ತುಳಸಿಯ ಕಥೆ: ಧನುರ್ ಉತ್ಸವ ~ 29

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತೊಂಭತ್ತನೆಯ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತೊಂಭತ್ತನೇಯ ದಿನ

ಬೆಳಬೆಳಗು ಮುಂಜಾವದಲಿ ಬಂದು ನಿನ್ನ ಅಡಿಗೆರಗಿ

ನಿನ್ನ ಚೆಲುವ ಕಮಲ ಪಾದಕೆ ಮಂಗಳವ ಹಾಡುವುದ ಕೇಳೊ

ಗೋವುಗಳ ಮೇಯ್ಸಿ ಉಣ್ಣುವ ಕುಲದಿ ಜನಿಸಿದ

ನೀನು ಏಕಾಂತ ಸೇವೆಯನು ನಮ್ಮಿಂದ ಕೊಳ್ಳದೆಯೆ ಪೋಗದಿರೊ

ಈಗಷ್ಟೆ ಇಷ್ಟಾರ್ಥ ಪಡೆಯಲೆಂದಷ್ಟೆ ಬಂದಿಲ್ಲ ಕಾಣ್ ಗೋವಿಂದಾ

ಎಂದೆಂದು ಎಳೇಳು ಜನ್ಮಕೂ

ನಿನ್ನೊಡನೆ ಜೊತೆಯಲೇ ಬಾಳಿ ನಿನಗೆ ನಾವ್ ಕಾಯಕವ ಮಾಡುವೆವೊ

ಇನ್ನಿತರ ನಮ್ಮ ಬಯಕೆಗಳ ತೊಲಗಿಸಲು ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂದಿಗನವಲೆ ನಾರಾಯಣಸ್ವಾಮಿ   (ಕಲ್ಯಾಣಿ ರಾಗ – ಆದಿ ತಾಳ)

“ಗೋವಿಂದಾ…..

ನಾವು ಮುಂಜಾವಿನಲ್ಲೇ ನಿಮ್ಮ ಸ್ವರ್ಣಪಾದಕಮಲಗಳಿಗೆ ನಮಸ್ಕರಿಸಲು ಬಂದಿರುವ ಕಾರಣವನ್ನು ಕೇಳುವಂತವನಾಗು….

ಯಾದವ ಕುಲದಲ್ಲಿ ಹುಟ್ಟಿದ ನೀನು, ಧನಗಳನ್ನು ಮೇಯುತ್ತಾ, ಅವು ನೀಡುವ ವಸ್ತುಗಳನ್ನು ಮಾರಿ ಜೀವಿಸುವ ನಮ್ಮ ಈ ಸಣ್ಣ ಸೇವೆಗಳನ್ನು ಸ್ವೀಕರಿಸದೆ ಇರಬೇಡ….

ನೀನು ನೀಡುವ ಮೋಕ್ಷಕ್ಕಾಗಿ ಮಾತ್ರ ಈ ವ್ರತವನ್ನು ನಾವು ಪಾಲಿಸುತ್ತಿಲ್ಲ. ಏಳೇಳು ಜನ್ಮಗಳೂ ನೀನು ನಮ್ಮ ಕುಲದಲ್ಲಿ ಹುಟ್ಟಿ, ನಮ್ಮನ್ನು ನಿನ್ನ ಬಂಧುಗಳಾಗಿ ಸ್ವೀಕರಿಸಬೇಕು.. ನಿನಗೆ ಮಾತ್ರ ಸೇವೆ ಸಲ್ಲಿಸುವ ಭಾಗ್ಯವನ್ನು ನಮಗೆ ನೀಡಬೇಕು….

ಮತ್ತೆ ನಮ್ಮ ಕೆಟ್ಟ ಭಾವನೆಗಳನ್ನೆಲ್ಲಾ ನೀಗಿಸಿ ನಮಗೆ ಕೃಪೆ ನೀಡುವಂತವನಾಗು…” ಎನ್ನುತ್ತಾಳೆ ಗೋದೈ….!

“ನಿನ್ನೊಡನೆ ಜೊತೆಯಲೇ ಬಾಳಿ ನಿನಗೆ ನಾವು ಕಾಯಕವ ಮಾಡುವೆವು…” ಸದಾ ನಿನ್ನ ಸಮೀಪದಲ್ಲೇ ಇದ್ದು, ನಿನಗೆ ಮಾತ್ರ ಸೇವಕರಾಗಿ ಸೇವೆ ಮಾಡುತ್ತೇವೆ ಎನ್ನುತ್ತಾಳೆ ಗೋದೈ….!

ಕೃಷ್ಣ ನಮ್ಮೊಂದಿಗೂ, ನಾವು ಕೃಷ್ಣನೊಂದಿಗೂ ಜೀವಿಸುವ ಬದುಕು ಎಷ್ಟು ಸುಂದರವಾದದ್ದು…!

ಅದರಲ್ಲೂ, ಸದಾ ಕೃಷ್ಣನೊಂದಿಗೆ ಜತೆಯಿರುವ ನವಿಲುಗರಿ, ಕೊಳಲು, ತುಳಸಿ, ತಾವರೆಹೂ ಎಂದು ಪ್ರತಿಯೊಂದೂ, ಅವನ ಮೇಲೆ ಎಷ್ಟೊಂದು ಪ್ರೀತಿ, ಭಕ್ತಿಯನ್ನು ಇಟ್ಟಿರುವುದರಿಂದ, ಈ ಜನ್ಮದಲ್ಲಿ ಮಾತ್ರವಲ್ಲ, ಏಳೇಳು ಜನ್ಮಗಳಲ್ಲೂ ಅವನೊಂದಿಗೇ ಇರುವ ಭಾಗ್ಯವನ್ನು ಪಡೆದುಕೊಂಡಿವೆ….!

