ನೀ ದಯದಿ ನಿಲುಗದವ ತೆರೆಯಯ್ಯ : ಧನುರ್ ಉತ್ಸವ ~ 16

ಧನುರ್ ಉತ್ಸವ ವಿಶೇಷ ಸರಣಿಯ ಹದಿನಾರನೇ ಕಂತು ಇಲ್ಲಿದೆ…। ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಹದಿನಾರನೇಯ ದಿನ

ನಾಯಕನಾಗಿ ನಿಂತ ನಂದಗೋಪನ ಮಂದಿರವ ಕಾಯ್ವವನೇ

ಪಟ ಕಾಣುತಿಹ ತೋರಣದ ಬಾಗಿಲನು ಕಾಯ್ವವನೇ

ಮಣಿಕದದ ಚಿಲಕವನು ತೆಗೆಯಯ್ಯ

ಗೋಪಕನ್ಯೆಯರೆಮಗೆ ಒಳಿತು ಮಾಡುವುದಾಗಿ

ಮಾಯಾವಿ ಮಣಿಬಣ್ಣ ನಿನ್ನೆಯೇ ಮಾತಿತ್ತಿರುವ

ಶುದ್ಧದಿಂ ಬಂದಿಹೆವು ಉದಯಗೀತೆಯ ಹಾಡೆ

ಬಾಯಿಂದ ಮೊದಮೊದಲೇ ತಡೆಯದೆಯೇ ಒಡೆಯನೇ

ನೀ ದಯದಿ ನಿಲುಗದವ ತೆರೆಯಯ್ಯ ನಮ್ಮೀ ಪವಿತ್ರ ಸಾರ್ಥಕವು

-ಬಿಂದಿಗನವಲೆ ನಾರಾಯಣಸ್ವಾಮಿ  (ಯಾಮನ್ ಕಲ್ಯಾಣಿ ರಾಗ – ಆದಿ ತಾಳ)

ನಮಗೆಲ್ಲಾ ಕಾವಲು ನಾಯಕನಾಗಿ ಇರುವ ನಂದಗೋಪನ ಮಾಳಿಗೆಯನ್ನು ಕಾಯುವ ಕಾವಲುಗಾರನೇ !

ಧ್ವಜ ತೋರಣ ಕಟ್ಟಿರುವ ದ್ವಾರಕ್ಕೆ ಕಾವಲಾಗಿ ನಿಂತವನೇ!

ಮಣಿಗಳಿಂದ ಕೂಡಿದ ಮಾಳಿಗೆಯ ಬಾಗಿಲನ್ನು ತೆರೆಯುವಂತವನಾಗು !

ಮಾಯ ಕಾರ್ಯಗಳನ್ನು ಮಾಡುವವನು, ಕಪ್ಪು ಬಣ್ಣದವನೂ ಆದ ಕೃಷ್ಣ ಯಾದವಕುಲದ ಬಾಲಕಿಯರಾದ ನಮಗಾಗಿ, ಶಬ್ಧಮಾಡುವ ತಮಟೆಯನ್ನು ತರುವುದಾಗಿ ನಿನ್ನೆಯೇ ಮಾತಿತ್ತಿರುವವನು. ಅವನನ್ನು ಹಾಡಿ ನಿದ್ರೆಯಿಂದೆಬ್ಬಿಸಿ ತಮಟೆಯನ್ನು ಪಡೆದುಹೋಗಲು ನಾವು ಮಿಂದು ಬಂದಿಹೆವು.

ನಿನ್ನ ಬಾಯಿ ತೆರೆದು ನಿರಾಕರಿಸದೆ, ನಮ್ಮ ಬೇಡಿಕೆಯನ್ನು ಸ್ವೀಕರಿಸಿ, ಮುಚ್ಚಿರುವ ಈ ಹೊಸಿಲ ಬಾಗಿಲನ್ನು ನಮಗಾಗಿ ತೆರೆಯುವಂತವನಾಗು” ಎಂದು ದ್ವಾರಪಾಲಕನನ್ನು ನೋಡಿ ಗೋದೈ ಹಾಡಿದ ಹಾಡಿದು!

“ತೋರಣದ ಬಾಗಿಲನ್ನು ಕಾಯುವವನೇ…”

ಧನುರ್ ಮಾಸದ ಮುಂಜಾವು ನಿದ್ರೆಯಿಂದೆದ್ದು, ತನ್ನ ಗೆಳತಿಯರನ್ನೂ ನಿದ್ರೆಯಿಂದೆಬ್ಬಿಸಿ, ಕೃಷ್ಣನ ಗುಡಿಗೆ ಕರೆತರುವ ಗೋದೈಗೆ, ಈಗ ಗುಡಿಯ ಬಾಗಿಲಲ್ಲಿರುವ ದ್ವಾರಪಾಲಕನನ್ನು ನೋಡಿದ ಕೂಡಲೇ, ಒಂದು ಹೊಸ ರೀತಿಯ ಭಯ ಉಂಟಾಗುತ್ತದೆ. ಕೃಷ್ಣ ನಿದ್ರಿಸುತ್ತಿದ್ದಾನೆ ಎಂದು ಗುಡಿಯ ದ್ವಾರಪಾಲಕ ನಿರಾಕರಿಸಿದರೆ ಏನು ಮಾಡುವುದು ಎಂದು ಆಲೋಚಿಸುತ್ತಾಳೆ. ಹೇಗೂ ಕೃಷ್ಣನನ್ನು ನೋಡದೆ ಹೋಗುವುದಿಲ್ಲ ಎಂಬ ನಿರ್ಧಾರದೊಂದಿಗೆ ಇರುವ ಗೋದೈ, ಆ ಗುಡಿಯ ಬಾಗಿಲಲ್ಲಿ ನಿಂತು ಕಾವಲುಕಾಯುವ ಕಾವಲುಗಾರ ನಿರಾಕರಿಸ ಕೂಡದೆಂದು, ‘ತೋರಣ ಕಟ್ಟಿರುವ ಸುಂದರವಾದ ಬಾಗಿಲಲ್ಲಿ ನಿಂತಿರುವ ದ್ವಾರಪಾಲಕನೇ…! ನಿನ್ನ ಅರಸನಾದ ಕೃಷ್ಣ ನಿದ್ರಿಸುತ್ತಿದ್ದಾನೆ ಎಂದು ನಮ್ಮನ್ನು ಒಳಗೆ ಹೋಗಲು ನಿರಾಕರಿಸಬೇಡ…!’ ಎಂದು ಬೇಡಿಕೊಳ್ಳುತ್ತಾಳೆ.

ಗೋದೈ ಕೇಳುವುದಿರಲಿ, ನಮಗೆ ಬೇರೆ ಸಂಶಯಗಳಲ್ಲವೇ ಹುಟ್ಟುತ್ತದೆ? ಕೃಷ್ಣ ಇರುವ ಜಾಗದಲ್ಲೇಕೆ ಕಾವಲುಗಾರರು? ಕೃಷ್ಣನೇ ರಕ್ಷಿಸುವ ಭಗವಂತನಾಗಿರುವಾಗ ಆ ದೇವರನ್ನು ಕಾಯಲು ಕಾವಲುಗಾರರ  ಅಗತ್ಯವಿದೆಯೇ? ಅದೂ ತೋರಣ ಕಟ್ಟಿದ ಬಾಗಿಲಲ್ಲಿ ಎನ್ನುತ್ತಾಳಲ್ಲ ಗೋದೈ.

ನಿಜವಾಗಲೂ ತೋರಣ ಎಂಬುದನ್ನು ‘ಕಾಪು’ ಎಂದಲ್ಲವೇ ಹೇಳುತ್ತೇವೆ. ಹಾಗಾದರೆ ತೋರಣ ಮತ್ತು ಕಾವಲುಗಾರ ಎಂದು ಭಗವಂತನಿಗೆ ಎರಡು ಹಂತದ ರಕ್ಷಣೆಯ ಅಗತ್ಯವಿದೆಯೇ ಏನು?

ಆಲೋಚನೆ ಮಾಡಿ ನೋಡಿದರೆ, ತೋರಣಗಳು ನಮ್ಮ ಸಂಸ್ಕೃತಿಯ ಗುರುತು ಮಾತ್ರವಲ್ಲ. ನಮಗೆ ರಕ್ಷಣೆ ನೀಡುವಂತಹವು ಸಹ.

ದೇವಸ್ಥಾನಗಳಲ್ಲಿ ಮಾತ್ರವಲ್ಲ, ಮನೆಗಳಲ್ಲೂ ಮಂಗಳಕರವಾದ ದಿನಗಳಲ್ಲಿ ಬಳಸುವ ತೋರಣಕ್ಕೆ ಮಾವಿನ ಎಲೆಯನ್ನು ಉಪಯೋಗಿಸುತ್ತೇವೆ. ವಾರಣ ಸಾವಿರದಲ್ಲಿಯೂ ಸಹ,

“ಬಂಗಾರದ ಪೂರ್ಣ ಕಲಶವಿಟ್ಟು, ತೋರಣ ಕಟ್ಟುವ ಕನಸು ಕಂಡೇ….” ಎಂದು ತೋರಣದೊಂದಿಗೆ ಗೋದೈಯ ವಿವಾಹದ ಆಚರಣೆ ತೊಡಗುತ್ತದೆ.

ಈ ರಕ್ಷಣೆಯ ತೋರಣಗಳು ನಮ್ಮನ್ನು ದುರ್ದೇವತೆಗಳು ಸಮೀಪಸದಂತೆ ತಡೆಯುವ ಶಕ್ತಿಯನ್ನು ಹೊಂದಿರುವವು ಎಂಬುದು ನಂಬಿಕೆ.

ತೋರಣಕ್ಕೆ ಯಾಕೆ ಮಾವಿನ ಎಲೆ ಎಂದರೆ, ಅದು ಕೇವಲ ಲಕ್ಷ್ಮೀಕರ ಮಾತ್ರವಲ್ಲ, ಪ್ರಕೃತಿಯಲ್ಲಿ ಮಾವಿನ ಎಲೆ ಎಂದಿಗೂ ಕೊಳತು ಹೋಗುವುದಿಲ್ಲ. ಕ್ರಮವಾಗಿ ಒಣಗಿ, ನಂತರ ತರಗೆಲೆಯಾಗುತ್ತದೆ. ಅದೇ ರೀತಿ ಬದುಕೂ ಹಾಳಗದೆ ಧೀರ್ಘ ಕಾಲ ಒಳ್ಳೆಯ ರೀತಿಯಲ್ಲಿ ಬದುಕಬೇಕೆಂಬ ನಂಬಿಕೆಯಿಂದ ಮಂಗಳ ಉಂಟಾಗಲು ಮಾವೆಲೆಯ ತೋರಣವನ್ನು ಕಟ್ಟುತ್ತೇವೆ.

ಅದಲ್ಲದೆ, ಮಾವಿನ ಎಲೆ ಒಂದು ಕ್ರಿಮಿ ನಾಶಿನಿ. ಗಾಳಿಯ ಮೂಲಕ ಹರಡುವ ಕ್ರಿಮಿಗಳನ್ನು ಅಳಿಸುವ ಶಕ್ತಿಯುಳ್ಳದ್ದು. ಮಾವಿನ ಎಲೆಯಲ್ಲಿ ತುಂಬಿರುವ ತಾವರಸತ್ವಗಳಾದ Flavanoids (ಪ್ಲೆವಿನಾಯಿಡ್- ಕೆಲ್ವು ಸಸ್ಯಗಳಲ್ಲಿ ಕಂಡು ಬರುವ ಫೀನಾಲಯುಕ್ತ ಸಂಯುಕ್ತ) Pholyphenols (ಪಾಲಿಫೀನಾಯಿಲ್)  ಮುಂತಾದ, ಸೂಕ್ಷ್ಮ ಕಣಗಳನ್ನು ಅಳಿಸುವುದಲ್ಲದೆ, ಧೀರ್ಘ ಕಾಲದ ಶ್ವಾಸಕೊಳವೆಗಳ ಉರಿಯೂತ, ಅತಿಸಾರ, ಸಕ್ಕರೆ ಖಾಯಿಲೆ ಮುಂತಾದುವುಗಳಿಗೆ ದಿವ್ಯವೌಷಧ ಎನ್ನುತ್ತದೆ ಪ್ರಕೃತಿ ಚಿಕಿತ್ಸೆ.

ದೇವಸ್ಥಾನಗಳಲ್ಲಿ ಮೊದಲ ಹಂತದಲ್ಲಿ ಕಣ್ಣಿಗೆ ಕಾಣದವುಗಳನ್ನು ತಡೆಯುವ ಈ ಮಾವಿನ ಎಲೆಯ ತೋರಣ, ಮುಂದಿನ ಹಂತದಲ್ಲಿ ಕಣ್ಣಿಗೆ ಕಾಣುವ ವೈರಿಗಳನ್ನು ಒಳಗೆ ಬಿಡದೆ ಕಾಯುತ್ತ ನಿಲ್ಲುವ ಕಾವಲುಗಾರರಾಗಿ ಇಬ್ಬರು ದ್ವಾರಪಾಲಕರು ನಿಂತಿರುತ್ತಾರೆ.

ದೇವಾಲಯದೊಳಗೆ ಪ್ರವೇಶ ಮಾಡುವುದಕ್ಕೆ ಮೊದಲು, ಕಾವಲುಗಾರರಾದ ದ್ವಾರಪಾಲಕರನ್ನು ವಂದಿಸಿ, ಅನುಮತಿಪಡೆದ ನಂತರವೇ, ದೇವಸ್ಥಾನದೊಳಗೆ ಹೋಗಬೇಕು ಎಂಬುದು ಸಂಪ್ರದಾಯ. ವಿಷ್ಣು ದೇವಸ್ಥಾನಗಳಲ್ಲಿ ಮಾತ್ರವಲ್ಲ. ಶಿವ ಮತ್ತು ಅಮ್ಮನವರ ಗುಡಿಗಳಲ್ಲೂ ಮುಂಬಾಗಿಲಿನ ಎರಡೂ ಕಡೆಗಳಲ್ಲಿ ಕಾಣುವ ಕಾವಲು ದೇವತೆಗಳಾದ ದ್ವಾರಪಾಲಕರು ಇರುತ್ತಾರೆ.

ಶಿವನ ಗುಡಿಯಲ್ಲಿರುವ ಪಾಲಕರನ್ನು ಶುಂಭ, ನಿಶುಂಭ ಎಂದೂ, ಅಮ್ಮನ ಗುಡಿಯ ಬಾಗಿಲನ್ನು ಕಾಯುವ ದ್ವಾರಪಾಲಕರನ್ನು ಹರಭದ್ರ, ಸುಭದ್ರ ಎಂದು ಕರೆಯುವಂತೆ, ಮಹಾವಿಷ್ಣುವಿನ ಆಲಯಗಳಲ್ಲಿ ನಿಂತಿರುವ ದ್ವಾರಪಾಲಕರನ್ನು ಜಯ, ವಿಜಯ ಎಂದು ಕರೆಯಲ್ಪಡುತ್ತಾರೆ.

ಈ ಜಯ, ವಿಜಯ ಮುಂತಾದವರು ಭೂಲೋಕದ ದೇವಸ್ಥಾನಗಳಲ್ಲಿ ಮಾತ್ರವಲ್ಲ, ವೈಕುಂಠದಲ್ಲೂ ತಮ್ಮ ದೇವರಾದ ಪರಂದಾಮನಿಗೆ ವೈರಿಗಳಿಂದ ಯಾವ ಕಾಟವೂ ಬರದಂತೆ ರಕ್ಷಿಸುವುದು ಇವರ ಕೆಲಸ.

ಕಾಲನಂತೆಯೇ ಕರ್ತವ್ಯದಲ್ಲಿ ಎಂದಿಗೂ ತಪ್ಪದವರು ದ್ವಾರಪಾಲಕರು ಎನ್ನುತ್ತಾರೆ. ಸದಾ ಅವರ ಕರ್ತವ್ಯಗಳನ್ನು ಸರಿಯಾಗಿ ಮಾಡುವ ಅವರಿಗೂ ಆ ದಿನ ಒಂದು ದೊಡ್ಡ ಗಂಡಾಂತರವಾಯಿತು.

ಅಂದು, ಸೃಷ್ಟಿಕರ್ತನಾದ ಬ್ರಹ್ಮನ ಪುತ್ರರಾದ ಸನಕ, ಸನಂದನ, ಸನತ್ಕುಮಾರ ಮತ್ತು ಸನತ್ಸುಜಾತ ಮುಂತಾದ ನಾಲ್ವರು ಶ್ರೀನಿವಾಸನ ದರ್ಶನಕ್ಕಾಗಿ ವೈಕುಂಠಕ್ಕೆ ಹೋಗಿರುತ್ತಾರೆ. ಬ್ರಹ್ಮ ಪುತ್ರರು ನಾಲ್ಕು ಜನ ಭಗವಂತನಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡವರು. ಎಲ್ಲೂ ತಡೆಯಿಲ್ಲದೆ ಹೋಗುವ ವರವನ್ನು ಪಡೆದವರು. ಆದರೆ ಅಂದು ಅವರು ವೈಕುಂಠದ ಕೊನೆಯ ದ್ವಾರವಾದ ಏಳನೇಯ ಬಾಗಿಲನ್ನು ಹಾದುಹೋಗುವಾಗ ಹೊಸಿಲನ್ನು ಕಾಯುತ್ತ ನಿಂತಿದ್ದ ಜಯ, ವಿಜಯ ಇಬ್ಬರೂ ಅವರನ್ನು ಒಳಗೆ ಹೋಗದೆ ತಡೆಯುತ್ತಾರೆ.

ಇದರಿಂದ ಕೋಪಗೊಂಡ ಬ್ರಹ್ಮ ಪುತ್ರರು ಜಯ, ವಿಜಯರ ಬಳಿ ‘ದುಷ್ಟರನ್ನು ತಡೆಯುವುದು ಮಾತ್ರವಲ್ಲವೇ ನಿಮ್ಮ ಕರ್ತವ್ಯ…? ಯಾವುದರ ಮೇಲೂ ಆಸೆ ಪಡದೇ ಭಗವಂತನನ್ನು ಮಾತ್ರವೇ ಧ್ಯಾನಿಸುವ ಬ್ರಹ್ಮ ಪುತ್ರರಾದ ನಮ್ಮನ್ನು ಯಾಕೆ ತಡೆಯುತ್ತಿದ್ದೀರಿ? ಅಪರಾಧ ಎಸಗದ ನಮ್ಮನ್ನು ಯಾಕೆ ತಡೆಯುತ್ತೀರಿ? ತಪ್ಪು ಮಾಡದ ಭಕ್ತರಾದ ನಮ್ಮನ್ನು ನೀವು ಏಳನೇಯ ಬಾಗಿಲಿನಲ್ಲಿ ತಡೆದು ನಿಲ್ಲಿಸಿದ ಪಾಪಕ್ಕೆ ನೀವಿಬ್ಬರೂ ಏಳು ಜನ್ಮಗಳಲ್ಲಿ ಭೂಮಿಯಲ್ಲಿ ಹುಟ್ಟಿ ಸಕಲ ಕಷ್ಟಗಳನ್ನೂ ಅನುಭವಿಸುವಂತವರಾಗಿ….” ಎಂದು ಶಪಿಸಿಬಿಡುತ್ತಾರೆ.

ತಮ್ಮ ತಪ್ಪನ್ನು ಅರಿತುಕೊಂಡ ದ್ವಾರಪಾಲಕರು, ಆ ಬ್ರಹ್ಮ ಪುತ್ರರ ಬಳಿಯೂ, ಮಹಾವಿಷ್ಣುವಿನ ಬಳಿಯೂ ಕ್ಷಮೆಯನ್ನೂ, ಶಾಪ ವಿಮೋಚನೆಯನ್ನು ಬೇಡಿ ನಿಂತಾಗ ಭಗವಂತ, “ಇವರ ಶಾಪವನ್ನು ನನ್ನಿಂದ ತೊಡೆಯಲು ಸಾಧ್ಯವಿಲ್ಲ. ನೀವಿಬ್ಬರೂ ಭೂಲೋಕದಲ್ಲಿ ಹುಟ್ಟಿಯೇ ತೀರಬೇಕು. ಆದರೆ ನಿಮಗಾದ ಶಿಕ್ಷೆ  ಕಡಿಮೆಯಾಗಲು ಎರಡು ಅವಕಾಶಗಳನ್ನು ನೀಡುತ್ತೇನೆ. ಅದರಲ್ಲಿ ನಿಮಗೆ ಇಷ್ಟವಾದ ಒಂದನ್ನು ಆಯ್ಕೆ ಮಾಡಿ ನನಗೆ ತಿಳಿಸಿ…!  ಭಕ್ತರಾಗಿ ಏಳು ಜನ್ಮಗಳು ನನ್ನನ್ನು ಪೂಜಿಸಿ, ನನ್ನನ್ನು ಸೇರಲು ಇಷ್ಟವೇ…? ಅಥವಾ ಅಸುರರಾಗಿ ಮೂರು ಜನ್ಮಗಳನ್ನು ತಾಳಿ, ನನ್ನನ್ನು ಎದುರಿಸಿ ಮತ್ತೆ ವೈಕುಂಠಕ್ಕೆ ಬಂದು ಸೇರುವ ಬಯಕೆಯೇ…? ಎಂದು ಕೇಳಲು,

ಅದಕ್ಕೆ ಆ ದ್ವಾರಪಾಲಕರು, “ಏಳು ಯುಗಗಳು, ಏಳು ಜನ್ಮ ನಿನ್ನನ್ನು ವಂದಿಸಿ, ಮೋಕ್ಷ ಪಡೆಯಲು ಬಹಳ ಕಾಲ ಬೇಕಾಗುತ್ತದೆ…. ನಿನ್ನನ್ನು ಎದುರುಹಾಕಿಕೊಂಡರೆ, ನಿನ್ನ ಕೈಯಿಂದ ಅಳಿದು, ಶೀಘ್ರವಾಗಿ ಬಂದು ಸೇರುತ್ತೇವಲ್ಲವೇ? ಆದ್ದರಿಂದ ನಮಗೆ ಮೂರು ಜನ್ಮಗಳು ನಿನ್ನನ್ನು ಎದುರಿಸಿ ನಿಲ್ಲುವ ವರವನ್ನು ನೀಡುವಂತವನಾಗು..! ಎಂದು ಭಗವಂತನ ಬಳಿ ಬೇಡಿಕೊಳ್ಳುತ್ತಾರೆ.

ಅವರ ಮನವಿಯಂತೆ ಜಯವಿಜಯರು ಎಂಬ ಇಬ್ಬರೂ ಕೃತ ಯುಗದಲ್ಲಿ ಹಿರಣ್ಯಾಕ್ಷ, ಹಿರಣ್ಯಕಶ್ಯಿಪು ಎಂದೂ ತ್ರೇತಾ ಯುಗದಲ್ಲಿ ರಾವಣ, ಕುಂಭಕರ್ಣ ಎಂದೂ, ದ್ವಾಪರ ಯುಗದಲ್ಲಿ ಶಿಶುಪಾಲ, ದಂತವಿಕ್ರಮ ಎಂಬ ಅಸುರರಾಗಿ ಮೂರು ಸಲ ಜನ್ಮತಾಳಿ  ಭಗವಂತನನ್ನು ಎದುರಿಸಿ ಹೋರಾಡಿ ಮೋಕ್ಷ ಪಡೆದು, ವೈಕುಂಠಕ್ಕೆ ಮತ್ತೆ ಮರಳಿ ತಮ್ಮ ಕಾವಲು ಕಾರ್ಯವನ್ನು ಮುಂದುವರೆಸುತ್ತಾರೆ.

ಭಗವಂತನ ಕಾವಲುಗಾರರಾದ ಈ ಜಯ ವಿಜಯ ಇಬ್ಬರ ಪ್ರತಿಮೆಯನ್ನು ದೇವಸ್ಥಾನಗಳಲ್ಲಿ ಗಮನಿಸಿ ನೋಡಿದರೆ, ಇಬ್ಬರಲ್ಲಿ ಒಬ್ಬರು ತೋರುಬೆರಳನ್ನು ತೋರಿಸುತ್ತಲೂ, ಮತ್ತೊಬ್ಬರು ತನ್ನ ಕೈಯನ್ನು ಬಿಚ್ಚಿ ತೋರಿಸುತ್ತಲೂ ನಿಂತಿರುವುದು ಕಾಣುತ್ತದೆ. ಅದು ಒಳಗೆ ಪೂಜಿಸಲು ಹೋಗುವ ಭಕ್ತರಿಗೆ, ‘ಏಕಂ ಏಕ ಅದ್ವಿನೀಯಂ ಬ್ರಹ್ಮಂ’ ಅಂದರೆ ‘ದೇವರು ಒಬ್ಬನೇ’ ಎಂಬುದನ್ನೂ ‘ದೇವರೊಬ್ಬನನ್ನು ಬಿಟ್ಟರೆ ಬೇರಿಲ್ಲ’ ಎಂಬುದನ್ನೂ ತಿಳಿಸುತ್ತದೆ.

ಶಂಕು, ಚಕ್ರ ಗದಾಯುಧದೊಂದಿಗೆ ಕಾವಲು ಕಾಯುತ್ತಾ ಇವರಿಬ್ಬರೂ, ಕರ್ತವ್ಯದಲ್ಲಿ ಎಂತಹ ಕರುಣೆಯನ್ನೂ ತೋರದ, ಅತಿ ಕಠಿಣವಾದವರು ಎಂಬುದರಿಂದ ಗೋದೈ ಅವರ ಬಳಿ ಅಷ್ಟು ನಾಜೂಕಾಗಿ ಅನುಮತಿ ಕೇಳುತ್ತಾಳೆ. ಒಮ್ಮೆ ಇವರು ಕರ್ತವ್ಯದಲ್ಲಿ ತೋರಿದ ಕಠಿಣತೆ, ಗರುಡಾಳ್ವಾರನ್ನೇ, ಭಗವಂತನಿಂದ ದೂರಮಾಡಲು ಪ್ರಯತ್ನಿಸಿತು ಎನ್ನುತ್ತದೆ ಪುರಾಣ ಕಥೆ.

ನಾರಾಯಣನ ವಾಹನವಾದ ಗರುಡ, ಒಮ್ಮೆ ಶನಿಯಿಂದ ಪೀಡಿಸಲ್ಪಟ್ಟಾಗ, ಆ ಸಮಯ ವೈಕುಂಠಕ್ಕೆ ಬಂದ ಗರುಡನ ಬಳಿ ಜಯ ವಿಜಯರು, ‘ಗರುಡ…. ತಮಗೆ ಸಧ್ಯಕ್ಕೆ ಶನಿ ದೋಷ ಇರುವುದರಿಂದ ಶ್ರೀವಿಷ್ಣು ಸ್ವಲ್ಪ ಸಮಯ ಕಳೆದು ಬರುವಂತೆ ಹೇಳಿದ್ದಾರೆ…!’ ಎಂದು ತಡೆದರು. ಸದಾ ಕರುಣಾಮಯಿಯಾದ ಗರುಡ, ಶನಿಯ ಹಿಡಿತದಲ್ಲಿ ಇದ್ದುದರಿಂದ ತಕ್ಷಣ ಕೋಪಗೊಂಡು, ‘ನನ್ನನ್ನೇ ಬರಬೇಡವೆಂದು ಹೇಳಿದರೆ ಆ ಶ್ರೀನಿವಾಸ..? ಇನ್ನು ಮುಂದೆ ಅವರಿಗೆ ನಾನು ವಾಹನವಾಗಿ ಇರುವುದಿಲ್ಲ…’ ಎಂದು ಕೋಪದಿಂದ ನುಡಿದು, ಅಲ್ಲಿಂದ ಹೊರಟುಹೋಗುತ್ತಾನೆ.

ಗರುಡ ದೇವರಿಂದ ದೂರವಾದರೆ, ಅವನನ್ನು ಹಿಡಿಯುವುದು ಸುಲಭ ಎಂಬುದರಿಂದ, ಆ ಗಳಿಗೆಗಾಗಿಯೇ ಕಾಯುತ್ತಿದ್ದ ಶನಿ ಭಗವಂತನೂ, ಕಲಿಯುಗ ಪುರುಷನೂ ಗರುಡನ ಮೇಲೆ ತಮ್ಮ ಹಿಡಿತವನ್ನು ಬಿಗಿಮಾಡಲು ಯೋಜನೆ ಹಾಕಿದಾಗ, ನಡೆದದ್ದನ್ನು ಅರಿತಿದ್ದ ಆದಿಶೇಷ, ಶ್ರೀನಿವಾಸನಿಗೆ ತಿಳಿಯದೆ ಗರುಡನಿಗೆ ಒಳ್ಳೆಯ ಮಾತುಗಳನ್ನು ಹೇಳಿ, ಸಮಾಧಾನಮಾಡಿ, ಮತ್ತೆ ವೈಕುಂಠಕ್ಕೆ ಬರುವಂತೆ ಕರೆಯುತ್ತಾನೆ.

‘ಹೇಳುವವರು ಹೇಳಿದರೆ’ ಎನ್ನುತ್ತಾರಲ್ಲಾ… ಹಾಗೆ ಆದಿಶೇಷನ ಮಾತಿನಿಂದ ತನ್ನ ತಪ್ಪನ್ನು ಅರ್ಥ ಮಾಡಿಕೊಂಡ ಗರುಡ, ‘ಎಲ್ಲಾ ಈ ವಿಧಿಯಿಂದಲೂ, ಶನಿಯಿಂದಲೂ ಬಂದದ್ದು. ಇನ್ನು ಹೇಗೆ ವಿಷ್ಣುವನ್ನು ನೋಡುತ್ತೇನೆ’ ಎಂದು ದುಃಖಿತನಾಗಿ ಆದಿಶೇಷನೊಂದಿಗೆ ವೈಕುಂಠಕ್ಕೆ ಮರಳುತ್ತಾನೆ.

ವಿರೋಧಿಗಳಾದ ಹಾವು, ಗರುಡನು ಗೆಳೆಯರಾಗಿ ಒಂದಾಗಿ ಬರುವುದನ್ನು ನೋಡಿ ಆಶ್ಚರ್ಯಪಟ್ಟ ಜಯ ವಿಜಯರು ಈಗ ಗರುಡನನ್ನು ತಡೆಯದೆ ಅನುಮತಿಸಲು, ಅಲ್ಲಿ ಏನಾದರೂ ನಡೆದರೆ ಮತ್ತೆ ಗರುಡನನ್ನು ಹಿಡಿದುಕೊಳ್ಳಲು ಕಾಲ ಪುರುಷನೊಂದಿಗೆ ಬಂದ ಶನೀಶ್ವರನನ್ನು ಮಾತ್ರ ಹೊಸಿಲಿನಲ್ಲೇ ತಡೆದು ಹಿಂತಿರುಗಿ ಕಳುಹಿಸುತ್ತಾರೆ.

ಹೌದು, ಪರಂದಾಮನಿಗೆ ಆಗದವರನ್ನು ಒಳಗೆ ಅನುಮತಿಸದೆ, ಅದೇ ಸಮಯ ಅವರ ಭಕ್ತರು, ಅವರನ್ನು ಬಿಟ್ಟು ದೂರ ಹೋಗದಿರಲು ಕಾಯುವುದೇ, ನಿಜವಾಗಲೂ ಈ ದ್ವಾರಪಾಲಕರ ಕರ್ತವ್ಯವಾಗುತ್ತದೆ.

ವೈಕುಂಠದಲ್ಲೇ ಹೀಗಿರುವಾಗ, ಯಾವ ಸಮಯದಲ್ಲೂ ಕೃಷ್ಣನನ್ನು ಕೊಲ್ಲಲು ಅಸಂಖ್ಯಾತ ಅಸುರರು ಬರುವ ಗೋಕುಲದಲ್ಲಿ ಇವರು ಎಷ್ಟು ಕಠಿಣವಾಗಿ ಇದ್ದಿರಬಹುದು? ಕೃಷ್ಣನನ್ನು ಮಾತ್ರವಲ್ಲ ಅವರ ಭಕ್ತರನ್ನೂ ಕಾಯಬೇಕು ಎನ್ನುವಾಗ ಜಯ ವಿಜಯರಿಗೆ ಕೆಲಸ ಇನ್ನೂ ಹೆಚ್ಚಾಗಲ್ಲವೇ ಇರುತ್ತದೆ?

ಆದ್ದರಿಂದಲೇ, ಕಣ್ಣಿಗೆ ಕಾಣಿಸದ ವೈರಿಗಳನ್ನು ಅಳಿಸಿಬಿಡುವ ಕಾಪು ತೋರಣ ಕಟ್ಟಿದ ಹೊಸಿಲಿನಲ್ಲಿ ನಿಂತಿರುವ ಕಣ್ಣಿಗೆ ಕಾಣುವ ವೈರಿಗಳನ್ನು ಅಳಿಸುವ ಜಯ ವಿಜಯರ ಬಳಿ ವಿನಯದಿಂದ, ತಮ್ಮ ಎಲ್ಲರ ಮೇಲೂ ನಂಬಿಕೆ ಉಂಟಾಗುವಂತೆ ಕಾರಣಗಳನ್ನು ಹೇಳಿ, ಹದಿನಾರನೇಯ ದಿನ ಕೃಷ್ಣನಿರುವ ಮನೆಯಾದ ಅವನ ಗುಡಿಯ ಹೆಬ್ಬಾಗಿಲನ್ನು ತೆರೆದುಬಿಡುವಂತೆ ಹಾಡಿ ಬೇಡುತ್ತಾಳೆ ಗೋದೈ ಆಂಡಾಳ್!

                                                                      ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply