ಆಲದೆಲೆಯೊಡೆಯಾ…. : ಧನುರ್ ಉತ್ಸವ ~ 26

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತಾರನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತಾರನೇಯ ದಿನ

ರಕ್ಷಕನೇ ಮಣಿವಣ್ಣಾ ಮಾರ್ಗಶಿರ ಮಜ್ಜನಕೆ

ಉತ್ತಮರು ಮಾಡುವುದದೇನೆಂದು ಕೇಳಿದೊಡೆ

ಲೋಕಗಳೆಲ್ಲ ನಡುಗುವ ತೆರೆದಿ ಮೊಳಗುವ

ಹಾಲ ಬಣ್ಣದ ನಿನ್ನ ಪಾಂಚಜನ್ಯವನು

ಹೋಲ್ವಶಂಖಗಳ ಬಹು ಆಗಲವಾದಂಥಾ

ದೊಡ್ಡ ಡೋಲುಗಳ ಮಂಗಳವ ಹಾಡುವರ

ಮಂಗಳದ ದೀಪಗಳ ಧ್ವಜಗಳ ಮೇಲುಕಟ್ಟುಗಳ

ಆಲದೆಲೆಯೊಡೆಯಾ ನೀ ಕರುಣಿಸೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ   (ಅರಭಿ ರಾಗ – ಆದಿ ತಾಳ)

“ಮಹಾ ವಿಷ್ಣುವೇ, ನೀಲವರ್ಣ ಕಣ್ಣಿನ ಕೃಷ್ಣನೇ….! ಮಾರ್ಗಶಿರ ವ್ರತವನ್ನು ಆಚರಿಸುವ ವಿಧಾನಗಳ ಬಗ್ಗೆ ನಮ್ಮ ಪೂರ್ವಜರು ಹೇಳಿರುವುದನ್ನು ನಾವು ಪಾಲಿಸಲು ಬಯಸುತ್ತೇವೆ.

ಆಲದ ಎಲೆಯಲ್ಲಿ ಮಲಗಿರುವವನೇ ನೀನು, ನಾವು ವ್ರತವನ್ನು ಆಚರಿಸಲು ಜಗವೇ ನಡುಗುವಂತಹ ಶಬ್ಧವನ್ನು ಮೊಳಗುವ ಹಾಲಿನ ಬಣ್ಣದ ನಿನ್ನ ಪಾಂಚಜನ್ಯದಂತೆ ಕಾಣುವ ಬಲಮುರಿ ಶಂಖಗಳನ್ನೂ, ದೊಡ್ಡ ಡೋಲುಗಳನ್ನೂ, ಮಂಗಳ ಹಾಡುವವರನ್ನೂ, ಮಂಗಳ ದೀಪಗಳನ್ನೂ, ಧ್ವಜಗಳನ್ನೂ, ನಮಗೆ ನೀಡಿ ದಯಪಾಲಿಸಬೇಕು..” ಎಂದು ಹಾಡುತ್ತಾಳೆ ಗೋದೈ….!

“ಆಲದೆಲೆಯೊಡೆಯಾ….”

“ಆಲದಮರದ ಎಲೆಯ ತಳಿರಿನ ಮೇಲೆ ಮಲಗಿರುವ ಸುಂದರ ಕೃಷ್ಣನೇ..ಆ ಎಳೆಯ ತಳಿರಿನಲ್ಲಿ, ಆರಾಮವಾಗಿ ಮಲಗಿಕೊಂಡೇ, ಈ ಬ್ರಹ್ಮಾಂಡವನ್ನೂ, ಭೂಲೋಕವನ್ನೂ ಸಪ್ತಸಾಗರವನ್ನೂ ಕಾಪಾಡುವವನೇ …ನಮ್ಮ ಕೃಷ್ಣನೇ , ನಮಗೆ ಮೋಕ್ಷವನ್ನು ಕರುಣಿಸು” ಎನ್ನುತ್ತಾಳೆ ಗೋದೈ.

ಕೃಷ್ಣ ಬಹಳ ಪವಿತ್ರವಾದವನು, ತನ್ನನ್ನು ಎದುರಿಸಿ ನಿಂತವರಿಗೂ ಮೋಕ್ಷವನ್ನು ಕರುಣಿಸಿದ ಮಹಾ ಧಾನಶೂರನವನು. ಅಂತಹವನು ತನ್ನನ್ನು ಸ್ತುತಿಸುವರಿಗೆ ಸದ್ಗತಿ ನೀಡದೆ ಇರುತ್ತಾನೇಯೇ?

ಕೃಷ್ಣನು ಅರಿತುಕೊಳ್ಳುವಂತೆ ಅವನ ಪಾದಗಳನ್ನು ಹಿಡಿದುಕೊಂಡರೆ, ಅವನ ಕಣ್ಣ ನೋಟ ತಾಕಿದರೆ, ಅವನ ಕೈಗಳು ನಮ್ಮನ್ನು ಮುಟ್ಟಿದರೆ ಮೋಕ್ಷ ದೊರಕುತ್ತದೆ ಎಂಬುದು ನಮಗೆ ತಿಳಿದದ್ದೇ.

ಅವನಿಗೆ ಅರಿಯುವಂತೆ ತಾಕಿದರೂ, ಅವನ ಅರಿವಿಲ್ಲದೆ ಅವನ ಅವಯವಗಳು ತಾಕಿದರೂ ಸಹ, ಅವು ನಮಗೆ ಮೋಕ್ಷವನ್ನು ನೀಡುತ್ತದೆ. ಹಾಗೆ ನಡೆದಿರುವುದಕ್ಕೆ ಸಾಕ್ಷಿಗಳನ್ನು ಗುರುತಿಸಿ ಹೇಳುತ್ತದೆ ರಾಮಾಯಣ.

ವಿಶ್ವಾಮಿತ್ರರೊಂದಿಗೆ ಮಿಥಿಲೆಗೆ ಹೋಗುವ ದಾರಿಯಲ್ಲಿ ಒಂದು ಬಟ್ಟ ಬಯಲಿನಲ್ಲಿ ಬಿದ್ದಿದ್ದ ಒಂಟಿ ಕಲ್ಲಿನಲ್ಲಿ ತುಳಸಿಯ ಗಿಡ ಬೆಳೆದಿರುವುದನ್ನು ರಾಮ  ನೋಡುತ್ತಾನೆ.

“ಇದು ಏನು, ಹೀಗೊಂದು ಅದ್ಭುತ. ಕಲ್ಲಿನೊಳಗೆ ಹೇಗೆ ಇಷ್ಟೊಂದು ತೇವ” ಎಂದು ರಾಮ ಆಶ್ಚರ್ಯದಿಂದ ಕೇಳಿದಾಗ,

“ಒಬ್ಬ ಪುರುಷನಿಂದ ಮೋಸಗೊಳಿಸಲ್ಪಟ್ಟು, ಮತ್ತೊಬ್ಬ ಪುರುಷನಿಂದ ಶಪಿಸಲ್ಪಟ್ಟ ಪತಿವ್ರತೆ ಹೆಣ್ಣು, ಇಲ್ಲಿ ಕಲ್ಲಾಗಿದ್ದಾಳೆ. ಒಬ್ಬ ಉತ್ತಮನ ಕಾಲು ತಾಕಿದರೆ, ಅವಳಿಗೆ ವಿಮೋಚನೆ ದೊರಕುತ್ತದೆ ಎಂದು ಕಾಲಾನುಕಾಲದಿಂದ  ಅವನ ಬರುವಿಗಾಗಿ ಕಾಯುತ್ತಿದ್ದಾಳೆ ಆ ಹೆಣ್ಣು…!” ಎಂದು ವಿಶ್ವಾಮಿತ್ರರು ಹೇಳುತ್ತಾರೆ.  

ಅಲ್ಲಿ ಕಲ್ಲಾಗಿ ಕಾಯುತ್ತಿದ್ದವಳೇ ಅಹಲ್ಯೆ! ಪಂಚ ಕನ್ಯೆಯರಲ್ಲಿ ಒಬ್ಬಳೂ, ಮಹರ್ಷಿ ಗೌತಮರ ಧರ್ಮಪತ್ನಿಯೂ ಆದ ಅಹಲ್ಯೆ. ಇಂದ್ರನಿಂದ ಕಪಟವಾಗಿ ವಂಚಿಸಲ್ಪಟ್ಟು, ನಂತರ ಗಂಡನಿಂದ ಶಪಿಸಲ್ಪಟ್ಟು, ಬಂಡೆಯಾದ ಹೆಣ್ಣವಳು. ಕಲ್ಲಾದರೂ ಅವನ ಪತಿಯನ್ನೇ ಪೂಜಿಸಿದವಳು.

ತನ್ನ ಪತಿಯನ್ನು ಹೊರತು ಮತ್ತೊಬ್ಬ ಗಂಡನ್ನು ತನ್ನ ಕನಸಿನಲ್ಲೂ ಬಯಸದ ಅಹಲ್ಯೆ ಎಂಬ ಪತಿವ್ರತೆಯ ಶಾಪ, ಪತ್ನಿಯ ಹೊರತು ಬೇರೆ ಯಾರನ್ನೂ ಮನಸಾರೆಯೂ ಬಯಸದ ರಾಮನ ಕಾಲು ತಾಕಿದೊಡನೆ ಶಾಪ ವಿಮೋಚನೆಯಾಗಿ, ಕಲ್ಲಾಗಿ ಬಿದ್ದಿದ್ದವಳು ಮಾನವಳಾಗುತ್ತಾಳೆ!

ಕಲ್ಲಾಗಿ ಬಿದ್ದಿದ್ದರೂ ದೇವರಿಗೆ ಅರ್ಹವಾದ ತುಳಸಿಯನ್ನು ಹೊತ್ತುಕೊಂಡು, ಅನೇಕ ವರ್ಷಗಳು ಕಾಯುತ್ತಿದ್ದ ಅಹಲ್ಯೆ, ರಾಮನ ಪಾದ ತಾಕಿದ್ದರಿಂದ ಮೋಕ್ಷ ಪಡೆಯುತ್ತಾಳೆ. ಅಹಲ್ಯೆಯ ಕಥೆ ಹೀಗಿರುವಾಗ, ಕಾಡಿನೊಳಗೆ ಜೀವಿಸುತ್ತಿದ್ದ ಗುಹನ ಕಥೆ ಹೇಗಿದೆ ಎಂದು ನೋಡೋಣವೇ?

ತಂದೆ ದಶರಥನ ಮಾತಿನಂತೆ, ಸೀತೆ ಮತ್ತು ಲಕ್ಷ್ಮಣರೊಂದಿಗೆ ವನವಾಸ ಹೊರಡುತ್ತಾನೆ ರಾಮ. ಅಯೋಧ್ಯೆಯಿಂದ ಬಂದ ರಾಮನಿಗೆ ಗಂಗೆಯನ್ನು ದಾಟಿಸಿ ಕಾಡಿಗೆ ಹೋಗಲು ಗುಹ ದೋಣಿಯನ್ನು ನಡೆಸಿ ನೆರವಾಗುತ್ತಾನೆ.  

ಗುಹ ರಾಮನನ್ನು ಎಂದೂ ನೋಡಿದವನಲ್ಲ. ಆದರೂ, ಅವನ ಕಲ್ಯಾಣ ಗುಣಗಳನ್ನು ಕೇಳಿ ಅರಿತಿದ್ದ ಕಾರಣದಿಂದ ರಾಮನ ಮೇಲೆ ಅಪಾರ ಪ್ರೀತಿಯಿಟ್ಟುಕೊಂಡಿರುತ್ತಾನೆ.

‘ಸ್ವಚ್ಛ ಮನಸ್ಸಿನವನು, ತಾಯಿಗಿಂತಲೂ ಮಿಗಿಲಾದವನು..’

ಎಂದು ರಾಮಯಣದಲ್ಲಿ ಹಾಡಲ್ಪಡುವ ಗುಹ ನಿಜವಾಗಲೂ ಬಿಲ್ವ ಎಂಬ ಬುಡಕಟ್ಟು ಜನಾಂಗದ ನಾಯಕ. ಒರಟು ಗುಣವೂ, ನೋಡುವುದಕ್ಕೆ ಅಸಹ್ಯವಾದ ರೂಪವೂ ಉಳ್ಳವನು.

ಗುಹ, ಮೊದಮೊದಲು ರಾಮನನ್ನು ನೋಡಿದಾಗ, ಅವನು ಇದನ್ನೆಲ್ಲಾ ಉಣುತ್ತಾನೆಯೇ, ಇಲ್ಲವೋ ಎಂದು ಅರಿಯದೆ ಮೀನು ಜೇನನ್ನು ರಾಮನ ಹಸಿವನ್ನು ಹಿಂಗಿಸಲು ತಂದ ತಾಯಿಯ ಮನಸುಳ್ಳವನು.

ಅಂತಹ ಪ್ರೀತಿಯನ್ನು ಮೆಚ್ಚಿಕೊಂಡು, ‘ನನ್ನ ಪ್ರೀತಿಯ ಗೆಳೆಯನೇ !’ ಎಂದು ಶ್ರೀರಾಮ ತನ್ನ  ತೋಳುಗಳಲ್ಲಿ  ಅವನ ತೋಳನ್ನು  ಸೇರಿಸಿ ಆಲಿಂಗಿಸಿಕೊಂಡು,

“ಪ್ರೀತಿಯ ನಾವು ಇನ್ನು ಐದಾದೆವು…”

ಎಂದು ಅವನನ್ನೂ ತಮ್ಮ ನಾಲ್ವರೊಂದಿಗೆ ಒಬ್ಬನಾಗಿ, ತನ್ನ ಐದನೇಯ ಸಹೋದರನಾಗಿ ಸ್ವೀಕರಿಸುತ್ತಾನೆ.

ಗುಹ, ಬೇಟೆಯಾಡಿ ಮೃಗಗಳನ್ನು ಕೊಂದು ಕಾಡಿನಲ್ಲಿ ಜೀವಿಸುವ ಬೇಟೆಗಾರ. ತನ್ನ ಪವಿತ್ರ ಭಕ್ತಿಯಿಂದಲೂ, ಅಳಿಯದ ಪ್ರೀತಿಯಿಂದಲೂ ರಾಮನಿಂದ ಸಹೋದರ ಎಂದು ಸ್ವೀಕರಿಸಲ್ಪಟ್ಟು, ರಾಮನ ಆಲಿಂಗನದಿಂದ ರಾಮನ ತೋಳಿನ ಸ್ಪರ್ಶದಿಂದ ಮೋಕ್ಷ ಪಡೆಯುತ್ತಾನೆ.

ಗುಹನ ಕಥೆ ಇದಾದರೆ, ಕಬಂದನ ಕಥೆ ಮತ್ತೊಂದು ಬಗೆಯದು.

ರಮ್ಯಾ ಲಕ್ಷ್ಮಣರ ವನವಾಸದ ಸಮಯದಲ್ಲಿ, ರಾವಣ ಸೀತೆಯನ್ನು ಅಪಹರಿಸಿಕೊಂಡು ಬಾನಿನ ದಕ್ಷಿಣ ದಿಕ್ಕಿನ ಕಡೆ ಹಾರಿ ಹೋದನೆಂದು ಹೇಳಿ ಜಟಾಯು ಪಕ್ಷಿ ಸಾಯುತ್ತದೆ. ನಂತರ ಆ ಕಾಡಿನಲ್ಲಿ ಜಟಾಯುವಿನ ಅಂತ್ಯಕ್ರಿಯೆ ಮಾಡಿ, ರಾಮ ಲಕ್ಷ್ಮಣರು ದಕ್ಷಿಣದ  ಕಡೆ ಪಯಣಿಸುತ್ತಾರೆ.

ದಾರಿಯುದ್ದಕ್ಕೂ ಸೀತೆಯ ಜಾಡನ್ನು ಇಬ್ಬರೂ ಹುಡುಕುತ್ತಾ ಹೋಗುವಾಗ, ಅವರ ಎದುರು ದೊಡ್ಡ ಶಬ್ದದೊಂದಿಗೆ ಒಂದು ರಾಕ್ಷಸ ಮಾಂಸ ಪಿಂಡ ಬಂದು ನಿಲ್ಲುತ್ತದೆ.

ಆ ವಿಚಿತ್ರ ಆಕಾರದ ತಲೆಯೋ, ಕುತ್ತಿಗೆಯೋ ಕಾಣಿಸುವುದೇ ಇಲ್ಲ. ಕಣ್ಣು, ಬಾಯಿ ನೇರವಾಗಿ ಹೊಟ್ಟೆಯಲ್ಲಿತ್ತು. ತನ್ನ ಎರಡೂ ಕೈಗಳನ್ನು ಚಾಚಿ, ರಾಮ ಲಕ್ಷ್ಮಣರನ್ನು ಬಿಗಿಯಾಗಿ ಹಿಡಿದುಕೊಂಡ ಆ ಆಕಾರವೇ ‘ಕಬಂದ’. ತಾನು ಬಹಳ ಹಸಿವಿಂದ ಇರುವುದರಿಂದ ರಾಮ, ಲಕ್ಷ್ಮಣರನ್ನು ಭಕ್ಷಿಸುವುದಾಗಿ ಹೇಳಲು, ಕಣ್ಣು ಮಿಟುಕಿಸುವ ಸಮಯದಲ್ಲಿ, ಖಡ್ಗವನ್ನು ತೆಗೆದು ಆ ಅಸುರನ ಕೈಗಳನ್ನು ಕತ್ತರಿಸಿ ಹಾಕುತ್ತಾರೆ.

ಕೆಳಗೆ ಬಿದ್ದ ಅಸುರ, ಬಂದಿರುವುದು ರಾಮ ,ಲಕ್ಷ್ಮಣರೆಂದು ಅರಿತುಕೊಂಡು, “ನೀವು ನನ್ನನ್ನು ಕೊಲ್ಲಲು ಬರಲಿಲ್ಲ, ನಿಮ್ಮ ಕತ್ತಿಯಿಂದ ನನಗೆ ಶಾಪ ವಿಮೋಚನೆ ನೀಡಲು ಬಂದಿರುವಿರಿ ! ಎಂದು ತನ್ನ ಕಥೆಯನ್ನು ಹೇಳುತ್ತಾನೆ.

“ನನ್ನ ಹೆಸರು ಕಬಂದ… ಗಂಧರ್ವನೂ ಸಹ…ಸುಂದರವಾದ ರೂಪವುಳ್ಳ ನಾನು, ಒಮ್ಮೆ ನನ್ನ  ದುರಹಂಕಾರದಿಂದ ‘ಸ್ಥೂಲಶಿರ’ ಎಂಬ ಅಷ್ಟಾವಕ್ರ ಮುನಿಯ ರೂಪವನ್ನು ಅಪಹಾಸ್ಯ ಮಾಡಿದೆ, ಅವರ ಶಾಪದಿಂದ ನಾನೂ ಅವಲಕ್ಷಣವಾದ ಅಸುರನಾದೆನು.”

“ನಾನು ನನ್ನ ತಪ್ಪನ್ನು ಅರಿತು ಆ ಮುನಿವರ್ಯರ ಬಳಿ ಶಾಪ ವಿಮೋಚನೆ ಬೇಡಿಕೊಂಡಾಗ, ವಿಷ್ಣುವಿನ ಅವತಾರವಾದ ರಾಮ ಬಂದು ತನ್ನ ಖಡ್ಗದಿಂದ ನಿನಗೆ ವಿಮೋಚನೆ ನೀಡುತ್ತಾನೆ!” ಎಂದು ಹೇಳಿದ್ದರು.

ಹಾಗೆ ಇಂದು ನಾನು ನಿಮ್ಮ ಖಡ್ಗದಿಂದ ಮೋಕ್ಷ ಪಡೆದೆ ಎನ್ನುತ್ತಾ, ರಾಮನ ಖಡ್ಗ ತಾಕಿ, ಸುಂದರ ಪುರುಷನಾಗಿ ಮರುಹುಟ್ಟು ಪಡೆದ ಕಬಂದ, ರಾಮನ ಪಾದಗಳಿಗೆರಗಿ, ಸುಗ್ರೀವ , ಹನುಮಂತನ ಬಗ್ಗೆಯ ಮಾಹಿತಿಗಳನ್ನು ನೀಡಿ ಬೀಳ್ಕೊಡುತ್ತಾನೆ .

ಒಟ್ಟಾರೆ,

ಭಗವಂತನ ಪಾದ ತಾಕಿ ಮೋಕ್ಷ ಪಡೆದವಳು ಅಹಲ್ಯೆ!

ಭಗವಂತನ ಭುಜ ತಾಕಿ, ಉನ್ನತಿ ಪಡೆದು ಮೋಕ್ಷ ಗಳಿಸಿದವನು ಗುಹ!

ಭಗವಂತನ ಖಡ್ಗ ತಾಕಿ ಮೋಕ್ಷ ಪಡೆದವನು ಕಬಂದ!

ಹೀಗೆ ತನ್ನ ದೇಹದ ಯಾವ ಭಾಗ ಸೋಕಿದರೂ ದಯಪಾಲಿಸುವ ಕೃಷ್ಣನ ಶ್ರೀರೂಪದಲ್ಲಿ, ಗೋದೈ ಮೋಕ್ಷ ಕೇಳಿ ಶರಣಾದದ್ದು ಅವನ ಶ್ರೀಪಾದಗಳಿಗೆ!

ಮೂರು ಲೋಕವನ್ನು ಅಳೆದ ಮಹಾಬಲಿಗೆ  ಮೋಕ್ಷ ನೀಡಿದ ಆ ಶ್ರೀಪಾದ……

ಕಾಡಿಗೆ ನಡೆದು ರಾವಣನಿಗೆ ಮೋಕ್ಷ ನೀಡಿದ ಆ ಸ್ವರ್ಣಪಾದ……

ಪಾಂಡವರಿಗಾಗಿ ಧೂತನಾಗಿ ಹೋಗಿ ಕರ್ಣನಿಗೆ ಮೋಕ್ಷ ನೀಡಿದ ಪವಿತ್ರ ಪಾದ….

ಪ್ರೀತಿಯಿಂದ ಶರಣಾಗುವ ಗೋದೈಗೆ ಮಾತ್ರ ಮೋಕ್ಷವನ್ನು ಕೊಡದೆ ಹೋಗುತ್ತಾನೇಯೇ…?!

ಅದು ಅವಳಿಗೆ ಗೊತ್ತು. ಅರಿಯದೆ ಸೋಕಿದಾಗಲೇ ಕೃಪೆ ನೀಡುವ ಶ್ರೀಪಾದವನ್ನು ಅವನು ಅರಿಯುವಂತೆ ಆಲಿಂಗಿಸಿಕೊಂಡರೆ ಆ ಮೋಕ್ಷ ಖಂಡಿತ ಎಂಬುದರಿಂದಲೇ, “ನಿನ್ನ ಪಾದಗಳಿಗೆರಗಿ…” ಎಂದು ಭಗವಂತನ ಬಳಿ ಅವನ ಪಾದಗಳನ್ನು ನಮಸ್ಕರಿಸಿ, ಅವನ ಕೃಪೆಯಾದ ಮೋಕ್ಷವನ್ನು ಇಪ್ಪತ್ತಾರನೇಯ ದಿನ ಬೇಡುತ್ತಾಳೆ ಗೋದೈ ಆಂಡಾಳ್!

                                                                   ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply