ಕೆಂದಾವರೆ ಕಂಗಳಿಂದ ನೋಡು! : ಧನುರ್ ಉತ್ಸವ ~ 22

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತೆರಡನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತೆರಡನೇ ದಿನ

ಸುಂದರದ ವಿಸ್ತಾರವಾದಿಳೆಯೆ ಅರಸರುಂ

ಅಭಿಮಾನ ಕಳೆಯೆ ಬಂದು ನಿನ್ನ ಶಯನ ಮಂಚದ ಕೆಳಗೆ

ಗುಂಪಾಗಿ ಇರುವಂತೆ ಬಂದು ತಲೆ ಬಾಗಿಸುರುವೆವೈ

ಕಿರುಗೆಜ್ಜೆಯೊಲು ಬಾಯ್ ತೆರೆದ ತಾವರೆ ಹೂವಿನಂತಿರ್ಪ

ಅರುಣ ನೇತ್ರವ ಕೊಂಚಕೊಂಚವೇ ನಮ್ಮೇಲೆ ಬೀರದಿಹೆಯಾ

ಚಂದ್ರನೂ ಸೂರ್ಯನೂ ಎದ್ದರೋ ಎಂಬಂತೆ

ಚೆಲುವೆ ಕಣ್ಣೆರಡನೂ ನಮ್ಮೇಲೆ ಬೀರಿದೊಡೆ

ನಮ್ಮೆಲ್ಲ ಶಾಪಗಳು ನೀಗಿ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ    (ಬೈರವಿ ರಾಗ – ಆದಿ ತಾಳ)

“ನಿನ್ನ ಬಳಿ ಸೋತ ಜಗತ್ತಿನ ಅರಸರುಗಳು ಎಲ್ಲರೂ, ತಮ್ಮ ಮಮಕಾರ ಕಳೆದುಕೊಂಡು ನಿನ್ನ ಶಯನ ಮಂಚದ ಕೆಳಗೆ ಒಂದುಗೂಡಿ ನಿಲ್ಲುವಂತೆ, ನಾವು ನಿನ್ನನ್ನು ಶರಣಾಗಿ ನೀನು ಕಣ್ಣು ತೆರೆಯುವುದಕ್ಕಾಗಿ ಬಂದು ನಿಂತಿದ್ದೇವೆ.

ಸ್ವಲ್ಪ ಬಾಯಿ ಬಿರಿದ ಗೆಜ್ಜೆಯಂತೆ, ಅರ್ಧ ಅರಳಿದ ಕೆಂದಾವರೆಯ ಕೆಂಪು ಕಣ್ಣುಗಳನ್ನುಳ್ಳವನೇ …. ನಿನ್ನ ಕರುಣೆಯ ನೋಟ ಸ್ವಲ್ಪವಾದರೂ ನಮ್ಮ ಮೇಲೆ ಬೀಳಬಾರದೇ…?

ನನ್ನ ಭಗವಂತನೇ….

ಸೂರ್ಯ ಚಂದ್ರರು ಒಂದೇ ಸಮಯದಲ್ಲಿ ಉದಯವಾಗುವಂತೆ, ಎರಡು ಕಣ್ಣುಗಳಿಂದ ನೀನು ನಮ್ಮನ್ನು ನೋಡಿದರೆ, ನಮ್ಮೆಲ್ಲ ಶಪಗಳು ನೀಗಿ ನಮ್ಮ ಪವಿತ್ರ ವ್ರತವು ಸಾರ್ಥಕವಾಗುತ್ತದೆ. ಆದ್ದರಿಂದ ಕಣ್ಣು ತೆರೆಯುವಂತವನಾಗು…! ಎಂದು ಕರೆಯುತ್ತಾಳೆ ಗೋದೈ ಆಂಡಾಳ್…!

“ತಾವರೆ ಹೂವಿನಂತಿರ್ಪ ಅರುಣ ನೇತ್ರವ…”

ತಾವರೆಯಂತಹ ಕಣ್ಣುಗಳನ್ನು ಉಳ್ಳವನೇ…! ಎಂದು ಭಗವಂತನನ್ನು ಕರೆದು, “ನಿನ್ನ ಸಣ್ಣ, ಸುಂದರ, ಕೆಂದಾವರೆ ಕಣ್ಣುಗಳಿಂದ ನಮ್ಮನ್ನು ನೋಡುವಂತವನಾಗು…” ಎಂದು ಬೇಡುತ್ತಾಳೆ ಗೋದೈ.

ಕೃಷ್ಣನ ಕಣ್ಣುಗಳು ಕಮಲದ ಕಣ್ಣುಗಳು ಎಂಬುದನ್ನೇ,

“ಕಮಲಪತ್ರಾಕ್ಷ ಮಾಹಿತ್ಯಮ್ಯಮಬಿ…” ಎನ್ನುತ್ತದೆ ಭಗವತ್ ಗೀತೆ.

ಕಣ್ಣುಗಳಲ್ಲಿ ಮಾತ್ರವಲ್ಲ, ತನ್ನ ಪವಿತ್ರ ದೇಹ ಪೂರ್ತಿ ಕಲ್ಯಾಣ ಗುಣಗಳನ್ನು ಹೊಂದಿರುವವನು ಆ ಪರಂದಾಮ; ಅವನ ರೂಪದ ಸೌಂದರ್ಯವನ್ನು ತಲೆಯಿಂದ ಪಾದದವರೆಗೆ ನೋಡಿದವರು, ಅವನ ಸೌಂದರ್ಯದಲ್ಲೂ, ಗಾಂಭೀರ್ಯದಲ್ಲೂ,  ಪ್ರಕಾಶಮಾನವಾದ ಆ ತಾವರೆ ಕಣ್ಣುಗಳ ಅಂದಕ್ಕೆ ತಕ್ಷಣ ಶರಣಾಗಿ ಬಿಡುತ್ತಾರೆ.

ಎಷ್ಟೋ ಹೂ ಗಳಿರುವಾಗ ಭಗವಂತನನ್ನು ಕಮಲ ಕಣ್ಣಿನವನೇ ಎಂದು ಕರೆಯುವುದಕ್ಕೆ ಕಾರಣ, ತಾವರೆಯ ಹೂವಿಗೆ ಅಂತಹ ಶ್ರೇಷ್ಠತೆ ಉಂಟು ಎಂಬ  ಕಾರಣದಿಂದ.

ಪುಷ್ಪಗಳಲ್ಲಿ ಮಾನವರು ಮುಡಿದುಕೊಳ್ಳಲಾಗದ ಹೂಗಳುಂಟು. ಅವುಗಳಲ್ಲಿ ಸೌಂದರ್ಯದಲ್ಲಿ ಶ್ರೇಷ್ಟವಾದ ಕಮಲವೂ ಒಂದು. ಪರಂದಾಮನ ದೇವಿಯಾದ ಮಹಾಲಕ್ಷ್ಮೀ ವಾಸವಿರುವ ಹೂ ತಾವರೆ ಎಂಬುದನ್ನು ನಾವು ಅರಿತಿದ್ದೀವಿ.

ತಾವರೆ ಹೂವಿಗೆ ಶ್ರೇಷ್ಠತೆ ಕೇವಲ ಮಹಾಲಕ್ಷ್ಮೀ ವಾಸವಿದ್ದಾಳೆ ಎಂಬುದರಿಂದ ಮಾತ್ರವಲ್ಲ. ಆ ಮಹಾಲಕ್ಷ್ಮಿಯೇ ತಾವರೆ ಎನ್ನುತ್ತದೆ ಈ ಸುಂದರ ಕಥೆ.

ಭೂಮಿ ಸೃಷ್ಟಿಯಾಗುವ ಮೊದಲೇ, ಹುಟ್ಟಿದವನು ಸೂರ್ಯ. ತನ್ನ ಕರ್ತವ್ಯದಲ್ಲಿ ಸ್ವಲ್ಪವೂ ತಪ್ಪದವನು. ತನ್ನ ಉದಯ ಮತ್ತು ಅಸ್ತಮನದಿಂದ ಹಗಲು ಇರುಳನ್ನುಂಟು ಮಾಡುವವನು ಅವನೇ.

