ತನಗೆ ತಾನೇ ಮಾತಾಡಿಕೊಳ್ಳುವ ಮಾಸ್ಟರ್: ಒಂದು ಝೆನ್ ಕಥೆ

ಝೆನ್ ಮಾಸ್ಟರ್ ಬೋಕುಜು ತನ್ನ ಹೆಸರು ತಾನೇ ಕರೆದುಕೊಂಡು ತಾನೇ ಓಕೊಳ್ಳುತ್ತಿದ್ದುದು ಯಾಕೆ? ಈ ಚಿಕ್ಕಥೆ ಓದಿ… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ಬೋಕುಜು ಬಹಳ ಹೊತ್ತು ಒಬ್ಬನೇ ಒಂದು ಗುಹೆಯಲ್ಲಿ ಸಮಯ ಕಳೆಯುತ್ತಿದ್ದ. ಒಮ್ಮೊಮ್ಮೆ ಗುಹೆಯಿಂದ ಜೋರಾಗಿ ಬೋಕುಜನ ಧ್ವನಿ ಕೇಳಿಸುತ್ತಿತ್ತು.

“ ಬೋಕುಜು “

ಮಾಸ್ಟರ್ ತನ್ನ ಹೆಸರನ್ನೇ ಜೋರಾಗಿ ಕೂಗುತ್ತಿದ್ದ ಮತ್ತು ತಾನೇ ಉತ್ತರಿಸುತ್ತಿದ್ದ.

“ ಹಾಂ, ನಾನಿಲ್ಲೇ ಇದ್ದೇನೆ “

ಹಗಲು, ರಾತ್ರಿ ಯಾವಾಗಲಾದರೂ ಈ ಸಂಭಾಷಣೆ ಗುಹೆಯಿಂದ ಕೇಳಿ ಬರುತ್ತಿತ್ತು. ಬೋಕುಜು ನ ಶಿಷ್ಯರಿಗೆ ಇದು ಬಹಳ ಕುತೂಹಲ ಹುಟ್ಟಿಸುತ್ತಿತ್ತು. ಮಾಸ್ಟರ್ ನ ಈ ವರ್ತನೆ ಅವರಿಗೆ ಅರ್ಥ ಆಗುತ್ತಿರಲಿಲ್ಲ.

ಒಂದು ದಿನ ಒಬ್ಬ ಶಿಷ್ಯ ಮಾಸ್ಟರ್ ನ ಪ್ರಶ್ನೆ ಮಾಡಿದ,

“ ಯಾಕೆ ಮಾಸ್ಟರ್ ನೀವು ನಿಮ್ಮ ಹೆಸರನ್ನೇ ಕೂಗುತ್ತೀರಿ ಮತ್ತು ಆ ಕರೆಗೆ ನೀವೇ ಉತ್ತರಿಸುತ್ತೀರಿ ? “

“ ಒಮ್ಮೊಮ್ಮೆ ಆಲೋಚನೆಗಳು ನನ್ನನ್ನು ಸುತ್ತಿಕೊಳ್ಳುತ್ತವೆ. ಆಗ ನನ್ನನ್ನು ಎಚ್ಚರಿಸಿಕೊಳ್ಳಲು ನಾನು ಹೀಗೆ ಮಾಡುತ್ತೇನೆ ಮತ್ತು ಹೀಗೆ ಮಾಡುವುದರಿಂದ ನನ್ನ ಎಲ್ಲ ಆಲೋಚನೆಗಳು, ಆತಂಕಗಳು ಮಾಯವಾಗುತ್ತವೆ. “

ಬೋಕುಜು, ಶಿಷ್ಯನಿಗೆ ಉತ್ತರಿಸಿದ.

ಆಮೇಲೆ ಬೋಕುಜುನಿಗೆ ವಯಸ್ಸಾಯಿತು, ತನ್ನ ಕೊನೆಯ ಎರಡು ಮೂರು ವರ್ಷ ಬೋಕುಜು ಬಹಳ ಆ್ಯಕ್ಟಿವ್ ಆಗಿ ಇದ್ದ ಮತ್ತು ತನ್ನ ಹಳೆಯ ರೂಢಿಯನ್ನು ಪೂರ್ತಿಯಾಗಿ ನಿಲ್ಲಿಸಿಬಿಟ್ಟಿದ್ದ. ಶಿಷ್ಯನೊಬ್ಬ ಈ ಬಗ್ಗೆ ಬೋಕುಜು ನ ವಿಚಾರಿಸಿದಾಗ, ಮಾಸ್ಟರ್ ಹೀಗೆ ಉತ್ತರಿಸಿದ.

“ ಎಷ್ಟೇ ಆಲೋಚನೆ, ಆತಂಕಗಳು ನನ್ನ ಸುತ್ತುವರೆದಿದ್ದರೂ ನಾನು ಯಾವುದಕ್ಕೂ ಅಂಟಿಕೊಂಡಿಲ್ಲ ಹಾಗಾಗಿ ನಾನು ಕಳೆದುಹೋಗುವ ಆತಂಕ ಈಗ ನನಗಿಲ್ಲ. ಆದ್ದರಿಂದಲೇ ನನ್ನನ್ನು ಎಚ್ಚರಿಸಿಕೊಳ್ಳುವ ಹಳೆಯ ರೂಢಿಯನ್ನ ನಿಲ್ಲಿಸಿಬಿಟ್ಟಿದ್ದೇನೆ. ನೀವು ಮಾತಾಡುವಾಗ, ಪ್ರಶ್ನೆ ಕೇಳುವಾಗ ಮಾತ್ರ ನಾನು ನಿಮ್ಮೊಡನೆ ವ್ಯವಹರಿಸುತ್ತಿರುತ್ತೇನೆ ಮತ್ತು ಮುಂದಿನ ಕ್ಷಣದಲ್ಲಿ ಮತ್ತೆ ಸುತ್ತಮುತ್ತಲಿನೊಡನೆ ಒಂದಾಗಿ ಬಿಡುತ್ತೇನೆ. “

Leave a Reply