ಧನುರ್ ಉತ್ಸವ ವಿಶೇಷ ಸರಣಿಯ ಹದಿನೈದನೇ ಕಂತು ಇಲ್ಲಿದೆ…
ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ
ಧನುರ್ ಉತ್ಸವ ಹದಿನೈದನೇಯ ದಿನ
ಎಲೇ ಎಳೆಗಿಳಿಯೇ ಇನ್ನೂ ಮಲಗಿಹೆಯಾ
ಸಿಡಿಸಿಡಿ ಎಂದು ಕರೆಯದಿರಿ ಸಂಪನ್ನೆಯರೇ ಬರುತಿರುವೆ
ತಿಳಿದೀ ನಿನ್ನ ಮೋಡಿ ಮಾತನಂದಿನಿಂ ನಿನ್ನ ಬಾಯನರಿತಿಹೆವು
ತಿಳಿದವರು ನೀವೇ ನಾನೇ ಆಗಿರಲಿ
ಕೂಡಲೇ ನೀ ಬಾರವ್ವ ನಿನಗೇನು ಬೇರೆಯುದ್ದೇಶ
ಎಲ್ಲರೂ ಹೊರಟರೇ ಹೊರಟರು ಹೊರಬಂದು ಎಣಿಸಿಕೋ
ಮದ್ದಾನೆ ಕೊಂದವನ ಅರಿ ಮದವಳಿಪ ಬಲನನು
ಮಾಯಾವಿಯನು ಹಾಡೆ ನಮ್ಮೀ ಪವಿತ್ರ ವ್ರತವು ಸಾರ್ಥಕವು
-ಬಿಂದಿನಗನವಿಲೆ ನಾರಾಯಣಸ್ವಾಮಿ (ಸೌರಾಷ್ಟ್ರ ರಾಗ – ಅಟ್ಟ ತಾಳ)
ಮುಂಜಾವಿನಲ್ಲಿ ಗೆಳತಿಯರನ್ನು ಎಚ್ಚರಗೊಳಿಸಲು ಬಂದ ಸ್ತ್ರೀಯರಿಗೂ, ಏಳದೇ ಮನೆಯೊಳಗೆ ಇರುವವರಿಗೂ ನಡೆಯುವ ಸಂಭಾಷಣೆಯೇ ಈ ಹಾಡು.
“ಮರಿ ಗಿಣಿಯಂತೆ ಇರುವವಳೇ, ಇನ್ನೂ ನಿದ್ರಿತ್ತಿರುವಿಯೇನು?’ ಎಂದು ಎಬ್ಬಿಸಲು ಬಂದವರಲ್ಲಿ ಒಬ್ಬಳು ಕೇಳಲು, ‘ಗೇಲಿ ಬೇಡ. ಇಗೋ ಹೊರಟೆ!’ ಎನ್ನುತ್ತಾಳೆ ಒಳಗೆ ಇರುವವಳು.
ಅವಳು ಏಳಲಿಲ್ಲ ಎಂದು ತಿಳಿದರೆ, ‘ಮಾತಿನ ಮಲ್ಲಿಯೇ, ನಿನ್ನ ಬಗ್ಗೆ ತಿಳಿಯದೇನು ನಮಗೆ…!’ ಎಂದು ಒಬ್ಬಳು ಕೀಟಲೆ ಮಾಡಲು, ‘ಮಾತಿನ ಮಲ್ಲಿಯರು ನೀವೇ? ನಾನೇ? ಸರಿ, ನಾನಾಗೇ ಇರಲಿ. ಏನು ಬೇಕು ನಿಮಗೆ?’ ಎನ್ನುತ್ತಾಳೆ.
ಅವಳು ಕೋಪಗೊಂಡಿರುವುದಾಗಿ ಅಂದುಕೊಂಡ ಗೆಳೆತಿಯರು ಸಮಾಧಾನವಾಗಿ, ‘ಸರಿ, ಸರಿ… ಬೇಗನೆ ಬಾ… ಗುಡಿಗೆ ಹೋಗೋಣ…! ಎಂದು ಕರೆಯಲು, ಇನ್ನೂ ಹೊರಡದ ಇವಳೋ ‘ಎಲ್ಲರೂ ಬಂದಾಯಿತೇ?’ ಎಂದು ಕೇಳುತ್ತಾಳೆ.
