ಬೋಕುಜುವಿನ ಉತ್ತರ ಅಸಂಬದ್ಧವೇ? : ಓಶೋ ವ್ಯಾಖ್ಯಾನ

ದಾರಿ ಎಲ್ಲಿಯೂ ಇಲ್ಲ. ಪ್ರಯಾಣ ಶುರುವಾಗುತ್ತಿದ್ದಂತೆಯೇ ದಾರಿಯೂ ತೆರೆದುಕೊಳ್ಳುತ್ತದೆ ಅನ್ನುತ್ತಾನೆ ಝೆನ್ ಮಾಸ್ಟರ್ ಬೋಕುಜು

ಓಶೋ ಹೇಳಿದ ಕಥೆ । ಕನ್ನಡಕ್ಕೆ; ಚಿದಂಬರ ನರೇಂದ್ರೆ

ತತ್ವಜ್ಞಾನದ ಅನ್ವೇಷಕನೊಬ್ಬ ಝೆನ್ ಮಾಸ್ಟರ್ ಬೋಕುಜು ನ ಪ್ರಶ್ನೆ ಮಾಡಿದ,

“ ದಾರಿ ಯಾವುದು ? “

ಬೋಕುಜು ಸುತ್ತಲಿನ ಬೆಟ್ಟ ಗುಡ್ಡಗಳ ಮೇಲೊಮ್ಮೆ ಕಣ್ಣು ಹಾಯಿಸಿ ಉತ್ತರಿಸಿದ,

“ ಎಷ್ಟು ಸುಂದರವಾಗಿವೆ ಈ ಬೆಟ್ಟ ಗುಡ್ಡಗಳು ! “

ಅನ್ವೆಷಕನ “ ದಾರಿ ಯಾವುದು ? “ ಎನ್ನುವ ಪ್ರಶ್ನೆಗೆ ಬೋಕುಜು ನ “ ಎಷ್ಟು ಸುಂದರವಾಗಿವೆ ಈ ಬೆಟ್ಟ ಗುಡ್ಡಗಳು ! “ ಎಂಬ ಉತ್ತರ ಎಷ್ಟು ಅಸಂಬದ್ಧ ಅಲ್ಲವೆ ?

ಬೋಕುಜುನ ಉತ್ತರದಿಂದ ಹತಾಶನಾದ ಅನ್ವೇಷಕ ಅಲ್ಲಿಂದ ತಕ್ಷಣ ಹೊರಟುಬಿಟ್ಟ. ಅವನು ಹೊರಡುತ್ತಿದ್ದಂತೆಯೇ ಬೋಕುಜು ಬಾಯ್ತುಂಬ ಬಿದ್ದು ಬಿದ್ದು ನಕ್ಕ.

ಈ ಸಂಭಾಷಣೆಯನ್ನು ಗಮನಿಸುತ್ತಿದ್ದ ಬೋಕುಜುನ ಶಿಷ್ಯನೊಬ್ಬ ಪ್ರಶ್ನೆ ಮಾಡಿದ,
“ ಮಾಸ್ಟರ್ ನಿನ್ನ ಉತ್ತರ ಕೇಳಿ, ಅವ ನಿನ್ನ ಹುಚ್ಚ ಎಂದುಕೊಂಡಿರಬಹುದಲ್ಲವೆ ? “

“ ಖಂಡಿತ “ ಬೋಕುಜು ಉತ್ತರಿಸಿದ : ನಮ್ಮಿಬ್ಬರಲ್ಲೊಬ್ಬ ಖಂಡಿತ ಹುಚ್ಚ. ದಾರಿ ಯಾವುದು ಎನ್ನುವ ಪ್ರಶ್ನೆಯೇ ಅಸಂಗತ. ದಾರಿ ಎಲ್ಲೂ ಇಲ್ಲ. ಪ್ರಯಾಣ ಶುರುವಾಗುತ್ತಿದ್ದಂತೆಯೇ ದಾರಿಯೂ ಸೃಷ್ಟಿಯಾಗತೊಡಗುತ್ತದೆ. ಪ್ರಯಾಣದ ಮೂಲಕ ದಾರಿಯನ್ನು ಕಂಡುಕೊಳ್ಳಬಹುದು. ಸಿದ್ಧವಾಗಿರುವ ದಾರಿ ಇಲ್ಲ ಹಾಗಾಗಿ ನಾನು ಅವನಿಗೆ ದಾರಿ ಎಲ್ಲಿರುವುದು ಎಂದು ತೋರಿಸುವುದು ಅಸಾಧ್ಯ. ಬನ್ನಿ ನನ್ನ ಮೂಲಕ ಪ್ರಯಾಣ ಮಾಡಿ, ನಾನು ನಿಮ್ಮನ್ನು ನಿಮ್ಮ ಗಮ್ಯಕ್ಕೆ ತಲುಪಿಸುತ್ತೇನೆ ಎನ್ನುವ ಯಾವ ಸೂಪರ್ ಹೈ ವೇ, ರೆಡಿಮೇಡ್ ಹೆದ್ದಾರಿ ನಮಗಾಗಿ ಕಾಯುತ್ತಿಲ್ಲ. ಹಾಗೇನಾದರೂ ಸಾಧ್ಯವಾಗಿದ್ದರೆ ಈಗಾಗಲೇ ಎಲ್ಲ ತಮ್ಮ ತಮ್ಮ ಗುರಿಗಳನ್ನು ಮುಟ್ಟಿರುತ್ತಿದ್ದರು.

ದಾರಿ ನಿರ್ಮಾಣವಾಗುವುದು ನಿಮ್ಮ ಪ್ರಯಾಣದ ಮೂಲಕ, ಅದು ನಿಮಗಾಗಿ ಕಾಯುತ್ತಿಲ್ಲ. ನಿಮ್ಮ ಪ್ರಯಾಣಕ್ಕಾಗಿ ನೀವು ಮೊದಲ ಹೆಜ್ಜೆಯನ್ನು ಎತ್ತಿದಾಗಲೇ ನಿಮಗೆ ದಾರಿಯ ಕುರುಹುಗಳು ಕಾಣಿಸಿಕೊಳ್ಳತೊಡಗುತ್ತವೆ. ದಾರಿ ನಿಮ್ಮ ಒಳಗಿಂದ ಹೊರಬರುತ್ತಿದೆ. ಥೇಟ್ ಜೇಡರ ಬಲೆಯಂತೆ. ನಿಮ್ಮ ದಾರಿಯನ್ನ ನೀವೇ ಕಟ್ಟಿಕೊಳ್ಳುತ್ತಿದ್ದೀರಿ. ನೀವು ಕಟ್ಟಿಕೊಂಡ ದಾರಿಯಲ್ಲಿ ಪ್ರಯಾಣ ಸಾಗುತ್ತಿದ್ದಂತೆಯೇ ನಿಮ್ಮಿಂದ ಹೆಚ್ಚು ಹೆಚ್ಚು ದಾರಿ ಸಿದ್ಧವಾಗುತ್ತ ಹೋಗುತ್ತದೆ.

ನೆನಪಿರಲಿ, ನೀವು ಮುಂದೆ ಮುಂದೆ ಸಾಗುತ್ತಿದ್ದಂತೆಯೇ ಹಿಂದಿನಿಂದ ನೀವು ಬಂದ ದಾರಿ ಕಣ್ಮರೆಯಾಗುತ್ತ ಹೋಗುತ್ತದೆ. ಬೇರೆ ಯಾರೂ ಆ ದಾರಿಯಲ್ಲಿ ಪ್ರಯಾಣ ಮಾಡುವ ಹಾಗಿಲ್ಲ. ಈ ದಾರಿಯಲ್ಲಿ ಬನ್ನಿ ಎಂದು ನೀವು ಯಾರಿಗೂ ಹೇಳುವ ಹಾಗಿಲ್ಲ, ಆ ದಾರಿಯನ್ನ ಬಾಡಿಗೆ ಕೊಡುವ ಹಾಗಿಲ್ಲ.

ಆದ್ದರಿಂದಲೇ ಮಾಸ್ಟರ್ ಹೇಳುವುದು : ದಾರಿ ಯಾವುದು ಎನ್ನುವ ಪ್ರಶ್ನೆ ಅಸಂಬದ್ಧ, ಮೂರ್ಖತನದ್ದು. ನೀವೇ ದಾರಿಗೆ ಕಾರಣಕರ್ತರು !

“ ಈ ವಿಷಯ ಅರ್ಥ ಆಯಿತು ಆದರೆ ನೀನು ಬೆಟ್ಟ ಗುಡ್ಡಗಳ ಬಗ್ಗೆ ಹೇಳಿದ್ದು ಯಾಕೆ ? “ ಶಿಷ್ಯ ಮತ್ತೆ ಪ್ರಶ್ನೆ ಮಾಡಿದ.

ಮಾಸ್ಟರ್ ಹೇಳಿದ : ಮಾಸ್ಟರ್ ಬೆಟ್ಟ ಗುಡ್ಡಗಳ ಬಗ್ಗೆ ಮಾತನಾಡಲೇಬೇಕು. ಬೆಟ್ಟ ಗುಡ್ಡಗಳನ್ನು ದಾಟದೇ ಹೋದರೆ ದಾರಿ ಕಾಣುವುದೇ ಇಲ್ಲ. ದಾರಿ ಇರುವುದೇ ಬೆಟ್ಟ ಗುಡ್ಡಗಳ ಆಚೆ. ಆದರೆ ಬೆಟ್ಟ ಗುಡ್ಡಗಳು ಎಷ್ಟು ಮನೋಹರವೆಂದರೆ ಎಲ್ಲರೂ ಈ ಸೌಂದರ್ಯದಲ್ಲೇ ಕಳೆದುಹೋಗುತ್ತಾರೆ. ಯಾರೂ ಇವುಗಳನ್ನ ದಾಟುವ ಮನಸ್ಸು ಮಾಡುವುದಿಲ್ಲ.

ಮಾಸ್ಟರ್ ಗೆ ನಿಮ್ಮ ನಿಜದ ಅವಶ್ಯಕತೆಯ ಬಗ್ಗೆ ಗೊತ್ತು . ನೀವು ತಪ್ಪು ಪ್ರಶ್ನೆ ಕೇಳುತಿದ್ದೀರಿ ಎನ್ನುವುದೂ ಗೊತ್ತು. ಆದ್ದರಿಂದಲೇ ಅವನು ನಿಮ್ಮ ನಿಜದ ಅವಶ್ಯಕತೆಯತ್ತ ಬೊಟ್ಟು ಮಾಡಿ ತೋರಿಸಿ ಉತ್ತರಿಸುತ್ತಿದ್ದಾನೆ. ನಿಮ್ಮ ಪ್ರಶ್ನೆ ಸುಸಂಬದ್ಧವಾಗಿರಬಹುದು ಅಥವಾ ಅಸಂಬದ್ಧವಾಗಿರಬಹುದು ಆದರೆ ಮಾಸ್ಟರ್ ಗೆ ಇದರಲ್ಲಿ ಆಸಕ್ತಿ ಇಲ್ಲ. ಮಾಸ್ಟರ್ ನ ಆಸಕ್ತಿ ನಿಮ್ಮಲ್ಲಿ. ಆತ ನಿಮ್ಮನ್ನು ಅಲ್ಲಾಡಿಸುತ್ತಿದ್ದಾನೆ. ಆದರೆ ಬುದ್ಧಿಯ ಬೆನ್ನೇರಿದವರು ಮಾಸ್ಟರ್ ನ ಉತ್ತರವನ್ನು ಮಿಸ್ ಮಾಡಿಕೊಳ್ಳುತ್ತಾರೆ.

Leave a Reply