ವಿಸಾಖಾ, ಸುಮನಾ, ಉತ್ತರಾ : ಬಿಕ್ಖುಣಿಯರ ಪದ್ಯಗಳು #6

ಮೊದಮೊದಲ ಬೌದ್ಧ ಬಿಕ್ಖುಣಿಯರ (ಥೇರಿಯರ) ಪದ್ಯ ಸಂಗ್ರಹವೇ ‘ಥೇರಿಗಾಥಾ’. ಇವುಗಳಲ್ಲಿ ಆಯ್ದ ಕೆಲವನ್ನು ಕನ್ನಡಕ್ಕೆ ತರುತ್ತಿದ್ದಾರೆ, ಕವಿ ಮತ್ತು ಅನುವಾದಕರಾದ ಚಿದಂಬರ ನರೇಂದ್ರ. ಇದು ಆರನೇ ಕಂತು…

ವಿಸಾಖಾ

ಬುದ್ಧ ಕಲಿಸಿದಂತೆ ಮಾಡು,
ಹಾಗೆ ಮಾಡಿದ ಮೇಲೆ ಕಳವಳಕ್ಕೆ
ಯಾವ ಕಾರಣವೂ ಉಳಿಯುವುದಿಲ್ಲ,
ಬೇಗ
ಕಾಲು ತೊಳೆದುಕೊಂಡು
ಕೂಡು
ಒಂದು ಬದಿಯಲ್ಲಿ.

ಟಿಪ್ಪಣಿ : ಧಮ್ಮಪಾಲನ ಪ್ರಕಾರ (Pruitt 1998 : 31) ವಿಸಾಖಾಳ ಕಥೆಯೂ ಧೀರಾಳ ಹಾಗೆಯೇ, ವಿಸಾಖಾ ಕೂಡ ಮುಂದೆ ಬುದ್ಧನಾಗಲಿರುವವನ ಉಪಪತ್ನಿ. ಈ ಪದ್ಯವನ್ನ ವಿಸಾಖಾ ತನ್ನ ಜ್ಞಾನೋದಯದ ಸಮಯದಲ್ಲಿ ಹೇಳಿದ್ದು ಕೇವಲ ತನ್ನ ನಿರ್ವಾಣವನ್ನ ಸೂಚಿಸುವುದಕ್ಕಾಗಿ ಮಾತ್ರ ಅಲ್ಲ, ಇತರ ಸನ್ಯಾಸಿನಿಯರ ಸಾಧನೆಯನ್ನ ಪ್ರೋತ್ಸಾಹಿಸುವುದಕ್ಕಾಗಿ ಕೂಡ.


ಸುಮನಾ

ಒಮ್ಮೆ
ಆ ಮೂಲ ಧಾತುಗಳನ್ನ ಕೂಡ
ಯಾವವು
ಎಲ್ಲಕ್ಕೂ ಕಾರಣವೋ
ಆ ಸಮಸ್ತವನ್ನೂ ನೀನು
ಯಾತನೆ ಎಂದು ಗುರುತಿಸಿದಾಗ,
ಹುಟ್ಟುವುದಿಲ್ಲ ಮತ್ತೊಮ್ಮೆ ನೀನು,

ಸಮಾಧಾನ ಹೇಗೋ ಹಾಗೆ ಬದುಕುತ್ತೀ,
ಒಮ್ಮೆ ನಿರಾಕರಿಸಿದಾಗ
ಹೆಚ್ಚಿನ ಬದುಕುಗಳ ಬಯಕೆಯನ್ನು ನೀನು.

ಟಿಪ್ಪಣಿ : ಧಮ್ಮಪಾಲನ ಪ್ರಕಾರ (Pruitt 1998 : 32) ಸುಮನಾಳ ಕಥೆಯೂ ಥಿಸ್ಸಾಳ ಹಾಗೆಯೇ. ಬುದ್ಧ ಸುಮನಾಳಿಗೆ ಒಂದು ದೃಷ್ಟಿನೋಟವನ್ನ ಕಳುಹಿಸಿದ. ಆ ದೃಷ್ಟಿನೋಟದಲ್ಲಿ ಆಕೆಯ ಮುಂದೆ ಕುಳಿತು, ಬುದ್ಧ ಈ ಪದ್ಯವನ್ನು ಅವಳಿಗೆ ಹೇಳುತ್ತಿದ್ದ. ಪದ್ಯದ ಕೊನೆಗೆ ಸುಮನಾಳಿಗೆ ಜ್ಞಾನೋದಯವಾಯಿತು.


ಉತ್ತರಾ

ಉತ್ತರಾ,
ದೇಹದ ಜೊತೆ ಸ್ವಯಂ ನಿಗ್ರಹ ಸಾಧಿಸಿದವಳು,
ಮಾತುಗಳನ್ನ ಹತೋಟಿಯಲ್ಲಿಟ್ಟುಕೊಂಡವಳು,
ಮನಸ್ಸನ್ನು ಅಂಕೆಯಲ್ಲಿಟ್ಟುಕೊಂಡವಳು,
ತೀವ್ರ ಬಯಕೆಗಳ ಬೇರು ಕಿತ್ತುಹಾಕಿದ ಕಾರಣಕ್ಕೆ
ಶಾಂತಳು, ಮುಕ್ತಳು.

ಟಿಪ್ಪಣಿ : ಧಮ್ಮಪಾಲನ ಪ್ರಕಾರ (Pruitt 1998 : 33) ಉತ್ತರಾಳ ಕಥೆಯೂ ಥಿಸ್ಸಾಳ ಹಾಗೆಯೇ. ಆಕೆಯೂ ಸಾಕ್ಯ ರಾಜಮನೆತನದಲ್ಲಿ ಹುಟ್ಟಿದವಳು, ಮುಂದೆ ಬುದ್ಧನಾಗಲಿರುವವನ ಉಪಪತ್ನಿಯಾದವಳು. ಉತ್ತರಾ, ಮಹಾಪಜಾಪತಿ ಗೋತಮಿಯ ಸಂಘವನ್ನು ಸೇರಿಕೊಂಡವಳು. ಬುದ್ಧ, ಈ ಪದ್ಯವನ್ನು ಉತ್ತರಾಳಿಗೆ ಒಂದು ದೃಷ್ಟಿನೋಟದ ಮೂಲಕ ಕಳುಹಿಸುತ್ತಾನೆ. ಪದ್ಯದ ಕೊನೆಗೆ ಉತ್ತರಾಳಿಗೆ ಜ್ಞಾನೋದಯವಾಗುತ್ತದೆ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.