ಶ್ರೀವಿಷ್ಣುವನ್ನೂ ಕಾಪಾಡಬೇಕು! : ಧನುರ್ ಉತ್ಸವ ~ 14

ಧನುರ್ ಉತ್ಸವ ವಿಶೇಷ ಸರಣೀಯ ಹದಿನಾಲ್ಕನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಹದಿನಾಲ್ಕನೇಯ ದಿನ

ನಿಮ್ಮ ಹಿತ್ತಲಲಿರುವ ತೋಟದಾ ಬಾವಿಯೊಳು

ಕೆಂದಾವರೆಯ ಬಾಯರಳಿ ಕನೈದಿಲೆಯು ಬಾಯ್ ಮುಚ್ಚಿಹುದ ನೋಡು

ಕೆಂಗಲ್ಲ ಪುಡಿಯ ಬಟ್ಟೆಯ ಬಿಳಿಪಲ್ಲ ತಪಸಿಗಳು

ತಮ್ಮ ದೇವಳಕೆ ಶಂಖವನೂದೆ ಹೊರಟಿಹರು

ನಮ್ಮನ್ನು ಮುಂಚೆಯೇ ಎಬ್ಬಿಸಲು ಮಾತಿತ್ತ

ಸಂಪನ್ನೆಯೇ ಏಳು ಲಜ್ಜೆಯೇ ಇರದ ನಾಲಿಗೆಯವಳೇ

ಶಂಖವನು ಚಕ್ರವನು ಹಿಡಿದಿರ್ಪ ಅಗಲ ಕೈಯವನ

ಕಮಲ ಕಣ್ಣನ ಹಾಡೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಸಾರಂಗ ರಾಗ – ಆದಿ ತಾಳ)

ನಿಮ್ಮ ಮನೆಯ ಹಿಂಬದಿಯ ತೋಟದಲ್ಲಿರುವ ಕೊಳದಲ್ಲಿ ಕೆಂದಾವರೆ ಹೂಗಳ ದಳ ಅರಳಿವೆ. ನೈದಿಲೆ ಹೂಗಳು ದಳ ಮುಚ್ಚಿ ಶಂಖುವಿನಾಕಾರದಲ್ಲಿ ನಿಂತಿವೆ.

ಇಟ್ಟಿಗೆ ಪುಡಿಯ ಬಣ್ಣದ ಕಾವಿಯ ಉಡುಗೆ ತೊಟ್ಟ ಬಿಳಿ ಹಲ್ಲುಗಳುಳ್ಳ ಸನ್ಯಾಸಿಗಳು ಬಿಳಿ ಶಂಖವನ್ನು ಮೊಳಗುತ್ತ ದೇವರ ಗುಡಿಯನ್ನು ತೆರೆಯಲು ಹೋಗುತ್ತಿದ್ದಾರೆ.

ನಮ್ಮನ್ನು ಮುಂಚೆಯೇ ಎಬ್ಬಿಸುವುದಾಗಿ ಹೇಳಿ, ಅದನ್ನು ಮಾಡದಿರುವುದಕ್ಕೆ ಕಿಂಚಿತ್ತೂ ನಾಚಿಕೆಪಡದೇ ಇರುವ ಹೆಣ್ಣೇ! ಕೈಗಳಲ್ಲಿ ಶಂಖ ಚಕ್ರವನ್ನು ಹಿಡಿದಿರುವ ತಾವರೆ ಕಣ್ಣವನನ್ನು ಹಾಡಲು ನಿದ್ದೆಯಿಂದ ಎದ್ದು ಬರುವವಳಾಗು…” ಎಂದು ಗೆಳತಿಯನ್ನು ಕರೆಯುತ್ತಾಳೆ ಗೋದೈ ಆಂಡಾಳ್!

“ಶಂಖವನು ಚಕ್ರವನು ಹಿಡಿದಿರ್ಪ ಅಗಲ ಕೈಯವನ…’ ಅಂದರೆ ಶಂಖವನ್ನೂ ಚಕ್ರವನ್ನೂ ತನ್ನ ಕೈಗಳಲ್ಲಿ ಹಿಡಿದಿರುವ ಶ್ರೀ ವಿಷ್ಣು…..” ಎಂದು ಹಾಡುತ್ತಾಳೆ ಗೋದೈ.

