ಮೊದಮೊದಲ ಬೌದ್ಧ ಬಿಕ್ಖುಣಿಯರ (ಥೇರಿಯರ) ಪದ್ಯ ಸಂಗ್ರಹವೇ ‘ಥೇರಿಗಾಥಾ’. ಇವುಗಳಲ್ಲಿ ಆಯ್ದ ಕೆಲವನ್ನು ಕನ್ನಡಕ್ಕೆ ತರುತ್ತಿದ್ದಾರೆ, ಕವಿ ಮತ್ತು ಅನುವಾದಕರಾದ ಚಿದಂಬರ ನರೇಂದ್ರ. ಇದು ಮೂರನೇ ಕಂತು…
ಇನ್ನೊಬ್ಬಳು ತಿಸ್ಸಾ
(ಸ್ವಗತದಲ್ಲಿ, ಬುದ್ಧ ತನಗೆ ಹೇಳಿದ್ದನ್ನೇ ತಿಸ್ಸಾ ಮತ್ತೆ ಹೇಳಿಕೊಳ್ಳುತ್ತ)
ತಿಸ್ಸಾ,
ಗಟ್ಟಿಯಾಗಿ ಹಿಡಿದುಕೋ ಒಳ್ಳೆಯ ಸಂಗತಿಗಳನ್ನ,
ಪಾರಾಗಿ ಹೋಗದಿರಲಿ ನಿನ್ನಿಂದ ಈ ಕ್ಷಣ.
ನರಕದಲ್ಲಿ ಹಾಜರಾಗಿರುವ ಎಲ್ಲರ
ಆಪಾದನೆಯೂ
ಈ ಕಳೆದು ಹೋದ ಕ್ಷಣಗಳ ಕುರಿತಾಗಿಯೇ.
ಟಿಪ್ಪಣಿ :
ಧಮ್ಮಪಾಲನ ಪ್ರಕಾರ (Pruitt 1999:19-20) ಈ ತಿಸ್ಸಾಳ ಕಥೆ ಕೂಡ ಮೊದಲಿನ ತಿಸ್ಸಾಳ ಥರವೇ ; ಮತ್ತು ಮುಂದೆ ಬರಲಿರುವ ಧೀರಾ, ವೀರಾ, ಮಿತ್ತಾ, ಭದ್ರಾ ಹಾಗು ಉಪಾಸನಾ ಈ ಎಲ್ಲರ ಕಥೆಯೂ ಹಾಗೆಯೇ. ಇವರೆಲ್ಲ ಮುಂದೆ ಬುದ್ಧನಾಗಲಿದ್ದವನ, ನಿರ್ವಾಣದ ಹುಡುಕಾಟಕ್ಕೆ ತೆರಳುವ ಮೊದಲಿನ ಉಪಪತ್ನಿಯರು. ಬುದ್ಧ ಈ ಎಲ್ಲರಿಗೂ ತನ್ನ ದಿವ್ಯ ದೃಷ್ಟಿಯ ಮೂಲಕ ಒಂದೊಂದು ಪದ್ಯ ಹೇಳಿದ ವೀರಾಳನ್ನು ಮಾತ್ರ ಹೊರತುಪಡಿಸಿ. ವೀರಾ ನೇರವಾಗಿ ಬುದ್ಧನಿಂದ ತನ್ನ ಪದ್ಯ ಪಡೆದುಕೊಂಡಳು. ಬುದ್ಧನಿಂದ ಪದ್ಯ ಕೇಳಿದಾಗ ಈ ಪ್ರತಿಯೊಬ್ಬರಿಗೂ ಜ್ಞಾನೋದಯವಾಯಿತು ಮತ್ತು ತಮ್ಮ ಈ ಅನುಭವವನ್ನು ಘೋಷಿಸಲು ಈ ಎಲ್ಲರೂ ಬುದ್ಧ ತಮಗೆ ಹೇಳಿದ ಪದ್ಯಗಳನ್ನು ಮತ್ತೇ ಹೇಳಿಕೊಂಡರು.
ಧೀರಾ
(ಸ್ವಗತದಲ್ಲಿ, ಬುದ್ಧ ತನಗೆ ಹೇಳಿದ್ದನ್ನೇ ಧೀರಾ ಮತ್ತೆ ಹೇಳಿಕೊಳ್ಳುತ್ತ)
ಧೀರಾ
ನಿನ್ನ ಹೆಸರೇ ಹೇಳುವಂತೆ ನೀನು,
ನಿನ್ನ ಕಾಲ ಮೇಲೆ ನಿಂತುಕೊಂಡವಳು.
ಹಾಗಾಗಿ ನೆನಪಿರಲಿ ನಿನಗೆ ಇವು :
ಕೊನೆಯಾಗುವಿಕೆ ಎಂದರೆ
ಕನಸು ಕಾಣುವುದು, ಖುಶಿಯಾಗಿರುವುದು
ನಿಂತು ಹೋಗುವುದು.
ನಿರ್ವಾಣವನ್ನು ಸಾಧಿಸು, ನಿನ್ನ ಕಟ್ಟಿಹಾಕಿರುವ
ಎಲ್ಲದರಿಂದ ಸುರಕ್ಷಿತವಾಗಿರಲು
ಇಂಥ ಸ್ಥಿತಿ ಇನ್ನೊಂದಿಲ್ಲ.
-ಇಲ್ಲಿ ಜೊತೆಯಲ್ಲಿಯೇ ಇನ್ನೊಬ್ಬಳು ಧೀರಾಳ ಹೆಸರಲ್ಲಿ ಮತ್ತೊಂದು ಪದ್ಯವಿದೆ –
ಧೀರಾ
ನಿನ್ನ ಹೆಸರೇ ಹೇಳುವಂತೆ ನೀನು,
ಆತ್ಮನಿರ್ಭರಳು.
ನೀನು ಸನ್ಯಾಸಿನಿಯ ಎಲ್ಲ ಸಂವೇದನೆಗಳನ್ನು
ಪೂರ್ಣವಾಗಿ ಪಡೆದುಕೊಂಡಿರುವ ಸಾಧಕಿ,
ನಿನ್ನ ದೇಹದ ಕಾಳಜಿ ಮಾಡು
ಇದು ನಿನ್ನ ಕೊನೆಯದು,
ಇಷ್ಟು ಮಾತ್ರ ಜಾಗ್ರತೆಯಿರಲಿ ನಿನ್ನಲ್ಲಿ
ಈ ದೇಹ ಸಾವನ್ನು ಹೊತ್ತು ಬರುವ ವಾಹಕವಾಗದಿರಲಿ
ಇನ್ನು ಮೇಲೆ.