ನಿಜವಾದ ಬೋಧನೆ ಯಾವುದು? : ಪರಮಹಂಸ ವಚನ ವೇದ

ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.

ಬೂರುಗದ ಮರದ ಬೀಜ ಅದರ ಅಡಿಯಲ್ಲಿ ಬೀಳುವುದಿಲ್ಲ. ಅವು ಗಾಳಿಯಿಂದ ದೂರಕ್ಕೆ ಒಯ್ಯಲ್ಪಟ್ಟು ಅಲ್ಲಿ ಮೊಳಕೆಯಾಗುವವು. ಇದರಂತೆಯೇ ಮಹಾಪುರುಷನ ಶಕ್ತಿಯೂ ಕೂಡ ತನ್ನಿಂದ ದೂರದಲ್ಲಿ ವ್ಯಕ್ತವಾಗುವುದು. ಅಲ್ಲಿ ಅದನ್ನು ಮೆಚ್ಚುವರು.
ದೀಪ ದೂರಕ್ಕೆ ಬೆಳಕನ್ನು ಕೊಟ್ಟರೂ ಅದರ ಕೆಳಗೆ ಯಾವಾಗಲೂ ನೆರಳು. ಅದರಂತೆಯೇ ಮಹಾತ್ಮರ ಹತ್ತಿರ ಇರುವವರಿಗೆ ಅವರ ಮಹಾತ್ಮೆ ತಿಳಿಯುವುದಿಲ್ಲ. ಯಾರು ಅವರಿಂದ ದೂರದಲ್ಲಿ ಇರುವರೋ ಅವರು ಇವರ ಮಹಾತ್ಮೆಯ ಬಗ್ಗೆ ತಿಳಿದು ಮುಗ್ಧರಾಗುವರು.
ಕಟ್ಟಿಗೆ ಮುಂತಾದವುಗಳನ್ನು ಸೇರಿಸಿ ಒಬ್ಬನು ಬೆಂಕಿ ಹೊತ್ತಿಸಿದರೆ, ಅನೇಕರು ಅದರಿಂದ ಚಳಿ ಕಾಯಿಸಿಕೊಳ್ಳುವರು. ಹಾಗೆಯೇ; ತುಂಬಾ ಕಷ್ಟಪಟ್ಟು ತಪಸ್ಸು ಮಾಡಿ ಭಗವಂತನನ್ನು ಕಂಡವರೊಡನೆ ಬೆರೆತು, ಅವರು ಹೇಳಿದಂತೆ ಕೇಳುವುದರಿಂದ ನಮಗೂ ಭಗವಂತನ ಧ್ಯಾನ ಮಾಡಲು ಸಾಧ್ಯವಾಗುವುದು.
ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.

ಯಾರು ಮುಕ್ತರಾಗಿರುವರೋ ಅವರೆಡೆಗೆ ನೂರಾರು ಮಂದಿ ಹತ್ತಾರು ಕಡೆಗಳಿಂದ ಬರುತ್ತಾರೆ. ಬಂದು ಉಪದೇಶ ಸ್ವೀಕರಿಸುತ್ತಾರೆ. ಮೊಗ್ಗು ಅರಳಿದಾಗ ದುಂಬಿಗಳು ಬಂದು ಕೂಡುವುದಿಲ್ಲವೆ? ಯಾರಾದರೂ ಅವಕ್ಕೆ ಆಮಂತ್ರಣ ನೀಡಿ ಕರೆಸಿಕೊಳ್ಳುತ್ತಾರೆಯೇ? ಹಾಗೆಯೇ ಬೋಧಕನಲ್ಲಿ ಸತ್ವ ಮಡುಗಟ್ಟಿದಾಗ ಆತ ಬೋಧನೆಗೆ ಅರ್ಹನಾಗುತ್ತಾನೆ. ಮತ್ತು ಜನರು ತಾವಾಗಿಯೇ ಅವನನ್ನು ಅರಸಿ ಬರುತ್ತಾರೆ.

Leave a Reply