ಉಪಾಸಮಾ, ಮುತ್ತಾ, ಧಮ್ಮದಿನ್ನ : ಬಿಕ್ಖುಣಿಯರ ಪದ್ಯಗಳು #5

ಮೊದಮೊದಲ ಬೌದ್ಧ ಬಿಕ್ಖುಣಿಯರ (ಥೇರಿಯರ) ಪದ್ಯ ಸಂಗ್ರಹವೇ ‘ಥೇರಿಗಾಥಾ’. ಇವುಗಳಲ್ಲಿ ಆಯ್ದ ಕೆಲವನ್ನು ಕನ್ನಡಕ್ಕೆ ತರುತ್ತಿದ್ದಾರೆ, ಕವಿ ಮತ್ತು ಅನುವಾದಕರಾದ ಚಿದಂಬರ ನರೇಂದ್ರ. ಇದು ಐದನೇ ಕಂತು…

ಉಪಾಸಮಾ (ಸ್ವಗತ, ಬುದ್ಧ ತನಗೆ ಹೇಳಿದ್ದನ್ನೇ ಉಪಾಸಮಾ ಮತ್ತೆ ಹೇಳಿಕೊಳ್ಳುತ್ತ)

ಉಪಾಸಮಾ,
ನಿನ್ನ ಹೆಸರು ಶಾಂತ, ಅಚಲ ಹಾಗೆಯೇ ನೀನು

ಎಲ್ಲಿ ಸವಾರಿ ನಡೆಸುತ್ತಿದೆಯೋ ಸಾವು
ಅಲ್ಲಿ ದಾಟಬೇಕು ನೀನು ಪ್ರವಾಹವನ್ನು,
ಸುಲಭವಲ್ಲ ಸುಮ್ಮನೆ ಹಾಗೆ ದಾಟುವುದು,
ನಿನ್ನ ದೇಹದ ಆರೈಕೆ ಮಾಡು
ಕೊನೆಯದಿದು ನಿನದು,
ಇಷ್ಟು ಮಾತ್ರ ಜಾಗ್ರತೆಯಿರಲಿ ನಿನ್ನಲ್ಲಿ
ಈ ದೇಹ ಸಾವನ್ನು ಹೊತ್ತು ಬರುವ ವಾಹಕವಾಗದಿರಲಿ
ಇನ್ನು ಮೇಲೆ.


ಮುತ್ತಾ

*ಮುತ್ತಾ ನನ್ನ ಹೆಸರು, ಮುಕ್ತಳು ನಾನು.

ಮತ್ತು ಎಲ್ಲ ಸಂಕೋಲೆಗಳಿಂದ ಬಿಡಿಸಿಕೊಂಡವಳು,
ಒರಳು, ಒನಕೆ ಮತ್ತು ಗಂಡನ ವಂಚನೆ
ಮೂರು ಕುಟಿಲ ಸಂಗತಿಗಳಿಂದ ದೂರವಾದವಳು
ಹುಟ್ಟು ಸಾವಿನಿಂದ ಮುಕ್ತಳು,
ಮರುಹುಟ್ಟಿನ ಕಾರಣವಾಗುವನ್ನು ಕಿತ್ತು ಎಸೆದವಳು.

*ಟಿಪ್ಪಣಿ : ಮುತ್ತಾ ಬಡ ಬ್ರಾಹ್ಮಣನ ಮಗಳು. ಆಕೆ ಪ್ರೌಢಾವಸ್ಥೆಯನ್ನು ತಲುಪಿದಾಗ ಅಪ್ಪ ಅಮ್ಮ ಆಕೆಯ ಮದುವೆಯನ್ನು ಗೂನು ಬೆನ್ನಿನ ಬ್ರಾಹ್ಮಣನೊಂದಿಗೆ ಮಾಡುತ್ತಾರೆ. ಈ ಮದುವೆಯಲ್ಲಿ ಸುಖ ಕಾಣದ ಅವಳು ಗಂಡನ ಅನುಮತಿ ಪಡೆದು ಸನ್ಯಾಸ ದೀಕ್ಷೆ ಸ್ವೀಕರಿಸಿದಳು. ತನ್ನ ಅಧ್ಯಾತ್ಮಿಕ ಸಾಧನೆಯಲ್ಲಿ ಮುತ್ತಾ ಈ ಪದ್ಯವನ್ನು ಬಳಸುತ್ತಾಳೆ. ಧ್ಯಾನದಲ್ಲಿ ಮನಸ್ಸು ಚಂಚಲವಾದಾಗ, ಮುತ್ತಾ ಈ ಪದ್ಯವನ್ನು ಹೇಳುತ್ತ ತನ್ನ ಏಕಾಗ್ರತೆಯನ್ನು ಮತ್ತೆ ಪಡೆದುಕೊಳ್ಳುತ್ತಿದ್ದಳು. ಅವಳಿಗೆ ಜ್ಞಾನೋದಯವಾದಾಗ ಈ ಪದ್ಯವನ್ನು ಮತ್ತೆ ಮತ್ತೆ ಹೇಳಿಕೊಂಡಳು.


ಧಮ್ಮದಿನ್ನ

ಬಿಡುಗಡೆಯ ಬಯಕೆಯ ಬಗ್ಗೆ
ಗಟ್ಟಿ ನಿರ್ಧಾರ ಮಾಡಿದವಳು,
ತಿಳಿಗೊಳದ ಮನಸ್ಸಿನವಳು,
ಮುಟ್ಟುವ ಸುಖಗಳ ಸುಳಿಯಿಂದ ಹೊರತಾದವಳು,
ಸಂಸಾರದ ತೆರೆಗಳ ಏರಿ ನಿಂತವಳು
ಮತ್ತೆ ಹುಟ್ಟುವ ಚಕ್ರವ ದಾಟಿ ಬಂದವಳು.

ಟಿಪ್ಪಣಿ: ಗೌರವಾನ್ವಿತ ಕುಟುಂಬದಲ್ಲಿ ಹುಟ್ಟಿದ ಧಮ್ಮದಿನ್ನಳನ್ನು ಒಂದು ಶ್ರೀಮಂತ ವ್ಯಾಪಾರಿಯೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಬುದ್ಧನ ಮಾತುಗಳಿಂದ ಪ್ರಭಾವಿತನಾದ ಅವಳ ಗಂಡ ಅಧ್ಯಾತ್ಮಿಕವಾಗಿ ಬದಲಾಗಿ ಬ್ರಹ್ಮಚರ್ಯವನ್ನು ಸ್ವೀಕರಿಸಲು ನಿರ್ಧರಿಸಿದ. ಧಮ್ಮದಿನ್ನಳ ಇಚ್ಛೆಯಂತೆ ಅವಳನ್ನು ಬುದ್ಧನ ದೀಕ್ಷೆ ಪಡೆದ ಹೆಣ್ಣುಮಕ್ಕಳೊಂದಿಗೆ ಇರಲು ಕಳುಹಿಸಲಾಯಿತು. ಧಮ್ಮದಿನ್ನಳಿಗೆ ಜ್ಞಾನೋದಯವಾದ ತರುವಾಯ ಆಕೆ ಗಂಡ ಇರುವಲ್ಲಿಗೆ ಬಂದು ಅವನಿಗೆ ಬುದ್ಧನ ಅಧ್ಯಾತ್ಮವನ್ನು ತಿಳಿಸಿ ಹೇಳಿದಳು. ತನ್ನ ಧಮ್ಮವನ್ನು ಸರಿಯಾಗಿ ಅರಿತುಕೊಂಡು ಬೋಧಿಸುವ ಸನ್ಯಾಸಿನಿಯರಲ್ಲಿ ಅತ್ಯುತ್ತಮಳು ಎಂದು ಬುದ್ಧ, ಧಮ್ಮದಿನ್ನಳ ಬಗ್ಗೆ ಮೆಚ್ಚುಗೆಯ ಮಾತು ಹೇಳುತ್ತಿದ್ದ. ತನ್ನ ಸಾಧನೆಯ ಪ್ರಕ್ರಿಯೆಯನ್ನು ಮೆಲಕುಹಾಕುತ್ತ ಜ್ಞಾನೋದಯದ ಸಮಯದಲ್ಲಿ ಧಮ್ಮದಿನ್ನ ಈ ಪದ್ಯವನ್ನು ಹೇಳಿದಳು.

Leave a Reply