ಧನುರ್ ಮಾಸದ ಹದಿಮೂರು ದಿನಗಳು ಬೇಗನೆ ಕಳೆದುಹೋದವು.

ಇಲ್ಲಿಯವರೆಗೆ ರಕ್ಷಿಸುವ ದೇವರಾದ ಶ್ರೀವಿಷ್ಣುವಿನ ಹಿರಿಮೆಗಳನ್ನು ಮಾತ್ರವೇ ನೋಡಿದೆವು.

ಇನ್ನು ಶ್ರೀ ವಿಷ್ಣುವಿನ ಕೈಗಳಲ್ಲಿರುವ ರಕ್ಷಣೆಯ ಆಯುಧಗಳ ಬಗ್ಗೆ ಅರಿತುಕೊಳ್ಳೋಣ ಬನ್ನಿ.

‘ಸತ್ವಮ್, ರಜಸ್, ತಮಸ್’ ಮುಂತಾದ ಮೂರು ಗುಣಗಳೇ ಪ್ರಪಂಚದ ಮೂಲಭೂತವಾದ ಗುಣಗಳು. ಅದೇ ರೀತಿ ‘ಸೃಷ್ಟಿ, ರಕ್ಷಣೆ, ಅಳಿವು’ (ಸೃಷ್ಟಿ, ಸ್ಥಿತಿ, ಲಯ) ಮುಂತಾದುವೇ ಲೋಕದ ಸಮಸ್ತ ಜೀವರಾಶಿಗಳೂ ಏಕ ರೂಪವಾಗಿ ಬದುಕಲು ಕಾರಣವಾಗಿದೆ ಎಂಬುದಕ್ಕೆ ಬ್ರಹ್ಮ, ವಿಷ್ಣು, ಈಶ್ವರ ಎಂಬ ತ್ರಿಮೂರ್ತಿಗಳಾಗಿ ಇದ್ದಾನೆ ಭಗವಂತ.

ಇದರಲ್ಲಿ ರಕ್ಷಿಸುವ ದೇವರಾದ ಶ್ರೀವಿಷ್ಣು, ‘ಶತ ಸತ್ಪತಿ ಅದ್ಭುತ’ ಅಂದರೆ ಸಮಾಜದ ನಾಯಕನಾಗಿ ನೀನು, ಶಾಂತ ಸ್ವರೂಪಿಯಾಗಿರುವೆ’ ಎಂದು ಬಣ್ಣಿಸಲ್ಪಡುತ್ತಾನೆ. ಹಾಗೆ ವಿಷ್ಣು ಶಾಂತ ಸ್ವರೂಪಿ ಎಂಬುದು ನಿಜವಾದರೆ, ವಿಷ್ಣುವಿನ ಕೈಗಳಲ್ಲಿ ಯಾಕೆ ಶಂಖ, ಚಕ್ರ , ಬಿಲ್ಲು, ಬಾಣ, ಗದಾಯುಧ ಮುಂತಾದವು?

ಆಲೋಚನೆ ಮಾಡಿ ನೋಡಿದರೆ, ತನ್ನನ್ನು ರಕ್ಷಿಸಿಕೊಳ್ಳಲು ಇಟ್ಟುಕೊಂಡ ಆಯುಧಗಳಲ್ಲ. ತನ್ನ ಭಕ್ತರನ್ನು ರಕ್ಷಿಸುವುದಕ್ಕಾಗಿ ತನ್ನ ಕೈಯಲ್ಲಿ ಇಟ್ಟುಕೊಂಡಿರುವ  ಸಾಮಗ್ರಿಗಳು ಎಂಬುದೇ ಸತ್ಯ!

ಆದರೇ, ‘ತಿರುಪ್ಪಲ್ಲಾಂಡು’ ಹಾಡುವ ಪೆರಿಯಾಳ್ವಾರ್,

”ವಿಷ್ಣುವಿನ ಕೈಯಲ್ಲಿರುವ ಶಂಖ ಚಕ್ರಗಳೇ, ಭಕ್ತರನ್ನು ಮಾತ್ರವಲ್ಲ, ಶ್ರೀವಿಷ್ಣುವನ್ನೂ ಕಾಪಾಡಬೇಕು” ಎಂದು ಹಾಡುತ್ತಾರೆ.

