‘ನಾನೇ ಬ್ರಹ್ಮ’ : ಹಾಗೆಂದರೇನು!? ~ ರಮಣ ಮಹರ್ಷಿಗಳ ಉತ್ತರ

ಭಕ್ತರೊಬ್ಬರು ರಮಣ ಮಹರ್ಷಿಗಳ ಬಳಿ “ಅಹಂ ಬ್ರಹ್ಮಾಸ್ಮಿ , ನಾನೇ ಬ್ರಹ್ಮ ಎಂದು ಉಪನಿಷತ್ತುಗಳು ಹೇಳಿವೆ. ಅದನ್ನು ಧ್ಯಾನಿಸುತ್ತಿದ್ದರೆ ಸಾಲದೆ?” ಎಂದು ಕೇಳುತ್ತಾರೆ. ಅದಕ್ಕೆ ಶ್ರೀ ರಮಣರು ನೀಡಿದ ಉತ್ತರ ಹೀಗಿದೆ…

“ಈ ಉಪನೀಷತ್ ವಾಕ್ಯದ ತಾತ್ಪರ್ಯವನ್ನು ಅರ್ಥವ ಮಾಡಿಕೊಳ್ಳುವುದು ಹಾಗಲ್ಲ ಅದರ ಸರಳ ಸಾರಾಂಶವೇನೆಂದರೆ ಬ್ರಹ್ಮನು “ನಾನಾಗಿ” ಅಸ್ತಿತ್ವದಲ್ಲಿ ಇದ್ದಾನೆ ಎಂದು . ” ನಾನು ಬ್ರಹ್ಮನ್ ” ಆಗಿದ್ದೇನೆ ಎಂದಲ್ಲ , ‘ನಾನು ಬ್ರಹ್ಮ.. ನಾನು ಬ್ರಹ್ಮ’ ಎಂದು ಧ್ಯಾನ ಮಾಡಲು ಸಲಹೆ ನೀಡಲಾಗಿದೆ ಎಂದು ಊಹಿಸುವುದಲ್ಲ. ಮನುಷ್ಯ ‘ನಾನು ಮನುಷ್ಯ.. ನಾನು ಮನುಷ್ಯ ‘ ಎಂದು ಆಲೋಚಿಸುತ್ತಾ ಇರುತ್ತಾನೆಯೇ? ಅವನು ಅದೇ ಆಗಿದ್ದಾನೆ , ಒಂದು ವೇಳೆ ತಾನು ಒಂದು ಪ್ರಾಣಿಯೋ ಅಥವಾ ಒಂದು ಮರವೋ ಎಂಬ ಅನುಮಾನ ಹುಟ್ಟಿದ ಹೊರತು ಅವನು ‘ನಾನು ಮನುಷ್ಯ ‘ ಎಂದು ಪ್ರತಿಪಾದಿಸುವ ಅಗತ್ಯವಿಲ್ಲ. ಅದೇ ರೀತಿ ಆತ್ಮವು ಆತ್ಮವೇ, “ಬ್ರಹ್ಮನು – ನಾನಾಗಿ” ಪ್ರತಿಯೊಂದು ವಸ್ತುವಿನಲ್ಲೂ ಪ್ರತಿಯೊಂದು ಜೀವಿಯಲ್ಲೂ ಅಸ್ತಿತ್ವದಲ್ಲಿದ್ದಾನೆ.

ವ್ಯಕ್ತಿಯು ಯಾವ ಮಾರ್ಗವನ್ನು ಆರಿಸಿಕೊಂಡರು “ನಾನು” ವನ್ನು ತಪ್ಪಿಸಿಕೊಳ್ಳಲಾರನು. ನಿಷ್ಕಾಮ ಕರ್ಮವನ್ನು ಮಾಡುವ ‘ನಾನು ‘ ಸ್ವಾಮಿಯಿಂದ ಬೇರೆ ಆಗಿದ್ದೇನೆಂದು ಎಂದು ಭಾವಿಸಿ ಅವನನ್ನು ಹಂಬಲಿಸುವ ‘ನಾನು’ ಮತ್ತು ತನ್ನ ಸ್ವಸ್ವರೂಪದಿಂದ ತಾನು ಜಾರಿದ್ದೇನೆ ಎಂದು ಭಾವಿಸುವ ‘ನಾನು’ ಇತ್ಯಾದಿ. ಈ ‘ನಾನು’ ವಿನ ಮೂಲವನ್ನು ಕಂಡು ಹಿಡಿಯಬೇಕು , ಆಗ ಎಲ್ಲ ಸಂದೇಹಗಳು ಪರಿಹಾರವಾಗುತ್ತದೆ‌.”

ತಮ್ಮ ಬೋಧನೆಗಳ ಮೂಲಕ ರಮಣ ಮಹರ್ಷಿಗಳು ಉಪನಿಷತ್ತಿನ ಸಂದೇಶದಂತೆ ಕೇವಲ ತತ್ವ ಸಿದ್ಧಾಂತಗಳನ್ನು ಹೇಳದೆ ಸಾಧನೆಯಿಂದ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವ ಎರಡು ಮಾರ್ಗವನ್ನು ತೋರಿಸಿ ಕೊಟ್ಟು ಹೋದರು. ಮೊದಲನೆಯದು ” ಹೃದಯದಲ್ಲಿ ಮುಳುಗುವ ಸಾಧನೆ” ಉತ್ಕಟವಾದ ಧ್ಯೇಯದಿಂದ ಧ್ಯಾನದ ಮೂಲಕ ನಾನು ಎಂಬ ಬೆಳಕು ಹುಟ್ಟುವ ಸ್ಥಳವನ್ನು ಸೇರುವುದು. ಎರಡನೆಯದು, ಇದೇ ಉತ್ಕಟವಾದ ಅಭಿಲಾಷೆಯಿಂದ ಪ್ರಾಣವಾಯುವನ್ನು ಯೋಗ ಶಾಸ್ತ್ರದಲ್ಲಿ ಉಲ್ಲೇಖ ಮಾಡಿದಂತೆ ಕುಂಭಕವನ್ನು ಮಾಡಿ ಪ್ರಾಣವಾಯುವನ್ನು ನಿರೋಧಿಸುವುದು. “ಇದರಿಂದ ಅಸತ್ಯವಾದ ಅಹಂಕಾರವು ಮತ್ತು ಅದರಿಂದ ಉಂಟಾದ ಮನಸ್ಸು ನಾಶವಾಗುವುದು, ಆನಂತರ ಪರಿಶುದ್ಧವಾದ ಪ್ರಕಾಶವು ಬೆಳಗುವುದು ಎಂದಿದ್ದಾರೆ” ಎಂದು ರಮಣರು ಬೋಧಿಸಿದ್ದರು.

Leave a Reply