ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತೊಂದನೇ ಕಂತು ಇಲ್ಲಿದೆ… ।
ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ
ಧನುರ್ ಉತ್ಸವ ಇಪ್ಪತ್ತೊಂದನೇಯ ದಿನ
ಇಟ್ಟ ಪಾತ್ರೆಗಳೆಲ್ಲ ಉಕ್ಕಿ ಹೊರ ಚೆಲ್ವ ತೆರದಿ
ತಡೆಯಿಲ್ಲದೆಯೆ ಹಾಲ್ಕರೆವ ಔದಾರ್ಯದೀ ದೊಡ್ಡ ಹಸುಗಳ
ವಿಶೇಷದಿಂ ಪಡೆದಿರುವವನ ಮಗನೇ ಎಚ್ಚರಗೊಳ್ಳೊ
ನಂಬಿರುವವರ ರಕ್ಷಿಪನೇ ಹಿರಿಯರ್ಗೆ ಹಿರಿಯನೇ
ಲೋಕದೊಳು ಅವತರಿಸಿ ನಿಂತ ಸೊಡರೇ ನಿದ್ದೆ ತೊರೆದೇಳು
ಅರಿಗಳೆಲ್ಲರು ನಿನಗೆ ತಲೆವಡಗಿ ನಿನ್ನ ಮನೆಬಾಗಿಲೊಳು
ಅಗಲದೆಯೆ ಬಂದು ನಿನ್ನಡಿಗಳನು ಸೇವಿಸುವತೆರೆದಿ
ಮಂಗಳವ ಹಾಡೇ ನಾವ್ ಬಂದಿಹೆವು ಕೊಂಡಾಡೆ ನಮ್ಮೀ ಪವಿತ್ರ ವ್ರತವು ಸಾರ್ಥಕವು
-ಬಿಂದಿಗನವಲೆ ನಾರಾಯಣಸ್ವಾಮಿ (ಕಾಂಭೋದಿ ರಾಗ – ಆದಿ ತಾಳ)
“ಪಾತ್ರೆಗಳೆಲ್ಲ ಉಕ್ಕಿ ಹರಿಯುವಂತೆ ಹಾಲನ್ನು ನೀಡುವ ದಾನ ಪ್ರವೃತ್ತಿಯ ಹಸುಗಳನ್ನಿಟ್ಟಿರುವ ನಂದಗೋಪನ ಸುಪುತ್ರನೇ…ನಿದ್ದೆಯಿಂದೇಳುವಂತವನಾಗು….!
ಬಲವಂತನಾದವನೆ, ಎಲ್ಲರಿಗು ನಾಯಕನೇ, ಪ್ರಕಾಶವಾಗಿ ಜಗ ಪೂರ್ತಿ ತುಂಬಿರುವವನೇ… ಎದ್ದೇಳು.
ವೈರಿಗೆಳೆಲ್ಲರೂ ನಿನ್ನ ಬಳಿ ಸೋತು, ತಮ್ಮ ಶಕ್ತಿಯನ್ನೆಲ್ಲ ಕಳೆದುಕೊಂಡು, ನಿನ್ನ ಹೊಸಿಲ ಹುಡುಕಿಕೊಂಡು ಬಂದು ನಿನ್ನ ಪಾದಗಳೆಲ್ಲರಗಿ ಶರಣಾಗುವಂತೆ, ನಾವೂ ನಿನ್ನ ಪಾದಕಮಲಗಳಿಗೆ ನಮಸ್ಕರಿಸಿ ನಿನ್ನ ಸ್ತುತಿ ಹಾಡಲು ಬಂದಿಹೆವು….
ಹರ್ಷದಿಂದ ನೀನು ಎದ್ದು ಬಂದು ನಮಗೆ ಕೃಪೆ ತೋರುವಂತವನಾಗು…” ಎಂದು ಬೇಡುತ್ತಾಳೆ ಗೋದೈ ಆಂಡಾಳ್!
“ಲೋಕದೊಳು ಅವತರಿಸಿ ನಿಂತ ಸೊಡರೇ…”
ಜಗವೆಲ್ಲ ಜ್ಯೋತಿಯಾಗಿ ತುಂಬಿರುವ ನನ್ನ ಶ್ರೀಮನ್ ನಾರಾಯಣನೇ… ಎಂದು ಭಗವಂತನನ್ನು ಕರೆಯುತ್ತಾಳೆ ಗೋದೈ…
“ಸ್ವರ್ಣ ಸೂರ್ಯನಂತೆ ಕಂಗೊಳಿಸುವ,
ಶಂಖ ಚಕ್ರದಾರಿಯಾದ ಸಾಗರ ನೀಲ ಭಗವಂತನೊಂದಿಗೆ,
ಕಮಲವಾಸಿನಿಯನ್ನು ನಾನಿಂದು ಕಂಡೆ”
ಎಂದು ಪೇಯಾಳ್ವಾರೂ ಪರಂದಾಮನನ್ನು ಮಹಾಜ್ಯೋತಿಯಾಗಿಯೇ ಕಾಣುತ್ತಾರೆ.
ಜ್ಯೋತಿಯಾಗಿ ಮಾತ್ರವಲ್ಲದೆ, ವೈರಿಗಳಿಗೆ ಬೆಂಕಿಯಾಗಿಯೂ, ಉಳಿದವರಿಗೆ ಕಿಬ್ಬೊಟ್ಟೆಯ ಅಗ್ನಿಯಾಗಿಯೂ ಇದ್ದು, ನಮಗೆ ಮಾರ್ಗದರ್ಶನ ನೀಡುವವನು, ಅಗ್ನಿಯಾಸುರನಾದ ನಮ್ಮ ನಾರಾಯಣನೇ!
ದೇವತೆಗಳಿಗೆಲ್ಲ ನಾಯಕ, ಅಂತಹ ದೇವಾಧಿ ದೇವನನ್ನು ಅಗ್ನಿಯಾಸುರ ಎಂದು ಅಸುರರಲ್ಲಿ ಒಬ್ಬನಾಗಿ ಹೇಳಬಹುದೇ ಎಂದರೆ, ಹಾಗೆ ಸಂಭವಿಸಿದ ಘಟನೆಯೊಂದರ ಉಲ್ಲೇಖವಿದೆ ನಮ್ಮ ಪುರಾಣ ಕಥೆಗಳಲ್ಲಿ.
ದೇವಲೋಕದಲ್ಲಿ ಒಂದು ದಿನ, ದೇವರೆಲ್ಲರೂ, ಪರಂದಾಮನನ್ನು ಪೂಜಿಸಿ ಹಾಡಿ ಕೊಂಡಾಡುತ್ತಿರುವಾಗ, ಆ ಗಾನದಲ್ಲಿ ಮೈಮರೆತಿದ್ದನು ಶ್ರೀವಿಷ್ಣು. ಸಂಗೀತವನ್ನು ಕೇಳುತ್ತಾ ಶ್ರೀವಿಷ್ಣು ಹೀಗೆ ತಲ್ಲೀನನಾಗಿರಲು, ಹಾಡಿದ ದೇವತೆಗಳೋ, ಗಾನ ಬೇರೆ ತಾವು ಬೇರೆ ಎಂದು ಭಾವಿಸಲಾಗದೆ ತಾವು ಲೀನವಾಗಿ ಹಾಡುತ್ತಿರುತ್ತಾರೆ.
ಸಮಯ ಕಳೆದುಹೋಗುತ್ತಿತ್ತು. ಆಗ ಹಾಲು, ತುಪ್ಪ, ಪುಷ್ಪ ಮುಂತಾದುವನ್ನು ತಂದ ದೇವಲೋಕದ ಸುಂದರಿಯರಾದ ರಂಭೆ, ಊರ್ವಶಿ, ಮೇನಕೆ ಮೂವರು, ಪೂಜೆಯನ್ನು ಸಂಪೂರ್ಣಗೊಳಿಸಲು ತಮ್ಮನ್ನೇ ಮರೆತು ಹಾಡುತ್ತಿರುವ ದೇವತೆಗಳನ್ನು ಶಬ್ಧವಿಲ್ಲದೆ ಎಬ್ಬಿಸಲು, ತಾವು ತೆಗೆದುಕೊಂಡು ಬಂದಿದ್ದ ಹೂಗಳನ್ನು ದೇವತೆಗಳ ಮೇಲೆ ಎರಚಿ ಅವರನ್ನು ಎಚ್ಚರಗೊಳಿಸುತ್ತಾರೆ.
ಹೂಗಳು ಮೈಯನ್ನು ತಾಕಿದ್ದರಿಂದ ಪ್ರಜ್ಞೆಗೆ ಹಿಂತಿರುಗಿದ ಕೆಲವು ದೇವತೆಗಳು, ಕಣ್ಣು ತೆರೆದು ದೇವ ಸುಂದರಿಯರ ಮುಗುಳ್ನಗೆಗೂ, ಸೌಂದರ್ಯಕ್ಕೂ ಅರೆಕ್ಷಣ ತಬ್ಬಿಬ್ಬಾಗಿ, ಮತ್ತೆ ಹಾಡನ್ನು ತೊಡಗಲು, ಅದೇ ಸಮಯ ಸಂಗೀತದಲ್ಲಿ ಮಗ್ನನಾಗಿದ್ದ ಭಗವಂತನು ಸಂಗೀತದಲ್ಲಿ ಶ್ರುತಿ ತಪ್ಪಿ ಅಪಸ್ವರ ಉಂಟಾದುದರಿಂದ ಕೋಪದಿಂದ ಕಣ್ಣು ತೆರೆಯುತ್ತಾನೆ.
ಭಗವಂತನ ಕೋಪ ಒಂದು ಬೆಂಕಿಯ ಗೋಳವಾಗಿ, ನಂತರ ಅದೇ ಒಂದು ಅಗ್ನಿಯಾಸುರನಾಗಿ ರೂಪ ತಾಳುತ್ತದೆ.
ಆ ಅಗ್ನಿಯಾಸುರನ ದೇಹವೆಲ್ಲ ಜ್ವಾಲೆಯಾಗಿ ಉರಿವ ಬೆಂಕಿ ಅಲ್ಲಿದ್ದ ದೇವತೆಗಳ ದೇಹಕ್ಕೆ ಹರಡಿಕೊಳ್ಳಲು, ಅಲ್ಲಿಂದ ದೇವತೆಗಳು ತಪ್ಪಿಸಿಕೊಂಡು ಓಡುತ್ತಾರೆ. ಎಲ್ಲಿ ಓಡಿದರೂ ಬಿಡದೆ ಅಟ್ಟಿಸಿಕೊಂಡು ಬಂದ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಕೊನೆಗೆ ಪರಂದಾಮನ ಕಾಲಿಗೆ ಬಂದು ಎರಗಲು, ಅವನು “ದೇವತೆಗಳೇ ಭಕ್ತಿ ಎಂಬುದು ಮನಸ್ಸನ್ನು ಏಕಾಗ್ರತೆಯಲ್ಲಿಡುವುದು. ಭಕ್ತಿಯ ಸಮಯ ನೀವು ಮನಸ್ಸನ್ನು ಅಲೆದಾಡ ಬಿಟ್ಟದ್ದರ ಪರಿಣಾಮವೇ, ಈಗ ನಿಮ್ಮ ದೇಹ ಹತ್ತಿ ಉರಿಯುತ್ತಿದೆ. ಇದಕ್ಕೆ ವಿಮೋಚನೆ ಆ ಅಗ್ನಿಯಾಸುರನ ಅಂತ್ಯದ ನಂತರವೇ ನಿಮಗೆ ದೊರಕುತ್ತದೆ.
“ಅಗ್ನಿಯಾಸುರ ಯಾವಾಗ ನಾಶವಾಗುತ್ತಾನೆ?” ಎಂದು ದೇವತೆಗಳು ಭಯಭೀತರಾಗಿ ಕಿರುಚಲು, ಪರಂದಾಮ “ಈ ಅಗ್ನಿಯಾಸುರ ನನ್ನಿಂದ ಉದ್ಭವಿಸಿದವನು, ನನ್ನಂತೆಯೇ ಅವನಿಗೆ ಅಳಿವಿಲ್ಲ, ಆದರೂ ನೀವು ಹೆಣ್ಣಿನ ಬಳಿ ಚಂಚಲಗೊಂಡು ನಿಮ್ಮನ್ನು ಮರೆತಂತೆಯೇ, ಅವನೂ ಚಂಚಲಗೊಳ್ಳುವ ದಿನ ಬರುತ್ತದೆ. ಆಗ ನಿಮಗೆ ವಿಮೋಚನೆ ದೊರಕುತ್ತದೆ. ಅಲ್ಲಿಯವರೆಗೆ ಅಗ್ನಿಯ ಕಾಟ ನಿಮ್ಮನ್ನು ದಹಿಸದಿರಲು ಸಮುದ್ರದೊಳಗೆ ಅಡಗಿಕೊಳ್ಳಿ” ಎನ್ನುತ್ತಾನೆ.
ದೇವತೆಗಳು ಭಗವಂತನ ಮಾತಿನಂತೆ ಕಡಲೊಳಗೆ ಅವಿತಿಟ್ಟುಕೊಂಡು ಕಾಲಕಳೆಯುತ್ತಾರೆ. ಯುಗಗಳು ಕಳೆಯುತ್ತದೆ…. ಆ ಕಾಲಘಟ್ಟದಲ್ಲಿ ದೇವಲೋಕವನ್ನು ಗೆದ್ದು ಅದನ್ನು ವಶಪಡಿಸಿಕೊಂಡ ಅಗ್ನಿಯಾಸುರ, ಏಳು ಲೋಕವನ್ನು ಆಳಲು ತೊಡಗುತ್ತಾನೆ. ಅವನ ಉಷ್ಣವನ್ನು ತಾಳಲಾಗದೆ ಎಲ್ಲ ಲೋಕಗಳೂ ಅಗ್ನಿಯಿಂದ ಬಳಲಲು ತೊಡಗುತ್ತವೆ.
ಅದೇ ಸಮಯ ಭೂಲೋಕವನ್ನೂ ಯುದ್ಧಮಾಡಿ ಗೆದ್ದ ಅಗ್ನಿಯಾಸುರ, ಭಗವಂತನ ಸರಿಯರ್ಧವಾದ ಭೂಮಾದೇವಿಯನ್ನು ಕಂಡು ಮರುಳಾಗಿ, ಅವಳನ್ನು ಪಡೆಯುವ ಆಸೆಯಿಂದ ಅಟ್ಟಿಸಿಕೊಂಡು ಹೋಗಲು, ಅವಳೋ ಬೆದರಿ ವೈಕುಂಠಕ್ಕೆಹೋಗಿ ಭಗವಂತನಲ್ಲಿ ಶರಣಾಗುತ್ತಾಳೆ. ಅಗ್ನಿಯಾಸುರನ ಕ್ರೌರ್ಯದಿಂದಲೂ, ಅಹಂಕಾರದಿಂದಲೂ ಬಹಳ ಕೋಪಗೊಂಡ ಮಾಹಾವಿಷ್ಣು ಅವನನ್ನು ಅಳಿಸಲು ವಿಶ್ವರೂಪ ತಾಳಿ ನಿಲ್ಲುತ್ತಾನೆ. ಭೂದೇವಿಯನ್ನು ಹಿಂಬಾಲಿಸಿದ ಅಗ್ನಿಯಾಸುರ, ವೈಕುಂಠದೊಳಗೆ ನುಗ್ಗಿ ಅಲ್ಲಿ ವಿಷ್ಣುವಿನ ಉಗ್ರವಾದ ವಿಶ್ವರೂಪವನ್ನು ಕಂಡು ಬೆರಗಾಗಿ ಒಂದು ಕ್ಷಣದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತ ವಿಷ್ಣು ಅವನನ್ನು ಕೈಗಳಲ್ಲಿ ಬಾಚಿಕೊಂಡು ಬಾಯೊಳಗೆ ಹಾಕಿಕೊಳ್ಳುತ್ತಾನಂತೆ.
ಕೋಪದಲ್ಲಿದ್ದ ವಿಷ್ಣುವಿನ ಹೊಟ್ಟೆಯಿಂದ ಹೊರಬರಲು ಯತ್ನಿಸಿದ ಅಗ್ನಿಯಾಸುರನ ಬಳಿ, “ಅಗ್ನಿಯಾಸುರ… ನನ್ನ ಅಹಂಕಾರದ ಅಂಶವಾದ ನಿನಗೆ ಅಳಿವೆಂಬುದು ಇಲ್ಲ. ಈ ಜಗತ್ತಿನ ಕೊನೆಯ ಜೀವರಾಶಿ ಇರುವವರೆಗೂ, ಎಲ್ಲ ಜೀವರಾಶಿಗಳ ಕಿಬ್ಬೊಟ್ಟೆಯಲ್ಲೂ ಹಸಿವೆಂಬ ಬೆಂಕಿಯಾಗಿ ನೀನು ಇರುತ್ತೀಯೇ. ನಿನ್ನನ್ನು ಶಾಂತಗೊಳಿಸುವ ಸಲುವಾಗಿಯೇ ಈ ಜಗತ್ತು ಇನ್ನು ಮುಂದೆ ಚಲಿಸುತ್ತಿರುತ್ತದೆ. ನೀನು ತೃಪ್ತಿಯಾಗುವವರೆಗೆ ಸ್ವಲ್ಪ ಶಾಂತವಾಗಿರು…!” ಎಂದು ಅವನನ್ನು ಶಾಂತಗೊಳಿಸುತ್ತಾನೆ.
ಹಾಗೆ ಈ ಜಗತ್ತಿನಲ್ಲಿರುವ ಎಲ್ಲ ಜೀವರಾಶಿಗಳೂ ಇನ್ನು ಹಸಿವೆಂಬ ಅಗ್ನಿಯಾಸುರನನ್ನು ಶಾಂತಗೊಳಿಸಲು ಓಡುತ್ತಿರುತ್ತದೆ ಎಂಬುದು ಎಷ್ಟು ಸೂಕ್ತವಾಗಿದೆ!
ಆದರೆ, ಭಕ್ತಿಯಲ್ಲಿ ಮನ ತೊಡಗಿಸದೆ ಹೋಗಿದ್ದರಿಂದ ಭಗವಂತನ ಹತ್ತಿರವಿದ್ದ ದೇವತೆಗಳನ್ನು ಉರಿಸಿದ ಆ ಬೆಂಕಿ, ಅವನ ಭಕ್ತನ ದೇಹದಲ್ಲಿ ಹತ್ತಿ ಉರುದಾಗ, ಮನಸಾರೆ ಭಗವಂತನ ಹೆಸರನ್ನು ಹೇಳುತ್ತಿದ್ದುದರಿಂದ, ಆ ಭಕ್ತನನ್ನು ಸ್ವಲ್ಪವೂ ಸುಡದೆ ತಣ್ಣಗೆ ನಿಂತ ಆಶ್ಚರ್ಯವಾದ ಕಥೆಯೊಂದೂ ಇದೆ.
ಹೌದು, ರಾಮನ ಧೂತನಾಗಿ ಲಂಕೆಗೆ ಬಂದ ಹನುಮಂತ, ಸಭೆಯಲ್ಲಿ ಆಸನ ನೀಡದೆ ರಾವಣ ಅವಮಾನಿಸಲು, ತನ್ನ ಬಾಲದಿಂದ ಸಮ ಆಸನ ಮಾಡಿ ಕುಳಿತ ಹನುಮಂತನ ಮೇಲೆ ಕೋಪಗೊಂಡ ರಾವಣ, ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವಂತೆ ಆಜ್ಞೆ ನೀಡುತ್ತಾನೆ.
“ಧೂತನನ್ನು ಶಿಕ್ಷಿಸುವುದು ಧರ್ಮವಲ್ಲ!” ಎಂಬ ವಿಭೀಷಣನ ದನಿ, ಅಹಂಕಾರ ತುಂಬಿದ್ದ ಆ ರಾಜನ ಸಭೆಯಲ್ಲಿ ಯಾರ ಕಿವಿಗೂ ಬೀಳಲಿಲ್ಲ.
ರಾವಣನ ಅಜ್ಞೇಯನ್ನು ಪಾಲಿಸಲು ಸಿದ್ಧವಾದ ಅವನ ವೀರರು, ಹನುಮಂತನ ಬಾಲಕ್ಕೆ ಹಳೆಯ ಬಟ್ಟೆಗಳನ್ನು ಸುತ್ತಿಕಟ್ಟಿ, ಎಣ್ಣೆಯನ್ನು ಬಾಲದ ಮೇಲೆ ಸುರಿದು ಬೆಂಕಿ ಇಡುತ್ತಾರೆ.
ಹನುಮಂತನ ಬಾಲದಲ್ಲಿ ರಾವಣನ ವೀರರು ಹತ್ತಿಸಿದ ಬೆಂಕಿ ಜ್ವಾಲೆಯಾಗಿ ಉರಿಯುತ್ತದೆ. ಹನುಮಂತನೋ “ರಾಮನ ಕೃಪೆಯಿರುವಾಗ ಈ ಬೆಂಕಿ ಏನು ಮಾಡುತ್ತದೆ?” ಎಂದು ಭಾವಿಸಿದನಂತೆ. ಸ್ವಲ್ಪವೂ ಅಂಜದೆ ರಾಮ ನಾಮ ಒಂದನ್ನೇ ಮನದಲ್ಲಿ ಉಚ್ಚರಿಸಲು ತೊಡಗುತ್ತಾನೆ.
ಒಂದು ಕಡೆ ರಾಮ ನಾಮ ಬೆಂಕಿಯ ಬಿಸಿ ಹನುಮಂತನನ್ನು ಮುಟ್ಟದಂತೆ ನೋಡಿಕೊಳ್ಳಲು, ಮತ್ತೊಂದು ಕಡೆ ವಾಯು ದೇವ ತನ್ನ ತಂಪಾದ ಗಾಳಿಯಿಂದ ಹನುಮಂತನನ್ನು ಆಲಿಂಗಿಸಿಕೊಳ್ಳಲು, ಬೆಂಕಿ ಬಾಲದಲ್ಲಿ ಹತ್ತಿ ಉರಿಯುತ್ತಿದ್ದರೂ ಅದರ ಶಾಖ ಸ್ವಲ್ಪವೂ ತಾಕದೆ, ನಗುತ್ತ ಹನುಮಂತ ನಿಂತಿರುವುದನ್ನು ನೋಡಿದ ರಾವಣನ ವೀರರು ಗೊಂದಲಕ್ಕೆ ಒಳಗಾಗುತ್ತಾರೆ.
ಅವನು ಯಾವುದೋ ಮಂತ್ರವನ್ನು ಹೇಳುವುದರಿಂದಲೇ ಅವನನ್ನು ಬೆಂಕಿಯ ಶಾಖ ಕಾಡುತ್ತಿಲ್ಲ ಎಂದು ಭಾವಿಸಿದ ರಾವಣನ ವೀರರು ಮತ್ತೆ ಮತ್ತೆ ಹನುಮಂತನನ್ನು ಕೆರಳಿಸುತ್ತಾರೆ. ಅವರನ್ನು ತನ್ನ ಬಾಲದಿಂದ ಬಳಸಿ ಹಿಡಿದು ಬೀಸಿ ಎಸೆದು ಗಾಳಿಯಲ್ಲಿ ಹಾರುತ್ತಾನೆ ಹನುಮಂತ.
ಲಂಕಾದಲ್ಲಿ ಸೀತೆ ಇದ್ದ ಅಶೋಕವನ ಮತ್ತು ನೀತಿ ಹೇಳಿದ ವಿಭೀಷಣನ ಅರಮನೆಯ ಹೊರತು, ಅವನ ಬಾಲ ತಾಕಿದ ಎಲ್ಲ ಜಾಗಗಳೂ ಹತ್ತಿ ಉರಿಯುತ್ತದೆ. ಎಲ್ಲಾ ಮುಗಿದ ಮೇಲೆ ತ್ರಿಕೂಟ ಬೆಟ್ಟದ ಮೇಲೆ ಹತ್ತಿ ನಿಂತ ಹನುಮಂತ ತಿರುಗಿ ನೋಡಿದಾಗ ಲಂಕೆ ಬೆಂಕಿಗೆ ಆಹುತಿಯಾಗಿರುತ್ತದೆ.
ದೀಪದಲ್ಲಿ ಉರಿಯುವಾಗಲೂ, ಪೂರ್ವದಲ್ಲಿ ಉದಯಿಸುವಾಗಲೂ ಸುಂದರ ಸೊಡರೇ, ಕೆಲವು ಸಮಯ ಬೆಂಕಿಯಾಗಿಯೂ ಉರಿದು ನಮ್ಮನ್ನು ಸುಟ್ಟು ಭಸ್ಮಮಾಡುತ್ತದೆ. ಧರ್ಮದ ಧೂತನಾದ ಹನುಮಂತನನ್ನು ತನ್ನ ಉಷ್ಣ ಸ್ಪರ್ಶಿಸದೆ ಸೊಡರಾಗಿ ನಿಂತ ಅದೇ ಅಗ್ನಿ ಅಧರ್ಮದ ಧೂತನನ್ನು ಶಿಕ್ಷಿಸಿ, ರಾವಣನ ಲಂಕೆಯನ್ನು ದಹನ ಮಾಡುತ್ತದೆ!
ಈ ಜಗತ್ತಿನಲ್ಲಿ ಭಗವಂತನಂತೆಯೇ ಬೆಂಕಿಯೂ, ಮಾನವರಿಂದ ಕಳಂಕಗೊಳಿಸಲಾಗದ ಒಂದಾಗಿ ಬೆಳಗುತಿದೆ. ಅವನಂತೆಯೇ ಬೆಂಕಿಯೂ ತನ್ನೊಂದಿಗೆ ಸೇರಿದ ಯಾವುದನ್ನೂ ತನ್ನಂತೆಯೇ ಬದಲಾಯಿಸಿ ಬಿಡುವ ಶಕ್ತಿಯುಳ್ಳದ್ದಾಗಿದೆ.
ಆದ್ದರಿಂದಲೇ, ‘ಅವತರಿಸಿ ನಿಂತ ಸೊಡರೇ!’ ಎಂದು ನಾರಾಯಣನನ್ನು ಕರೆದು,
‘ನಮ್ಮ ಪ್ರೀತಿಯನ್ನು ದೀಪವಾಗಿಯೂ, ಆಸಕ್ತಿಯನ್ನು ತುಪ್ಪವಾಗಿಯೂ,
ಅರಿವನ್ನು ಬತ್ತಿಯಾಗಿಯೂ ನೀಡಿ ನಿನ್ನ ಪಾದ ವಂದಿಸಲು ಬಂದಿದ್ದೇವೆ, ನಮ್ಮನ್ನು ಒಳ್ಳೆಯ ಮಾರ್ಗಕ್ಕೆ ಕರೆದೊಯ್ದು ಆಲಿಂಗಿಸುವಂತವನಾಗು!
ಎಂದು ಅಗ್ನಿಯಾಸುರನಾದ ಭಗವಂತನನ್ನು, ಇಪ್ಪತ್ತೊಂದನೇಯ ದಿನ ಗೆಳತಿಯರೊಂದಿಗೆ ಹಾಡಿ ಕರೆಯುತ್ತಾಳೆ ಗೋದೈ ಆಂಡಾಳ್!
ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.