‘ಎಲ್ಲರೂ ಬಂದಿದ್ದಾರೆ. ನೀನೂ ಬಂದರೇ, ಆ ಬಲವಾದ ಆನೆಯನ್ನು ಉರುಳಿಸಿದವನ, ಮಹಾಕಾರ್ಯಗಳನ್ನು ಮಾಡುವ ಕೃಷ್ಣನನ್ನು ನಾವು ಹರುಷದಿಂದ ಹಾಡೋಣ…!” ಎಂದು ಗೆಳೆತಿಯರನ್ನು ಕರೆಯುವುದಕ್ಕಾಗಿ ಈ ಹಾಡನ್ನು ದಾಖಲಿಸಿದ್ದಾಳೆ ಗೋದೈ…!
‘ಇನ್ನೂ ನಿದ್ರಿಸಿಹಯೋ…?’
ಎಂದು ಗೆಳತಿಯನ್ನು ಎಷ್ಟು ಸುಂದರವಾಗಿ ಕೇಳುತ್ತಾಳೆ ನೋಡಿ ಗೋದೈ…!
ಮುಂಜಾವು, ಎಚ್ಚರಗೊಂಡು, ಕೃಷ್ಣನನ್ನು ದರ್ಶಿಸಲು ಹೋಗೋಣ ಎಂದು ಹಿಂದಿನ ದಿನ ಕೇಳುವಾಗ, ಈ ಹೆಣ್ಣು, ‘ನೀವೆಲ್ಲರೂ ನೆಮ್ಮದಿಯಾಗಿ ನಿದ್ರಿಸಿ…. ಬೆಳಗ್ಗೆ ನಾನು ಬಂದು ಕರೆದು ಹೋಗುತ್ತೇನೆ…!’ ಎನ್ನುತ್ತಾಳೆ. ಹಾಗೆ ಹೇಳುವಾಗಲು, “ನಾಯಕಿ ಹೆಣ್ಣಾಗಿ….” ಎಂದು ಕರೆದಳು ಗೋದೈ.
ಆದರೆ ಇವಳೋ, ಮುಂಜಾವಿನಲ್ಲೇ ನಿದ್ರೆಯಿಂದ ಎಬ್ಬಿಸಲು ಬರುವುದಾಗಿ ಹೇಳಿ, ತಾನೇ ಬಹಳ ಸಮಯ ನಿದ್ರೆ ಮಾಡುತ್ತಿದ್ದಾಳೆ. ಅವಳನ್ನು ಎದುರುನೋಡುತ್ತಾ, ಅವಳಿಗಾಗಿ ಕಾದು ನಿರಾಶೆಯಾದಾಗ, ಅದೇ ಹೆಣ್ಣನ್ನು, “ಪಿಶಾಚಿ ಹೆಣ್ಣೇ….” ಎಂದು ಕರೆಯುತ್ತಾಳೆ.
ಚುರುಕಾಗಿ ಇದ್ದಾಗ ನಾಯಕಿಯಾಗಿ, ನಾಯಕಿ ಹೆಣ್ಣಾಗಿ ಇದ್ದವಳು, ಸೋಮಾರಿಯಾಗಿ ನಿದ್ರಿಸುವಾಗ, ‘ಪಿಶಾಚಿ ಹೆಣ್ಣು’ ಆದಳು. ಅಂದರೆ, ನಿದ್ರೆ ಎಂಬುದು ಸೋಮಾರಿ ಗುಣವೇ? ಪಿಶಾಚಿ ಗುಣ ಎಂದು ಹೇಳುವಷ್ಟು ಅದು ಹೀನವಾದದ್ದೇ?
ಬೆಳಗ್ಗೆ ಸ್ವಲ್ಪ ಹೆಚ್ಚಾಗಿ ನಿದ್ರೆ ಮಾಡಿದ್ದನ್ನೇ ಈ ಹೆಣ್ಣುಗಳು ಪಿಶಾಚಿ ಗುಣ ಎನ್ನುತ್ತಾರಲ್ಲಾ…. ಸಾವಿರಾರು ವರ್ಷಗಳು ನಿರಂತರವಾಗಿ ನಿದ್ರಿಸುತ್ತಿದ್ದ ಮುಚುಕುಂದನ ಕಥೆಯನ್ನು ಕೇಳಿದರೆ ಇವರು ಏನೆನ್ನುತ್ತಾರೆ? ಕೇಳೋಣ ಬನ್ನಿ.
ಅದು ದೇವತೆಗಳಿಗೂ ಅಸುರರ ನಡುವೆಯೂ ಐನೂರು ವರ್ಷಗಳು ನಡೆದ ಯುದ್ಧ ಕೊನೆಯಾದ ಕಾಲ. ಐದು ನೂರು ವರ್ಷಗಳು ಮುಗಿಯದೆ ಮುಂದುವರೆದ ಆ ಯುದ್ಧ ಮುಗಿದಿದ್ದಕ್ಕೆ ಕಾರಣ ಮುಚುಕುಂದ ಚಕ್ರವರ್ತಿ ಎಂಬ ಮಾನವ ಅರಸನು, ಆ ಯುದ್ಧಕ್ಕೆ ನಾಯಕತ್ವ ವಹಿಸಿ ದೇವತೆಗಳಿಗೆ ಮಾರ್ಗದರ್ಶನ ಮಾಡಿದ್ದೇ ಕಾರಣ.
ಇಕ್ಶ್ವಾಕು ವಂಶದಲ್ಲಿ ಹುಟ್ಟಿದ ಮುಚುಕುಂದ ಸತ್ಯ, ಪ್ರಾಮಾಣಿಕತೆ, ಭಕ್ತಿ, ಶೌರ್ಯ ಮುಂತಾದ ಉನ್ನತ ಗುಣಗಳನ್ನುಳ್ಳವನು. ಅವನು ನಾಯಕತ್ವ ವಹಿಸಿ ಯುದ್ಧವನ್ನು ಮುನ್ನಡೆಸಲು ತೊಡಗಿದ ಮೇಲೆಯೇ, ದೇವತೆಗಳ ದಾಳಿಯ ಕ್ರಮ ಬದಲಾಗಿ ಮತ್ತಷ್ಟು ಆಕ್ರೋಶವಾಯಿತು. ದೇವತೆಗಳ ಹೊಸ ಬಗೆಯ ದಾಳಿಯನ್ನು ತಡೆಯಲಾಗದ ಅಸುರರು, ತಪ್ಪಿಸಿಕೊಂಡರೆ ಸಾಕೆಂದು ಪಾತಾಳ ಲೋಕಕ್ಕೆ ಹೋಗಿ ಅಡಗಿಕೊಳ್ಳುತ್ತಾರೆ.
ಐನೂರು ವರ್ಷಗಳಿಂದ ನಡೆದ ದೇವತೆಗಳ ಹೋರಾಟ ಜಯವಾಗಲು ಕಾರಣನಾಗಿದ್ದ ಮುಚುಕುಂದನಿಗೆ, ಇಂದ್ರನ ಸಭೆಯಲ್ಲಿ ಮಹಾ ಗೌರವ ನೀಡಲಾಯಿತು. ಮುಚುಕುಂದನ ಪ್ರಯತ್ನದಿಂದ ಗೆಲುವನ್ನು ಸಾಧಿಸಿದ ದೇವತೆಗಳು, ಅವನಿಗೆ ಬೇಕಾದದ್ದೆಲ್ಲವನ್ನೂ ಕೊಡಲು ಸಿದ್ಧರಾಗಿ ಕಾಯುತ್ತಿದ್ದರು.
ಆದರೆ, ಮುಚುಕುಂದನೋ ‘ನನಗೆ ಬಂಗಾರವೋ, ಬೇರೆಯ ವಸ್ತುಗಳೋ, ಉಳಿದ ವರಗಳೋ ಏನೂ ಬೇಡ. ಸತತವಾಗಿ ಐನೂರು ವರ್ಷಗಳು ಯುದ್ಧ ಮಾಡಿದ್ದರಿಂದ ನಾನು ಬಹಳ ದಣಿದಿದ್ದೇನೆ. ನಾನಾಗಿಯೇ ನಿದ್ರೆಯಿಂದ ಎಚ್ಚರವಾಗುವವರೆಗೆ ಯಾವ ಅಡಚನೆಗಳೂ ಇಲ್ಲದೆ ನಾನು ನೆಮ್ಮದಿಯಾಗಿ ನಿದ್ರಿಸುವುದಕ್ಕೆ ಮಾತ್ರ ಸಹಾಯ ಮಾಡಿ…” ಎಂದು ಕೇಳುತ್ತಾನೆ.
