ಹಲ್ಲಿಯು ನುಂಗಿತು ಹದಿನಾಲ್ಕು ಲೋಕವ… : ಪುರಂದರದಾಸರ ಮುಂಡಿಗೆ

ಹರಿದಾಸ ಸಾಹಿತ್ಯದಲ್ಲಿ ವೈವಿಧ್ಯ ಪ್ರಕಾರಗಳು. ಅವುಗಳಲ್ಲಿ ಮುಂಡಿಗೆಗಳೂ ಒಂದು. ಮೇಲ್ನೋಟಕ್ಕೆ ಸಹಜ ಅರ್ಥವನ್ನು ಕಾಣದ ರಚನೆಗಳವು. ಜೊತೆಗೆ ಅರ್ಥೈಸಿಕೊಂಡಂತೆ ಕೆಲವು ಹೊಳಹುಗಳು ಇಲ್ಲಿವೆ… । ನಾರಾಯಣ ಬಾಬಾನಗರ

ಇಲ್ಲಿಯೇ ಕುಳಿತಿದ್ದ ಭೂತವು-ಒಂದು-

ಹಲ್ಲಿಯು ನುಂತು ಹದಿನಾಲ್ಕು ಲೋಕವ    || ಪ ||

ಸೂಳೆಯ ಮನೆಯಲಿ ಇದೆಯೊಂದು ಕೋಳಿ |

ಕೋಳಿಯ ನಾಲಗೆ ಏಳು ತಾಳೆಯುದ್ದ ||

ಕೋಳಿ ನುಂಗಿತು ಏಳು ಕಾಳಿಂಗ ನಾಗನ |

ಮೇಲೊಂದು ಬೇಡಿತು ಸಿಂಹದ ಮರಿಯ    || 1 ||

ಕಾನನದೊಳಗೊಂದು ಇರುವುದು ಕೋಣ |

ಕೋಣನ ಕೊರಳಿಗೆ ಮುನ್ನೂರುಬಾವಿ ||

ಕೋಣ ನೀರಿಗೆ ಹೋಗಿ ಕ್ಷೋಣಿಕಪಿಯ ಕೊಂದು |

ಟೊಣ್ಣನ ಮನೆಯೊಳಗೌತನವಯ್ಯ            || 2 ||

ವೃಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |

ಪಕ್ಷಿಭಕ್ಷಣವಾದ ಅಮೃತದಹಣ್ಣು ||

ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |

ಶಿಕ್ಷೆಯ ಮಾಡಿದ ಪುರಂದರವಿಠಲ              || 3 ||

ಈ ಪದ್ಯದಲ್ಲಿ ಅನೇಕ ರೂಪಕಗಳಿವೆ. ಮೊದಲ ಸಾಲಿನಲ್ಲಿಯೇ ಭೂತ ಎಂಬ ರೂಪಕದ ಬಳಕೆ ಇದೆ. ಏನಿದರರ್ಥ ಅಂತ ಕಾಡುತ್ತದೆ. ಭಗವದ್ಗೀತೆಯ 18 ನೆಯ ಅಧ್ಯಾಯದಲ್ಲಿನ ಒಂದು ಶ್ಲೋಕ – ಅಸ್ತಿತ್ವಾದ್ ಭೂತನಾಮಭ್ಯಃ ಸರ್ವಜೀವೇಭ್ಯ ಏವ ಚ |      ಇಲ್ಲಿ ಭೂತವೆಂದರೆ ದೇಹವೆಂದು ಧ್ವನಿಸುತ್ತದೆ. ದೇಹದಲ್ಲಿ ಇಂದ್ರಿಯಗಳಿವೆ. ಇಂದ್ರಿಯಗಳೊಂದಿಗೆ ಸೇರಿದ ಮನಸ್ಸು  ಯಾವಾಗಲೂ ವಿಷಯಾಸಕ್ತಿಗಳೆಡೆಗೆ ಹರಿಯುತ್ತಿರುತ್ತದೆ. ಹಲ್ಲಿ ಮತ್ತು ಅದರ ನಾಲಗೆ ಇಂದ್ರಿಯಗಳಿಗೆ ಮತ್ತು ಮನಸ್ಸಿಗೆ ಸಂಕೇತಗಳಾಗಿವೆ. ಮನಸ್ಸು ಎಲ್ಲೆಂದರಲ್ಲಿ ಹರಿದಾಡುತ್ತದೆ. ಇದನ್ನು ಹೇಳಲು ಹದಿನಾಲ್ಕು ಲೋಕವು ಸೇರಿಕೊಂಡಿದೆ. ಇಂದ್ರಿಯಗಳು, ಮನಸ್ಸು ಎಲ್ಲವೂ ಭಗವಂತನ ನಾಮಸ್ಮರಣೆಗೆ ತೊಡಗಬೇಕಿದ್ದವು. ಇದರ ಜೊತೆಗೆ ಆವರಿಸಿಕೊಳ್ಳುವ ಮಾಯೆಯ ಪದರು  ಭಗವಂತನನ್ನು ಇನ್ನಿಷ್ಟು ದೂರ ಸರಿಸಿಬಿಡುತ್ತದೆ. ಸೂಳೆಯ ಮನೆ ರೂಪಕವು ಮಾಯೆಯನ್ನು ಹೇಳುತ್ತಿದೆ. ‘ ಮಾಯಿಕ ಗುಣ ಸುಟ್ಟು ತಿಂದೇನೆಂಬುದು ಬಾಯಿ’ ಮಹಿಪತಿರಾಯರ ಕೊರವಂಜಿಯ ಪದ್ಯದಲ್ಲಿನ ಸಾಲು ಇದನ್ನು ಧೃಡಪಡಿಸುತ್ತದೆ.ಶುದ್ಧವಿಲ್ಲದ ಇಂದ್ರಿಯ,ಮನಸ್ಸು-ಬುದ್ದಿ, ಚಿತ್ತಕ್ಷೋಭೆ ಭಗವಂತನ ವಿಸ್ಮರಣೆಯನ್ನು ಮಾಡುತ್ತವೆ ಎಂದು ಗೀತೆಯ ತೃತಿಯ ಅಧ್ಯಾಯ ಹೇಳುತ್ತದೆ. ಹೀಗಾದಾಗೆಲ್ಲಾ ಎಚ್ಚರಿಸುವವನು ಗುರು. ಗುರುವಿಗೆ ಪರ್ಯಾಯವಾಗಿ ಎಚ್ಚರಿಸುವ ಸಂಕೇತವಾಗಿ ಇಲ್ಲಿ ಕೋಳಿ ಬಳಕೆಯಾಗಿದೆ. ಗುರು ಯಾವಾಗಲೂ ದೊಡ್ಡವನು- ಅದನ್ನು ಏಳು ತಾಳೆಯುದ್ದವೆಂದು ವಿವರಿಸಲಾಗಿದೆ. ತಾಳೆ ಮರವೇ ಉದ್ದವಾದ ಕಾಂಡವಿರುವಂಥದ್ದು, ಅಂಥದರಲ್ಲಿ ಒಂದರ ಮೇಲೊಂದು ಇನ್ನೊಂದು ತಾಳೆಮರ ಜೋಡಿಸಿದರೆ ಇನ್ನೆಷ್ಟು ಉದ್ದವಾದೀತು? ಹೇಳುವ ತಾತ್ಪರ್ಯವಿಷ್ಟೆ- ಗುರು ದೊಡ್ಡವನು, ಸೂಕ್ತ ಮಾರ್ಗ ತೋರಿಸುವವ. ಜ್ಞಾನವನ್ನು ಗುರು ಮುಖೇನ ಪಡೆಯಬೇಕು.ಜ್ಞಾನ ನೀಡುವ ಜೊತೆಗೆ ಮೋಹ-ಮಮಕಾರಗಳನ್ನು ಗುರು ಅಳಿಯುವ. ನಾಗರಹಾವು ಮೋಹದ ಸಂಕೇತ. ಅದಕ್ಕೆ ಹಲವು ಮುಖಗಳು.ಇದಕ್ಕೆ ‘ಹಾವು ತುಳಿದೇನೇ ಮಾನಿನಿ, ಹಾವು ತುಳಿದು ಹಾರಿ ನಿಂತೆ ‘ ಶಿಶುನಾಳ ಶರೀಫರ ಪದ್ಯವನ್ನು ನೆನಪಿಸಿಕೊಳ್ಳಬಹುದು. ಅದಕ್ಕೆಂತಲೇ ಮಹಿಪತಿರಾಯರು ‘ ಗುರುಪಾದಲ್ಯದ ಧನ ಸಮಸ್ತ ‘ ಎಂದು ತಮ್ಮ ಒಂದು ಕೀರ್ತನೆಯಲ್ಲಿ ಹೇಳಿದ್ದಾರೆ. ಮೊದಲನೆಯ ನುಡಿಯ ಕೊನೆಯ ಸಾಲಿನಲ್ಲಿ ಸಿಂಹದ ಮರಿಯ ರೂಪಕ ಇದೆ. ಸಿಂಹ ನಿರ್ಭೀತಿಯ ಗುಣವುಳ್ಳದ್ದು. ವಿವೇಕವನ್ನು ಸೂಚಿಸಲು ಸಿಂಹದ ರೂಪಕ ಇಲ್ಲಿ ಬಳಕೆಯಾಗಿದೆ. ಒಟ್ಟಿನಲ್ಲಿ ಮಾಯೆ ,ಮೋಹ ಅಳಿದು ಗುರು ದೊರಕಿ ವಿವೇಕ ಬುದ್ಧಿ ಜಾಗೃತವಾಗಬೇಕು..

ಎರಡನೆಯ ನುಡಿಗೆ ಬರೋಣ. ಕಾನನದೊಳಗೊಂದು ಇರುವುದು ಕೋಣ – ಭವಾರಣ್ಯದಲ್ಲಿ,ಸಂಸಾರದಲ್ಲಿ ಬಿದ್ದು ತೊಳಲಾಡುತ್ತಿದ್ದೇವೆ. ಕಾನನ ಎಂಬುದು ಭವಾರಣ್ಯಕ್ಕೆ ರೂಪಕ. ಕೋಣ, ಶಿಸ್ತಿಲ್ಲದ ಪ್ರಾಣಿ. ಗೊತ್ತು ಗುರಿ ಇಲ್ಲದೆ ಎಲ್ಲೆಂದರಲ್ಲಿ ನುಗ್ಗುವ ಪ್ರಾಣಿ. ನಾವೂ ಕೂಡಾ ಹಾಗೆ ಅಲ್ಲವೆ?. ಅಜ್ಞಾನಿಗಳಾದ ಜೀವಪಶುಗಳು ಕೋಣವಾಗಿದೆ ಇಲ್ಲಿ. ಜೀವಿಗಳಿಗೆ ಸಂಸಾರದ ನೂರಾಎಂಟು ತಾಪತ್ರಯಗಳು. ಸಂಸಾರದ ತಾಪತ್ರಯಗಳನ್ನೇ ಇಲ್ಲಿ ಮುನ್ನೂರುಬಾವಿ ಎಂದು ಹೇಳಲಾಗಿದೆ. ಮೆಟ್ಟಿಲುಗಳಿಲ್ಲದ ಬಾವಿಯಲ್ಲಿ ಬಿದ್ದಾಗ ಆಗುವ ಅವಸ್ಥೆಯನ್ನು ಊಹಿಸಿಕೊಳ್ಳಿ. ಇದರಿಂದ ಹೊರಬಂದು ಭಗವಂತನ ನಿತ್ಯ ಸ್ಮರಣೆಯಲ್ಲಿ ತೊಡಗುವುದು ಹೇಗೆ? ಇದಕ್ಕೆ ಜ್ಞಾನ,ಕರ್ಮಗಳು ಬೇಕು. ‘ ಜ್ಞಾನವಿಲ್ಲದೆ ಮೋಕ್ಷವಿಲ್ಲ’ ಜ್ಞಾನ ದೊರಕಿ ವೈರಾಗ್ಯವುಂಟಾಗಬೇಕಾದರೆ ಚಂಚಲ ಮನ ನಿಶ್ಚಲವಾಗಿ ಧೃಡವಾಗಬೇಕು. ಚಿತ್ತ ಚಂಚಲವಾಗಬಾರದು ನೋಡಿ ಎಂತಲೂ ಮಹಿಪತಿರಾಯರು ಹೇಳುವರು. ಇವೆಲ್ಲ ಸಂಗತಿಗಳು ಕೋಣ ನೀರಿಗೆ ಹೋಗಿ ಕ್ಷೋಣಿಕಪಿಯಕೊಂದು ಎಂಬ ಸಾಲಿನಲ್ಲಿ ಅಡಕವಾಗಿವೆ. ನೀರು ಎಂಬುದು ಜ್ಞಾನ-ಕರ್ಮಗಳ ಸಂಕೇತವಾದರೆ ಕೋಪಿಯೆಂಬುದು ಮನಸ್ಸನ್ನು ಹೇಳುತ್ತದೆ.. ಮನವೆಂಬ ಮರ್ಕಟ ಎಂದು ಅನೇಕ ಕಡೆಗೆ ಪ್ರಸ್ತಾಪವಾದುದನ್ನು ನೆನಪಿಸಿಕೊಳ್ಳಬಹುದು. ಜ್ಞಾನ-ಕರ್ಮದ ದಾರಿಯನ್ನು ಹೇಳಿಕೊಡುವ ನಿಯತ ಗುರು ಬೇಕು. ಇದನ್ನೇ ಟೊಣ್ಣನೆಂದು ಇಲ್ಲಿ ನಿರೂಪಿತಗೊಂಡಿದೆ. ನಿಯತ ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನವೆಂಬ ಮೌನಕ್ಕೆ ಮನವನ್ನು ಎತ್ತರಕ್ಕೇರಿಸಬೇಕು. ಇದು ಮನೆಯೊಳಗೌತನವಯ್ಯ ಎಂಬುದಕ್ಕೆ ಹೇಳಿದ್ದು. ಧ್ಯಾನ ಮೌನಗಳೆಂಬ ಜ್ಞಾನ ಸಾಧನಗಳನು ನೀಡು ಎಂದು ಕೃಷ್ಣದಾಸರು ತಮ್ಮ ಒಂದು ಉಗಾಭೋಗದಲ್ಲಿ ಹೇಳುತ್ತಾರೆ.

ಇದನ್ನೆಲ್ಲಾ ಅನುಭವಿಸುವ ಜೀವ ಜಗತ್ತಿಗೆ ಬರುವ ಉದ್ದೇಶವೇನು? ಮೂಲ ಗುರಿ ಜೀವನ-ಮರಣದ ಚಕ್ರದಿಂದ ಮುಕ್ತಿ ಕಾಣುವುದು. ಮೂರನೆಯ ನುಡಿಯ ಮೊದಲ ಸಾಲು- ವೃಕ್ಷದ ಮೇಲೊಂದು ಸೂಕ್ಷ್ಮದ ಪಕ್ಷಿ .ವೃಕ್ಷವೆಂದರೆ ಜಗತ್ತೆಂದು ಗೀತೆಯ 15 ನೆಯ ಅಧ್ಯಾಯದಲ್ಲಿ ನಿರೂಪಿತಗೊಂಡಿದೆ. ಜಗತ್ತಿಗೆ ಜೀವನ ಆಗಮನ. ಜೀವವೇ ಇಲ್ಲಿ ಪಕ್ಷಿಯಾಗಿದೆ. ಪಕ್ಷಿಯ ಉದ್ದೇಶ ಅಮೃತದ ಹಣ್ಣಿನ ಭಕ್ಷಣೆ. ಮುಕ್ತಿಯೇ ಇಲ್ಲಿ ಅಮೃತದ ಹಣ್ಣು. ಮುಕ್ತಿ ದೊರಕಬೇಕಾದರೆ ಜ್ಞಾನ-ಭಕ್ತಿ-ಕರ್ಮಗಳ ಕ್ರಮಗಳನ್ನು ಅನುಸರಿಸಬೇಕು. ಕೊನೆಗೆ ಇವುಗಳನ್ನೆಲ್ಲಾ ಪರೀಕ್ಷಿಸಿ ನಿರ್ಣಯಿಸುವವನು ಭಗವಂತ- ಇದನ್ನೇ ಶಿಕ್ಷೆಯ ಮಾಡಿದ ಪುರಂದರ ವಿಠಲ ಎಂಬ ಸಾಲು ವಿಶದಪಡಿಸುತ್ತದೆ. ಕೊನೆಗೆ ಜೀವವವನ್ನು ಕರ್ಮಾನುಸಾರ ಸ್ವರ್ಗಕ್ಕೆ-ನರಕಕ್ಕೆ ಕರೆದುಕೊಂಡು ಹೋಗುವವರು ಯಮಭಟರು,ದೇವದೂತರು.ಇವರೇ ಇಲ್ಲಿ ರಾಕ್ಷಸ ಬ್ರಾಹ್ಮಣರಾಗಿದ್ದಾರೆ.

ಯಾವಾಗಲೂ ಸಾಧಕರ ಚಿತ್ತ ಮುಕ್ತಿ. ಅದಕ್ಕೆಂತಲೇ ಮಹಿಪತಿರಾಯರು ‘’ ದಿವ್ಯಾಮೃತ ಫಲವು ಸವಿಯು ಸೇವಿಸುವುದಕೆ: ಹೊಯಲವಾದರು ಮಹಾಮಹಿಮರಿದು ನೋಡಿ ‘’  ಎಂದು ಹೇಳುತ್ತಾರೆ. ನಮ್ಮ ದಾರಿಯು ಸಾಧನೆಯತ್ತ ಆಗಬಾರದೇ?!

Leave a Reply