ನಿತ್ಯದುಃಖಿಗಳು ಯಾರು? : ‘ವಿದುರ ನೀತಿ’ಯಿಂದ ದಿನದ ಸುಭಾಷಿತ

ಇಂದಿನ ಸುಭಾಷಿತ, ವಿದುರ ನೀತಿಯಿಂದ…

ಈರ್ಷ್ಯೀ ಘೃಣೀ ತ್ವಸಂತೃಪ್ತಃ ಕ್ರೋಧನೋ ನಿತ್ಯ ಶಂಕಿತಃ।ಪರಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ ॥

ಇತರರ ಬಗ್ಗೆ ಅಸೂಯೆ ಇದ್ದರೆ ತನ್ನಲ್ಲಿ ಎಷ್ಟು ಸಂಪತ್ತಿದ್ದರೂ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಇತರರ ಸುಖವನ್ನು ಕಂಡು ಕರುಬುವುದರಲ್ಲೇ ಜೀವನ ಕಳೆದು ಹೋಗುತ್ತದೆ. ಜುಗುಪ್ಸೆ ಹೊಂದಿದವನಿಗೆ ಮುಂದೆಲ್ಲ ಕತ್ತಲಾಗಿಯೇ ಕಾಣಿಸುವುದು. ಮುಂದೊಂದು ದಿನ ನನಗೂ ಸುಖವಿದೆ ಎಂಬ ಆಶಾಭಾವನೆಯಿಲ್ಲದೆ ಅವಿವೇಕದಿಂದ ಇರುವ ಸುಖವನ್ನೂ ಕಳೆದುಕೊಳ್ಳುವನು – ಇದು ವಿದುರನೀತಿಯ ಈ ಮೇಲಿನ ಶ್ಲೋಕದ ಅರ್ಥ.

ತೃಪ್ತಿ ಇದ್ದರೆ ಅದಕ್ಕಿಂತ ಮಿಗಿಲಾದ ಸುಖವಿಲ್ಲ. ಕಷ್ಟ ಸುಖಗಳು ಜೀವನದಲ್ಲಿ ಇರುವುದೇ. ಅದನ್ನು ಅರಿಯದೆ ಪುರಂದರದಾಸರು ಹೇಳಿದಂತೆ ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಇದ್ದರೆ ಇರುವ ಸುಖವನ್ನು ಅನುಭವಿಸುವುದು ಹೇಗೆ ಸಾಧ್ಯ?

ಕೋಪವಿದ್ದವನಿಗೆ ವಿವೇಕವಿಲ್ಲ. ಹಿಂದು ಮುಂದು ಯೋಚಿಸದೆ ಮುನ್ನುಗ್ಗಿ ಕಷ್ಟಕ್ಕೊಳಗಾಗುತ್ತಾನೆ. ಕ್ಷಣಕಾಲ ತಾಳ್ಮೆವಹಿಸಿದರೆ ಮುಂದಿರುವ ಅನಾಹುತವನ್ನು ಖಂಡಿತಾ ತಪ್ಪಿಸಬಹುದು. ಸಂಶಯಾತ್ಮಾ ವಿನಶ್ಯತಿ. ಸಂಶಯವಿರುವುದು ಮನಸ್ಸಿನಲ್ಲಿ. ನಂಬಿಕೆಯಿರುವುದು ಅಂತರಾತ್ಮದಲ್ಲಿ. ಅಂತರಾತ್ಮದ ಬೆಳಕಿನಲ್ಲಿ ವಿವೇಚಿಸಿದರೆ ಸಂಶಯ ತಾನಾಗಿಯೇ ನಿವಾರಣೆಯಾಗುತ್ತದೆ. ಭಗವಂತನ ಅನುಗ್ರಹ ದೊರೆಯುತ್ತದೆ. ಅದು ಬಿಟ್ಟು ಎಲ್ಲವನ್ನೂ ಸಂಶಯದಿಂದಲೇ ಕಂಡರೆ ಸುಖವೆಲ್ಲಿಂದ ಸಿಗಬೇಕು?

ತಾನು ಸಾಯಬೇಕು, ಸ್ವರ್ಗ ಪಡೆಯಬೇಕು. ಕಷ್ಟ ಪಟ್ಟು ಸಂಪಾದಿಸಿದರೆ ಅದರಿಂದಷ್ಟೇ ಸುಖ. ಇನ್ನೊಬ್ಬರ ಸೊತ್ತಿನಲ್ಲಿ ನಾವೆಷ್ಟು ದಿನ ಸುಖಪಡಬಹುದು? ಆದ್ದರಿಂದ ಈರ್ಷ್ಯೆ ಜುಗುಪ್ಸೆ ಉಳ್ಳವರು, ತೃಪ್ತಿಯಿಲ್ಲದವರು, ಕೋಪಿಗಳು, ಸಂಶಯಾತ್ಮರು,ಪರೋಪಜೀವಿಗಳು ಈ ಆರು ಮಂದಿ ನಿಶ್ಚಯವಾಗಿಯೂ ದುಃಖಭಾಜನರು.

Leave a Reply