ಹಾಗೊಂದು ಬದುಕನ್ನು ನಾವೂ ಜೀವಿಸಿಬಿಡಬಾರದೇ ಎಂದು ಭಾವಿಸುವ ಮಟ್ಟಿಗೆ ಕೃಷ್ಣನನ್ನು ಮನಸಾರೆ ಪ್ರೀತಿಸಿ, ಕೃಷ್ಣನನ್ನು ಸೇರುವುದಕ್ಕಾಗಿ ಜನ್ಮ ಪೂರ್ತಿ ತಪಸ್ಸಿದ್ದ ತುಳಸಿ ಎಂಬ ತಪಸ್ವಿಯ ಕಥೆಯನ್ನು ಕೇಳಿದರೆ, ರಾಧೆಯನ್ನೂ ಮೀರುವ ರೀತಿಯಲ್ಲಿ ಕೃಷ್ಣನ ಮೇಲೆ ಪ್ರೀತಿ ಇಟ್ಟಿದ್ದಾಳಲ್ಲ ಎಂದು ತೋರುತ್ತದೆ.

ತುಳಸಿ….!

ಬಹಳ ರೂಪವತಿ, ಶ್ರೇಷ್ಠ ಗುಣವಂತೆ, ಅತಿ ಜ್ಞಾನವಂತೆ.  ಎಲ್ಲಕ್ಕೂ ಮಿಗಿಲಾಗಿ, ಅತಿ ಸಹಿಷ್ಣುತೆಯುಳ್ಳವಳು. ಆದ್ದರಿಂದಲೇ ತನ್ನ ಚಿಕ್ಕ ವಯಸ್ಸಿನಿಂದ, ಹೃತ್ಪೂರ್ವಕವಾಗಿ ಪ್ರೀತಿಸಿದ ಕೃಷ್ಣನನ್ನು, ತನ್ನ ಸಹೋದರಿ ರಾಧೆ ಪ್ರೀತಿಸುವುದನ್ನು ಅರಿತೂ, ಸಹನೆಯಿಂದ ಕಾಯುತ್ತಿರುತ್ತಾಳೆ.

ರಾಧೆಯ ಮನಸ್ಸಿನಲ್ಲಿ ಕೃಷ್ಣ ಮಾತ್ರವಲ್ಲ, ಕೃಷ್ಣನ ಮನಸ್ಸಿನಲ್ಲಿ ರಾಧೆಯೂ ಮನೆಮಾಡಿದ್ದರು ಎಂಬುದನ್ನು ಅರಿತಿದ್ದರಿಂದ, ತನ್ನ ಪ್ರೀತಿಯನ್ನು ಬಿಟ್ಟುಕೊಡುವ ಅವಳಿಗೆ, ಒಂದು ಸಂದರ್ಭದಲ್ಲಿ ತನ್ನ ಸೋದರಿ ರಾಧೆಯ ಬಳಿ ಕೃಷ್ಣನ ಮೇಲಿನ ತನ್ನ ಪ್ರೀತಿಯನ್ನು ತಿಳಿಸುವ ಅವಕಾಶ ದೊರಕುತ್ತದೆ.

ಕೃಷ್ಣ ಹೊರಗೆ ಹೋಗಿದ್ದ ಸಮಯವದು, ಮನೆಗೆ ಬಂದ ತುಳಸಿಯನ್ನು ರಾಧೆ ಹರ್ಷದಿಂದ ಬರಮಾಡಿಕೊಳ್ಳುತ್ತಾಳೆ. ತುಳಸಿಯೂ ಕೃಷ್ಣನ ಭಕ್ತೆ ಎಂದು ಚೆನ್ನಾಗಿ ಬಲ್ಲ ರಾಧೆ, ಅವಳ ಬಳಿ ಕೃಷ್ಣನ ಬಗ್ಗೆಯೂ, ಅವನ ಶೌರ್ಯ ಪರಾಕ್ರಮಗಳ ಬಗ್ಗೆಯೂ, ಲೀಲೆಗಳ ಬಗ್ಗೆಯೂ ಶ್ಲಾಘಿಸಿ ಮಾತನಾಡುತ್ತಿರುವ ಸಮಯದಲ್ಲಿ, ತುಳಸಿ ತಡೆಯಲಾಗದೆ ತನಗೆ ಕೃಷ್ಣನ ಮೇಲಿರುವ ಪ್ರೀತಿಯನ್ನು ಹೇಳಿಬಿಡುತ್ತಾಳೆ.

“ರಾಧೆ, ನೀನು ಕೃಷ್ಣನ ಮೇಲೆ ಎಂತಹ ಉನ್ನತ ಪ್ರೀತಿಯನ್ನು ಇಟ್ಟಿದ್ದೀಯಾ ಎಂಬುದು ನನಗೆ ಗೊತ್ತು. ಅದು ಅವನು ಶಯನಿಸುವ ಕ್ಷೀರಸಾಗರಕ್ಕಿಂತಲೂ ದೊಡ್ಡದು. ಆಕಾಶಕ್ಕಿಂತ ವಿಶಾಲವಾದದ್ದು. ನೀನು ಅವನ ಮೇಲೆ ಇಟ್ಟಿರುವ ಪ್ರೀತಿಯಂತೆಯೇ ನಾನೂ ಅವನ ಮೇಲೆ ಅತೀವ ಪ್ರೀತಿಯನ್ನಿಟ್ಟುರುವೆ. ಕೃಷ್ಣನನ್ನು ಚಿಕ್ಕ ವಯಸ್ಸಿನಿಂದ ಪ್ರೀತಿಸೂತ್ತೇನೆ ; ಆದರೂ ನಾಚಿಕೆಯಿಂದ ನನ್ನ ಪ್ರೀತಿಯನ್ನು ಪ್ರಕಟಿಸಲು ಹಿಂಜರಿದೆನು. ನೀನು ಅವನನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುವುದು ನನಗೆ ಮೊದಲೇ ತಿಳಿದಿದ್ದರೂ, ಅದನ್ನು ತಡೆಯಲು ಮನಸ್ಸು ಬಯಸಲಿಲ್ಲ. ನಾಗರಿಕತೆ ತಡೆದರೂ ಪ್ರೀತಿ ಬಿಡುವಂತಿಲ್ಲ. ಮನಸ್ಸು ಅವನ ಮೇಲೆ ಮರುಳಾಗಿದೆ..” ಎನ್ನುತ್ತಾಳೆ ತುಳಸಿ.

ಇವನ್ನೆಲ್ಲಾ ಸ್ವಲ್ಪವೂ ನಿರೀಕ್ಷಸದ ರಾಧೆ, ತುಳಸಿಯನ್ನು ಕಟು ಮಾತುಗಳಿಂದ ದೂರುತ್ತಾಳೆ. ಕಣ್ಣೀರಿನೊಂದಿಗೆ ತುಳಸಿ ಹೊರಗೆ ಹೋಗಲು ಯತ್ನಿಸಿದಾಗ ಎದುರು ಬಂದ ತ್ರಿಕಾಲವನ್ನೂ ಅರಿತ ಆ ಕೃಷ್ಣ, ಏನೂ ಅರಿಯದವನಂತೆ, “ತುಳಸಿ ಯಾಕೆ ಈ ಅಳು? ಏನಾಯಿತು ನಿನಗೆ?” ಎಂದು ಕೇಳಲು, ತುಳಸಿ ಸಂಕೋಚದಿಂದ ಏನನ್ನೂ ಮಾತನಾಡದೇ ನಿಂತಿರುತ್ತಾಳೆ. ಕೋಪದಲ್ಲಿದ್ದ ರಾಧೆಯೋ, ಕೃಷ್ಣನ ಮೇಲಿನ ತುಳಸಿಯ ಪ್ರೀತಿಯನ್ನು ತಕ್ಷಣ ಹೇಳಿಬಿಡುತ್ತಾಳೆ.

ಆಗ ಕೃಷ್ಣ ತುಳಸಿಯ ಕಡೆ ತಿರುಗಿ, “ನೀನು ನನ್ನ ಮೇಲಿಟ್ಟಿರುವ ಪ್ರೀತಿಯನ್ನು ನಾನು ಚೆನ್ನಾಗಿ ಬಲ್ಲೆನು. ಆದರೆ ಈ ಜನ್ಮದಲ್ಲಿ  ನಿನ್ನನ್ನು  ಪಡೆಯುವ ಭಾಗ್ಯ ನನಗಿಲ್ಲ. ಮುಂದಿನ ಜನ್ಮ ಬರುವವರೆಗೆ ಕಾದಿರುವುದನ್ನು ಹೊರತು ಬೇರೆಯ ದಾರಿಯಿಲ್ಲ…” ಎನ್ನುತ್ತಾನೆ.

ಇವನ್ನೆಲ್ಲಾ ಕೇಳುತ್ತಿದ್ದ ರಾಧೆ ಆವೇಶದಿಂದ, “ಕೃಷ್ಣ… ಏನು ಹೇಳುತ್ತೀದ್ದೀಯಾ? ಈ ಜನ್ಮದಲ್ಲೂ, ಇನ್ನೂ ಮುಂದೆ ಬರುವ ಜನ್ಮಗಳಲ್ಲೂ ನಾನೇ ನಿನ್ನ ಪತ್ನಿ. ಇವಳನ್ನು ಮರುಜನ್ಮದಲ್ಲಿ ಸ್ವೀಕರಿಸುವುದಾಗಿ ಹೇಳುತ್ತಿದ್ದೀಯಲ್ಲಾ? ಸರಿ, ಇವಳನ್ನು ಮತ್ತೆ ಒಂದು ಹೆಣ್ಣಾಗಿ ನೋಡಿದರಲ್ಲವೇ ನಿನಗೆ ಅವಳ ನೆನಪಾಗುತ್ತದೆ. ಈಗಲೇ ಇವಳು ಒಂದು ಗಿಡವಾಗಿ ರೂಪಾತಾಳಿ ತೋಟದಲ್ಲಿ ಬಿದ್ದಿರಲಿ. ಮರುಜನ್ಮದಲ್ಲಿ ಇವಳು ಒಬ್ಬ ರಾಕ್ಷಸಿಯಾಗಿ ಹುಟ್ಟಿ ಒಬ್ಬ ರಾಕ್ಷಸನನ್ನು ಗಂಡನಾಗಿ ಪಡೆಯಲು ಶಪಿಸುತ್ತೇನೆ..” ಎನ್ನುತ್ತಾಳೆ ಆವೇಶದಿಂದ.

ಇದನ್ನು ಕೇಳಿ ದುಃಖಿತಳಾದ ತುಳಸಿಯನ್ನು ಸಮಧಾನದಿಂದ ನೋಡಿದ ಕೃಷ್ಣ ಅವಳ ಬಳಿ, “ತುಳಸಿ, ಹೆದರಬೇಡ…. ರಾಧೆ ಕೋಪದಲ್ಲಿ ಶಪಿಸಿದರೂ ಅದರ ಹಿನ್ನೆಲೆಯಲ್ಲಿ ಒಂದು ಕಾರಣ ಇದೆ. ಹೋದ ಜನ್ಮದಲ್ಲಿ ನೀನು ನನ್ನ ಪತ್ನಿಯಾಗಿದ್ದೆ. ಆಗ ನನ್ನ ಹೆಸರು ಸುಧರ್ಮ. ಹೋದ ಜನ್ಮದಲ್ಲಿ ನಡೆದ ಒಂದು ಘಟನೆಯಿಂದ, ನಾನು ಮುಂದಿನ ಜನ್ಮದಲ್ಲಿ ಅಸುರನಾಗಿ ಬರುತ್ತೇನೆ. ರಾಧೆ ಹೇಳಿದಂತೆ ಮುಂದಿನ ಜನ್ಮದಲ್ಲಿ, ನೀನು ಭೂಲೋಕದಲ್ಲಿ ಹುಟ್ಟಿ, ಶಂಖಚೂಡ ಎಂಬ ರಾಕ್ಷಸನನ್ನು ಪತಿಯಾಗಿ ಪಡೆಯುವೆ. ನಾನು ಆ ರಾಕ್ಷಸ ರೂಪಾತಾಳಿ ನಿನ್ನನ್ನು ಅಪಹರಿಸಿ ಹೋಗಲು ಯತ್ನಿಸುವಾಗ ನಿನ್ನ ಶಾಪ ವಿಮೋಚನೆಯಾಗುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದಿರು” ಎಂದು ಹೇಳಲು, ಕೃಷ್ಣನ ಲೀಲೆಗಳಲ್ಲಿ ಇದೂ ಸಹ ಒಂದೆಂದು ಅರಿತ ರಾಧೆ ಶಾಂತವಾಗುತ್ತಾಳೆ.

ಅದೇ ಸಮಯ ರಾಧೆಯ ಶಾಪದಿಂದ, ಗಿಡವಾಗಿ ಬದಲಾಗಿದ್ದ ತುಳಸಿ ಗೋಕುಲದಲ್ಲಿ ಒಂದು ಹುಲ್ಲಿನ ಹಾಸಿನಲ್ಲಿ ಒಂದು ಗಿಡವಾಗಿ, ಮೂಲಿಕೆಯಾಗಿ ಕೃಷ್ಣನ ಬಗ್ಗೆ ಯಾರಾದರೂ ಮಾತನಾಡುವಾಗ ಉತ್ಸಾಹದಿಂದ ಬೆಳೆದು, ಪರಿಮಳ ಹರಡುತ್ತಾ, ಅವನ ಬಳಿ ಸೇರುವ ದಿನಕ್ಕಾಗಿ ಕಾಯುತ್ತಿರುತ್ತಾಳೆ.

ಕೃಷ್ಣನ ಮಾತಿನಂತೆ, ಭೂಲೋಕದಲ್ಲಿ ಮರುಜನ್ಮ ಪಡೆದ ತುಳಸಿ, ಧರ್ಮಧ್ವಜ, ಮಾಧವಿ ದಂಪತಿಯರಿಗೆ ಮಗಳಾಗಿ ಹುಟ್ಟಿ, ಶಂಖಚೂಡಾ ಎಂಬ ಅಸುರನನ್ನು ವಿವಾಹವಾಗುತ್ತಾಳೆ.

ಶಂಖಚೂಡನ  ಕ್ರೂರವಾದ ಅಟ್ಟಹಾಸಗಳು, ಅವನ ಅಸುರ ಗುಣಕ್ಕೆ ತಕ್ಕಂತೆ ಬಹಳ ಹೀನವಾದದ್ದಾಗಿರುತ್ತದೆ. ಶಂಖಚೂಡನನ್ನು ಸಂಹಾರ ಮಾಡಲು ದೇವತೆಗಳು ಹಲವು ಮಾರ್ಗಗಳಲ್ಲಿ ಪ್ರಯತ್ನಿಸಿದರೂ, ತುಳಸಿಯ ಪಾತಿವ್ರತ ಗುಣ ಅವನನ್ನು ಕಾಯುತ್ತದೆ. ಅವನನ್ನು ಧ್ವಂಸ ಮಾಡಲು ತಿಳಿಯದೆ ದೇವತೆಗಳು ಗೊಂದಲಗೊಳ್ಳುತ್ತಾರೆ. ಇನ್ನೂ ಆ ಕೃಷ್ಣನಿಂದ ಮಾತ್ರವೇ ನಮ್ಮನ್ನು ರಕ್ಷಿಸಲು ಸಾಧ್ಯ ಎಂದು ದೇವತೆಗಳು ಕೃಷ್ಣನನ್ನು ಶರಣಾಗಲು ಅವನೂ ಶಂಖಚೂಡನನ್ನು ಅಳಿಸಲು ಕಣಕ್ಕಿಳಿಯುತ್ತಾನೆ.

“ನಾನು ಶಂಖಚೂಡನಂತೆ ಮತ್ತೊಂದು ಆಕಾರತಾಳಿ ತುಳಸಿಯನ್ನು ಮೋಸಮಾಡುತ್ತೇನೆ. ಅದರನಂತರ  ಶಂಖಚೂಡ ತನ್ನ ಬಲವನ್ನು ಕಳೆದುಕೊಳ್ಳುತ್ತಾನೆ. ಆಗ ಅವನನ್ನು ಸುಲಭವಾಗಿ ಜಯಿಸಬಹುದು” ಎಂದು ದೇವತೆಗಳ ಬಳಿ ಹೇಳಿದ ವಿಷ್ಣು, ಶಂಖಚೂಡನ ರೂಪಾತಾಳಿ ತುಳಸಿಯನ್ನು ತನ್ನನ್ನು ಪತಿ ಎಂದು ನಂಬಿಸಿ ಅವಳನ್ನು ಅಪಹರಿಸಿಕೊಂಡು ಹೋಗುತ್ತಾನೆ. ಅಲ್ಲಿಯವರೆಗೆ ತುಳಸಿ ಕಾಪಾಡಿಕೊಂಡು ಬಂದ ತನ್ನ ಶೀಲ ಎಂಬ ಕವಚ ಮರೆಯಾಗಲು, ಬಲವನ್ನು ಕಳೆದುಕೊಂಡ ಶಂಖಚೂಡ ದೇವತೆಗಳಿಂದ ಕೊಲ್ಲಲ್ಪಡುತ್ತಾನೆ.

ತನ್ನ ಶೀಲ ಕೃಷ್ಣನಿಂದ ಭಂಗವಾದದ್ದರಿಂದ ಕೋಪಗೊಂಡ ತುಳಸಿ, ಆ ಕೃಷ್ಣನನ್ನು ಕಲ್ಲಾಗುವಂತೆ ಶಪಿಸಲು, ಕೃಷ್ಣ ಸಾಲಿಗ್ರಾಮ ಎಂಬ ಕಲ್ಲಾಗಿ ಮಾರ್ಪಾಡುತ್ತಾನೆ. ಇಂದೂ ಸಾಲಿಗ್ರಾಮವನ್ನು ಕೃಷ್ಣನ ರೂಪವಾಗಿ ಭಕ್ತರು ತಮ್ಮ ಪೂಜೆಯ ಕೋಣೆಯಲ್ಲಿಟ್ಟು ಪೂಜಿಸುವ ಕಾರಣವೂ ಇದೆ.

ಈಗ ಮುಂದಿನ ಜನ್ಮದಲ್ಲಿ ಕೃಷ್ಣನನ್ನು ಪಡೆಯಬೇಕೆಂದು ತಪಸ್ಸಿದ್ದದ್ದು ತುಳಸಿಯ ನೆನಪಿಗೆ ಬರಲು, ಕೃಷ್ಣನ ಎದೆಯಲ್ಲಿ ನಿರಂತರವಾಗಿ ವಾಸವಿರುವ ವರವನ್ನು ಬೇಡುತ್ತಾಳೆ. ಜನ್ಮಜನ್ಮದಿಂದ ಮುಂದುವರೆಯುವ ಅವಳ ಭಕ್ತಿಯನ್ನು ಗೌರವಿಸುವ ರೀತಿಯಲ್ಲಿ, “ಇನ್ನು ತುಳಸಿ ಇಲ್ಲದೆ ನನ್ನ ಪೂಜೆ ನಡೆಯುವುದಿಲ್ಲ” ಎಂಬ ವರವನ್ನು ಕೊಡುತ್ತಾನೆ ಶ್ರೀರಂಗ.

“ತುಳಸಿಯಿಲ್ಲದೆ ಶ್ರೀನಿವಾಸನಿಗೆ ಮಾಡುವ ಆರಾಧನೆ ತುಪ್ಪವಿಲ್ಲದ ಅನ್ನದಂತೆ” ಎನ್ನುತ್ತಾರೆ ಹಿರಿಯರು. ಒಂದು ತುಳಸಿ ದಳದಿಂದ ಅರ್ಚನೆ ಮಾಡಿದರೆ ಶ್ರೀಹರಿ ಸಂತೃಪ್ತಿ ಹೊಂದುತ್ತಾನೆ ಎಂಬುದಲ್ಲದೆ, ವಿಷ್ಣು ದೇವಾಲಯಗಳಲ್ಲಿ ತುಳಸಿ ತೀರ್ಥವೇ ಮೊದಲ ಪ್ರಸಾದವಾಗಿದೆ.

ತನ್ನ ಪವಿತ್ರವಾದ ಶೀಲದ ಬಲದಿಂದ ದೇವರನ್ನು ಶಪಿಸುವ ಶಕ್ತಿ ಪಡೆದಿರುವುದರಿಂದಲೂ, ಭಕ್ತಿಯಿಂದ ಭಗವಂತನನ್ನೇ ಪಡೆಯುವ ಪ್ರೀತಿಯನ್ನು ಪಡೆದಿರುವುದರಿಂದಲೂ, ತುಳಸಿ ಅನನ್ಯತೆಯನ್ನು ಪಡೆಯುತ್ತಾಳೆ. ಅದಲ್ಲದೆ ತುಳಸಿ ಮಾತ್ರವೇ ಒಮ್ಮೆ ಪೂಜೆಗೆ ಬಳಸಿದ ಮೇಲೂ ನೀರಿನಲ್ಲಿ ತೊಳದು ಮತ್ತೆ ಪೂಜೆಗೆ ಬಳಸಲು ಅರ್ಹವಾದದ್ದು. ನೀರಿನಲ್ಲಿ  ತೊಳೆಯುವಾಗ ತುಳಸಿ ತನ್ನನ್ನೇ ತಾನು ಪವಿತ್ರಗೊಳಿಸಿಕೊಳ್ಳುವುದಾಗಿ  ಹೇಳಲ್ಪಡುತ್ತದೆ.

“ತುಲನಾ ನಾಸ್ತಿ ಅದೈವ ತುಳಸಿ” ಅಂದರೆ ಹೋಲಿಕೆಗಳಿಲ್ಲದ ಗುಣಗಳನ್ನು ಹೊಂದಿರುವುದು ತುಳಸಿ ಎಂಬುದು ಇದರ ಅರ್ಥ. ದೇವರಿಗೆ ಅರ್ಪಿಸುವ ವಸ್ತು ಬಹಳ ಸಣ್ಣದಾಗಿ, ಸರಳವಾಗಿ ಇದ್ದರೂ ಸಹ, ಭಕ್ತಿಯಿಂದ ಸಮರ್ಪಿಸಿದರೆ, ಅದು ಎಲ್ಲ ಸಂಪತ್ತುಗಳಿಗಿಂತಲೂ ಮಿಗಿಲಾದದ್ದು ಎಂದು ಭಾವಿಸಲ್ಪಡುತ್ತದೆ ಎಂಬ ಸತ್ಯವನ್ನು ತುಳಸಿಯ ಮಹಿಮೆ ಜಗತ್ತಿಗೆ ತಿಳಿಸಿ ಹೇಳುತ್ತದೆ.

ಕ್ಷೀರಸಾಗರವನ್ನು ಕಡೆಯುವಾಗ, ಅಮೃತ ಕಲಶದಿಂದ ಹೊರಬಂದ ದನ್ವಂತರಿಯ  ಆನಂದ ಬಾಷ್ಪ ಅಮೃತದಲ್ಲಿ ಬೀಳಲು, ಆ ಹನಿಯಿಂದ ಹುಟ್ಟಿದವಳು ತುಳಸಿಯಂತೆ. ಆದ್ದರಿಂದಲೇ ತುಳಸಿ ಧೀರ್ಘ ಆಯುಷ್ಯವನ್ನು ನೀಡುವ ಮೂಲಿಕೆಯಾಗಿಯೂ, ನಾರಾಯಣನಿಗೆ ಸೂಕ್ತವಾದದ್ದಾಗಿಯೂ, ದನ್ವಂತರಿ ನೀಡಿದ ಆಯುರ್ವೇದದಲ್ಲಿ ಬಹಳ ಪ್ರಮುಖವಾದ ಮೂಲಿಕೆಯಾಗಿದೆ.

ಅದಲ್ಲದೆ ತುಳಸಿಯ ಔಷಧಿಯ ಗುಣಗಳಿಗೆ ಕೊರತೆಯಿಲ್ಲ ಎಂಬುದನ್ನು ಎಲ್ಲರೂ ಅರಿತದ್ದೆ. ಶ್ರೇಷ್ಠ ಕ್ರಿಮಿ ನಾಶಿನಿಯಾಗಿಯೂ, ಜ್ವರವನ್ನು ತಣಿಸಲು, ಧೀರ್ಘ ಆಯುಷ್ಯವನ್ನು ಪಡೆಯಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಯಾಕೆ, ಕ್ಯಾನ್ಸರ್ ಸೆಲ್-ಗಳನ್ನು ನಾಶಮಾಡಲು ಸಹ ತುಳಸಿ ಉಪಯೋಗಕ್ಕೆ ಬರುತ್ತದೆ ಎಂದು ಪ್ರಕೃತಿ ವೈದ್ಯಕೀಯ ಚಿಕಿತ್ಸೆ ಹೇಳುತ್ತದೆ.

ಕೇಶವನನ್ನು ಹಾಡುವಾಗಲೆಲ್ಲಾ,

“ಮನದಲ್ಲಿದ್ದಾನೆ, ಆಳ್ಗಡಲಲ್ಲಿದ್ದಾನೆ, ಲಕ್ಷ್ಮಿಯನು ಹೃದಯದಲ್ಲಿರಿಸಿದ್ದಾನೆ, ತಂಪಾದ ತುಳಸಿ ಮಾಲೆಯ ದರಿಸಿದ ಮಹಾವಿಷ್ಣು”, ಎಂದು ಕೇಶವನಿಗೆ ಪ್ರಿಯವಾದ ತುಳಸಿಯ ಹಿರಿಮೆಯನ್ನೂ ಸೇರಿಸಿಯೇ ಹಾಡುತ್ತಾರೆ ಪೇಯಾಳ್ವಾರ್.

ಶ್ರೀಮಹಾಲಕ್ಷಿಯ ಅಂಶವಾಗಿ ಹೇಳಲ್ಪಡುವ ತುಳಸಿ ಇರುವ ಮನೆಗಳೆಲ್ಲಾ ಪ್ರೀತಿ, ಭಕ್ತಿ ಇರುತ್ತದೆ ಎಂದೂ, “ನನ್ನನ್ನು ಪೂಜಿಸಲಾಗದವರಿಗೆ ತುಳಸಿಯನ್ನು ಪೂಜಿಸಿದರೆ, ಮನಸ್ಸಿಗೆ ಹರ್ಷ, ಒಗ್ಗಟ್ಟು, ಸಂಸಾರದಲ್ಲಿ ಶಾಂತಿ, ಮನೋಧೈರ್ಯ, ಆರೋಗ್ಯ ಎಂದು ಸಖಲ ಸೌಭಾಗ್ಯಗಳನ್ನೂ ಆಶೀರ್ವದಿಸುವೆನು..”  ಎಂದು ಕೃಷ್ಣನೇ ಹೇಳುತ್ತಾನೆ ಎನ್ನುತ್ತವೆ ಪುರಾಣಗಳು.

ತುಳಸಿಯಂತೆ ಭಗವಂತನ ಬಳಿ ಇದ್ದು ಸೇವೆ ಸಲ್ಲಿಸುವುದೇ ನಿಜವಾದ ಭಕ್ತಿಯೇ..? ಭಕ್ತನಿಗೆ ಕೃಪೆ ನೀಡಲು ಭಗವಂತನಿಗೂ ಭಕ್ತನಿಗೂ ನಡುವೆ ಇರುವ ದೂರ ಒಂದು ಕಾರಣವಾಗುತ್ತದೆಯೇ ಎಂದರೆ… ಇಲ್ಲ. ದೂರದಿಂದ ಭಕ್ತಿ ಮಾಡಿದರೂ, ಭಗವಂತ ಅದನ್ನು ಸ್ವೀಕರಿಸುತ್ತಾನೆ ಎಂದು ಧ್ರುವನ ಕಥೆ ಹೇಳುತ್ತದೆ.

ಮಹಾರಾಜ ಉತ್ತಾನಪಾದನಿಗೆ ಸುರುಚಿ, ಸುನೀತಿ ಎಂಬ ಇಬ್ಬರು ಪತ್ನಿಯರು. ಮೊದಲನೇಯ ಪತ್ನಿ ಸುರುಚಿಯ ಮಗ ಉತ್ತಮ, ಎರಡನೇಯ ಪತ್ನಿ ಸುನೀತಿಯ ಮಗ ಧ್ರುವ.

ಎರಡನೇಯ ಪತ್ನಿಯ ಮಗನನ್ನು ಸದಾ ಉದಾಸೀನ ಮಾಡುತ್ತಲೇ ಇರುವ ರಾಜ. ಇದು ಯಾವುದನ್ನೂ ಅರಿಯದ ಧ್ರುವ, ಅಂದು ಸಭೆಯಲ್ಲಿ ಕುಳಿತಿರುವ ತನ್ನ ತಂದೆಯ ಮಡಿಲಿನಲ್ಲಿ ಬಂದು ಕೂರುತ್ತಾನೆ. ಅದು ಹಿಡಿಸದೆ ದೊಡ್ಡಮ್ಮ ಸುರುಚಿ, ನಾಲ್ಕು ವಯಸ್ಸಿನ ಮಗುವನ್ನು ತಂದೆಯ ಮಡಿಲಿನಿಂದ ಇಳಿಸಲು, ಅದನ್ನು ಅಪ್ಪನಾದ ರಾಜನೂ ಆಕ್ಷೇಪಿಸಿ ಕೇಳದೆ ಇರುವುದರಿಂದ ವ್ಯಥೆಯಿಂದ ತನ್ನ ತಾಯಿಯ ಬಳಿ ಓಡಿ ಬಂದು….

“ಈ ಜಗತ್ತಿನಲ್ಲಿ ಅಪ್ಪನಿಗಿಂತ ದೊಡ್ಡವರು ಯಾರೂ ಇಲ್ಲವೇ? ರಾಜನೇ ತಪ್ಪುಮಾಡಿದರೆ ನಾನು ಯಾರ ಬಳಿ ಮೊರೆಯಿಡಲಿ?” ಎಂದು ಕೇಳುತ್ತಾನೆ ಬಾಲಕ ಧ್ರುವ.

ಅದಕ್ಕೆ ಸುನೀತಿ, “ಜಗತ್ತಿನಲ್ಲಿ ಉಳ್ಳ ಜೀವರಾಶಿಗಳಿಗೆಲ್ಲಾ ಒಬ್ಬನೇ ರಾಜ, ಭಗವಂತನಾದ ಆ ವಿಷ್ಣು. ಅವನ ಶ್ರೀಪಾದಗಳನ್ನು ಧ್ಯಾನ ಮಾಡಿ ಸಮರ್ಪಣೆ ಮಾಡಿಕೊಂಡರೆ ಪ್ರತ್ಯಕ್ಷನಾಗಿ ದರ್ಶನ ನೀಡಿ ನ್ಯಾಯ ಒದಗಿಸುತ್ತಾನೆ…” ಎಂದು ಶಾಂತವಾಗಿ ಮಗನನ್ನು ಸುಧಾರಿಸಲು, ಭಗವಂತನನ್ನು ಹೇಗಾದರೂ  ಬೇಟಿಯಾಗಿಯೇ ತೀರುತ್ತೇನೆ ಎಂದು ನಿರ್ಧಾರ ಮಾಡಿ, ತಾಯಿಯ ಬಳಿಯೂ ಹೇಳದೆ ಭಗವಂತನನ್ನು ಕಾಣಲು ಅಂದು ರಾತ್ರಿಯೇ ಕಾಡಿಗೆ ಹೊರಟುಬಿಡುತ್ತಾನೆ ಧ್ರುವ.

ಹಲವು ದಿನಗಳು ಕಾಡು ಗುಡ್ಡಗಳನ್ನೆಲ್ಲಾ ಹುಡುಕಿಯೂ ಭಗವಂತ ದೊರಕದೆ ದಣಿದುಹೋದ ಧ್ರುವ, ಒಂದು ದಿನ ಮಾರ್ಗದಲ್ಲಿ ನಾರದ ಮುನಿಯನ್ನು ಬೇಟಿಯಾಗಿ, ಭಗವಂತನನ್ನು ದರ್ಶಿಸಬೇಕೆಂಬ ತನ್ನ ಭಾವನೆಯನ್ನು ಅವರ ಬಳಿ ಹೇಳುತ್ತಾನೆ.

ಅದಕ್ಕೆ ನಾರದರು, ತೀವ್ರ ತಪಸ್ಸು ಮಾಡುವ ಮುನಿಗಳಿಗೇ ಭಗವಂತನ ದರ್ಶನ ಪಡೆಯುವುದು ಕಷ್ಟವಾಗಿರುವಾಗ, ಸಣ್ಣ ಮಗು ನೀನು, ನಿನ್ನಿಂದ ಅದು ಸಾಧ್ಯವಾಗುತ್ತದೆಯೇ..?” ಎಂದು ಕೇಳಲು, ಧ್ರುವ ದೃಢ ಮನಸ್ಸಿನಿಂದ “ಭಗವಂತನನ್ನು ಕಾಣುವ ಮಾರ್ಗವನ್ನು ಮಾತ್ರ ನನಗೆ ದಯಪಾಲಿಸಿ” ಎಂದು ಬೇಡಿಕೊಳ್ಳುತ್ತಾನೆ.

ನಿನ್ನ ಮನೋದೃಢತೆಯನ್ನು ಕಂಡು ಹರ್ಷವಾಯಿತು. ಯಮುನಾ ನದಿಯ ದಂಡೆಯಲ್ಲಿರುವ ಮಧುವನಕ್ಕೆ ಹೋಗಿ ಭಗವಂತ ಶ್ರೀಹರಿಯನ್ನು, “ಓಂ ನಮೋ ವಾಸುದೇವಾಯ ಎಂದು ಬಿಡದೆ ಹೇಳಿ ಧ್ಯಾನ ಮಾಡಿದರೆ ದೇವರನ್ನು ಕಾಣಬಹುದು…” ಎಂದು ಅವನಿಗೆ ದೀಕ್ಷೆ ಕೊಟ್ಟು ಮುನಿ ಬೀಳ್ಕೊಡಲು, ಆ ಭಗವಂತನೇ ಬಂದು, “ಧ್ರುವ” ಎಂದು ತನ್ನನ್ನು ಕರೆಯುವವರೆಗೆ ಕಣ್ಣನ್ನು ತೆರೆಯುವುದಿಲ್ಲ ಎಂಬ ನಿರ್ಧಾರದೊಂದಿಗೆ ಯಮುನಾ ನದಿಯ ದಂಡೆಗೆ ಬಂದು  ಕಠಿಣವಾದ  ಜಪವನ್ನು ಮಾಡ ತೊಡಗುತ್ತಾನೆ.

ಆರು ತಿಂಗಳು ನಿಂತಂತೆ, ಏನನ್ನೂ ಸೇವಿಸದೆ,ನೀರನ್ನೂ ಸಹ ಕುಡಿಯದೆ, ಗಾಳಿಯನ್ನು ಮಾತ್ರವೇ ಶ್ವಾಸಿಸುತ್ತಾ ನಿರಂತರವಾಗಿ ಭಗವಾನ್ ನಾರಾಯಣನ ನಾಮಾವಳಿಯನ್ನು ಉಚ್ಚರಿಸುತ್ತಾ ಆ ನಾಲ್ಕುವರೆ ವಯಸ್ಸಿನ ಬಾಲಕ ಧ್ರುವನ ತಪಸ್ಸಿನ ಜ್ವಾಲೆ ಭಗವಂತನನ್ನೇ ಸುಡುತ್ತದೆ.  ಅವನ ಘೋರ ತಪಸ್ಸಿನಿಂದ ನೆಲೆತಪ್ಪಿದ ಭಗವಂತನು, ಧ್ರುವನ ಮುಂದೆ ಪ್ರಸನ್ನನಾಗುತ್ತಾನೆ.

“ಧ್ರುವ…” ಎಂಬ ಪರಂದಾಮನ ದನಿ ಕೇಳಿ ಕಣ್ಣು ತೆರೆದ ಬಾಲಕ, ಶ್ರೀಹರಿಯನ್ನು ಕಂಡಕೂಡಲೆ ಕಣ್ಣೀರಿನೊಂದಿಗೆ ಅವನ ಪಾದಗಳನ್ನು ನಮಸ್ಕರಿಸಿ ಶರಣಾಗುತ್ತಾನೆ.

ಆಗ ಭಗವಂತನ ಪಾಂಚಜನ್ಯ ಸ್ಪರ್ಶವಾಗಿ ಜ್ಞಾನ ಪಡೆದ ಬಾಲಕನ ಬಳಿ “ಧ್ರುವ… ನಿನ್ನ ತಂದೆಯ ರಾಜ್ಯವನ್ನು ಹಲವು ಕಾಲ ಆಳಿದ ನಂತರ, ಪ್ರಕಾಶಮಾನವಾದ ಧ್ರುವ ನಕ್ಷತ್ರವಾಗಿ ನೀನು ಭಾನಿನಲ್ಲಿ ಹೊಳೆಯುತ್ತೀಯೇ!” ಎಂದು ವರ ನೀಡುತ್ತಾನೆ ಪರಂದಾಮ.

ಶ್ರೀಹರಿ ನೀಡಿದ ವರದಂತೆ, ಇಂದು ದೂರದಿಂದಲೇ ಭಗವಂತನನ್ನು ದರ್ಶಿಸುವ ಧ್ರುವ ನಕ್ಷತ್ರವಾಗಿ ಜ್ವಲಿಸುವವನು ಧ್ರುವ. ಧ್ರುವನಿಗೆ ಪಕ್ಕದಲ್ಲಿಯೇ ಸಣ್ಣ ನಕ್ಷತ್ರವಾಗಿ ಸುನೀತಿ ಹೊಳೆಯುತ್ತಾಳೆ ಎಂಬುದನ್ನೂ ಈಗ ನಾವು ಕಾಣಬಹುದು.

ಭಗವಂತನ ಅವತಾರಕ್ಕೂ ಸಹ ಅಂತ್ಯ ಉಂಟು. ಆದರೆ ಭಕ್ತಿಯ ಜೀವನಕ್ಕೆ ಎಂದಿಗೂ ಕೊನೆಯೇ ಇಲ್ಲ ಎಂಬುದನ್ನು ತುಳಸಿಯೂ, ಧ್ರುವನೂ ನಮಗೆ ಅಂದವಾಗಿ ಹೇಳುತ್ತಾರೆ.

ನಂಬಿಕೆಯಿಂದ ಪ್ರಾರ್ಥನೆ ಮಾಡಿದರೆ ಈ ಜಗತ್ತಿನಲ್ಲಿ  ನಮಗೆ ಆರೋಗ್ಯವನ್ನೂ, ಐಶ್ವರ್ಯವನ್ನೂ, ಒಳ್ಳೆಯ ಸಂಸಾರವನ್ನೂ ನೀಡುವ ನಮ್ಮ ಭಗವಂತ, ಕೊನೆಗೆ ಮೋಕ್ಷವನ್ನೂ ನೀಡಿ, ಈ ಹುಟ್ಟಿನಲ್ಲಿ ಮಾತ್ರವಲ್ಲ, ಏಳೇಳು ಜನ್ಮಕ್ಕೂ ಸೇರಿಸಿಯೇ ವರವನ್ನು ನೀಡುತ್ತಾನೆ.

ಈ ಲೋಕದಲ್ಲಿ ನಾವು ಬದುಕುವ ಬದುಕು ಶಾಶ್ವತವಾದುದಲ್ಲ.

ಈಗ ಮಾತ್ರವಲ್ಲ ಏಳೇಳು ಜನ್ಮದಲ್ಲೂ ಅವನಿಗೂ ನಮಗೂ ಇರುವ ಅನುಬಂಧ ಶಾಶ್ವತವಾದದ್ದು ಎಂದು ಅರಿತ ಗೋದೈ, “ಎಂದೆಂದು ಏಳೇಳು ಜನ್ಮಕೂ ಜತೆಯಿರುವ ನಮ್ಮವನಾದ ನಾರಾಯಣ” ಎಂದು ಹಾಡಿ, ಭಗವಂತನ ಕೃಪೆಯನ್ನು, “ಎಂದೆಂದೂ ಏಳೇಳು ಜನ್ಮಕ್ಕೂ…” ಬೇಡುತ್ತ, ಇಪ್ಪತ್ತೊಂಭತ್ತನೇಯ ದಿನದಂದು ಹಾಡುತ್ತಾಳೆ ಗೋದೈ ಆಂಡಾಳ್!

                                                                ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply