ಪ್ರಭುವೇ ನೀ ತಾರಯ್ಯ ಇಷ್ಟಾರ್ಥಗಳ : ಧನುರ್ ಉತ್ಸವ ~ 28

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತೆಂಟನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತೆಂಟನೇಯ ದಿನ

ಕರಾವುಗಳನನುಸರಿಸಿ ಕಾಡನು ಸೇರಿ ಊಟ ಮಾಡುವೆವೋ

ತಿಳಿವೊಂದು ಇಲ್ಲದಿಹ ಗೊಲ್ಲರ ಕುಲದ

ನಿನ್ನೊಡನೆ ಹುಟ್ಟಿ ಬೆಳದಿಹ ಪುಣ್ಯವನು ನಾವ್ ಪಡೆದಿಹೆವು

ಕೊರೆಯೊಂದು ಇಲ್ಲದಿಹ ಗೋವಿಂದಾ

ನಿನ್ನೊಡನೆ ನಮ್ಮ ಸಂಬಂಧ ನಮಗಿಲ್ಲಿ ತೊರೆಯಲಾಗುವುದಿಲ್ಲವೋ

ಮೂಡ ಬಾಲೆಯರು ನಾವು ಪ್ರೀತಿಯಿಂ

ನಿನ್ನ ಚಿಕ್ಕ ಹೆಸರೊಡನೆ ಕರೆದರೂ ಕೋಪಗೊಳಬೇಡ

ಪ್ರಭುವೇ ನೀ ತಾರಯ್ಯ ಇಷ್ಟಾರ್ಥಗಳ ನಮ್ಮೀ ಪವಿತ್ರ ವ್ರತವು ಸಾರ್ಥವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಧನ್ಯಾಸಿ ರಾಗ – ಆದಿ ತಾಳ)          

“ಕೊರೆಯೊಂದು ಇಲ್ಲದಿಹ ಗೋವಿಂದಾ…”

ನಾವು ದನಗಳ ಹಿಂದೆ ಹೋಗಿ, ಕಾಡುಗಳಲ್ಲಿ ಅವನ್ನು ಮೇಯಲು ಬಿಟ್ಟು, ಅಲ್ಲಿಯೇ ನಮ್ಮ ಆಹಾರವನ್ನು ಉಣುವವರು…..

ಜಾನುವಾರುಗಳನ್ನು ಮೇಯಿಸುವುದನ್ನು ಹೊರತು ಬೇರೆಯ ಅರಿವು ನಮಗಿಲ್ಲ…. ಅಂತಹ ಯಾದವ ಕುಲದಲ್ಲಿ, ನಿನ್ನನ್ನು ಪಡೆಯಲು ಎಷ್ಟೊಂದು ಪುಣ್ಯ ಮಾಡಿದ್ದೇವೆ.

ಭಗವಂತನೇ…!

ನಿನ್ನೊಂದಿಗೆ ನಮಗಿರುವ ಸಂಬಂಧವನ್ನು ದೂರ ಸರಿಸಲು ಯಾರಿಂದಲೂ ಸಾಧ್ಯವಿಲ್ಲ. ತಿಳುವಳಿಕೆ ಇಲ್ಲದ ಮಕ್ಕಳು ನಾವು….

ನಿನ್ನ ಬಳಿ ಇರುವ ಸಲುಗೆಯ ಕಾರಣದಿಂದ, ನಿನ್ನನ್ನು ಏಕವಚನದಲ್ಲಿ ಕರೆಯುವುದನ್ನು ಸಹಿಸಿಕೊಳ್ಳುವಂತವನಾಗು…… ನಮ್ಮ ವ್ರತವನ್ನು ಸ್ವೀಕರಿಸಿ, ನಮಗೆ ಕೃಪೆ ನೀಡುವಂತವನಾಗು…” ಎಂದು ಹಾಡುತ್ತಾಳೆ ಗೋದೈ…!!

‘ತಿಳಿವೊಂದು ಇಲ್ಲದಿಹ…”

“ಯಾದವ ಕುಲದವರಾದ ನಾವು,  ಹಸು ಕರುಗಳೊಂದಿಗೆ ಕಾಡಿಗೆ ಹೋಗಿ ಅವನ್ನು ಮೇಯಿಸುವವರು…. ಆ ವೃತ್ತಿಯನ್ನು ಮಾತ್ರವೇ ಮಾಡಿ, ಅದರಲ್ಲಿ ಮಗ್ನರಾದವರು.  ತಿಳುವಳಿಕೆ ಇಲ್ಲದವರು…” ಎಂಬುದನ್ನೇ ‘ತಿಳಿವೊಂದು ಇಲ್ಲದಿಹ ಗೊಲ್ಲರ ಕುಲದ…’ ಎಂದು ಹಾಡುತ್ತಾಳೆ ಗೋದೈ.

ಸಾಮಾನ್ಯವಾಗಿ ತಾವು ಹುಟ್ಟಿದ ಕುಲದ ಹಿರಿಮೆ ಗರಿಮೆಗಳನ್ನೂ, ವೀರ ಧೀರ ಪ್ರತಾಪಗಳನ್ನೂ ಎಲ್ಲರಿಗೂ ಹೇಳಿ, ಅದರ ಮೇಲೆ ಗರ್ವಪಡುವುದಲ್ಲವೇ ಎಲ್ಲರ ಪದ್ಧತಿ…. ಆದರೆ, ‘ತಿಳಿವೊಂದು ಇಲ್ಲದಿಹ ಗೊಲ್ಲರ ಕುಲದ…’ ಎಂದು ತಮ್ಮನ್ನು ಜ್ಞಾನ ಶೂನ್ಯರೆಂದು ಹೇಳಿಕೊಳ್ಳುವುದಲ್ಲದೆ, ಅದಕ್ಕೆ ಹೆಮ್ಮೆಯೂ ಪಟ್ಟುಕೊಳ್ಳುತ್ತಾಳೆ ಗೋದೈ…! ಇದರ ಕಾರಣವೇನು?

ಬಹುಶಃ, ಜಗತ್ತಿನಲ್ಲಿ ನಾವು ಎರಡು ಬಗೆಯ ಮನುಷ್ಯರನ್ನು ಬೇಟಿಯಾಗುತ್ತೇವೆ. ಒಂದು ತನಗೆ ತಿಳಿದ ಕೆಲವು ವಿಷಯದ  ಬಗ್ಗೆ ಮಾತ್ರವೇ ಸದಾ ಮಾತನಾಡುತ್ತಾ ಹೆಮ್ಮೆಪಟ್ಟುಕೊಳ್ಳುವ ಮೂರ್ಖರು. ಮತ್ತೊಂದು, ಎಷ್ಟೇ ತಿಳಿದಿದ್ದರೂ, ತಾನು ಏನನ್ನೂ ಅರಿಯದ ಮುಟ್ಠಾಳ ಎಂದು ಹೇಳಿಕೊಳ್ಳುತ್ತಲೇ ತಿಳಿಯದಿರುವುದನ್ನೆಲ್ಲವನ್ನೂ  ಕಲಿತುಕೊಳ್ಳಲು ಪ್ರಯತ್ನಿಸುವವರು ಬುದ್ದಿವಂತರು.

ಗೋದೈ “ತಿಳಿವೊಂದು ಇಲ್ಲದಿಹ’ ಎಂದು ಹೇಳುವುದು ಸಹ ಹಾಗೆಯೇ ಇರಬೇಕು.

ಜ್ಞಾನ ಶಿಶುವಾದ ಕೃಷ್ಣ ತಮ್ಮ ಕುಲದಲ್ಲೇ ಹುಟ್ಟಿದವನು.  ಅದೂ ಅವನನ್ನು ನಾಶ ಮಾಡಲು ಬಂದ ಅಸುರರನ್ನು ಧ್ವಂಸ ಮಾಡಿದ್ದಲ್ಲದೆ, ಅವರ ಮಮಕಾರವನ್ನೂ ಸೇರಿಸಿಯೇ ವಧಿಸಿ ಎಲ್ಲರನ್ನೂ ಕಾಪಾಡಿದವನು!

ಅಧರ್ಮದ ಕಡೆ ನಿಂತ ಕೌರವರನ್ನು ಸೋಲಿಸಿ, ಧರ್ಮ ಮಾತ್ರವೇ ಗೆಲ್ಲುತ್ತದೆ ಎಂಬುದನ್ನು ಪಾಂಡವರ ಮುಖೇನ  ತಿಳಿಸಿದವನು….!

ದನ ಕಾಯುವವನಾಗಿ ಹುಟ್ಟಿ, ಮಹಾಭಾರತವನ್ನೇ ಒಂಟಿಯಾಗಿ ನಡೆಸಿ ತೋರಿಸಿದವನು…!

ಎಲ್ಲಕ್ಕೂ ಮುಕುಟವಾಗಿ, ಅಜ್ಞಾನದ ಕಡಲಿನಿಂದ ಎಲ್ಲರನ್ನೂ ಕಾಪಾಡಿ, ಸ್ಥಿರವಾದ ಮೋಕ್ಷ ನೀಡುವ ಗೀತೆಯನ್ನೂ ಹೇಳಿದವನು….!

ಇನ್ನೂ ಹೀಗೆ ಬಹಳಷ್ಟು ಹೇಳುತ್ತಲೇ ಹೋಗಬಹುದು. ಅರಿವಿಲ್ಲದ ಯಾದವ ಕುಲದಲ್ಲಿ ಹುಟ್ಟಿದ ಆ ಜ್ಞಾನಶಿಶು, ಮಾಡಿದ ಕಾರ್ಯಗಳು ಪ್ರತಿಯೊಂದೂ ಯಾದವರನ್ನು ಮಾತ್ರವೇ ಹೆಮ್ಮೆಪಡುವಂತೆ ಮಾಡಲ್ಲಿಲ್ಲ. ಒಟ್ಟು ಮಾನವ ಕುಲವನ್ನಲ್ಲವೇ ಹೆಮ್ಮೆ ಪಡುವಂತೆ ಮಾಡಿತು!

ಅಷ್ಟೇ ಅಲ್ಲದೆ, ಈ ಹದಿನಾಲ್ಕು ಲೋಕದ ಜ್ಞಾನಕ್ಕೂ, ಅರಿವಿಗೆ ಅಧಿಪತಿಯಾದ ಕುದುರೆ ಮುಖದ ಹಯಗ್ರೀವನೂ ಅವನೇ ಎನ್ನುವಾಗ, ಅದಕ್ಕೆ ಮಿಗಿಲಾಗಿ ಇನ್ನೇನು ಬೇಕು?

ಜ್ಞಾನಾಧಿಪತಿಯಾದ ಹಯಗ್ರೀವನೂ ನಾರಾಯಣನೇ ಆದರೂ ಹಯಗ್ರೀವನಿಗೆ ಮಾತ್ರ ಕುದುರೆಯ ಮುಖ ಯಾಕೆ ಬಂದಿತು ಎಂಬುದನ್ನೂ ತಿಳಿದುಕೊಳ್ಳಲು ಅಸರತ್ಕಾಸುರ ಸಂಹಾರದ ಬಗ್ಗೆ ನಾವು ತಿಳಿದುಕೊಳ್ಳ ಬೇಕಾಗುತ್ತದೆ.

ಕಟು ತಪಸ್ಸು ಮಾಡಿ, ತನಗೆ ಮರಣವಿಲ್ಲದ ಶ್ರೇಷ್ಠ ಬದುಕು ಬೇಕೆಂದು ಬ್ರಹ್ಮನ ಬಳಿ ವರ ಕೇಳುತ್ತಾನೆ. ಮರಣವಿಲ್ಲದ ಬದುಕನ್ನು ಹೊರತು ಬೇರೆ ಯಾವ ವರವನ್ನು ಬೇಕಾದರೂ ಕೇಳು ಎಂದು ನಿರಾಕರಿಸಿದ ಬ್ರಹ್ಮನ ಬಳಿ, ದೇವರು, ದೇವತೆಗಳು, ಅಸುರರು, ಮಾನವರು, ಮೃಗಗಳು ಇವು  ಯಾವುದರಿಂದಲೂ ತನಗೆ ಮರಣ ಉಂಟಾಗಕೂಡದೆಂದು ವರವನ್ನು ಪಡೆದು ಬರುತ್ತಾನೆ. ವರವನ್ನು ಪಡೆದುಕೊಂಡರೂ, ಬ್ರಹ್ಮ ತನಗೆ ಸರಿಯಾದ ವರವನ್ನು ನೀಡಿದ್ದಾನೆಯೇ ಎಂಬ ಸಂಶಯದಲ್ಲಿ, ತನ್ನನ್ನು ತಾನೇ ಪರೀಕ್ಷಿಸಿಕೊಳ್ಳಲು ನಿರ್ಧರಿಸುತ್ತಾನೆ ವೃಕಾ(ತ್ರಾ)ಸುರ.

ಸತ್ತಮೇಲೆ ಮತ್ತೆ ತನ್ನಿಂದ ಜೀವ ಸಹಿತ ಎದ್ದೇಳಲು ಸಾಧ್ಯವೇ ಎಂಬುದನ್ನೂ ಖಚಿತಪಡಿಸಿಕೊಳ್ಳಲು, ತನ್ನ ದಳಪತಿಯ ಬಳಿ ಖಡ್ಗವೊಂದನ್ನು ಕೊಟ್ಟು, ತನ್ನ ತಲೆಯನ್ನು ಕತ್ತರಿಸಿ, ಮತ್ತೆ ಅಂಟಿಸುವಂತೆ ಆಜ್ಞೆ ಮಾಡುತ್ತಾನೆ ಆ ಅಸುರ.

ದಳಪತಿಯೂ ಬೇರೆ ದಾರಿಯಿಲ್ಲದೆ ನಾಯಕನ ಆಜ್ಞೆಯನ್ನು ಪಾಲಿಸುವ ಸಲುವಾಗಿ, ಖಡ್ಗದಿಂದ ಅವನ ತಲೆಯನ್ನು ಕಡಿದು, ಮತ್ತೆ ಅವನ ತಲೆಯನ್ನು ಅಂಟಿಸಲು ಪ್ರಯತ್ನಿಸುವಾಗ, ಒಳಗೆ ನುಗ್ಗಿದ ಅವನ ಗುರುವಾದ ಶುಕ್ರಾಚಾರ್ಯರು, “ಮೂರ್ಖರೆ ತಲೆಯನ್ನು ಅಂಟಿಸಬೇಡಿ..ಕತ್ತರಿಸಿದ ತಲೆಯನ್ನು ಜೋಡಿಸಿಟ್ಟರೆ ಅದು ಅವನಿಗೆ ಮರುಜನ್ಮ. ನಂತರ ಅವನು ತಪಸ್ಸು ಮಾಡಿಪಡೆದುಕೊಂಡ ಎಲ್ಲ ವರಗಳನ್ನೂ ಮತ್ತೊಮ್ಮೆ ತಪಸ್ಸು ಮಾಡಿ ಪಡೆಯಬೇಕಾಗುತ್ತದೆ. ಅದಕ್ಕೆ ಅನೇಕ ಯುಗಗಳು ಕಳೆದುಹೋಗುತ್ತವೆ” ಎಂದು ಹೇಳುವುದಲ್ಲದೆ, ಒಂದು ಕಪ್ಪು ಬಣ್ಣದ ಕುದುರೆಯ ಮುಖವನ್ನು ಕತ್ತರಿಸಿ ರಾಜನ ದೇಹಕ್ಕೆ ಅಂಟಿಸುತ್ತಾರೆ.

ಕುದುರೆಯ ಮುಖದೊಂದಿಗೆ ಕಾಣಿಸಿಕೊಂಡಿದ್ದರಿಂದ, ನಂತರ ‘ಪರ್ಯಾಸುರ’ ಎಂದು ಕರೆಯಲ್ಪಟ್ಟ ಅಸರತ್ಕಾಸುರ, ಆ ಕುದುರೆಯ ಮುಖದೊಂದಿಗೆ, ಎಲ್ಲ ಲೋಕಗಳನ್ನೂ ತನ್ನ ವಶಪಡಿಸಿಕೊಳ್ಳುವುದಲ್ಲದೆ, ತನ್ನ ರಾಜ್ಯವನ್ನೂ ವಿಸ್ತಾರ ಮಾಡುವುದಲ್ಲದೆ ದೇವಲೋಕದ ಮೇಲೂ ಕಣ್ಣಿಡುತ್ತಾನೆ.

ಒಂದು ಮಧ್ಯರಾತ್ರಿ ಪರ್ಯಾಸುರ ದೇವಲೋಕದಮೇಲೆ ದಂಡೆತ್ತಿ ಬರುವುದನ್ನು ಅರಿತು, ಅದರಿಂದ ಉಂಟಾಗುವ ಅನಾಹುಗಳ ತೀವ್ರತೆಯನ್ನು ಅರಿತ ದೇವತೆಗಳು, ಭಗವಾನ್ ವಿಷ್ಣುವಿನ ಬಳಿ ಮೊರೆಯಿಡಲು ಹೋಗುತ್ತಾರೆ. ಆದರೆ, ಆ ನಡುರಾತ್ರಿ ಗಾಢವಾದ ನಿದ್ರೆಯಲ್ಲಿದ್ದ ಭಗವಂತನನ್ನು ನಿದ್ದೆಯಿಂದೆಬ್ಬಿಸಲು ಎಷ್ಟೇ ಪ್ರಯತ್ನಪಟ್ಟರೂ, ಅವರಿಂದ ಎಚ್ಚರಗೊಳಿಸಲಾಗಲಿಲ್ಲ. ವಿಷ್ಣು ಕ್ಷೀರಸಮುದ್ರದಲ್ಲಿ ಆದಿಶೇಷನ ಮೇಲೆ ಮಲಗಿ ಶಾಙ್ರ್ಗ ಎಂಬ ತನ್ನ ಬಿಲ್ಲನ್ನು ತಲೆದಿಂಬಾಗಿಟ್ಟುಕೊಂಡು ನಿದ್ರಿಸುತ್ತಿರುತ್ತಾನೆ. ಅವನನ್ನು ಎಚ್ಚರಿಸುವ ಮಾರ್ಗ ಕಾಣದ ದೇವತೆಗಳು, ಗೆದ್ದಲು ಹುಳುಗಳಿಗೆ ಯಜ್ಞದಲ್ಲಿ ಹವಿರ್ಭಾಗ ಕೊಡುವ ಆಸೆ ತೋರಿಸಿ ಅವು ವಿಷ್ಣುವಿನ ದಿಂಬನ್ನಾಗಿ ಮಾಡಿಕೊಂಡ ಶಾಙ್ರ್ಗ ಧನುಸ್ಸಿನ ಹೆದೆಯನ್ನು ಕತ್ತರಿಸುವಂತೆ ಮಾಡುತ್ತಾರೆ. ಬಿಲ್ಲಿನ ಹೆದೆ ತುಂಡಾದಾಗ ಸಿಡಿದ ಬಿಲ್ಲು ವಿಷ್ಣುವಿನ ತಲೆಯನ್ನು ಹಾರಿಸುತ್ತದೆ. ಬಳಿಕ ದೇವತೆಗಳು ಒಂದು ಕುದುರೆಯ ತಲೆಯನ್ನು ತಂದು ವಿಷ್ಣುವಿನ ದೇಹಕ್ಕೆ ಜೋಡಿಸುತ್ತಾರೆ.

ಹೊರಗೆ ಪರ್ಯಾಸುರನ  ರಣಕಹಳೆಯ ದನಿ ಕೇಳಿ ಇಂದ್ರನೂ ದೇವತೆಗಳೂ ಬೆದರಿ ನಿಲ್ಲುತ್ತಾರೆ. ಅದೇ ಧನ್ವಂತರಿಯೂ, ಪರ್ಯಾಸುರ ಪಡೆದ ವರಗಳನ್ನು ಗಣನೆಗೆ ತೆಗೆದುಕೊಂಡು ಅವನನ್ನು ಕೊಲ್ಲಲು ಮೃಗ ಅಲ್ಲದ ದೇವನಲ್ಲದ ಶಕ್ತಿಯನ್ನು ಸೃಷ್ಟಿಸಿದರೆ ಮಾತ್ರವೇ ಸಾಧ್ಯ ಎಂದು ಹೇಳಿ, ಅಲ್ಲಿದ್ದ ಒಂದು ಬಿಳಿ ಕುದುರೆಯ ತಲೆಯನ್ನು ಕಡಿದು ಭಗವಂತನಿಗೆ ಜೋಡಿಸಿ ಪ್ರಾಣ ತುಂಬುತ್ತಾರೆ.

ಧನ್ವಂತರಿ ಪ್ರಾಣ ತುಂಬಲು, ಹೊಸ ಬಿಳಿಯ ಕುದುರೆ ಮುಖದೊಂದಿಗೆ ಪ್ರತ್ಯಕ್ಷನಾದ ಮಹಾವಿಷ್ಣು, ಅದೇ ರೀತಿ ಕಪ್ಪು ಕುದುರೆಯ ಮುಖದೊಂದಿಗಿದ್ದ ಪರ್ಯಾಸುರನನ್ನು ಸೋಲಿಸಿ ದೇವತೆಗಳನ್ನೂ ದೇವಲೋಕವನ್ನೂ ಕಾಪಾಡುತ್ತಾನೆ.

ಅಷ್ಟೇ ಅಲ್ಲದೆ ಮಧು ಕೈಟಭರು ಅವಿತಿಟ್ಟ ವೇಧಗಳನ್ನೆಲ್ಲಾ ವಶಪಡಿಸಿಕೊಂಡು, ಬ್ರಹ್ಮನಿಗೆ ಮತ್ತೆ ಹಿಂತಿರುಗಿಸಿ ಕೊಟ್ಟದ್ದು ಈ ಕುದುರೆ ಮುಖದ ಹಯಗ್ರೀವ. ಮತ್ತೆ ವಿದ್ಯೆಗೂ ಕಲೆಗೂ ಮೂಲವಾಗಿ ಬಿಳಿಯ ತಾವರೆಯ ಮೇಲೆ ಆಸೀನಳಾದ ಬ್ರಹ್ಮನ ಪತ್ನಿಯಾದ ಸರಸ್ವತಿಗೆ ಜ್ಞಾನವನ್ನು ದಯಪಾಲಿಸಿದ್ದೂ ಜ್ಞಾನ ಸ್ವರೂಪಿಯಾದ ಇದೇ ಹಯಗ್ರೀವ.

ಅದಕ್ಕೆ ವಿದ್ಯೆ, ಜ್ಞಾನ, ಶೌರ್ಯ, ಸಂಪತ್ತು ಎಂಬ ಎಲ್ಲವನ್ನೂ ಪಡೆಯಲೂ ಕುದುರೆ ಮುಖವುಳ್ಳ ಹಯಗ್ರೀವನನ್ನು ಪೂಜಿಸಬೇಕು ಎನ್ನುತ್ತಾರೆ.

ಜ್ಞಾನದ ಅವತಾರವಾದವನು, ಯಾಕೆ ದನಕಾಯುವ ಹುಡುಗನಾಗಿ ಹುಟ್ಟಿದನು ಎಂದರೆ, ತನ್ನ ಅವತಾರಗಳಲ್ಲಿಯೇ ತನಗೆ ಬಹಳ ಹಿಡಿಸಿದ ಅವತಾರ, ಈ ದನ ಕಾಯುವವನಾಗಿ ಹುಟ್ಟಿ, ಕೊರತೆಯೊಂದೂ ಇಲ್ಲದ ಗೋವಿಂದನಾಗಿ ಬೆಳೆದ ಕೃಷ್ಣಾವತಾರ ಎಂದು ಎಂದು ಹೇಳುವ ಕೃಷ್ಣ ಅದಕ್ಕಾದ ಕಾರಣವನ್ನೂ ಹೇಳುತ್ತಾನೆ.

ಒಬ್ಬ ಸಾಮಾನ್ಯ ಮನುಷ್ಯನಾಗಿ, ತುಂಟತನ, ಪ್ರೇಮಲೀಲೆಗಳನ್ನು ಮಾಡುತ್ತಾ ಜೀವನದ ಸಕಲ ದುಃಖಗಳನ್ನೂ ಅನುಭವಿಸಿದವನಾಗಿ, ಧರ್ಮವನ್ನು ಮೀರದೆ ಬದುಕಿದ್ದಲ್ಲದೆ, ಒಬ್ಬ ಸಾಮಾನ್ಯ ಸಹಜವಾದ ಮನುಷ್ಯನಾಗಿ ಭಗವಂತ ಜೀವಿಸಿದ್ದು ಗೋಪಿಯರೊಂದಿಗೆ ಗೋವಿಂದನಾಗಿ ಇದ್ದ ಕೃಷ್ಣಾವತಾರ ಎಂಬುದರಿಂದಲೇ ಅಂತೆ.

ಅವತಾರಗಳಲ್ಲಿ ಕೃಷ್ಣಾವತಾರವೇ ಅವನಿಗೆ ಪ್ರಿಯ ಎಂಬಂತೆ, ನಾಮದಲ್ಲಿ ‘ಗೋವಿಂದ’ ಎಂಬ ನಾಮವನ್ನು ಹೇಳಿ ಅವನನ್ನು ಕರೆಯುವಾಗ ಬಹಳ ಹರ್ಷಗೊಳ್ಳುತ್ತಾನಂತೆ ಆ ಮಾಯಾಕೃಷ್ಣ.

ಯಾಕೆಂದರೆ, ‘ಗೋವಿಂದಾ’ ಎಂಬ ಒಂಟಿ ನಾಮ ಮಾತ್ರ ಅವನ ಹತ್ತು ಅವತಾರಗಳನ್ನೂ ಹೇಳುವ ಸಾಮರ್ಥ್ಯವುಳ್ಳದಂತೆ.

ಹೌದು, ‘ಗೋ’ ಎಂದರೆ ಜಗತ್ತು, ‘ವಿಂದ’ ಎಂದರೆ ಕಾಪಾಡುವವನು. ಈ ಲೋಕದ ಸರ್ವ ಜೀವರಾಶಿಗಳನ್ನೂ ರಕ್ಷಿಸುವ ಲೋಪದೋಷಗಳಿಲ್ಲದವನು ಎಂದು ಅರ್ಥೈಸುವುದಲ್ಲದೆ, ಅದು ಹೇಗೆ ಉಳಿದ ಅವತಾರಗಳನ್ನೂ ಗುರುತಿಸುತ್ತದೆ ಎಂಬುದನ್ನು ಪುರಾಣಗಳು ಹೇಳುತ್ತವೆ.

‘ಗೋ’ ಎಂಬುದಕ್ಕೆ ವೇದ ಎಂಬ ಅರ್ಥವೂ ಉಂಟಂತೆ. ಆದರೆ ಆ ವೇದವನ್ನು ಉಳಿಸಿಕೊಟ್ಟ ‘ಮತ್ಸ್ಯಾವತಾರ’ ಗೋವಿಂದನನ್ನು ಸೂಚಿಸುತ್ತದೆ.

‘ಗೋ’ ಎಂದರೆ ಪರ್ವತ ಎಂಬ ಅರ್ಥವೂ ಇದೆ. ಅದನ್ನು ತಳೆದ  ‘ಕೂರ್ಮಾವತಾರ’ ಗೋವಿಂದನನ್ನು ನೆನಪು ಮಾಡುತ್ತದೆ.

‘ಗೋ’ ಎಂದರೆ ಭೂಮಿ, ಭೂಮಿಯನ್ನು ತನ್ನ ಕೊಂಬಿನಿಂದ ಕಾಪಾಡಿದ ‘ವರಾಹವತಾರ’ ವನ್ನು ಸೂಚಿಸುತ್ತದೆ.

‘ನರಸಿಂಹನಿಗೂ, ವಾಮನನಿಗೂ, ಪರಶುರಾಮನಿಗೂ’  ಗೋವಿಂದ ಎಂಬುದು ಮತ್ತೊಂದು ಹೆಸರು.

‘ಗೋ’ ಎಂದರೆ ಆಯುಧ ಎಂಬ ಅರ್ಥ. ವಿಶ್ವಾಮಿತ್ರರು ಐನೂರು ಬಗೆಯ ಅಸ್ತ್ರ ಶಾಸ್ತ್ರಗಳನ್ನು ರಾಮನಿಗೆ ಕಲಿಸಿ ಅವನನ್ನು “ಗೋವಿಂದ” ಎಂದು ಕರೆದರಂತೆ.

ಸಮುದ್ರದ ನೀರನ್ನು ಸರಿಸಿ, ಭೂಮಿಯನ್ನು ನೇಗಿಲಿನಿಂದ ಎಳೆದದ್ದರಿಂದ ಪರಶುರಾಮನಿಗೆ ಗೋವಿಂದ ಎಂಬ ಹೆಸರುಂಟು.

‘ಗೋ’ ಎಂದರೆ ಹಸು.  ಹಸುವನ್ನು ರಕ್ಷಿಸುವವನು ಎಂಬುದರಿಂದ ಕೃಷ್ಣನಿಗೆ ಗೋವಿಂದ ಎಂಬ ಹೆಸರು ಹೊಂದುತ್ತದೆ.

ಹೀಗೆ ಪ್ರತಿಯೊಂದು ಅವತಾರದಲ್ಲೂ ಗೋವಿಂದ ಎಂಬ ನಾಮವು ಹೊಂದಿಕೊಳ್ಳುವಾಗ, ಈ ಕೃಷ್ಣಾವತಾರದಲ್ಲಿ, ಗೋವರ್ಧನ ಗಿರಿಯನ್ನು ಎತ್ತಿ ಯಾದವರನ್ನು ಕಾಪಾಡಿದ್ದರಿಂದ, ಕೃಷ್ಣ ಗೋವಿಂದಾ ಎಂದೇ ಕರೆಸಿಕೊಳ್ಳುತ್ತಾನೆ.

ಆದರೆ ಗೋವರ್ಧನ ಗಿರಿಯನ್ನು ಕೃಷ್ಣ ಎತ್ತಲು ಕಾರಣ ಕ್ರೂರ ಅಸುರರೋ, ರಾಕ್ಷಸರೋ ಅಲ್ಲ. ತನಗೆ ಪ್ರಿಯವಾದ ದೇವತೆಗಳ ನಾಯಕನಾದ ಇಂದ್ರನನ್ನು ಎದುರಿಸುವುದಕ್ಕಾಗಿಯೇ. ಆ ವಿನೋದವಾದ ಕಥೆಯನ್ನೂ ತಿಳಿದುಕೊಳ್ಳೋಣ ಬನ್ನಿ.

ಒಮ್ಮೆ ಇಂದ್ರನ ಅಹಂಕಾರವನ್ನು ಅಡಗಿಸಲು ಬಯಸಿದ ಕೃಷ್ಣ, ತನ್ನ ಯಾದವ ಕುಲದ ಜನರ ಬಳಿ ಇಂದ್ರನನ್ನು ಪೂಜಿಸುವ ಬದಲಿಗೆ, ಗೋವರ್ಧನ ಗಿರಿಯನ್ನು ಪೂಜಿಸುವಂತೆ ಕೇಳಿಕೊಳ್ಳಲು, ಕೃಷ್ಣನ ಮಾತಿನಂತೆ ನಡೆದುಕೊಳ್ಳುತ್ತಾರೆ ಯಾದವ ಕುಲದವರು.

ತನಗೆ ಸಲ್ಲಬೇಕಾದ ಪೂಜೆಯಲ್ಲಿ ಅಡಚಣೆ ಉಂಟಾದದ್ದನ್ನು ಅರಿತ ಇಂದ್ರ ತಕ್ಷಣ ಕಡುಕೊಪದಿಂದ “ಯಾದವರ ಸಂಪತ್ತನ್ನು ಅಳಿಸಿ ನಾಶ ಮಾಡಿ, ಈ ಕೃಷ್ಣನಿಗೆ ಪಾಠ ಕಲಿಸುತ್ತೇನೆ..” ಎಂದು ಪ್ರಳಯ ಕಾಲದ ಬಿರುಗಾಳಿಯಾಗಿಯೂ, ಮಳೆಯಾಗಿಯೂ ಸುರಿದು, ಗೋಕುಲದ ಮನೆಯ ಸೂರುಗಳನ್ನೆಲ್ಲವನ್ನೂ ಹಾರಿಸಿ ಗೋಕುಲವನ್ನು  ನೀರಿನಲ್ಲಿ ಮುಳುಗಿಸುತ್ತಾನೆ.

ಇಂದ್ರನ ಕೋಪ, ಮಳೆಯಾಗಿ ಮುಂದುವರೆದು ಸುರಿದದ್ದನ್ನು ನೋಡಿದ ಕೃಷ್ಣ, ಜನ, ದನಗಳು ನೆನದರಲ್ಲವೇ ಸಮಸ್ಯೆ ಎಂದು, ತನ್ನ ಬೆರಳಿನಿಂದ ಗೋವರ್ಧನ ಗಿರಿಯನ್ನು ತಲೆಯ ಮೇಲೆ ಎತ್ತಿ, ಅದನ್ನೇ ಕೊಡೆಯಾಗಿ ಹಿಡಿದು, ಯಾದವ ಕುಲದ ಪ್ರಜೆಗಳನ್ನೂ ಜಾನುವಾರುಗಳನ್ನೂ ಒದ್ದೆಯಾಗದಂತೆ ಇಂದ್ರ ಮಳೆಯಾಗಿ ಸುರಿದ ಏಳು ದಿನಗಳೂ ಗೋಕುಲವನ್ನು ರಕ್ಷಿಸುತ್ತಾನೆ.

ತನ್ನ ಸಕಲ ಪ್ರಯತ್ನಗಳೂ ವ್ಯರ್ಥವಾಗಿ ಹೋಗಿದ್ದನ್ನು ನೋಡಿದ ಇಂದ್ರನು  ಕೊನೆಗೆ ತನ್ನ ತಪ್ಪನ್ನು ಅರಿತುಕೊಂಡು, ಕೃಷ್ಣನಿಗೆ ಶರಣಾಗುತ್ತಾನೆ. ಗೋವರ್ಧನ ಗಿರಿಯನ್ನು ಎತಿ ಹಿಡಿದಿದ್ದರಿಂದ ‘ಗೋವರ್ಧನ ಎಂದೂ ಗೋವಿಂದ’ ಎಂದು ನಾಮಕರಣ ಮಾಡಿ ಪಟ್ಟಾಭಿಷೇಕ ಮಾಡುತ್ತಾರೆ.

ಅಂತಹ ದೇವತೆಗಳಿಗೆಲ್ಲ ದೇವನಾದ, ಜ್ಞಾನದ ದೇವರಾದ, ಆ ಕೊರೆಯೊಂದೂ ಇಲ್ಲದ ಗೋವಿಂದನನ್ನು ಪೂಜಿಸಿ ನಮಿಸಿದರೆ, ಅವನ ಹತ್ತು ಅವತಾರಗಳನ್ನೂ ಒಟ್ಟಾಗಿ ಸೇರಿಸಿ ಪೂಜಿಸಿದ ಫಲ ದೊರಕುತ್ತದಂತೆ.

(ಕುರೈಯೋಂಡ್ರುಮ್ ಇಲ್ಲೈ ಮರೈಮೂಚ್ಚು ಕಣ್ಣಾ’ ಎಂದು ರಾಜಾಜಿ ತಮಿಳಿನಲ್ಲಿ ಬರೆದು ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿರುವ ಇಂಪಾದ ಹಾಡೊಂದಿದೆ.)

‘ಗಿರಿಯನು ಹೊತ್ತು ಕುಳಿರು ಮಳೆಯಿಂದ ಕಾಪಾಡಿದವನು

ಅಂದು ಲೋಕವಳೆದ ಪರಂದಾಮ

ದೇವರೆಲ್ಲ ಒಂದುಗೂಡಿರುವ ಸಪ್ತಗಿರಿಯ-

ವಾಸಿಯನು ನಮಿಸಲು ನಮ್ಮ ದುಃಖ ತೊಲಗುವುದು’

ಎಂದು ನಮ್ಮಾಳ್ವಾರ್ ಸಹ ಇದನ್ನೇ ಹಾಡುತ್ತಾರೆ ಎಂದು ಚೆನ್ನಾಗಿ ಅರಿತಿದ್ದಳು ಗೋದೈ. ಕೊರತೆಗಳೆಲ್ಲವನ್ನೂ ನೀಗಿಸುವ ಗೋವಿಂದನ ನಾಮವಳಿಯನ್ನು ನಾವು ಹಾಡಿ ಹರ್ಷಿಸಲು ನಮ್ಮನ್ನೂ, ಗೆಳತಿಯರನ್ನೂ ಇಪ್ಪತ್ತ ಎಂಟನೇಯ ದಿನ ಕರೆಯುತ್ತಾಳೆ ಗೋದೈ ಆಂಡಾಳ್.  ಹೋಗೋಣ ಬನ್ನಿರಿ!

                                                                ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply