಷ್ಟರ ಮಟ್ಟಿಗೆ ಅಪರೂಪವಾಗಿ ಘಟಿಸಿರಬಹುದು ಎಂದು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಸಮೀಪದಲ್ಲಿ, ಜನವರಿ 22 ಮತ್ತು ನವಂಬರ್ 24, 2019 ರಲ್ಲಿ, ಈ Conjunction ಘಟಿಸಿತು. ಇನ್ನು, 2020ರಲ್ಲಿ ಮತ್ತೆ  ತೋರಬಹುದು ಎಂಬ ಸುದ್ಧಿಗಳು ನಮಗೆ ದೊರಕುವಾಗಲೇ, ಕ್ರಿ.ಶ. 550 (BCE) ಮತ್ತು ಕ್ರಿ.ಶ. 447 (CE) ರಲ್ಲಿ ಇದು ಘಟಿಸಿದ್ದಾಗಿ ಉಲ್ಲೇಖಗಳು ಇರುವುದು ಅಂತರದಲ್ಲಿ ಘಟಿಸಿದ ಗ್ರಹಗಳ ಬದಲಾವಣೆಗಳನ್ನು ಅಂದೇ ಅರಿತಿದ್ದ ಆಂಡಾಳ್ ಅದನ್ನು ಉಲ್ಲೇಖಿಸುವುದನ್ನು ನೋಡುವಾಗ ಅವಳು ಜೀವಿಸಿದ್ದ ಕಾಲ ಕ್ರಿ.ಶ. 447 ಆಗಿ ಇರಬಹುದು ಎನ್ನುತ್ತಾರೆ ತಜ್ಞರು.

ಇಷ್ಟೊಂದು ಆಶ್ಚರ್ಯಗಳನ್ನು ನಮಗೆ ಒಂದೇ ಹಾಡಿನಲ್ಲಿ ತುಂಬಿಕೊಟ್ಟವಳು, :ಬಕಾಸುರನನ್ನು ಕೊಂದ ಬಾಲಕ ಕೃಷ್ಣನನ್ನು ಹಾಡಲು, ಶುಭ ಶುಕ್ರ ಸಮಯದಲ್ಲಿ ಬೆಳಗುವ ಬಾನಿನಂತೆ, ನಮ್ಮ ಬದುಕಿನಲ್ಲಿ ದುಃಖಗಳಿಂದ ಮುಕ್ತಿ ಎಂಬ ಬೆಳಕನ್ನು ತರುತ್ತಾನೆ ಎಂಬುದರಿಂದ, ಭಗವಂತನಾದ ಶ್ರೀ ಕೃಷ್ಣನನ್ನು ಸ್ತುತಿಸಿ ಹಾಡಿ ಬನ್ನಿರೇ…”  ಎಂದು ಗೆಳತಿಯರನ್ನು, ಹದಿಮೂರನೇಯ ದಿನದಂದು ಕರೆಯುತ್ತಾಳೆ ಗೋದೈ ಆಂಡಾಳ್!!

                                                                     ———————

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.