Conch ಎಂದು ಇಂಗ್ಲೀಷಿನಲ್ಲಿ ಕರೆಯಲ್ಪಡುವ ಈ ಶಂಖಗಳು, ಕಡಲಲ್ಲಿ ಬದುಕುವ ಜೀವರಾಶಿಗಳಾದ ಬಸವನ ಹುಳು (Snail) ಸಿಂಪಿ (Shell) ಆಯಿಸ್ಟರ್ (Oyster)  ಮುಂತಾದುವನ್ನು ಕಾಪಾಡುವುದಕ್ಕೆ ಪ್ರಕೃತಿಯೇ ಉಂಟುಮಾಡಿದ ಕವಚಗಳು. ಈ ಕವಚಗಳಲ್ಲಿ Calcium Carbonate (ಸುಣ್ಣ ಮತ್ತು ಸೀಮೆಸುಣ್ಣದ ಖನಿಜ) ಮತ್ತು Proteins (ಸಾವಯವ ರಸಾಯನ) ತುಂಬಿವೆ ಎಂದು ಹೇಳುವ ವಿಜ್ಞಾನ ಶಾಸ್ತ್ರ, ಬಹಳ ಶ್ರೇಷ್ಟವಾದ ರಾಣಿ ಶಂಖಗಳು ಸೃಷ್ಟಿಯಾಗಲು ಹಲವು ವರ್ಷಗಳು ಹಿಡಿಯುತ್ತವೆ ಎಂದೂ, ಅವು ಮೂವತ್ತು ವರ್ಷಗಳವರೆಗೆ ಜೀವಿಸಿರುತ್ತವೆ ಎಂದೂ ಹೇಳುತ್ತದೆ.

ಆದರೆ, ಶ್ರೀವಿಷ್ಣುವಿನ ಕೈಯಲ್ಲಿರುವ ಶಂಖಕ್ಕೆ ಸುಂದರವಾದ ಇತಿಹಾಸ ಇದೆ ಎಂದು ಕಥೆಗಳಿವೆ.

ಶ್ರೀವಿಷ್ಣುವಿನ ಕೈಯಲ್ಲಿರುವ ಶಂಖದ ಹೆಸರು ‘ಪಾಂಚಜನ್ಯ’ ಎಂದು. ಇದು ಸಪ್ತಬ್ರಹ್ಮ ಆಕಾರ. ಈ ಶಂಖ ಕಡಲಿನಲ್ಲಿ ದೊರಕುವ ಶಂಖಗಳಲ್ಲಿ ಶ್ರೇಷ್ಟವಾದ ಬಗೆಯ ಬಲಮುರಿ ಶಂಖಕ್ಕೆ ಸೇರಿದ್ದು. ಬಲಮುರಿ ಶಂಖ ಎಂಬುದೇ ಶ್ರೇಷ್ಟವಾದದ್ದು. ಹೇಗೆಂದರೆ, ಕಡಲಿನಲ್ಲಿ ಸಾವಿರಾರು ಸಿಂಪಿಗಳು ಸೃಷ್ಟಿಯಾದ ನಂತರವೇ ಒಂದು ಎಡಮುರಿ ಶಂಖ ಉದ್ಭವಿಸುತ್ತದೆ ಎಂದೂ ಅದೇ ರೀತಿ ಸಾವಿರ ಎಡಮುರಿ ಶಂಖಗಳ ನಡುವೆ ಯಾವಾಗಲಾದರೊಮ್ಮೆ ಒಂದು ಬಲಮುರಿ ಶಂಖ ಸೃಷ್ಟಿಯಾಗುತ್ತದೆ ಎಂದೂ ಹೇಳಲ್ಪಡುತ್ತದೆ.

ಹೀಗೆ ಸಾವಿರಾರು ಬಲಮುರಿ ಶಂಖಗಳ ಮಧ್ಯೆ ಯಾವಾಗಲಾದರೂ ಒಂದು ‘ಸಲಂಚಲಂ’ ಎಂಬ ಅಪೂರ್ವ ಬಗೆಯ ಶಂಖ ಉದ್ಭವಿಸುತ್ತದೆ. ಇಂತಹ ಸಾವಿರಾರು ಸಲಂಚಲ ಶಂಖಗಳ ನಡುವೆ ಒಂದು ‘ಪಾಂಚಜನ್ಯ’ ಎಂಬ ಶಕ್ತಿಯುತವಾದ ಅಪೂರ್ವವಾದ ಶಂಖ  ಅಪರೂಪಕ್ಕೆ ಉದ್ಭವಿಸುತ್ತದಂತೆ. ಹಾಗೆ ರೂಪಗೊಂಡ ಶಂಖಗಳಲ್ಲಿ ಶ್ರೇಷ್ಟವಾದ ಒಂದು ಶಂಖವೇ, ವಿಷ್ಣುವಿನ ಶ್ರೀ ಹಸ್ತದಲ್ಲಿರುವ ಹೆಮ್ಮೆಗೆ ಪಾತ್ರವಾದ  ಪಾಂಚಜನ್ಯ.

ಹೀಗಿರುವಾಗ, ಪಾಂಚಜನ್ಯ ಎಂಬ ಶಂಖಾಯುಧ ರೂಪತಾಳಿದ ಪುರಾಣ ಕಥೆಗಳು ಹಲವು ಕಾಣಸಿಗುತ್ತವೆ.

ಕುರುಕ್ಷೇತ್ರದಲ್ಲಿ, ಕೃಷ್ಣ ಮತ್ತು ಬಲರಾಮರ ಗುರುವಾದ ಸಾಂದೀಪನಿ ಮುನಿಯ ಮಗ ಪುನರ್ದತ್ತ. ಅವನನ್ನು ಪಾಂಚಜನ ಎಂಬ ಅಸುರ ಅಪಹರಿಸಿ ಹೋಗಲು, ತನ್ನ ಗುರುವಿನ ಮಗನನ್ನು ರಕ್ಷಿಸಲು ಅಸುರನೊಂದಿಗೆ ಕೃಷ್ಣ ಹೋರಾಡಿ ಗೆದ್ದನು. ಆ ಯುದ್ಧದಲ್ಲಿ ಬೆಂಕಿಗೆ ಆಹುತಿಯಾದ ಪಾಂಚಜನ ಉರಿದು, ಬೂದಿಯಾಗಿ ಶಂಖವಾಗಿ ರೂಪತಾಳಿದ್ದರಿಂದ ಪಾಂಚಜನ್ಯ  ಎಂಬ ಹೆಸರು ಬರಲು ಕಾರಣವಾಯಿತಂತೆ.

ಅಲ್ಲದೆ ಶಂಖಾಸುರ ಎಂಬ ಅಸುರ ದೇವತೆಗಳಿಗೆ ಹಿಂಸೆ ನೀಡುತ್ತಿದ್ದರಿಂದ, ಶಿವ ಶೂಲದಿಂದ ಅವನನ್ನು ಅಳಿಸಿ ಭಸ್ಮವಾಗಿಸಿ, ಅವನ ಮೂಳೆಗಳು ಆಳವಾದ ಕಡಲಿನೊಳಗೆ ಬಿದ್ದು ಶಂಖವಾಗಿ ರೂಪಾತಾಳಿದ್ದಾಗಿಯೂ, ಅದು ಶ್ರೀವಿಷ್ಣುವಿನ ಕೈಗೆ ಶಂಖವಾಗಿ ಬಂದದ್ದಾಗಿಯೂ ಹೇಳಲ್ಪಡುತ್ತದೆ.

ಅಮೃತ ಬೇಡಿ ದೇವತೆಗಳೂ, ಅಸುರರೂ ಕ್ಷೀರ ಸಮುದ್ರವನ್ನು ಮಂಥನ ಮಾಡುವಾಗ ಹೊರಬಂದ ಹದಿನಾರು ದೈವೀಕ ವಸ್ತುಗಳಲ್ಲಿ ಮಹಾಲಕ್ಷ್ಮಿಯೂ, ಬಲಮುರಿ ಶಂಖವೂ ಕೂಡಿಯೇ ಹೊರಬಂದವಂತೆ. ಶ್ರೀವಿಷ್ಣು ತನ್ನ ಎಡಗೈಯಲ್ಲಿ ಶಂಖವನ್ನು ಹಿಡಿದುಕೊಂಡು, ಮಹಾಲಕ್ಷ್ಮಿಯನ್ನು ಬಲಗೈಯಲ್ಲಿ ಹಿಡಿದುಕೊಂಡ ಎಂಬುದರಿಂದ ಇದನ್ನು ಶ್ರೀದೇವಿಯ ಅಂಶವಾಗಿಯೂ ನೋಡಲ್ಪಡುತ್ತದೆ. ಅದರ  ನಂತರವೇ, ಮಹಾಲಕ್ಷ್ಮಿಯನ್ನು ವಿವಾಹವಾದ ಶ್ರೀವಿಷ್ಣು, ತನ್ನ ದೇವಿಯನ್ನು ಎದೆಯಲ್ಲಿರಿಸಿ, ಕೈಯಲ್ಲಿ ಶಂಖದೊಂದಿಗೂ, ಚಕ್ರದೊಂದಿಗೂ ‘ಶಂಖ ಚಕ್ರದಾರಿಯಾಗಿ’ ರೂಪಾತಾಳಿದನು.

ಮಹಾಲಕ್ಷ್ಮೀ ಮಹಾವಿಷ್ಣು ಇಬ್ಬರ ಬಳಿ ಶಂಖ ಇರುವುದರಿಂದ ಸಂಪತ್ತು, ಜಯ ಸೇರಿ ಎಲ್ಲವನ್ನೂ ಇದು ನೀಡುತ್ತದೆ ಎಂದು ನಂಬಲ್ಪಡುತ್ತದೆ. ಪಂಚೇಂದ್ರಿಯಗಳನ್ನು ಅಡಗಿಸುವುದರಿಂದ ಪಾಂಚಜನ್ಯ ಎಂದು ಕರೆಯಲ್ಪಡುತ್ತದೆ. ಶಂಖದಿಂದ ಉಂಟಾಗುವ ‘ಓಂ’ ಎಂಬ ನಾದ, ದುಷ್ಟ ಶಕ್ತಿಗಳನ್ನು ಹೊರದೂಡುವ ಸಾಮರ್ಥ್ಯ ಉಳ್ಳದ್ದು. ಆದ್ದರಿಂದಲೇ, ಈ ಶಂಖವನ್ನು ಆಯುಧವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಭಗವಾನ್ ಶ್ರೀ ಕೃಷ್ಣ ಬಳಸುತ್ತಾನೆ.

” ವೈರಿಗಳು ನಡುಗುವಂತೆ ಪಾಂಚಜನ್ಯವನ್ನು ಮೊಳಗಿಸುವ ಯುದ್ಧ”

“ಸ ಕೋಶೋ ದಾರ್ಥರಾಷ್ಟ್ರಾನಾಮ್

ಹೃದಯಾನಿ ವ್ಯದಾರಾಯ (ಭಗವತ್ ಗೀತೆ 1.19)

ಕುರುಕ್ಷೇತ್ರ ಯುದ್ಧದಲ್ಲಿ, ಶ್ರೀಕೃಷ್ಣ ತನ್ನ ಪಾಂಚಜನ್ಯವನ್ನು ಮೊಳಗಳು, ಕೌರವರಿಗೆ ಆ ಶಂಖನಾದಕ್ಕೆ ಅವರ ಹೃದಯಗಳನ್ನು ನಡುಗಿಸಿತಂತೆ.

ಆಳ್ವಾರ್ಗಳಲ್ಲಿ ಮೊದಲ ಆಳ್ವಾರಾದ ಪೊಯ್ಗೈ ಆಳ್ವಾರ್ ಈ ಶಂಖದ ಅಂಶವಾಗಿ ಹುಟ್ಟಿದವರೆಂದು ಹೇಳಲ್ಪಡುತ್ತದೆ.

ಶಂಖದ ಹಿರಿಮೆ ಇಷ್ಟಾದರೆ, ಚಕ್ರದ  ಇತಿಹಾಸ ಮತ್ತಷ್ಟು ಮಹತ್ವ ಉಳ್ಳದ್ದು.

ಶ್ರೀವಿಷ್ಣುವಿನ ಕೈಯಲ್ಲಿರುವ ಚಕ್ರವನ್ನು ಒಂದು ಆಯುಧವಾಗಿ ಭಾವಿಸದೆ, ಅದನ್ನು ಒಂದು ಆಳ್ವಾರಾಗಿ ‘ಚಕ್ರತ್ತಾಳ್ವಾರ್’ ಆಗಿ ಪೂಜಿಸಲ್ಪಡುತ್ತದೆ ಎಂಬುದನ್ನೇ “ಚಕ್ರ ರೂಪಸ್ಯ ಚಕ್ರಿಣ!” ಎಂಬ ಸಾಲು ತಿಳಿಸುತ್ತದೆ.

ಹದಿನಾರು ಕೈಗಳನ್ನೂ, ಅವುಗಳಲ್ಲಿ ಹದಿನಾರು ಆಯುಧಗಳನ್ನೂ ಹೊಂದಿರುವ ಚಕ್ರತ್ತಾಳ್ವಾರ್ ಸುದರ್ಶನ, ತಿರುವಾಳ್ವಿಯಾಳ್ವಾನ್, ಚಕ್ರಮ್, ತಿಕಿರಿ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಾರೆ.

ಎಲ್ಲಕ್ಕಿಂತಲೂ ಮಿಗಿಲಾಗಿ ಈ ಚಕ್ರಕ್ಕೆ ಶೈವವನ್ನೂ ವೈಷ್ಣವವನ್ನೂ ಕೂಡಿಸುವ ಶಕ್ತಿಯುತವಾದ ಕಥೆಯೊಂದಿದೆ.

ಹೌದು, ತನ್ನನ್ನೂ, ತನ್ನ ಭಕ್ತರನ್ನೂ ರಕ್ಷಿಸುವ ಚಕ್ರವನ್ನು ನಿಜವಾಗಲೂ ಶಿವನಿಂದ ವಿಷ್ಣು ತಪಸ್ಸುಮಾಡಿ ಪಡೆದುಕೊಂಡದ್ದು ಎಂದು ಹೇಳುತ್ತದೆ ಈ ಕಥೆ.

ಶಕ್ತಿಯುತವಾದ ಕೆಲವು ವರಗಳನ್ನು ಪಡೆದ ಅಹಂಕಾರಿಯಾದ ದದೀಚಿ ಎಂಬ ಮುನಿಯೊಂದಿಗೆ ಯುದ್ಧಮಾಡಿದ ವಿಷ್ಣು ತನ್ನ ಚಕ್ರಾಯುಧದಿಂದ ಮುನಿಯನ್ನು ಧ್ವಂಸಮಾಡಿದಾಗ, ಆ ಮುನಿಯ ಬಲವಾದ ದೇಹವನ್ನು ತಾಕಿ ವಿಷ್ಣುವಿನ ಚಕ್ರಾಯುಧ ಮುರಿದುಹೋಗುತ್ತದೆ.

ತಕ್ಷಣ ದೇವತೆಗಳು, ‘ಶಿವನ ಬಳಿ ಇಂತಹ ಚಕ್ರಾಯುಧ ಒಂದಿದೆ. ಜಲಂಧರ ಎಂಬ ಅಸುರನನ್ನು ಅದರಿಂದಲೇ ನಾಶಮಾಡಿದನು. ಆದ್ದರಿಂದ, ಅವನ ಬಳಿ ಚಕ್ರ ಬೇಡಿ ತಪಸ್ಸು ಮಾಡಿ, ಖಂಡಿತವಾಗಿ ಕೊಡುತ್ತಾನೆ …! ಆ ಚಕ್ರ ತಮ್ಮ ಬಳಿ ಬಂದರೆ, ಅದರ ನಂತರ ಯಾರಿಂದಲೂ ತಮ್ಮನ್ನು ಜಯಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಅನೀತಿ ಎಸಗುವ ಇನ್ನೂ ಅನೇಕ ಅಸುರರನ್ನು ನೀವು ಕೊಲ್ಲಬಹುದು!’ ಎನ್ನುತ್ತಾರೆ.

ಇದನ್ನು ಕೇಳಿದ ವಿಷ್ಣು, “ಈಶ್ವರಾ! ನಿನಗೆ ಒಂದು ಸಾವಿರ ಪುಷ್ಪಗಳಿಂದ ಪೂಜಿಸುತ್ತೇನೆ. ಸಾವಿರದ ಕೊನೆಯ  ಹೂವಿಂದ ನಿನ್ನನ್ನು ಅರ್ಚಿಸುವ ವೇಳೆಗೆ, ನನಗೆ ನಿನ್ನ ಚಕ್ರಾಯುಧವನ್ನು ನೀಡಿ ದಯಪಾಲಿಸಬೇಕು!” ಎಂಬ ಪ್ರಾರ್ಥನೆಯೊಂದಿಗೆ  ತಪ್ಪಸ್ಸಿನಲ್ಲಿ ಮಗ್ನನಾಗುತ್ತಾನೆ.

ಒಂದೊಂದು ತಾವರೆಯಾಗಿ ತೆಗೆದು, ಶಿವಲಿಂಗದ ಪವಿತ್ರವಾದ ದೇಹದಮೇಲಿಟ್ಟು ಅರ್ಚಿಸಿದ ಶ್ರೀವಿಷ್ಣು ಶ್ರದ್ಧೆಯಿಂದಲೂ, ಆತ್ಮಾರ್ಥವಾಗಿಯೂ ಶಿವನ ಪೂಜೆ ಮಾಡುತ್ತಾನೆ. ಪುಷ್ಪಗಳನ್ನು ಎಣಿಸುತ್ತಲೇ ಇದ್ದರು. 999 ವರೆಗೆ ಎಣಿಸಿದವನು, ಗಾಬರಿಯಾಗುತ್ತಾನೆ. ಸಾವಿರ ಎಂದು ಹೇಳಿ ಅರ್ಚನೆ ಮಾಡಲು ಕೊನೆಯ ಹೂ ಇರುವುದಿಲ್ಲ.

‘ಕಡಿಮೆಯಾದ ಒಂದು ಪುಷ್ಪದಿಂದ ತನ್ನ ಪೂಜೆಗೆ ಅಡಚನೆ ಉಂಟಾಗಬೇಕೇ…’ ಎಂದು ಹೆದರಿದನು. ‘ಸಾವಿರನೇಯ ಹೂವಾಗಿ ನನ್ನ ಕಣ್ಣ ಪುಷ್ಪವೊಂದನ್ನು ನೀಡಿ ಅರ್ಚನೆ ಮಾಡುತ್ತೇನೆ…’ ಎಂದು ಕತ್ತಿಯಿಂದ  ತನ್ನ ಕಣ್ಣನ್ನು ಕಿತ್ತು ಪವಿತ್ರ ಶಿವಲಿಂಗದ ಮೇಲೆ  ತನ್ನ ಕಣ್ಣನ್ನಿಟ್ಟು ಮನಸಾರೆ ಬೇಡಿಕೊಳ್ಳುತ್ತಾನೆ.

ಮುಂದಿನ ಕ್ಷಣ, ಅಲ್ಲಿ  ವೃಷಭಾರೂಡರಾಗಿ ಪ್ರತ್ಯಕ್ಷವಾದ ಶಿವ, ‘ಇಗೋ, ನೀನು ಕೇಳಿದ ಚಕ್ರಾಯುಧ…. ಇನ್ನು ಇದು ಹರನ ಚಕ್ರವಲ್ಲ, ಹರಿಯಾದ ನಿನ್ನ ಚಕ್ರ. ಹರಿಚಕ್ರ!’ ಎಂದು ದಯಪಾಲಿಸಿದನು.

ಹೀಗೆ ಶಿವನಿಂದ ಪಡೆದುಕೊಂಡ ಚಕ್ರವೇ, ವಿಷ್ಣುವಿನ ಭಕ್ತರ ದುಃಖವನ್ನು ತೊಲಗಿಸಲು ಬಹಳ ಉಪಯೋಗವಾಯಿತು ಎಂಬುದು ಕಥೆ. ‘ಹರಿಯೂ ಶಿವನೂ ಒಂದೇ’ ಎಂಬ ಸುಮಂತ್ರವನ್ನು ನಿರೂಪಿಸುವಂತೆ ಇದೆ ಈ ಕಥೆ.

ಗಜೇಂದ್ರನ ಮೋಕ್ಷದಲ್ಲಿ ಕಾಲನ್ನು ಹಿಡಿದುಕೊಂಡ ಮಹೇಂದ್ರ ಎಂಬ ಮೊಸಳೆಯನ್ನು ಸೀಳಿ, ಗಜೇಂದ್ರನನ್ನು ಕಾಪಾಡಿದ್ದೂ ಈ ಸುದರ್ಶನ ಚಕ್ರವೇ.

ಮಹಾವಿಷ್ಣು ವರಾಹ ಅವತಾರ ತಾಳಿದಾಗ ಕೋರೆ ಹಲ್ಲುಗಳಿಂದ ದುಷ್ಟರನ್ನು ಸೀಳಿ, ಅದನ್ನು ಕೋರೆ ಹಲ್ಲಿನಿಂದ ಭೂಮಿಯನ್ನು ಕಡಲಿನ ಅಡಿಯಿಂದ ಎತ್ತಿಕೊಂಡು ಬರುವುದಕ್ಕೆ ನೆರವಾಗಿ ಇದ್ದದ್ದೂ ಸುದರ್ಶನ ಚಕ್ರವೇ.

ವಾಮನ ಅವತಾರದಲ್ಲಿ, ಮಹಾಬಲಿ ಚಕ್ರವರ್ತಿ ವಾಮನನಿಗೆ  ಮೂರು ಲೋಕವನ್ನು ದಾನ ಮಾಡಿ ದಾರೆ ಎರೆಯಲು ಯತ್ನಿಸುವಾಗ ನೀರು ಬೀಳುವ ದ್ವಾರವನ್ನು ಮುಚ್ಚಿ ಶುಕ್ಲಾಚಾರ್ಯರು ದುಂಬಿಯಾಗಿ ರೂಪತಾಳಿದಾಗ, ದರ್ಭೆಯ ರೂಪಾತಾಳಿ ಆ ದುಂಬಿಯ ಕಣ್ಣನ್ನು ಚುಚ್ಚಿದ್ದೂ ಈ ಚಕ್ರವೇ.

ಅದೇ ಚಕ್ರತ್ತಾಳ್ವಾರ್, ನರಸಿಂಹ ಅವತಾರದಲ್ಲಿ, ಭಗವಂತನ ಚೂಪಾದ ಕೈ ಉಗುರುಗಳಾಗಿ ಹಿರಣ್ಯನ ಹೊಟ್ಟೆಯನ್ನು ಸೀಳಿ ವಧೆಮಾಡಿದ್ದು, ಕೃಷ್ಣಾವತಾರಾದಲ್ಲಿ ಶಿಶುಪಾಲನ ಧ್ವಂಸಮಾಡಲು ನೆರವಾಯಿತಂತೆ.

ಕುರುಕ್ಷೇತ್ರದಲ್ಲಿ, ಜಯದ್ರತನನ್ನು ಸಂಹರಿಸಿದಾಗ, ಸೂರ್ಯನನ್ನು ಮರೆಮಾಚಲು ಸಹಾಯವಾಗಿ ಇದ್ದದ್ದೂ ಶ್ರೀ ಸುದರ್ಶನ ಚಕ್ರವೇ.

ಮಹಾವಿಷ್ಣು, ರಾಮನ ಅವತಾರ ತೆಗೆದಾಗ ಚಕ್ರತ್ತಾಳ್ವಾರ್ ಭರತನಾಗಿ ಅವತಾರ ತಾಳಿದ್ದಾಗಿ ಪುರಾಣ ಕಥೆಗಳು  ಹೇಳುತ್ತವೆ.

“ಇಂತಹ ಹಲವು ಮಹತ್ವವುಳ್ಳ ಶಂಖವನ್ನೂ, ಚಕ್ರವನ್ನೂ ಹಿಡಿದು ವೈರಿಯನ್ನು ಅಳಿಸಿ, ನಮ್ಮನ್ನು ರಕ್ಷಿಸುವ “ಶಂಖವನು ಚಕ್ರವನು ಹಿಡಿದಿರ್ಪ ಅಗಲ ಕೈಯವನಾದ ಆ ಮಾಯಾ ಕೃಷ್ಣನಾದ ಶ್ರೀವಿಷ್ಣುವನ್ನು ಹೊಗಳಿ ಹಾಡಿ, ನಿದ್ರೆಯಿಂದ ಎಬ್ಬಿಸಲು ಬರುವಂತವರಾಗಿರೀ…” ಎಂದು ಗೆಳತಿಯರನ್ನು ಹದಿನಾಲ್ಕನೇಯ ದಿನ ಕರೆಯುತ್ತಾಳೆ ಗೋದೈ ಆಂಡಾಳ್!


ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply