ಪೆಟ್ಟು ತಿಂದ ಬೋಕುಜು ಸಿಟ್ಟು ಯಾಕೆ ಮಾಡ್ಕೊಳ್ಲಿಲ್ಲ!? : ಝೆನ್ ಕಥೆ

ಬೋಕುಜುಗೆ ಹೊಡೆದದ್ದನ್ನೆ ಆಶ್ಚರ್ಯದಿಂದ ನೋಡುತ್ತಿದ್ದ ಜನ ಅವನನ್ನು ಸುತ್ತುವರೆದು “ ಆ ಮನುಷ್ಯ ನಿನಗೆ ಎಷ್ಟು ಜೋರಾಗಿ ಹೊಡೆದ ಆದರೆ ನೀನು ಅವನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ, ಯಾಕೆ ?” ಅಂತ ಕೇಳಿದರು. ಅದಕ್ಕೆ ಮಾಸ್ಟರ್ ಬೋಕುಜು ಕೊಟ್ಟ ಉತ್ತರವೇನು ಗೊತ್ತಾ? । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಒಮ್ಮೆ ಝೆನ್ ಮಾಸ್ಟರ್ ಬೋಕುಜು ಒಂದು ಊರಿನ ರಸ್ತೆಯಲ್ಲಿ ಹಾಯ್ದು ಹೋಗುವಾಗ ಅಚಾನಕ್ ಆಗಿ ಆಕ್ರಮಣ ಮಾಡಿದ ಮನುಷ್ಯನೊಬ್ಬ ಬಡಿಗೆಯಿಂದ ಮಾಸ್ಟರ್ ಮೇಲೆ ಪ್ರಹಾರ ಮಾಡಿದ. ಧಿಡೀರ್ ನೇ ನಡೆದ ಈ ಘಟನೆಯಿಂದ ಗಾಯಗೊಂಡ ಮಾಸ್ಟರ್ ಬೋಕುಜು ಕೆಳಗೆ ಬಿದ್ದ, ಬಡಿಗೆ ಕೂಡ ಆ ಮನುಷ್ಯನ ಕೈ ಜಾರಿ ಕೆಳೆಗೆ ಬಿದ್ದಿತು. ಸುತ್ತ ಜನ ಸೇರತೊಡಗಿದ್ದರಿಂದ ಆ ಮನುಷ್ಯ ಬಡಿಗೆಯನ್ನು ಅಲ್ಲೇ ಬಿಟ್ಟು ಓಡತೊಡಗಿದ.

ಸಾವರಿಸಿಕೊಂಡು ಎದ್ದ ಬೋಕುಜು ಆ ಮನುಷ್ಯನ ಹಿಂದೆ ಬಡಗಿ ಹಿಡಿದುಕೊಂಡು ಕೂಗುತ್ತ ಓಡತೊಡಗಿದ, “ ನಿಲ್ಲು ಓಡಬೇಡ, ನಿನ್ನ ಬಡಿಗೆ ತೆಗೆದುಕೋ “ ಕೊನೆಗೂ ಬೋಕುಜು ಆ ಮನುಷ್ಯನನ್ನು ಹಿಡಿದ ಮತ್ತು ಬಡಿಗೆಯನ್ನು ಅವನ ಕೈಗೆ ಕೊಟ್ಟ. “

ಈ ಘಟನೆಯನ್ನ ಆಶ್ಚರ್ಯದಿಂದ ನೋಡುತ್ತಿದ್ದ ಜನ, ಬೋಕುಜುನ ಸುತ್ತುವರೆದರು, “ ಆ ಮನುಷ್ಯ ನಿನಗೆ ಎಷ್ಟು ಜೋರಾಗಿ ಹೊಡೆದ ಆದರೆ ನೀನು ಅವನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ, ಯಾಕೆ ? “

ಬೋಕುಜು ಉತ್ತರಿಸಿದ, “ ಅವನು ನನಗೆ ಹೊಡೆದ ಇದು ಮಾತ್ರ ನಿಜ. ಅವನು ಹೊಡೆದವ, ನಾನು ಹೊಡೆಸಿಕೊಂಡವ ಅಷ್ಟೇ. ಇದು ಹೇಗೆಂದರೆ ನೀವು ಕಾಡಿನಲ್ಲಿ ಹಾಯ್ದು ಹೋಗುವಾಗ ಮರದ ಕೊಂಬೆಯೊಂದು ಮುರಿದುಕೊಂಡು ನಿಮ್ಮ ಮೇಲೆ ಬೀಳುವಂತೆ. ಇದು ಅಷ್ಟೇ ಸಹಜ ಘಟನೆ. ಇದಕ್ಕೆ ಅಂಥ ಮಹತ್ವ ಏನಿಲ್ಲ. “

ಆದರೆ ಜನರಿಗೆ ಬೋಕುಜುನ ಸಮಜಾಯಿಷಿ ಒಪ್ಪಿಗೆಯಾಗಲಿಲ್ಲ,

“ ಆದರೆ ಮಾಸ್ಚರ್, ಮರದ ಕೊಂಬೆ ಮತ್ತು ಮನುಷ್ಯ ಬೇರೆ ಬೇರೆ ಅಲ್ಲವೆ ? ಮರದ ಕೊಂಬೆಗೆ ಬುದ್ಧಿ ಮನಸ್ಸುಗಳಿಲ್ಲ ಹಾಗಾಗಿ ನಾವು ಅದಕ್ಕೆ ಶಿಕ್ಷೆ ಕೊಡುವುದು ತರವಲ್ಲ, ಆದರೆ ಮನುಷ್ಯ ಆಲೋಚನೆ ಮಾಡಬಲ್ಲವನು. ಆ ಮನುಷ್ಯ ನಿನ್ನ ಮೇಲೆ ಮಾಡಿದ ಆಕ್ರಮಣ ಬುದ್ಧಿ ಪ್ರೇರಿತವಾದದ್ದು. “

“ ಆದರೆ ನನಗೆ, ಈ ಮನುಷ್ಯನೂ ಮರದ ಕೊಂಬೆಯಂತೆ ಅವನಿಗೆ ಬುದ್ಧಿ ಮನಸ್ಸುಗಳಿದ್ದಾಗ್ಯೂ ಅವು ನಿಷ್ಕ್ರೀಯವಾದಂತಿವೆ. ಅವ ನನ್ನ ಮೇಲೆ ಥೇಟ್ ಮರದ ಕೊಂಬೆಯಂತೆ ಮುರಿದುಕೊಂಡು ಬಿದ್ದಿದ್ದಾನೆ , ಹಾಗಾಗಿ ಅವನಿಗೆ ಶಿಕ್ಷೆಕೊಡುವುದು ನನಗೆ ಆಗದು. ಈಗ ಆಗಿ ಹೋಗಿರುವುದಕ್ಕೆ ಅರ್ಥ ಹಚ್ಚುತ್ತ ಕೂಡುವುದು ನನ್ನಿಂದಾಗದು. “

ಮಾಸ್ಟರ್ ಬೋಕುಜು ಸುತ್ತ ಸೇರಿದ ಜನರಿಗೆ ಸಮಾಧಾನ ಹೇಳಿದ.

Leave a Reply