ಇದನ್ನು ಕೇಳಿ ಆಶ್ಚರ್ಯಗೊಂಡ ಇಂದ್ರ, ಭೂಲೋಕದಲ್ಲಿ ವಿಂಧ್ಯ ಪರ್ವತದ ಅರಣ್ಯದಲ್ಲಿ ಮುಚುಕುಂದನ ವಿಶ್ರಾಂತಿಗಾಗಿ ಒಂದು ಗುಹೆಯನ್ನು ಪುನರ್ನಿರ್ಮಾಣ ಮಾಡಿ ಅವನ ನಿದ್ದೆಗೆ ವ್ಯವಸ್ಥೆ ಮಾಡುವುದಲ್ಲದೆ, ಗುಹೆಯ ದ್ವಾರದಲ್ಲಿ ಅಗ್ನಿ ದೇವನನ್ನೂ, ವರುಣ ದೇವನನ್ನೂ ಅವನನ್ನು ಕಾವಲು ಕಾಯಲು ನಿಯಮಿಸುತ್ತಾನೆ. ತಾನಾಗಿ ಎಚ್ಚರಗೊಂಡು ಏಳಬೇಕೆಂದು ಮುಚುಕುಂದನು ಕೇಳಿಕೊಂಡದ್ದರಿಂದ, ಮುಚುಕುಂದನ ನಿದ್ರೆಯನ್ನು ಯಾರಾದರೂ ಭಂಗಗೊಳಿಸಿದರೆ, ಮುಚುಕುಂದನ ದೃಷ್ಟಿಗೆ ಬೀಳುವ ಮೊದಲ ವ್ಯಕ್ತಿ ಭಸ್ಮವಾಗುತ್ತಾನೆ ಎಂಬ ವರವನ್ನೂ ಕೊಡುತ್ತಾನೆ. ಇಂದ್ರನು ತೋರಿಸಿದ ಗುಹೆಯಲ್ಲಿ, ಸಾವಿರಾರು ವರ್ಷ ನೆಮ್ಮದಿಯಿಂದ ಮುಚುಕುಂದ ನಿದ್ರಿಸುತ್ತಿರುತ್ತಾನೆ.
ಮುಚುಕುಂದನು ನಿದ್ರೆ ಹೋದ ಸಮಯ, ಭೂಮಿಯಲ್ಲಿ ಅಸುರ ವಂಶದಲ್ಲಿ ಕಾಲಯವನ ಎಂಬ ರಕ್ಕಸ ಹುಟ್ಟಿ ಬಲಶಾಲಿಯಾಗುತ್ತಾನೆ. ಅವನು ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಿ ತಾನು ದಾಳಿ ಮಾಡುವ ಯಾರೇ ಆದರೂ ಅವರನ್ನು ಗೆಲ್ಲುವ ವರವನ್ನು ಪಡೆದು, ಭೂಮಿಯಲ್ಲಿ ಎಲ್ಲ ರಾಜರನ್ನೂ ಯುದ್ಧಕ್ಕೆ ಸೆಳೆದು ಸೋಲಿಸಿ ಹಿಂಸೆ ನೀಡುತ್ತಿರುತ್ತಾನೆ.
ಗೆಲುವಿನ ಮಮಕಾರ ಯಾರನ್ನಾದರೂ ಸುಲಭವಾಗಿ ಬಿಟ್ಟಿದೆಯೇ? ಕಾಲಯವನ, ಶ್ರೀಕೃಷ್ಣನು ರಾಜ್ಯವಾಳುತ್ತಿದ್ದ ದ್ವಾರಕೆಯ ಮೇಲೂ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳಲು ತೀರ್ಮಾನಿಸುತ್ತಾನೆ. ದ್ವಾರಕೆಯ ಮೇಲೆ ದಾಳಿಮಾಡಲು ಸೈನ್ಯದೊಂದಿಗೆ ಬರುವ ಕಾಲಯವನನ ಮೇಲೆ ಯುದ್ಧ ಮಾಡಿ ಅವನನ್ನು ಕೊಲ್ಲುವುದೋ, ಗೆಲ್ಲುವುದೋ ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಕೃಷ್ಣ, ಅವನನ್ನು ದ್ವಾರಕೆಗೆ ಬರಬಿಡದೆ, ಮಧ್ಯದಲ್ಲೇ ವಿಂಧ್ಯ ಪರ್ವತದಲ್ಲಿರುವ ಕಾಡಿನಲ್ಲಿ ಎದುರುಗೊಳ್ಳುತ್ತಾನೆ.
ಕಾಲಯವನ, ಕೃಷ್ಣನ ನಡುವೆ ನಡೆದ ಯುದ್ಧದಲ್ಲಿ, ಭಯಭೀತನಾದಂತೆ ನಟಿಸಿದ ಕೃಷ್ಣ, ತಪ್ಪಿಸಿಕೊಂಡು ಓಡಿ ವಾಯು, ಅಗ್ನಿಯ ಬಳಿ ಸುದ್ಧಿಯನ್ನು ಮುಟ್ಟಿಸಿ, ನಂತರ ಮುಚುಕುಂದನಿರುವ ಗುಹೆಯ ಒಳಗೆ ಅವಿತಿಟ್ಟುಕೊಳ್ಳುತ್ತಾನೆ. ಕೃಷ್ಣನನ್ನು ಹಿಂಬಾಲಿಸಿ ಬಂದ ಕಾಲಯವನ, ದ್ವಾರಪಾಲಕರಾದ ಅಗ್ನಿ, ವಾಯುವಿನ ಮೇಲೆ ದಾಳಿಮಾಡಿ ಗುಹೆಯೊಳಗೆ ನುಸುಳುತ್ತಾನೆ.
ಕತ್ತಲೊಳಗೆ ನುಗ್ಗಿದ ಕಾಲಯವನನಿಗೆ, ಕಣ್ಣು ಸರಿಯಾಗಿ ಕಾಣಿಸದೇ ಅಲ್ಲೇ ನಿದ್ರೆ ಮಾಡುತ್ತಿದ್ದ ಮುಚುಕುಂದನನ್ನು ಕೃಷ್ಣ ಎಂದು ತಿಳಿದು ಕಾಲಿನಿಂದ ಒದೆಯಲು, ನಿದ್ರೆಯಿಂದ ಎಚ್ಚರಗೊಂಡ ಮುಚುಕುಂದನ ಕಣ್ಣಿನ ನೋಟಕ್ಕೆ ಅಸುರ ಕಾಲಯವನ ಭಸ್ಮವಾಗುತ್ತಾನೆ.
ಭಗವಂತನು ಬಂದಿರುವುದನ್ನೂ ಅರಿಯದೆ ನಿದ್ರೆಯಲ್ಲಿ ಇದ್ದದ್ದಕ್ಕೆ ವ್ಯಥೆಪಟ್ಟುಕೊಂಡ ಮುಚುಕುಂದ, ತನಗೆ ಮೋಕ್ಷ ದಯಪಾಲಿಸಬೇಕೆಂದು ಬೇಡಿಕೊಳ್ಳಲು, ಭಗವಂತ ಮುಚುಕುಂದನನ್ನು ಆಲಿಂಗಿಸಿಕೊಂಡು ಅವನನ್ನು ಒಂದು ತಾವರೆಯ ಪುಷ್ಪವಾಗಿಸಿ ತನ್ನೊಂದಿಗೆ ಇಟ್ಟುಕೊಳ್ಳುತ್ತಾನೆ.
ಈಗ ಪರಂದಾಮನಿಗೆ ಪ್ರಿಯವಾದ ಹೂವಾಗಿ, ಗೆಲುವಿನ ಸಂಕೇತವಾಗಿ ರೂಪತಾಳಿ ಸದಾ ಭಗವಂತನೊಂದಿಗೆ ಇರುವುದು ಮುಚುಕುಂದ ಎಂಬ ಆ ತಾವರೆಯೇ.
ಮಾನವನಿಗೆ ನಿದ್ರೆ ಎಂಬುದು ವರ; ಒಂದು ಅತ್ಯಾವಶ್ಯಕವೂ ಸಹ. ಆದರೆ, ಅದೇ ಅಳತೆ ಮೀರಿ ಹೋದರೆ ಆಲಸ್ಯ ಎಂಬ ದೆವ್ವ ಅವನನ್ನು ಹಿಡಿದುಕೊಳ್ಳುತ್ತದೆ ಎಂಬುದು ಮನುಷ್ಯನಿಗೆ ಮಾತ್ರವಲ್ಲ, ಭಗವಂತನಿಗೂ ಸಹ ಅನ್ವಯಿಸುತ್ತದೆ!
ಮುಚುಕುಂದ ಎಂಬ ವ್ಯಕ್ತಿ ನಿದ್ರೆ ಹೋದಂತೆ ಭಗವಂತನೂ ನಿದ್ರಿಸಿದರೆ ಏನಾಗಬಹುದು? ಆದರೆ ಅವನೂ ಹಾಗೆ ನಿದ್ರಿಸಿದ್ದಾನಂತೆ. ಹಾಗೆ ಅವನು ನಿದ್ರಿಸಿದಾಗ ನಡೆದದ್ದು ಏನು ಗೊತ್ತೇ?
ಕ್ಷೀರಸಾಗರದಲ್ಲಿ, ಶ್ರೀಮನ್ ನಾರಾಯಣ ಅನಂತ ಶಯನದಲ್ಲಿ ಇರುವಾಗ ಅವನ ಕಿವಿಗಳಿಂದ ಮಧು, ಕೈಟಭ ಎಂಬ ಇಬ್ಬರು ಅಸುರರು ಉದ್ಭವಿಸಿದರಂತೆ. ಡೊಂಕಾದ ಕೋರೆ ಹಲ್ಲುಗಳಿಂದಲೂ ಭಯಂಕರವಾದ ಆಕಾರದೊಂದಿಗೂ ಇದ್ದ ಆ ರಾಕ್ಷಸರು ದೇವತೆಗಳು, ಮುನಿಗಳು ಎಲ್ಲರನ್ನೂ ಬಹಳ ಹಿಂಸೆಗೆ ಒಳಪಡಿಸುತ್ತಾರೆ.
ಬ್ರಹ್ಮನ ಸಮೇತ ಉಳಿದ ದೇವತೆಗಳೆಲ್ಲರೂ ಪರಂದಾಮನ ಬಳಿ ಮೊರೆಯಿಡುವಾಗ ಗಾಢ ನಿದ್ರೆಯಲ್ಲಿದ್ದ ಭಗವಂತನು, ಎಚ್ಚರಗೊಂಡು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಇಬ್ಬರು ರಕ್ಕಸರ ಮೇಲೆ ಯುದ್ಧ ತೊಡಗಿ, ಘೋರ ಹೋರಾಟ ಮಾಡಿ ಅವರನ್ನು ಹಿಡಿದು ತನ್ನ ತೊಡೆಯಮೇಲಿಟ್ಟು ಚಕ್ರಾಯುಧದಿಂದ ಕೊಂದನಂತೆ.
ಒಟ್ಟಾರೆ, ದೇವರಾಗಿದ್ದರೂ ಮಿತಿಮೀರಿದ ನಿದ್ರೆ ಅಪಾಯಗಳನ್ನೇ ತಂದು ಒಡ್ಡುತ್ತದೆ.
ಹೌದು, ಸರಿಯಾದ ನಿದ್ದೆ, ಕಳೆದುಹೋದ ಶಕ್ತಿಯನ್ನು ಹೇಗೆ ಮತ್ತೆ ಪಡೆದುಕೊಳ್ಳುವಂತೆ ಮಾಡುತ್ತದೋ, ಅದೇ ರೀತಿಯಾಗಿ ಮಿತಿಮೀರಿದ ನಿದಿರೆಯೂ ಸೋಮಾರಿತನವನ್ನು ತರುತ್ತದೆ. ಆಲಸ್ಯ ಒಬ್ಬರ ಕಾರ್ಯ ಸಾಮರ್ಥ್ಯವನ್ನು ಕಡಿಮೆ ಮಾಡಿ, ಕಾರ್ಯ ಶಕ್ತಿಯನ್ನು ವ್ಯಯಮಾಡುತ್ತದೆ. ಗೆಲುವಿನ ದಿಕ್ಕನ್ನು ತಪ್ಪಿಸುತ್ತದೆ.
ವೈದ್ಯಕೀಯ ರೀತಿಯಲ್ಲಿ ನೋಡಿದರೂ, ದಟ್ಟವಾದ ಕತ್ತಲಲ್ಲಿ ಮಲಗುವಾಗ ನಮ್ಮ ದೇಹದಲ್ಲಿ ಸ್ರವಿಸುವ Melatonin (ಮೆಲಟೊನಿನ್ – ನೆತ್ತಿಗ್ರಂಥಿ ಅಥವಾ ಪೈನಿಯಲ್ ಗ್ರಂಥಿಯಲ್ಲಿ ಗ್ರಂಥಿಯಲ್ಲಿ ಉತ್ಪನ್ನವಾಗುವ ಹಾರ್ಮೋನ್) ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ರೂಪಿಸುವಲ್ಲಿ, ಜೀರ್ಣ ಮಂಡಲವನ್ನು ಸರಿಯಾಗಿ ಚಾಲನೆಯಲ್ಲಿಟ್ಟು ಕೊಬ್ಬನ್ನು ನೀಗಿಸಲು ಸಹಾಯಮಾಡುತ್ತದೆ. ಆದರೆ, ಮಿತಿಮೀರಿದ ನಿದ್ರೆಯೋ ಆಲಸ್ಯವನ್ನು ತರುವುದರೊಂದಿಗೆ ದೇಹ ದಪ್ಪವಾಗುವುದು, ಹೃದಯ ರೋಗ, ಮಧುಮೇಹ ಮುಂತಾದ Metabolic Syndrome (ಚಯಾಪಚಯ ರೋಗ ಲಕ್ಷಣಗಳು) ಗಳಿಗೆ ದಾರಿ ಮಾಡಿಕೊಡುತ್ತದೆ.
ರಾತ್ರಿ ಬೇಗನೆ ಮಲಗಿ, ಬೆಳಗಿನ ಜಾವದಲ್ಲೇ ಎದ್ದೇಳುವುದು ಎಂಬುದೇ ನಿದ್ದೆ ಮಾಡುವ ಸರಿಯಾದ ಪದ್ಧತಿ. ಅದನ್ನೇ ಗೋದೈ, ತನ್ನ ಗೆಳತಿಯ ಬಳಿ ಮುಂಜಾವಿನ ಹೊತ್ತಿನಲ್ಲಿ,
‘ಇನ್ನೂ ನಿದ್ರಿಸುತ್ತಿರುವೆಯೇನು?’ ಎಂದು ಕೇಳುತ್ತಾಳೆ.
‘ಇನ್ನೂ’ ಎಂಬ ಒಂದು ಪದದಲ್ಲಿ, ಅದರ ಒತ್ತಿನಲ್ಲಿ, ಅಧಿಕವಾಗಿ ನಿದ್ರೆ ಮಾಡಬಾರದು ಎಂಬ ಜೀವನ ಪದ್ಧತಿಯನ್ನು ನಮಗೆ ಬಹಳ ಸುಂದರವಾಗಿ ಹೇಳಿಕೊಡುತ್ತಾಳೆ. ಪರಂದಾಮನನ್ನು ಹಾಡುವುದನ್ನು ಕಲಿಸಿಕೊಡುವಾಗಲೇ, ಹಲವು ಒಳ್ಳೆಯ ಅಭ್ಯಾಸಗಳನ್ನೂ ಸೇರಿಸಿಯೇ ಕಲಿಸಿಕೊಡುತ್ತಾಳೆ ಈ ಗೋದೈ!
ಒಟ್ಟಾರೆ,
“ಇನ್ನೂ ಸ್ವಲ್ಪ ಜಾಸ್ತಿ ನಿದ್ರೆ ಮಾಡದೇ…”
ಮಿತಿಯಾಗಿ ನಿದ್ರಿಸಿ, ಬೆಳಗಿನ ಜಾವದಲ್ಲೇ ನಾರಾಯಣನನ್ನು ದರ್ಶನ ಮಾಡಿ, ಸುಖವಾಗಿಯೂ, ಸಮೃದ್ಧಿಯೊಂದಿಗೂ ಬದುಕಲು ಹದಿನೈದನೇಯ ದಿನ ಗೆಳತಿಯರನ್ನು ಕರೆಯುತ್ತಾಳೆ ಗೋದೈ ಆಂಡಾಳ್.
ಬನ್ನಿ, ನಾವು ಕೂಡಿಯೇ ಹೋಗೋಣ….!
___
ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.