ಗೀತೆಯ ಮೂಲಕ ಕೃಷ್ಣ ಕೊಟ್ಟ ಕೊನೆಯ ಭರವಸೆ

ಇಲ್ಲಿ ಧರ್ಮ ಅಂದರೆ ಆಚರಣೆ. ಆಚರಣೆಗಳನ್ನು ಬಿಟ್ಟುಬಿಡು, ನನ್ನಲ್ಲಿ ಶರಣಾಗು ಸಾಕು – ಎಂದು. ಒಂದುವೇಳೆ ಪೂಜಾದಿಗಳನ್ನು ಮಾಡಿದರೂ ಅದರಿಂದ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಇರುವುದು – ಎಂದು. ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಕೊಡು ಕೊಳ್ಳುವಿಕೆ ಆಗಬಾರದು. ನಾನು ಪೂಜೆ ಮಾಡುತ್ತೇನೆ ನೀನು ಫಲ ಕೊಡು ಅನ್ನಬಾರದು – ಎಂದು… । ಸಾ.ಹಿರಣ್ಮಯಿ

ಭಗವಂತನಲ್ಲಿ ಶರಣಾಗುವ ಮೂಲಕ ನಾವು ಮನಶ್ಶಾಂತಿಯನ್ನು ಹೊಂದುವುದು ಖಚಿತ. ನಾವು ಒಪ್ಪಿದರೂ ಬಿಟ್ಟರೂ ಸೃಷ್ಟಿಯ ಸಮಸ್ತವನ್ನೂ ಪರಿಪಾಲಿಸುವ ಜಗನ್ನಿಯಾಮಕ ಶಕ್ತಿಯೊಂದು ಇದ್ದೇ ಇದೆ. ಆ ಶಕ್ತಿಯನ್ನೆ ನಾವು ಭಗವಂತನೆಂದು ಕರೆಯುತ್ತೇವೆ. ಹಾಗೆ ಶಕ್ತಿಯೊಂದಿದೆ ಎಂದು ಕಂಡುಕೊಳ್ಳುವುದು ಶರಣಾಗತಿಯ ಮೊದಲ ಹೆಜ್ಜೆ. ಅನಂತರದಲ್ಲಿ ನಾವು ಮಾಡುತ್ತಿರುವುದು ಏನೂ ಇಲ್ಲ ಎಂಬ ಅರಿವು ಹಿಂಬಾಲಿಸುತ್ತದೆ. ಈ ಅರಿವಿನ ನಂತರ ಹೊಮ್ಮುವುದೇ ಶರಣಾಗತಿ. ಮನಸ್ಸನ್ನು ಭಗವಂತನತ್ತ ಹರಿಸಿ, ಬುದ್ಧಿಯಲ್ಲಿ ಭಗವಂತನನ್ನುನೆಟ್ಟು ಚಿತ್ತದಲ್ಲಿ ಭಗವಂತನನ್ನು ಸ್ಥಿರಗೊಳಿಸಿ, ಸುಪ್ತಪ್ರಜ್ಞೆಯಲ್ಲಿ ಕೂಡ ಭಗವಂತನ ಸ್ಮರಣೆಯನ್ನು ಶಾಶ್ವತಗೊಳಿಸಿಕೊಂಡಾಗ ನಮ್ಮ ಎಲ್ಲಕ್ರಿಯೆಗಳೂಭಗವಂತನ ಪೂಜೆಯಾಗುತ್ತದೆ. ಇದರಿಂದ ನಮ್ಮ ಎಲ್ಲ ವ್ಯವಹಾರದಲ್ಲೂ ಪೂರ್ಣ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ ಹಾಗೂ ಜೀವನದಲ್ಲಿ ಬರುವ ದುರ್ಗಮ ಸ್ಥಿತಿ, ಕಷ್ಟ, ಕಾರ್ಪಣ್ಯಗಳನ್ನು ಎದುರಿಸುವ ಕ್ಷಮತೆ ಬರುತ್ತದೆ.

ಜ್ಞಾನಿಯಾದವನು ಇದನ್ನು ಅರ್ಥ ಮಾಡಿಕೊಂಡು ತನ್ನ ಜೀವನ ಪಯಣದಲ್ಲಿ ಅನಿವಾರ್ಯವಾಗಿ ಬರುವ ಎಲ್ಲ ಆಪತ್ತುಗಳನ್ನು ನಿರಾಯಾಸವಾಗಿ ದಾಟಿ ಮುನ್ನಡೆಯುತ್ತಾನೆ. ಈ ರೀತಿ ಬದುಕಿದಾಗ ಭಗವಂತ ನಮ್ಮ ಜೀವನದಲ್ಲಿಬರುವ ಸರ್ವ ಅನಿಷ್ಟಗಳಿಂದಲೂ ನಮ್ಮನ್ನು ರಕ್ಷಿಸುತ್ತಾನೆ. ಆತನ ರಕ್ಷಾಕವಚ ಸದಾ ನಮ್ಮನ್ನು ಸುತ್ತುವರಿದಿರುತ್ತದೆ. ಇದರಿಂದ ಜೀವನದಲ್ಲಿ ಬರುವ ಎಲ್ಲ ಆಪತ್ತುಗಳಿಂದ ನಾವು ಪಾರಾಗುತ್ತೇವೆ. ಇದನ್ನು ಬಿಟ್ಟು ನನ್ನಿಂದಲೇ ಎಲ್ಲ ಎಂದು, ಮಾನವನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಅಹಂಕಾರ ಪಟ್ಟರೆ, ನಮ್ಮ ಕೈಯಾರೆ ನಾವು ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡು ವಿನಾಶ ಹೊಂದುತ್ತೇವೆ.

ನಿರಾಕರಣೆಯೂ ಅಹಂಕಾರವೇ

“ನಾನು ಯುದ್ಧಮಾಡುವುದಿಲ್ಲ’ ಎಂದು ಅರ್ಜುನ ರಥದಲ್ಲಿ ಕುಸಿದು ಕೂರುವುದನ್ನು ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿ ನಾವು ನೋಡುತ್ತೇವೆ. ಇಲ್ಲಿ ಕೃಷ್ಣ ಹೇಳುತ್ತಾನೆ, “ನಾನು ಯುದ್ಧ ಮಾಡುವುದಿಲ್ಲ ಎನ್ನುವುದು ಕೂಡ ನಿನ್ನ ಅಹಂಕಾರಭರಿತ ಭ್ರಮೆಯೇ ಆಗಿದೆ’ ಎಂದು. “ನೀನು ಏನನ್ನು ಮಾಡುವುದಿಲ್ಲಎಂದು ಹೇಳಿರುವೆಯೋ ಅದನ್ನೇ ಮಾಡುತ್ತೀಯ’ ಎಂದು. ಏಕೆಂದರೆ ನಮ್ಮನ್ನು ನಿಯಂತ್ರಣ ಮಾಡುವ ಶಕ್ತಿ ಪ್ರಕೃತಿ. ಇಲ್ಲಿ ನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವ ಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ, ಪರಿಸರದ ಪ್ರಭಾವ ಮತ್ತು ಈ ಎಲ್ಲವನ್ನುನಿಯಂತ್ರಿಸುವ ಭಗವಂತನ ಇಚ್ಛೆಯಂತೆ ಕ್ರಿಯೆ ನಡೆದೇ ನಡೆಯುತ್ತದೆ. ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಹಂಕಾರದಿಂದ ಯೋಚಿಸುವುದು ನಮ್ಮ ಅಜ್ಞಾನದಿಂದ.

ಈ ರೀತಿ ಯಾವ ಯೋಚನೆ ಮಾಡಿದರೂ ನಾವು ಕೊನೆಗೆ ಮಾಡುವುದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮಲ್ಲಿಲ್ಲ. ಅದು ನಮಗರಿವಿಲ್ಲದಂತೆ, ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಆದ್ದರಿಂದ ಮಾಡುತ್ತೇನೆ ಅನ್ನುವುದು ಹೇಗೆ ಅಹಂಕಾರವಾಗುತ್ತದೆಯೋ ಮಾಡುವುದಿಲ್ಲ ಅನ್ನುವುದು ಕೂಡ ಅಹಂಕಾರವೇ ಆಗುತ್ತದೆ.

ಮಹಾ ಚೈತನ್ಯ

ಎಲ್ಲಜೀವಗಳ ಹೃತ್ಕಮಲ ಮಧ್ಯದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ. ಈ ಪಿಂಡಾಂಡ ಮತ್ತು ಬ್ರಹ್ಮಾಂಡ ಎನ್ನುವ ಅದ್ಭುತ ಯಂತ್ರ ನಿರಂತರ ಚಲಿಸುವಂತೆ ಮಾಡುವವ ಆ ಭಗವಂತ. ಆತನೇ ಬ್ರಹ್ಮಾಂಡ ಮತ್ತು ಪಿಂಡಾಂಡದ ಒಡೆಯ. ಎಲ್ಲರೊಳಗಿದ್ದು ಅವರಿಗೆ ಅನುಭವವನ್ನು ಕೊಟ್ಟು ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ. ಸರ್ವ ಕರ್ಮವೂ ಭಗವಂತನ ಮಹಿಮೆಯಿಂದ ಅವನ ಇಚ್ಚೆಯಂತೆ ನಡೆಯುತ್ತದೆ. ಸರ್ವಸಮರ್ಥನಾದ ಭಗವಂತನಿಗೆ ನಾವು ನಮ್ಮನ್ನು  ಅರ್ಪಿಸಿಕೊಳ್ಳಬೇಕು. ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಭಗವಂತನಲ್ಲಿ ಶರಣಾಗತಿ ಇರಬೇಕು. ಕೇವಲ ಕಷ್ಟಕಾಲದಲ್ಲಿ ಮಾತ್ರವಲ್ಲ, ಸದಾ ಕಾಲವೂ ಇರಬೇಕು. ನಮ್ಮಲ್ಲಿ ಸತ್ವಗುಣವನ್ನು ಬೆಳಸಿಕೊಂಡು ಭಗವಂತನಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ ನಮಗೆ ನಿಜವಾದ ಪೂರ್ಣ ಸತ್ವದ ದರ್ಶನವಾಗುತ್ತದೆ. ಆ ಭಗವಂತ ಕಣ್ಣು ತೆರೆದು ಅನುಗ್ರಹ ಮಾಡಿದನೆಂದರೆ ಇತರ ಯಾವ ಸಾಧನವೂ ಬೇಡ. ಸತ್ಯ ನಮ್ಮೆದುರು ತನ್ನನ್ನು ತೆರೆದುಕೊಳ್ಳುತ್ತದೆ ಮತ್ತು ಸರ್ವೋತ್ಕಷ್ಟ ಆನಂದ ನಮ್ಮದಾಗುತ್ತದೆ.

ಜ್ಞಾನಿಯ ಆಯ್ಕೆ

ಕೃಷ್ಣ ಹದಿನೈದನೇ ಅಧ್ಯಾಯದಲ್ಲಿ ಎಲ್ಲ ಅರಿವನ್ನು ಕೊಟ್ಟ ನಂತರ, ಅದರ ಉಪಸಂಹಾರ ಮಾಡುತ್ತ ಹೇಳುತ್ತಾನೆ, “ಇದು ಪ್ರಪಂಚದಲ್ಲಿನ ರಹಸ್ಯಗಳಲ್ಲಿ ಅತಿ ರಹಸ್ಯವಾದದ್ದು. ಅಧ್ಯಾತ್ಮದ ಅಂತರಂಗದ ರಹಸ್ಯವನ್ನು ನಿನಗೆ ಹೇಳಿದ್ದೇನೆ. ನಾನು ಹೇಳಿರುವ ವಿಚಾರವನ್ನು ಸಮಗ್ರವಾಗಿ ಪರಾಂಬರಿಸಿ ನಿನಗೆ ಏನು ತೋಚುತ್ತದೆಯೋ ಅದನ್ನು ಮಾಡು” ಎಂದು.

ಇಲ್ಲಿ “ನಿನ್ನ ಜೀವಸ್ವರೂಪ, ಆತ್ಮಸಾಕ್ಷಿ ಏನು ಹೇಳುತ್ತದೊ ಹಾಗೆ ಮಾಡು” ಎಂದು ಅರ್ಜುನನಿಗೆ ಹೇಳುವ ಮೂಲಕ ನಾವು ಇನ್ನೊಬ್ಬರ ಮೇಲೆ ನಮ್ಮ ಅಭಿಪ್ರಾಯ ಹೇರಬಾರದು ಎನ್ನುವ ಸಮಾಜ ನೀತಿಯನ್ನು ಕೃಷ್ಣ ಎತ್ತಿ ತೋರಿಸಿದ್ದಾನೆ. ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು ಅದಕ್ಕಾಗಿ ಅದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ- ಕೇಳು ಎನ್ನುತ್ತಲೂ ಶ್ರೀಕೃಷ್ಣ, ಅದನ್ನು ಒಪ್ಪಿಕೊಳ್ಳುವ – ಬಿಡುವ, ಅದರಂತೆ ನಡೆಯುವ ಅಥವಾ ನಿರಾಕರಿಸುವ ಆಯ್ಕೆಯನ್ನೂ ಅರ್ಜುನನಿಗೇ ಬಿಡುತ್ತಾನೆ. ತಾನು ತನ್ನ ದೇಹದೊಂದಿಗೆ ತನ್ನನ್ನು ಗುರುತಿಸಿಕೊಂಡು ಏನನ್ನೇ ಆಯ್ಕೆ ಮಾಡಿಕೊಂಡರೂ ಕೊನೆಗೆ ನಿಯಾಮಕನ ಇಚ್ಛೆ ಏನಿದೆಯೋ ಅದರಂತೇ ನಡೆಯುವುದು ಅನ್ನುವ ಕೃಷ್ಣಪಾಠವನ್ನು ನಿಜಜ್ಞಾನಿಯಾದ ಅರ್ಜುನನೂ ಈವೇಳೆಗೆ ಅರಿತುಬಿಟ್ಟಿರುತ್ತಾನೆ. ಅದರ ಪರಿಣಾಮ ನಮಗೆಲ್ಲ ಗೊತ್ತೇ ಇದೆ.

ಧರ್ಮ ನೀಡುವ ಧೈರ್ಯ

ಭಗವದ್ಗೀತೆಯಲ್ಲಿ ಕೃಷ್ಣ, “ಸರ್ವಧರ್ಮಾನ್‌ ಪರಿತ್ಕಜ್ಯ” – ಅಂದರೆ ಎಲ್ಲ ಧರ್ಮಗಳನ್ನೂ ಬಿಟ್ಟುಬಿಡುವುದಲ್ಲ; ಇಲ್ಲಿ ಧರ್ಮ ಅಂದರೆ ಆಚರಣೆ. ಆಚರಣೆಗಳನ್ನು ಬಿಟ್ಟುಬಿಡು, ನನ್ನಲ್ಲಿ ಶರಣಾಗು ಸಾಕು – ಎಂದು. ಒಂದುವೇಳೆ ಪೂಜಾದಿಗಳನ್ನು ಮಾಡಿದರೂ ಅದರಿಂದ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಇರುವುದು – ಎಂದು. ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಕೊಡು ಕೊಳ್ಳುವಿಕೆ ಆಗಬಾರದು. ನಾನು ಪೂಜೆ ಮಾಡುತ್ತೇನೆ ನೀನು ಫಲ ಕೊಡು ಅನ್ನಬಾರದು – ಎಂದು.

ಇದಕ್ಕೆ ಒಂದು ಉತ್ತಮ ದೃಷ್ಟಾಂತ ಧರ್ಮರಾಯ ಮತ್ತು ದ್ರೌಪದಿ ನಡುವಿನ ಸಂಭಾಷಣೆ. ದ್ರೌಪದಿ ಧರ್ಮರಾಯನನ್ನು ಕೇಳುತ್ತಾಳೆ, “ಧರ್ಮೋ ರಕ್ಷತಿ ರಕ್ಷಿತಃ” – ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎನ್ನುವುದನ್ನು ಕೇಳಿದ್ದೇನೆ. ಆದರೆ ಅದು ನಿನ್ನನ್ನು ಏಕೆ ರಕ್ಷಿಸಲಿಲ್ಲ? ನಾವೇಕೆ ರಾಜ್ಯ ಕಳೆದುಕೊಂಡು ಕಾಡು ಸೇರಬೇಕಾಯ್ತು?’ಎಂದು. ಅದಕ್ಕೆ ಪ್ರತಿಯಾಗಿ ಧರ್ಮರಾಯ ಹೇಳುತ್ತಾನೆ, “ನಾನು ಧರ್ಮದ ವ್ಯಾಪಾರಿ ಅಲ್ಲ; ನಾನು ಧರ್ಮ ಆಚರಣೆ ಮಾಡುವುದು ನನ್ನ ಆತ್ಮಸಂತೋಷಕ್ಕಾಗಿ ಹೊರತು ಯಾವುದೋ ಫಲಾಪೇಕ್ಷೆಯಿಂದಲ್ಲ’!

ಹೀಗೆ ಧರ್ಮ ಎನ್ನುವುದೇನಾದರೂ ಇದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ. ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಮುಚ್ಚಟೆಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ನಮಗೆ ಗೀತೆಯ ಮೂಲಕ ಕೃಷ್ಣ ಕೊಟ್ಟ ಕೊನೆಯ ಭರವಸೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.