ಪ್ರಕಾಶಮಾನವಾದ ಅವನ ಅಂದವನ್ನು ಕಂಡು ಅಸೂಯೆಗೊಂಡ ಅಸುರರು ಅವನ ಕರ್ತವ್ಯಕ್ಕೆ ಭಂಗ ಉಂಟುಮಾಡುವ ಉದ್ದೇಶದಿಂದ, ಒಮ್ಮೆ ಅವನು ಹೋಗುವ ದಾರಿಯಲ್ಲೆಲ್ಲಾ ಅಡಚನೆಗಳನ್ನು ಉಂಟುಮಾಡಲು ತೊಡಗುತ್ತಾರಂತೆ. ಇದರಿಂದ ಮನ ನೊಂದುಕೊಂಡ ಸೂರ್ಯ, ತನ್ನ ತಡೆಗಳನ್ನು ನೀಗಿಸಲು, ಶ್ರೀಮನ್ ನಾರಾಯಣನ ಬಳಿ ಬಂದು ಶರಣಾಗುತ್ತಾನೆ.

ಸೂರ್ಯನ ಆಕಾಶಪಥದ ಸಂಚಾರಕ್ಕೆ ಅಡ್ಡಿಯಾದರೆ, ಭೂಲೋಕದಲ್ಲಿ ಹಲವಾರು ಗೊಂದಲಗಳು ಉಂಟಾಗುತ್ತದೆ ಎಂಬುದನ್ನು ಚೆನ್ನಾಗಿ ಅರಿತಿದ್ದ ಭಗವಂತನು, ಮಾರನೇಯ ದಿನವೇ ಇದನ್ನು ಇತ್ಯರ್ಥಗೊಳಿಸುವುದಾಗಿ ಹೇಳಿ, ಸೂರ್ಯನನ್ನು ಕಳುಹಿಸಿಕೊಟ್ಟನಂತೆ. ಸೂರ್ಯನ ಉದಯಕ್ಕೆ ಮೊದಲೇ, ಮಹಾವಿಷ್ಣು ತಾನೇ ಸೂರ್ಯನಾಗಿ ರೂಪತಾಳಿ, ಬೆಳಗಿನ ಜಾವ ಕುಂಕುಮ ವರ್ಣದಲ್ಲಿ ಕೆಳಬಾನಿನಲ್ಲಿ ಪ್ರಕಾಶಿಸಲು ತೊಡಗಿದನಂತೆ. ಸೂರ್ಯ ನಾರಾಯಣನನ್ನು, ಸೂರ್ಯ ಎಂದು ತಿಳಿದ ರಕ್ಕಸರು, ಅವನ ಬಳಿ ಕೀಟಲೆ ಮಾಡಲು, ಭಗವಂತನು ತನ್ನ ಚಕ್ರಾಯುಧದಿಂದ ಆ ಅಸುರನ್ನು ಅಳಿಸಿ ವಧೆ ಮಾಡಿದನಂತೆ.

ಅದೇ ಸಮಯದಲ್ಲಿ ಸೂರ್ಯನಾರಾಯಣನ ಕೆಂಬಣ್ಣದ ಅಂದವನ್ನು ಕಂಡು ಮರುಳಾದ ಮಹಾಲಕ್ಷ್ಮೀ, ಅವನ ಅಂದವನ್ನು ತನ್ನ ಎರಡೂ ಕಣ್ಣುಗಳಿಂದ ನೋಡಲು ಆಗದು ಎಂದು ಸಾವಿರಾರು ಕೆಂದಾವರೆ ಪುಷ್ಪಗಳಾಗಿ ರೂಪತಾಳಿ ಭೂಲೋಕ ಪೂರ್ತಿಯಾಗಿ ಅರಳಿ ಹರ್ಷಿಸಿದಳಂತೆ. ಆದ್ದರಿಂದಲೇ ಕೆಂಪು ಸೂರ್ಯ ಬಾನಿನಲ್ಲಿ ತೋರುವಾಗ ಅರಳುತ್ತದೆ ಕೆಂದಾವರೆ ಎಂದು ಹೇಳಲ್ಪಡುತ್ತದೆ. ಅದರ ನಂತರವೇ, ಆರೋಗ್ಯ, ಸಂಪತ್ತು ಸಮೃದ್ಧಿಗಳನ್ನು ಪಡೆಯಲು ಮಹಾಲಕ್ಷ್ಮಿಯ ಅಂಶವಾದ ತಾವರೆ ಪುಷ್ಪದಿಂದ ಮಾತೆಯನ್ನು ಅರ್ಚನೆ ಮಾಡಲು ತೊಡಗುತ್ತಾರೆ.

ಇಷ್ಟು ಮಾತ್ರವೇನು?

 “ಮುಡಿಯ ಜ್ಯೋತಿಯಾಗಿ ನಿನ್ನ ಮುಖ ಜ್ಯೋತಿ ಅರಳಿತೋ

ಪಾದಜ್ಯೋತಿ ನೀ ನಿಂತ ತಾವರೆಯಾಗಿ ಅರಳಿತೋ…!”

ಎಂಬ ಮಾತಿನಂತೆ,

ಕಮಲನಾಭನಾದ, ತಾವರೆ ಕಣ್ಣಿನ ಕೃಷ್ಣನ ಕಣ್ಣುಗಳು ಮಾತ್ರ ತಾವರೆಯೇ…? ಕೈಗಳಲ್ಲಿ ಕೆಂದಾವರೆ ಹಿಡಿದು, ಎದೆಯ ಕಮಲದಲ್ಲಿ ಶ್ರೀದೇವಿ, ಮೂರು ಲೋಕಗಳನ್ನು ಅಳೆದ ಶ್ರೀಪಾದಗಳು ಪಾದಕಮಲಗಳು. ಅವನ ಸುಂದರ ಪವಿತ್ರ ಶರೀರವೇ ತಾವಾರೆ ಅಲ್ಲವೇ!

ತಾವರೆ ಹೂವಿನಲ್ಲಿ ಬಿಳುಪು, ಕೆಂಪು, ನೀಲಿ, ಹಳದಿ ಎಂಬ ಹಲವು ಬಣ್ಣಗಳುಂಟು. ಆದರೂ, ಕೆಂದಾವರೆಯೇ ಅವನಿಗೆ ಪ್ರಿಯವಾದದ್ದು. ಅದಕ್ಕೆ ಅದು ಮಹಾಲಕ್ಷ್ಮಿಯ ಅಂಶ ಎಂಬುದೊಂದೇ  ಕಾರಣವಲ್ಲ  ಬೇರೊಂದು ಕಾರಣವೂ ಇದೆ ಎಂದು ಹೇಳುತ್ತವೆ ವೇದಗಳು.

ನಾವು ಭಗವಂತನಿಗೆ ಅರ್ಚನೆ ಮಾಡುವಾಗ, ಬಿಳಿಯ ಬಣ್ಣದ ತಾವರೆ ನಮ್ಮ ಬೇಡಿಕೆಗಳನ್ನು ಹೇಳುತ್ತದಂತೆ., ಹಳದಿ ಹೂಗಳೋ ನಮ್ಮ ಕೃತಜ್ಞತೆಯನ್ನು ಭಗವಂತನ ಬಳಿ ಹೇಳುತ್ತದಂತೆ., ಕೆಂಪು ಬಣ್ಣದ ಪುಷ್ಪಗಳು ಮಾತ್ರವೇ ನಮ್ಮ ದುಃಖಗಳನ್ನು ಭಗವಂತನ ಬಳಿ ಹೇಳುತ್ತದಂತೆ. ಆದ್ದರಿಂದ ಭಕ್ತನ ದುಃಖವನ್ನು ಕೇಳಿ, ಅವನಿಗೆ ಸದಾ ದಯೆಯನ್ನು ಪಾಲಿಸಲು ಕೆಂದಾವರೆಯನ್ನು ತನ್ನ ಪ್ರೀತಿಯ ಪುಷ್ಪವಾಗಿ ಮುಡಿದುಕೊಂಡನಂತೆ ಭಗವಂತ.

ಅರವಿಂದ, ಕಮಲ, ಪದ್ಮ, ರಾಜೀವ, ಕುಶೇಶಯ,ಅರವಿಂದ, ಸರೋಜ, ಗೋಕನ, ಸಲಸ, ವಾರಿಸ, ಪಂಕಜ, ನಳಿನ, ಸರೋರುಹ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ತಾವರೆ, ಮಹಾವಿಷ್ಣುವಿನ ಬಳಿ ಬರಲು ಹಲವಾರು ಕತೆಗಳುಂಟು.

ಸೃಷ್ಟಿಗೆ ದೇವನಾದ ಬ್ರಹ್ಮ, ತನ್ನ ನಾಭಿ ಕಮಲ ಎಂಬ ತನ್ನ ಹೊಕ್ಕುಳ ಬಳ್ಳಿಯಿಂದ ರೂಪಿತವಾದ ತಾವರೆಯ ಮೂಲಕ ರೂಪಿಸಿದ್ದರಿಂದ ತಾವರೆ ಹೂ ಶ್ರೀವಿಷ್ಣುವಿಗೆ ಸೂಕ್ತವಾದದ್ದು ಎನ್ನುತ್ತಾರೆ.

ದೇವತೆಗಳು, ಅಸುರರು ಮಹಾಯುದ್ಧ ಮಾಡಿ ರಕ್ಷಿಸಿದ ಮುಚುಕುಂದ ಚಕ್ರವರ್ತಿ,  ತಪಸ್ಸಿನ ಹಾಗೆ ಮಾಡಿದ ತನ್ನ ನಿದ್ರೆಯ ಅಂತ್ಯದಲ್ಲಿ ಕಾಲಯವನ ಎಂಬ ಅಸುರನನ್ನು ಅಳಿಸಿ, “ನಾನೇ ತಾವರೆ ಆದೇ” ಎಂಬ ಕಥೆ ನಾವು ಮೊದಲೇ ಅರಿತಿರುವಂತಹದ್ದೇ.

ತನ್ನನ್ನೂ, ತನ್ನ ಭಕ್ತರನ್ನೂ ಕಾಯುವ ಶ್ರೀಚಕ್ರವನ್ನು ಶಿವನಿಂದ ಪಡೆಯುವುದಕ್ಕೆ ಮಾಡಿದ ಶಿವ ಪೂಜೆಯಲ್ಲಿ ಸಾವಿರ ಹೂಗಳಲ್ಲಿ ಒಂದು ಹೂ ಕಡಿಮೆಯಾದಾಗ ತನ್ನ ಕಣ್ಣ ಕಮಲವನ್ನು ಕಿತ್ತುಕೊಟ್ಟ ಕಥೆಯೂ ನಾವು ಅರಿತಿರುವುದೇ….

ಶ್ರೀವಿಷ್ಣುವಿಗೆ ಚಕ್ರ ದೊರಕಲು ನೆರವಾದಂತೆಯೇ, ವಿಷ್ಣು ಭಕ್ತನಿಗೆ ಸಂಕಟ ತೀರಿಸಲು ನೆರವಾಗಿದೆ ತಾವರೆ.

ಸುಪ್ರಭ ಎಂಬ ವಿಷ್ಣು ಭಕ್ತ, ತನ್ನ ಸಂಕಟಗಳು ತೀರಲು, ದಿನನಿತ್ಯ ಸ್ವಚ್ಛ, ಪರಿಮಳ, ಸುಂದರವಾದ ತಾವರೆ ಹೂಗಳಿಂದ ಭಗವಂತನನ್ನು ಅರ್ಚಿಸುತ್ತಿದ್ದನಂತೆ.

ಆ ಹೂಗಳ ಸೌಂದರ್ಯಕ್ಕೆ, ಪರಿಮಳಕ್ಕೆ ಮರುಳಾದ ಭಗವಂತ ಇಷ್ಟೊಂದು ಗುಣಮಟ್ಟದ ವಾಸನೆಯಾದ ಹೂಗಳನ್ನು ಈ ಸುಪ್ರಭ ಎಲ್ಲಿಂದ ಕೊಯ್ದುಕೊಂಡು ಬರುತ್ತಾನೆ ಎಂದು ತಿಳಿಯಲು ಬಯಸಿ, ಒಂದು ದಿನ ಸುಪ್ರಭನ ಹಿಂದೆಯೇ ಹೋಗುತ್ತಾನಂತೆ.

ಹತ್ತಿರವಿದ್ದ ಒಂದು ಕೊಳಕ್ಕೆ ಹೋಗಿ, ಭಕ್ತಿಯಿಂದಲೂ, ಧ್ಯಾನದಿಂದಲೂ ಸುಪ್ರಭ ಹೂ ಕೊಯ್ಯುವ ದೋರಣೆಯ ಅಂದಕ್ಕೆ ಬೆರಗಾಗಿ ದಡದಲ್ಲೇ ಶ್ರೀ ವಿಷ್ಣು ಕುಳಿತುಬಿಡುತ್ತಾನೆ. ಭಕ್ತಿಯಿಂದ ಹೂ ಕೊಯ್ದು ಹಿಂತಿರುಗಿದ ಸುಪ್ರಭ, ಭಗವಂತ ಗುಡಿಯಿಂದ ಹೊರಗೆ ಬಂದು ಕೊಳದ ದಂಡೆಯಲ್ಲಿ ಕುಳಿತಿರುವುದನ್ನು ನೋಡಿ ಗಾಬರಿಯಾಗಿ, ‘ನನ್ನ ಪೂಜೆಯಲ್ಲಿ ಏನಾದರೂ ಕೊರತೆ ಇದ್ದರೆ ನನ್ನನ್ನು ಸಹಿಸಿಕೊಳ್ಳುವಂತವನಾಗು…’ ಎಂದು ಭಗವಂತನ ಪಾದಕ್ಕೆ ಎರಗಿ ಬೇಡಿಕೊಳ್ಳುತ್ತಾನಂತೆ.

ಅದಕ್ಕೆ ಪರಂದಾಮನಾದ ವಿಷ್ಣು, ‘ಭಕ್ತ…. ನೀನು ತರುವ ತಾವರೆಯನ್ನು ಸ್ವಲ್ಪವೂ ಬಾಡದಂತೆ ನೋಡಬೇಕು ಎಂದೇ ಆ ತಾವರೆ ಅರಳುವ ಸ್ಥಳಕ್ಕೆ ಬಂದು ಕುಳಿತುಬಿಟ್ಟೆ!’ ಎಂದು ಹೇಳಿದ್ದಲ್ಲದೆ, ತನ್ನ ಭಕ್ತನಾದ ಸುಪ್ರಭನಿಗೆ ಅಲ್ಲಿಯೇ ಅವನಿಗೆ ಕೃಪೆ ತೋರಿ ಮೋಕ್ಷ ನೀಡುತ್ತಾನಂತೆ.

ತತ್ವ ರೀತಿಯಾಗಿ ನೋಡಿದರೂ, ಎಂಟು ಜಾನು ದೇಹದಲ್ಲಿ ಶಿರಸೇ ಪ್ರಧಾನ. ಅದರಲ್ಲಿ ಭಾವನೆಗಳು ಸದಾ ಅರಳಿರಬೇಕು ಎಂಬುದರಿಂದ ತಾವರೆ ಹೂವಿನಿಂದ ಪೂಜಿಸುತ್ತೇವೆ ಎನ್ನುತ್ತಾರೆ.

ವೈದ್ಯಕೀಯ ರೀತಿಯಲ್ಲೂ, ತಾವರೆಯ ಔಷಧಿಯ ಗುಣಗಳನ್ನು ಜಗತ್ತು ಅರಿತಿದೆ. ತಾವರೆ ಹೂವಿನಲ್ಲಿ Protein (ಸಾವಯವ ರಸಾಯನ), Linoleic acid (ಲಿನೊಲಿಯಕ್ ಆಮ್ಲ),  Phosphorus (ರಂಜಕ) Iron, Vitamin A, Vitamin C, Copper ಜತೆಗೆ Manganese ಮುಂತಾದುವು ಇರುವುದಲ್ಲದೆ, ತಾವರೆಯ ದಂಟುಗಳಲ್ಲಿರುವ ನೀರಿನಾಂಶ, ನಾರಿನಾಂಶಗಳು  ಮಧುಮೇಹ, ರಕ್ತದೊತ್ತಡ, ರಕ್ತಹೀನತೆ, ಮಜ್ಜೆಯ ಒತ್ತಡ ಮುಂತಾದುವನ್ನು ಗುಣಪಡಿಸುತ್ತವೆ. ತಾವರೆಯ ಪಕಳೆಗಳು ದೇಹದ ಉಷ್ಣದಿಂದ ಉಂಟಾಗುವ ಕಣ್ಣುರಿ, ಕಣ್ಣಿನಲ್ಲಿ ನೀರು ಸೋರುವುದು ಮುಂತಾದ ಕಣ್ಣು ಖಾಯಿಲೆಗಳಿಗೆ ಔಷಧಿಯಾಗಿ ಉಪಯೋಗವಾಗುತ್ತದೆ. ತಾವರೆ ಮೆದುಳಿನ ಬೆಳವಣಿಗೆಗೆ ಉತ್ತಮ. ಜ್ಞಾಪಕ ಶಕ್ತಿಯನ್ನು ಉದ್ರೇಕಿಸುತ್ತದೆ. ನರಗಳನ್ನು ಬಲಿಷ್ಟಗೊಳಿಸುತ್ತದೆ ಎಂದು ಸಿದ್ಧ ವೈದ್ಯಕೀಯ ತಿಳಿಸುತ್ತದೆ.

“ಪತ್ರ ಪುಷ್ಪ ಫಲಂ ತೂಯಮ್ ಯೋ ಮೇ ಭಕ್ತಾಯ ಪ್ರ್ಯಚ್ಚದಿ”) (ಭಗವತ್ ಗೀತೆ 9:26

“ನನಗೆ ಭಕ್ತಿಯಿಂದ ಕೊಡುವ ಹಸಿರೆಲೆ, ಹೂ, ನೀರು, ಹಣ್ಣು ಏನಾದರೂ ಅದನ್ನು ನಾನು ಸ್ವೀಕರಿಸುತ್ತೇನೆ!” ಎಂದು ಹೇಳುವ ಭಗವಂತನ ಬಳಿ,

“ಭಗವಂತ, ಎಲ್ಲ ಒಳ್ಳೆಯ ಗುಣಗಳೂ ತುಂಬಿರುವ ಕೆಂದಾವರೆ ಹೂಗಳಿಂದ ನಿನ್ನನ್ನು ದರ್ಶನ ಮಾಡಲು ಬಂದಿದ್ದೇವೆ!

ನಮ್ಮ ಪವಿತ್ರ ಭಕ್ತಿಯನ್ನು ಒಪ್ಪಿಕೊಂಡು, ನಮ್ಮ ದುಃಖವನ್ನು ನೀಗಿಸಿ, ನಿನ್ನನ್ನು ಅಗಲದಂತಹ ವರವನ್ನು ಕೊಟ್ಟು ನಮ್ಮನ್ನು ಆಲಿಂಗಿಸಿಕೊಳ್ಳುವಂತವನಾಗು…” ಎಂದು ಇಪ್ಪತ್ತೆರಡನೇಯ ದಿನದಂದು ಪೂಜಿಸುತ್ತಾಳೆ ಗೋದೈ ಆಂಡಾಳ್!


ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply