ಸರ್ವಂ ಕೃಷ್ಣಾರ್ಪಣ ಮಸ್ತು! : ಧನುರ್ ಉತ್ಸವ ~ 27

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತೇಳನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತೇಳನೇ ದಿನ

ಒಪ್ಪದಿಹರನುಂ ಗೆಲ್ವೆ ಗುಣವುಳ್ಳ ಗೋವಿಂದಾ

ನಿನ್ನನ್ನೇ ಹಾಡಿ ಇಷ್ಟಾರ್ಥವಂ ಕೊಂಡು ಪಡೆವ ಸಮ್ಮಾನವಿದು

ನಾಡು ಪೊಗಳುವುದು ಗುಣದೊಳೊಳ್ಳೆಯ

ಕೈಯ ಆಭರಣ ತೋಳು ಬಳೆ ಕಿವಿಯೋಲೆಯೊಡು

ಕಾಲ್ಗಡಗ ಎಂಬೆಲ್ಲ ಹಳವಾಭರಣದಿಂ ನಾವ್ ಸಿಂಗರಿಸಿಕೊಳ್ಳುವೆವು

ವಸ್ತ್ರಗಳ ನುಡುವೆವು ತದನಂತರದಿ ಹಾಲ್ ಅನ್ನ ಮುಳುಗುವೊಲು

ತುಪ್ಪವ ಹುಯ್ದು ಮೊಳಗೈಯವರೆಗೆ ಬರುವಂತುಂಡು

ಕೂಡಿರ್ದು ಮುಳುಗೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಆನಂದ ಭೈರವಿ ರಾಗ – ಆದಿ ತಾಳ)

“ವೈರಿಗಳೆಲ್ಲರನ್ನೂ ಜಯಿಸುವ ವಿಶೇಷ ಗುಣವುಳ್ಳ  ಗೋವಿಂದನೇ…ನಿನ್ನ ಗುಣಗಾನ ಮಾಡಿ ನಿನ್ನ ಕೃಪೆಯನ್ನು ಪಡೆಯಲು ಬಂದಿಹೆವು….

ನೀನು ಸಂತೋಷದಿಂದ, ಈ ದೇಶವೇ ವಿಸ್ಮಯಿಸುವ ಉಡುಗೊರೆಗಳಾಗಿ ಕೈಯಲ್ಲಿ ತೊಡುವ ಕಡಗ, ತೋಳನ್ನು ಅಲಂಕರಿಸುವ ತೋಳಬಂಧಿ, ಕಿವಿಯಲ್ಲಿ ತೊಟ್ಟ ಓಲೆ, ಹೂಗಳು, ಕಾಲಿನ ಕಡಗ ಮುಂತಾದ ಆಭರಣಗಳನ್ನು ನಮಗೆ ತರುವಂತವನಾಗು…..

ಅವುಗಳನ್ನು ತೊಡುವುದಲ್ಲದೆ, ಹೊಸ ವಸ್ತ್ರ ಉಟ್ಟು, ಈ ವ್ರತವನ್ನು ಸಂಪೂರ್ಣಗೊಳಿಸುವ ರೀತಿಯಲ್ಲಿ, ನಿನ್ನೊಂದಿಗೆ ಜತೆಯಾಗಿ ಕುಳಿತು ತುಪ್ಪ ಸೋರುವ ಹಾಲನ್ನವನ್ನು ಉಣಲು ಬಂದಿಹೆವು… ಕೃಪೆ ತೋರುವಂತವನಾಗು…”  ಎಂದು ‘ಕೂಡಾರವಲ್ಲಿ’* ಯ ಈ ದಿನ ಹಾಡುತ್ತಾಳೆ ಗೋದೈ ನಾಚ್ಚಿಯಾರ್! (* ವ್ರತದ 27 ನೇಯ ದಿನ – ಈ ದಿನ ವ್ರತದ ವಿಶೇಷ ದಿನ – ಇಂದು ಶ್ರೀರಂಗಂ ದೇವಸ್ಥಾನದಲ್ಲಿ ಗರ್ಭಗೃಹದಲ್ಲಿ  ಶ್ರೀನಿವಾಸನೊಂದಿಗೆ ಆಂಡಾಳ್ ಐಕ್ಯವಾದಳು ಎಂಬ ಒಂದು ನಂಬಿಕೆ)

‘ಕೂಡಾರವಲ್ಲಿ*…!’ (* ಎಂದರೆ, ದ್ವೇಷಿಸುವರು, ದೂರ ಸರಿದವರು, ಅಭಿಪ್ರಾಯ ಭೇದವುಳ್ಳವರು ಎಂದು ಅರ್ಥ. ನಿಮಗೆ ವಿರೋಧವಾಗಿರುವ ಎಲ್ಲರನ್ನೂ ಬಯಸುವಂತೆ ಮಾಡುವ ಸಾಮರ್ಥ್ಯವುಳ್ಳ ದಿನ ಇದು ಎಂಬ ನಂಬಿಕೆ)

ಧನುರ್ ಮಾಸದ 27ನೇಯ ದಿನವಾದ ಇಂದು,  ಗೋದಾ ವ್ರತದ (ಪಾವೈ ನೋಂಬು) ಬಹಳ ಶ್ರೇಷ್ಟವಾದ ದಿನ. ಇಂದೇ ಪರಂದಾಮ ಆಂಡಾಳಿಗೆ ವಿವಾಹದ ವರವನ್ನು ದಯಪಾಲಿಸಿದ ಪವಿತ್ರ ದಿನ.

ತನ್ನನ್ನು ಗೋಪಿಕೆಯಾಗಿ ಭಾವಿಸಿ, ಕೃಷ್ಣನನ್ನು ಬೇಡುತ್ತ, ಉಳಿದ ಗೋಪಿಕೆಯರಂತೆ ತಿಂಗಳು ಪೂರ್ತಿ ವ್ರತವಿರುವ ಆಂಡಾಳ್, ಇಪ್ಪತ್ತೇಳನೇಯ ಪಾಶುರವಾದ “ಒಪ್ಪದಿಹರನುಂ ಗೆಲ್ವೆ ಗುಣವುಳ್ಳ ಗೋವಿಂದಾ’ ಎಂಬ ಪಾಶುರವನ್ನು ಹಾಡಿ ಪರಂದಾಮನನ್ನು ಸೇರುವ ಪುಣ್ಯದಿನವಾಗಿ ಇದು ಹೇಳಲ್ಪಡುತ್ತದೆ.  

ಇಲ್ಲಿಯವರೆಗೆ, ‘ತುಪ್ಪ ತಿನ್ನೆವು, ಹಾಲುಣೆವು…” ಎಂದು ಹಸಿವನ್ನು ಮರೆತು, ನಿದ್ದೆಯನ್ನು ತೊರೆದು ಭಗವಂತನನ್ನು ಹಾಡಿ ಸ್ತುತಿಸಿದ ಗೋದೈ, ಇಂದು…. “ಹಾಲು ಅನ್ನ ಮುಳುಗುವಷ್ಟು ತುಪ್ಪ ಸುರಿದು ..” ಅಂದರೆ ಹಾಲಿನಲ್ಲಿ ಬೆಂದ ಪೊಂಗಲ್ ಸಂಪೂರ್ಣವಾಗಿ ಮುಚ್ಚಿಹೋಗುವಷ್ಟು ಅದಕ್ಕೆ ತುಪ್ಪ ಸುರಿದು, ಅದನ್ನು ಉಣುವೆವು…” ಎಂದು ಹರುಷದಲ್ಲಿ ಪುಳಕಿಸುತ್ತಾಳೆ.

ಮನುಷ್ಯನ ಪರಮ ವೈರಿ ಯಾರು ಗೊತ್ತೇ..?

ಹಸಿವು ಎನ್ನುತ್ತದೆ ವೇದಗಳು. ಒಬ್ಬನನ್ನು ತನ್ನ ಸ್ಥಿತಿ ಮರೆಯುವಂತೆ ಮಾಡಿ, ಜೀವನವೆಲ್ಲ ಅವನು ಕಾಪಾಡಿಕೊಂಡು ಬಂದ ನೈತಿಕತೆಯನ್ನು ಮೀರುವಂತೆ ಮಾಡುವ ಪರಮ ವೈರಿ, ಅದು ಹಸಿವಲ್ಲದೆ ಬೇರೆ ಮತ್ತೇನಾಗಿರಲು  ಸಾಧ್ಯ?

ಅಂತಹ ಹಸಿವು ಎಂಬ ನಮ್ಮ ಕಣ್ಣಿಗೆ ಕಾಣದ ವೈರಿಯನ್ನು, ವ್ರತ ಎಂಬ ಉಪವಾಸದ ಆಚರಣೆಯ ಮೂಲಕ, ನಮ್ಮ ಮನಸ್ಸಿನಿಂದ ಅದನ್ನು ನಿಯಂತ್ರಿಸುವಂತೆ ಮಾಡುವವನು ಕೃಷ್ಣ.

ನಮ್ಮ ಮನಸ್ಸನ್ನು ಮಾತ್ರವಲ್ಲ, ರೋಗವಿಲ್ಲದೆ ನಮ್ಮನ್ನು ಚುರುಕಾಗಿ ಆರೋಗ್ಯವಾಗಿಟ್ಟರಲು ಉಪವಾಸ ವ್ರತ ಬಹಳ ಸಹಾಯವಾಗುತ್ತದೆ ಎನ್ನುತ್ತದೆ ವೈದ್ಯಕೀಯ ವಿಜ್ಞಾನ.

‘Most effective Biological method of treatment’ ಎಂದು ವೈದ್ಯರಿಂದ ಮೆಚ್ಚಿಗೆಪಡೆದ ಈ ವ್ರತದ ಆಚರಣೆಗಳು, ಹಲವಾರು ಖಾಯಿಲೆಗಳಿಗೆ ಔಷಧವಾಗಿಯೂ ಇದೆ ಎಂಬುದರಿಂದಲೇ, ಇದನ್ನು ಎಲ್ಲ ಮತಗಳೂ, ವಾರಕ್ಕೆ ಒಮ್ಮೆ, ತಿಂಗಳಿಗೊಮ್ಮೆ, ಅಥವಾ ತಿಂಗಳು ಪೂರ್ತಿ ಆಚರಿಸುತ್ತಾ ಬರುತ್ತಿವೆ.

ವೈದ್ಯಕೀಯ ರೀತಿಯಾಗಿ, ಉಪವಾಸ ಆಚರಣೆಯ ಸಮಯ ಮೊದಲು ದೇಹದ ಹೆಚ್ಚಾದ ಕೊಬ್ಬಿನ ಅಳತೆ, ಸಕ್ಕರೆಯ ಅಳತೆ ನಿಯಂತ್ರಣಕ್ಕೆ ಬರುವುದಲ್ಲದೆ, ದೇಹಕ್ಕೆ ಬೇಡದ ಕೊಬ್ಬು, ಯಕೃತ್ತುವಿನಲ್ಲಿ Glycogen (ಗ್ಲೈಕೊಜೆನ್ – ಬಹುಶರ್ಕರ) ಶೇಕರಣೆಯಾದ ಸಕ್ಕರೆಯನ್ನು ಇಂದನವಾಗಿ ಪರಿವರ್ತಿಸಿ ದೇಹದ ತೂಕ ಕಡಿಮೆಯಾಗುತ್ತದೆ. (Glycogenolysis & Neoglucogenesis) ಮತ್ತೆ ಉಪವಾಸ ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮುಂತಾದುವುಗಳ ಕಿಣ್ವ ಗ್ರಂಥಿಗಳನ್ನು ಚೆನ್ನಾಗಿ ನಿಯಂತ್ರಿಸುವುದಲ್ಲದೆ, ಕೋಶಗಳ (Cell) ಊತವನ್ನು ಕಡಿಮೆ ಮಾಡಿ, ಹೊಟ್ಟೆ, ಸಣ್ಣ ಕರುಳು, ರಕ್ತದೊತ್ತಡ, ಹೃದಯಾಘಾತ, ಬೊಜ್ಜು, ಕ್ಯಾನ್ಸರ್ ಮುಂತಾದುವನ್ನು  ನಿಯಂತ್ರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮನುಷ್ಯನ ಆಯಸ್ಸನ್ನು  ಧೀರ್ಘಗೊಳಿಸುತ್ತದೆ.

ಅತಿ ಮುಖ್ಯವಾಗಿ ಈ ಉಪವಾಸ ವ್ರತ, Neuron (ನರಕೋಶ) ಉತ್ಪಾದನೆಯನ್ನು ಹೆಚ್ಚಿಸಿ, ಮನುಷ್ಯನ ಬೆಳವಣಿಗೆಗೆ ಬೇಕಾದ Growth Hormone (ಬೆಳವಣಿಗೆ ಚೋದಕ) ಅಳತೆಯನ್ನು ಸಮನಾಗಿ ಸ್ವರಿಸಲು ನೆರವಾಗುವುದಲ್ಲದೆ, Endorphins (ಎಂಡೊರ್ಫಿನ್-ಮಿಡುಲಿನಲ್ಲಿರುವ ಓಪಿಯಮ್-ನಂತಹ ನೋವು ನಿವಾರಕಗಳಲ್ಲೊಂದು)  ಎಂಬ ಗ್ರಂಥಿಗಳನ್ನು ಹೆಚ್ಚು ಮಾಡುವುದರಿಂದ, ಜ್ಞಾಪಕಶಕ್ತಿಯನ್ನು ಹೆಚ್ಚಿಸಿ, ಗಾಢ ನಿದ್ರೆಯನ್ನು ಉಂಟುಮಾಡಿ, ಮನುಷ್ಯನನ್ನು ಸದಾ ಚುರುಕಾಗಿ, ಯೌವನದೊಂದಿಗೆ ಜೀವಿಸುವಂತೆ ಮಾಡುತ್ತದೆ ಎನ್ನುತ್ತದೆ ವೈದ್ಯಕೀಯ ಶಾಸ್ತ್ರ.

ಆದರೆ, “ತುಪ್ಪ ತಿನ್ನೆವು, ಹಾಲುಣ್ಣೆವು..” ಎಂಬ ಈ ಒಂದು ತಿಂಗಳ ವ್ರತದ ಅನುಷ್ಠಾನ, ದೇಹ ಮತ್ತು ಮನಸ್ಸಿಗೆ ಸಲುವಾಗಿ ಮಾತ್ರವಲ್ಲ, ಇದರಲ್ಲಿ ಒಂದು ಸಾಮಾಜಿಕ ವಿಜ್ಞಾನವೂ  ಅಡಗಿದೆ. ವರ್ಷಕ್ಕೆ ಒಮ್ಮೆ ಮಾಘ ಮಾಸದಲ್ಲಿ ಮಾತ್ರವೇ ಆಹಾರ ಧಾನ್ಯಗಳನ್ನು ಕುಯ್ಲು ಮಾಡುವ ನಮ್ಮ ಪೂರ್ವಜರು, ವರ್ಷದ ಕೊನೆಯಲ್ಲಿ ಮುಂದಿನ ಕುಯ್ಲಿಗೆ ಮೊದಲು ಉಂಟಾಗುವ ಆಹಾರ ಕೊರತೆಯನ್ನು ಸಮಾಳಿಸಲು ಮಾಡಿದ ವ್ಯವಸ್ಥೆಯಾಗಿ, ಈ ಹಸಿವನ್ನು ಮರೆಯುವಂತೆ ಮಾಡುವ  ಗೋದಾ ವ್ರತ (ಪಾವೈ ನೋಂಬು) ಇರಬಹುದು ಎನ್ನುತ್ತಾರೆ ಕೆಲವು ಬಲ್ಲವರು.

ತಿಂಗಳು ಪೂರ್ತಿ ವ್ರತವಿದ್ದು, ನಾರಾಯಣನ ನಾಮಾವಳಿಯನ್ನು ಹಾಡಿದ ಗೋಕುಲದ ಹೆಣ್ಣುಗಳು ಇಂದು, “ಹಾಲನ್ನವನ್ನು ಮುಳುಗಿಸುವಷ್ಟು ತುಪ್ಪ ಸುರಿದು…” ಅದು ಮೊಳಕೈ ಮೂಲಕ ಹರಿದು ಸೋರುವಷ್ಟು ಮಾಡಿದ ಸಕ್ಕರೆ ಪೊಂಗಲ್ (ಅಕ್ಕಾರ ವಡಿಸಲ್ ಅಥವಾ ಅಕ್ಕಾರ ಅಡಿಸಿಲೈ*) ಶ್ರೀ ಗೋವಿಂದನಿಗೆ ನೈವೇಧ್ಯವಾಗಿ ಇಡುತ್ತಾರೆ.

ಆದರೆ, ಆಹಾರ ನೀಡಿದೊಡನೆ ಉಣ್ಣುವವನೇ ಕೃಷ್ಣ? ಅದರಲ್ಲೂ ತುಂಟಾಟ ಆಡುವವನಲ್ಲವೇ ಅವನು! ಭಕ್ತರ ಬಳಿ ಸದಾ ಆಟವಾಡುವ ಕೃಷ್ಣ (ಕಣ್ಣ) ತನ್ನ ಪ್ರೀತಿಯ ಪತ್ನಿ ರಾಧೆಯ ಬಳಿಯೂ ಹಸಿವನ್ನು ಮುಂದಿಟ್ಟುಕೊಂಡು ಆಟವಾಡಿದ ಸ್ವಾರಸ್ಯಕರವಾದ ಕಥೆ ಒಂದಿದೆ.

ಗಾಳಿ ಹಿತವಾಗಿ ಬೀಸುತ್ತಿದ್ದ ಒಂದು ಮುಸ್ಸಂಜೆ, ದಿನವಿಡೀ ಕೆಲಸ ಮಾಡಿ ದಣಿದಿದ್ದ ರಾಧೆ, ಸ್ವಲ್ಪ ವಿಶ್ರಾಂತಿಯಿಂದ ಕೃಷ್ಣನ ಪಕ್ಕದಲ್ಲಿ ಕುಳಿತು, ಅವನ ತಲೆಯಲ್ಲಿ ಮುಡಿದಿದ್ದ ನವಿಲುಗರಿ ಗಾಳಿಗೆ ಪಟಪಟಿಸುವ ಅಂದವನ್ನು ರಸಿಕತೆಯಿಂದ ನೋಡುತ್ತಿರುತ್ತಾಳೆ.

ಗಾಢ ಚಿಂತನೆಯಲ್ಲಿದ್ದ ಕೃಷ್ಣ, “ಹಸಿವಾಗುತ್ತಿದೆ…. ತಿನ್ನಲು ಏನಾದರೂ ಇದೆಯೇ…?” ಎಂದು ಕೇಳಲು, ವಿಶ್ರಾಂತಿ ಪಡೆಯಲು ಬಂದ ರಾಧೆ, ತಕ್ಷಣ ಎದ್ದು ಹೋಗಿ ತಾಜಾವಾಗಿ ಅಡುಗೆ ಮಾಡಿ ತಂದು, ‘ಬಡಿಸಲೇ?”  ಎಂದು ಪ್ರೀತಿಯಿಂದ ಕೇಳುತ್ತಾಳೆ.

ರಾಧೆಯನ್ನು ನೋಡಿದ ಕೃಷ್ಣ, “ನನಗೆ ಬಡಿಸುತ್ತೀಯಾ? ನನಗೆ ಹಸಿವೇ ಇಲ್ಲವಲ್ಲ….!” ಎಂದು ಯಮುನೆಯ ಕಡೆ ಕೈತೋರಿಸಿ, “ಅದೋ ಆ ದಡದಲ್ಲಿ ಆ ಮರದಡಿಯಲ್ಲಿ ಕುಳಿತಿದ್ದಾರಲ್ಲಾ ದೂರ್ವಾಸ ಮುನಿ, ಅವರೇ ಹಸಿವಿನಿಂದ ಇರುವುದು ಹೋಗಿ ಅವರಿಗೆ ನೀಡಿ ಬಾ!” ಎನ್ನುತ್ತಾನೆ.

ತನಗೆ ಹಸಿವಾಗುತ್ತಿದೆ ಎಂದು ಹೇಳಿ ತನ್ನಿಂದ ಕೆಲಸ ಮಾಡಿಸಿದನಲ್ಲ ಈ ಕೃಷ್ಣ ಎಂದು ಮನಸ್ಸಿನೊಳಗೆ ಗೊಣಗುತ್ತಾ ‘ಅವರಿಗೆ ಹಸಿವಾಗುತ್ತಿದೆ ಎಂದು ನಿಮ್ಮ ಬಳಿ ಹೇಳಿದರೇನು?’ ಎಂದು ಕೋಪದಿಂದ ರಾಧೆ ಕೇಳಲು, ‘ರಾಧೆ ನನ್ನ ಮನಸ್ಸಿನಲ್ಲಿ ನೀನಿದ್ದೀಯೇ, ಅವರ ಮನಸ್ಸಿನಲ್ಲಿ ನಾನಿದ್ದೇನೆ …ಅಷ್ಟೇ…ಹೋಗಿ ಕೊಟ್ಟು ಬಾ!” ಎಂದು ಹೇಳಲು, ಬೇರೆ ದಾರಿ ಇಲ್ಲದೆ ಆಹಾರವನ್ನು ತೆಗೆದುಕೊಂಡು, ಮೊಳಕಾಲಿನಷ್ಟು ನೀರು ಹರಿಯುತ್ತಿದ್ದ ಯಮುನೆಯಲ್ಲಿ ಇಳಿದು ನಡೆಯುತ್ತಾಳೆ.

ಮತ್ತೊಂದು ದಡವನ್ನು ತಲುಪಿದ ರಾಧೆ, ದೂರ್ವಾಸರಿದ್ದ ಜಾಗಕ್ಕೆ ತೆರಳಿ, ಅವರನ್ನು ನಮಸ್ಕರಿಸಿ, ತಾನು ತಂದ ಆಹಾರವನ್ನು ಎಲೆಯಲ್ಲಿ ಬಡಿಸಲು, ಕೃಷ್ಣನಿಗೆ ಧನ್ಯವಾದ ಹೇಳುತ್ತಾ, ರಾಧೆ ಎಲೆಯಲ್ಲಿ ಬಡಿಸಿದ್ದನ್ನು ಪೂರ್ತಿಯಾಗಿ ಸೇವಿಸುತ್ತಾರೆ ದೂರ್ವಾಸ ಮಹರಿಷಿ.

ಹೊಟ್ಟೆ ತುಂಬ ಉಂಡು ಮುಗಿಸಿದ ಮೇಲೆ, ಧನ್ಯವಾದವನ್ನು  ಆಶೀರ್ವಾದವನ್ನು ನೀಡಿದ ದೂರ್ವಾಸರಿಗೆ ತಾನು ಧನ್ಯವಾದ ಹೇಳಿ ರಾಧೆ ಮರಳಲು ಯತ್ನಿಸುವಾಗ, ಇದ್ದಕ್ಕಿದ್ದಂತೆ ಯಮುನೆಯಲ್ಲಿ ಪ್ರವಾಹ ಉಕ್ಕಿ ಹರಿದದ್ದನ್ನು ಕಂಡು ಧಿಘ್ಬ್ರಾಂತಳಾಗುತ್ತಾಳೆ.

ಮಾನಸಿಕವಾಗಿ ತನ್ನ ಪತಿಯನ್ನು ಕರೆದು, ಮತ್ತೊಂದು ದಡಕ್ಕೆ ಹಿಂತಿರುಗಲು ನೆರವಾಗುವಂತೆ ಬೇಡಿಕೊಳ್ಳಲು, ಕೃಷ್ಣ ಮನಸ್ಸಿನಲ್ಲೇ ನಗುತ್ತಾ, “ಈಗ ಆಹಾರ ಸೇವಿಸಿದ ದೂರ್ವಾಸರು ಇನ್ನೂ ಹಸಿವಿನಿಂದ ಇರುವುದು ಸತ್ಯವಾದರೆ ನನಗೆ ದಾರಿಬಿಡು ಯಮುನೇ! ಎಂದು ಕೇಳಿದರೆ ಯಮುನೆ ದಾರಿ ಬಿಡುತ್ತಾಳೆ…” ಎನ್ನುತ್ತಾನೆ.

ತಕ್ಷಣ ರಾಧೆ ಕೋಪದಿಂದ, ”ಏನು ತಮಾಷೆ ಮಾಡುತ್ತಿದ್ದೀಯಾ ಕೃಷ್ಣ?” ಈಗತಾನೇ ನಾನು ನೀಡಿದ ಆಹಾರವನ್ನು ದೂರ್ವಾಸರು ಹೊಟ್ಟೆ ತುಂಬ ಉಂಡಿದ್ದಾರೆ. ಹಾಗಿರುವಾಗ ಯಮುನೆಯ ಬಳಿ ಹೀಗೊಂದು ಸುಳ್ಳನ್ನು ಹೇಳಲು ಹೇಳುತ್ತೀಯಲ್ಲಾ?” ಎಂದು ಕೃಷ್ಣನ ಬಳಿ ಕೇಳಲು,

ಕೃಷ್ಣ, “ಅದು ಸತ್ಯವೆ, ಅಸತ್ಯವೆ ಎಂಬುದನ್ನು ಯಮುನೆ ತೀರ್ಮಾನಿಸಲಿ, ನಾನು ಹೇಳಿದ್ದನ್ನು ಮಾತ್ರ ನೀನು ನದಿಯ ಬಳಿ ಹೇಳು…” ಎನ್ನುತ್ತಾನೆ.

ರಾಧೆಯೂ ಬೇರೆ ದಾರಿ ಕಾಣದೆ ಅದೇ ರೀತಿ ಯಮುನೆಯ ಬಳಿ ಹೇಳಲು, ಏನು ಆಶ್ಚರ್ಯ! ಯಮುನೆ ಎರಡಾಗಿ ಸೀಳಿ ರಾಧೆ ಹೋಗಲು ದಾರಿ ಬಿಟ್ಟಿತು.

ಮತ್ತೆ ಕೃಷ್ಣನಿರುವ ದಡಕ್ಕೆ ಬಂದ ರಾಧೆ ಕೋಪದಿಂದ, “ನಿನ್ನ ಸುಳ್ಳಿಗೆ ಸ್ವಲ್ಪವೂ ಇತಿಮಿತಿ ಬೇಡವೇ ಕೃಷ್ಣ? ಮೊದಲು ಹಸಿವಾಗುತ್ತಿದೆ ಎಂದೇ. ಓಡಿ ಹೋಗಿ ಆಹಾರವನ್ನು ತೆಗೆದುಕೊಂಡು ಬಂದರೆ, ಹಸಿವಿಲ್ಲ ಎಂದೆ. ನಂತರ ಭಕ್ತನಿಗೆ ಹಸಿವಾಗುತ್ತಿದೆ ಎಂದೆ. ಅವರಿಗೆ ಬಡಿಸಿ, ಹಸಿವು ಹೋಗಲಾಡಿಸಿದ ನಂತರ ಅವರು ಉಣಲಿಲ್ಲ ಎಂದೆ. ನೀನೇ ಸುಳ್ಳಾ, ಮಾಯಗಾರ ಎಂದರೆ, ನಿನ್ನ ಸುಳ್ಳಿಗೆ ಈ ನದಿಯೂ ಸಹ ಅಲ್ಲವೇ ಜತೆಯಾಗುತ್ತದೆ!” ಎಂದು ಹೇಳುತ್ತಾಳೆ.

ಆಗ ಕೃಷ್ಣ, “ರಾಧಾ! ನದಿಗಳು ಎಂದಿಗೂ ಸತ್ಯಕ್ಕೆ ಕಟ್ಟುಬಿದ್ದೇ ನಡೆಯುತ್ತವೆ. ಈಗ ದೂರ್ವಾಸರು ಹಸಿವಿನಿಂದ ಇದ್ದಾರೆ ಎಂಬುದು ಸತ್ಯ!” ಎಂದು ನಗಲು, ‘ಅದು ಹೇಗೆ?” ಎಂದು ವಿಸ್ಮಯದಿಂದ ರಾಧೆ ಕೇಳಲು, ಕೃಷ್ಣ ಮುಗುಳ್ನಗುತ್ತಾ, “ಹೌದು, ಹಸಿವಾಗುತ್ತಿದೆ ಎಂದೆ. ಹಸಿವು ನನಗಲ್ಲ, ದೂರ್ವಾಸರಿಗೆ. ಭಕ್ತ ಅಂದುಕೊಳ್ಳುವುದೆಲ್ಲ ನನಗೆ ತಿಳಿಯುವಾಗ, ಅವನಿಗೆ ಹಸಿವಾಗುವುದು ನನಗೆ ತಿಳಿಯದೆ ಹೋಗುತ್ತದೆಯೇ? ಹಸಿವಿನಿಂದಿರುವ ದೂರ್ವಾಸರಿಗೆ, ನೀನು ಆ ಆಹಾರವನ್ನು ನೀಡಿದೆ. ಆದರೆ, ಮತ್ತೊಬ್ಬರೊಂದಿಗೆ ಹಂಚಿಕೊಳ್ಳದೆ ತಿನ್ನದ ದೂರ್ವಾಸರೋ, ಅದನ್ನು ನನಗೆ ನೀಡಿ ಉಂಡರು. ನನ್ನನ್ನೇ ನೆನಸುತ್ತಾ ಉಂಡದ್ದರಿಂದ, ಆ ಆಹಾರವೆಲ್ಲ ನನಗೆ ಬಂದು ಸೇರಿತು, ನನ್ನ ಹಸಿವು ಹಿಂಗಿತು. ಆದರೆ, ಅವರಿನ್ನೂ ಹಸಿವಿನಿಂದಲೇ ಇದ್ದಾರೆ. “

“ನನ್ನ ಭಕ್ತರ ಭಕ್ತಿಯಿಂದಲೇ ನನಗೆ ಬಲ ಹೆಚ್ಚಾಗುತ್ತದೆ. ಅವರು ಉಂಡ ಆಹಾರದ ಸತ್ವ, ಈಗ ನನ್ನ ದೇಹದಲ್ಲಿ ಸೇರಿಕೊಂಡಿತು ನೋಡು.”

“ಈ ರಹಸ್ಯವನ್ನು ನನ್ನ ರಾಧೆ ನೀನು ಅರಿಯದೆ ಹೋದರೂ, ಯಮುನೆ ಅರಿತುಕೊಂಡಿದ್ದಾಳೆ.”

“ಅದಕ್ಕೆ ಅವಳು ನಿನಗೆ ದಾರಿ ಬಿಟ್ಟಳು” ಎಂದು ಕೃಷ್ಣ ಹೇಳಲು, ಆಶ್ಚರ್ಯಚಕಿತಳಾಗಿ ಎಲ್ಲವನ್ನೂ ಕೇಳುತ್ತಿದ್ದ ರಾಧೆ, ಕೃಷ್ಣನ ಭುಜದ ಮೇಲೆ ಒರಗಿಕೊಳ್ಳುತ್ತಾಳೆ.

‘ಸರ್ವಂ ಕೃಷ್ಣಾರ್ಪಣ ಮಸ್ತು..” ಎಂದು ನನ್ನ ಭಕ್ತರು ಆಹಾರವನ್ನು ಸೇವಿಸುವಾಗ ನನ್ನ ಬಲ ಹೆಚ್ಚಾಗುತ್ತದೆ…” ಎನ್ನುತ್ತಾನೆ ಪರಂದಾಮ. ಆದರೆ, ಹೀಗೆ ಎಲ್ಲವನ್ನೂ ದೇವರಿಗೆ ಅರ್ಪಣೆ ಮಾಡುವುದರಲ್ಲಿ ಒಂದು ಉಪಯೋಗವಿದೆ. ಹಾಗೆ ಮಾಡುವವನು ಕಾರ್ಯದ ಕರ್ತೃವಾಗಿಲ್ಲದೆ ಸಾಧನವಾಗುತ್ತಾನೆ. ಒಬ್ಬ ಬಾಣವನ್ನು ಬಿಡುವಾಗ ಗುರಿ ತಪ್ಪಿದರೆ, ಬಾಣ ಎಂದಿಗೂ ವ್ಯಥೆ ಪಡುವುದಿಲ್ಲ. ಆ ನೋವೆಲ್ಲಾ ಬಿಟ್ಟವನಿಗೆ ಮಾತ್ರ.

ಅದೇ ರೀತಿಯಾಗಿ, ಗೆಲುವೋ, ಸೋಲೋ, ಭಗವಂತನಿಗೆ ಅದು ಸಮರ್ಪಣೆ ಎಂದು ಪ್ರಯತ್ನಿಸುವವನಿಗೆ, ಅದರ ಪರಿಣಾಮಗಳು ಭಾದಿಸುವುದಿಲ್ಲ. ಯಾಕೆಂದರೆ, ಅದು ಈಗ ಅವನ ಕಾರ್ಯವಲ್ಲ; ಆ ಭಗವಂತನ ಕಾರ್ಯ. ಅವನಿಗೆ ಉಂಟಾಗುವ ಗೆಲುವು, ಸೋಲು ಹರ್ಷ, ದುಃಖ ಎಲ್ಲವೂ ಅವನ ಹೃದಯದೊಳಗಿರುವ ಆ ಭಗವಂತ ಹೊತ್ತುಕೊಳ್ಳುತ್ತಾನೆ.

ದೇವರೇ ಇಳಿದು ಮಾಡುವ ಕಾರ್ಯಗಳಲ್ಲಿ ಸೋಲು ಎಂಬುದೇ ಇಲ್ಲದೆ ಹೋಗುತ್ತದೆ ಅಲ್ಲವೇ!

ಎಲ್ಲಕ್ಕಿಂತಲೂ ಮಿಗಿಲಾಗಿ, ಯಾವ ಒಂದು ಆಹಾರವನ್ನು ತಿನ್ನಲು ತೊಡಗುವಾಗ, ಕಾರ್ಯವನ್ನು ಮಾಡಲು ತೊಡಗುವಾಗ, ದೇವರಿಗೆ ಸಮರ್ಪಿಸಿ ನಂತರ ತೊಡಗಿದರೆ, ಅದು ದೇವರಿಗೆ ಇಡಲು ತಕ್ಕದ್ದೆ ಎಂಬ ಒಂದು ಮೌಲ್ಯಮಾಪನ ನಮ್ಮ ಮನಸ್ಸಿಗೆ ಬರುತ್ತದೆ. ಕೊಡಲು ಯೋಗ್ಯವಲ್ಲ ಎಂದಾಗ ಅದನ್ನು ಉಣಲೋ, ಮಾಡಲೋ ಹಿಂಜರಿಯುತ್ತೇವೆ.

ಈ ಮೌಲ್ಯಮಾಪನ ಮುಂದುವರೆಯುವಾಗ, ತಪ್ಪಾದ ಕಾರ್ಯಗಳನ್ನು ತಪ್ಪಿಸಿ, ಒಳಿತನ್ನು ಮಾತ್ರವೇ ಮಾಡಲು ಮುಂದಾಗುವ Epigenetics (ಪರಿವಿಕಾಸ) ಎಂಬ ಬದುಕಿನ ಪದ್ಧತಿ ಆಗುತ್ತದೆ ಅದು.

ಕೆಡುಕನ್ನು ತಪ್ಪಿಸಿ  ಒಳಿತನ್ನೇ ಮಾಡುವುದು, ಈ ಭಗವಂತನಿಗೆ ನಿವೇಧಿಸಿ ನಂತರ ಕಾರ್ಯ ಮಾಡುವುದು ಎಂಬುದಕ್ಕೆ ಮೂಲ ಕಾರಣವಾಗಿದೆ.

ಹೀಗೆ ವೈರಿಗಳನ್ನು ಮಾತ್ರವಲ್ಲ, ವಿರೋಧ ಗುಣಗಳನ್ನೂ ಸೇರಿಸಿಯೇ ಜಯಿಸಿ ಅಡಗಿಸುವ ಭಗವಂತ, ಒಪ್ಪದಿರುವವರನ್ನೂ ಗೆಲ್ಲುವ ಗೋವಿಂದನ ಬಗ್ಗೆ ಹಾಡಿದ್ದರಿಂದ ಈ ಪಾಶುರದಲ್ಲಿ “ಕೂಡಾರವಲ್ಲಿ” ಎಂದು ಕರೆಯುತ್ತಾರೆ.

“ಉಣ್ಣುವ ಆಹಾರವೂ ಕುಡಿಯುವ ನೀರು ಜಗಿಯುವ ವೀಳ್ಯವೂ ಕೃಷ್ಣ…” ಎಂದು ಎಲ್ಲವನ್ನೂ ಕೃಷ್ಣನಾಗಿ ನೋಡಿದವಳು, ತಾನು ನೀಡಿದ ಆಹಾರವನ್ನು ಸ್ವೀಕರಿಸಲು, “ಕೂಡಿರ್ದು ಮುಳುಗೆ..” ಎಂದು ಇಪ್ಪತ್ತ ಏಳನೇಯ ದಿನದಂದು ಕೃಷ್ಣನನ್ನು ಕರೆದು ಹಾಡುತ್ತಾಳೆ ಗೋದೈ ಆಂಡಾಳ್!

(ಸೇರ್ಪಡೆ)

ಅದಕ್ಕೆ ನಮ್ಮ ಪುರಂದರದಾಸರು ಹೀಗೆ ಹಾಡಿದರೇನೋ!

ಕೃಷ್ಣ ಎನಬಾರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||ಅ||

ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||ನಿತ್ಯ ||

ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||೧||

ಮೇರೆ ತಪ್ಪಿ ಮಾತಾಡುವಾಗಲೊಮ್ಮೆ | ಕೃಷ್ಣಎನಬಾರದೆ || ದೊಡ್ಡ ||

ದಾರಿಯ ನಡೆದಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ||೨||

ಗಂಧವ ಪೂಸಿ ತಾಂಬೂಲವ ಮೆಲುವಾಗ | ಕೃಷ್ಣ ಎನಬಾರದೆ

ತನ್ನ | ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ||೩||

ಪರಿಹಾಸ್ಯದ ಮಾತಾಡುತಲೊಮ್ಮೆ | ಕೃಷ್ಣ ಎನಬಾರದೆ |

ಪರಿ ಪರಿ ಕೆಲಸದೊಳೊಂದು ಕೆಲಸವೆಂದು | ಕೃಷ್ಣ ಎನಬಾರದೆ ||೪||

ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ ||

ಬಹು || ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ||೫||

ನೀಗದಾಲೋಚನೆ ರೋಗೋಪದ್ರವದಲೊಮ್ಮೆ | ಕೃಷ್ಣ ಎನಬಾರದೆ ||

ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ | ಕೃಷ್ಣ ಎನಬಾರದೆ ||೬||

ದುರಿತರಾಶಿಗಳನು ತಂದು ಬಿಸುಡಲು ಕೃಷ್ಣ ಎನಬಾರದೆ |

ಸದಾ || ಗರುಡವಾಹನ ಸಿರಿಪುರಂದರ ವಿಠಲನ್ನೇ | ಕೃಷ್ಣ ಎನಬಾರದೆ ||೭||

                                                                                           ***

*ಅಕ್ಕಾರವಡಿಸಲ್ ಮಾಡುವ ಕ್ರಮ:

Raw ಅಕ್ಕಿ 150 gm, ಹೆಸರು ಬೆಲೆ 50 gm ಇವೆರಡನ್ನು ಬೇರೇ ಬೇರೆಯಾಗಿ ಐದು ನಿಮಿಷ ಸಣ್ಣ ಒಲೆಯಲ್ಲಿ ಹುರಿದುಕೊಳ್ಳಬೇಕು. ನಂತರ ಎರಡನ್ನೂ ಬೆರಸಿ 30 ನಿಮಿಷ ನೀರಿನಲ್ಲಿ ನೆನಿಸಬೇಕು. ಆ ಸಮಯದಲ್ಲಿ ತಳ ದಪ್ಪವಾಗಿರುವ ಪಾತ್ರೆಯಲ್ಲಿ 400 ml  ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು.

ಚೆನ್ನಾಗಿ ಊರಿದ ಅಕ್ಕಿ, ಹೆಸರು ಬೇಳೆಯನ್ನು ಸೋರಿಸಿ ಕುದಿದ ಹಾಲಿಗೆ ಬೆರಸಿಕೊಂಡು ಕೈಬಿಡದೆ ತೊಳಸುತ್ತಿರಬೇಕು. ಮತ್ತೊಂದು ಪಾತ್ರೆಯಲ್ಲಿ ತಣ್ಣೀರಿನಲ್ಲಿ 400 gm ಬೆಲ್ಲವನ್ನು ಸುಮಾರು ಮಂದವಾಗಿ ಕರಗಿಸಿಕೊಳ್ಳಬೇಕು. ಅದನ್ನು ಸೋರಿಸಿ ಹಾಲಿನಲ್ಲಿ ಬೇಯುತ್ತಿರುವ ಅನ್ನ, ಬೇಳೆಗೆ ಬೆರಸಿ ತೊಳಸಬೇಕು. ಎಲ್ಲವೂ ಚೆನ್ನಾಗಿ ಕಲೆತ ನಂತರ, ನುಣ್ಣಗೆ ಪುಡಿಮಾಡಿದ ಏಲಕ್ಕಿ ಒಂದು ಚಮಚ, ಪಚ್ಚೆಕರ್ಪೂರ ಅರ್ಧ ಚಮಚ ಬೆರಸಬೇಕು.  ಗೋಡಂಬಿ 25gm , ಬಾದಾಮಿ 25gm, ಒಣ ದ್ರಾಕ್ಷಿ 25gm, 50 gm ತುಪ್ಪದಲ್ಲಿ ಹುರಿದು ಹಾಕಿ ಕಲೆಸಬೇಕು.

                                                               ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply