ಶಿಷ್ಯನಿಂದ ಟೀಕೆಗೆ ಒಳಗಾಗುತ್ತಿದ್ದ ಝೆನ್ ಗುರು ಕೊಸೆನ್ ಅದ್ಭುತ ಕಲಾಕೃತಿ ರಚಿಸಿದ್ದು ಹೇಗೆ? ಇಲ್ಲಿದೆ ಒಂದು ಇಂಟರೆಸ್ಟಿಂಗ್ ಕಥೆ!
ಕ್ಯೋಟೋದಲ್ಲಿರುವ ಒಬಾಕು ದೇವಾಲಯದ ಮಹಾದ್ವಾರದ ಮೇಲೆ ‘ಪ್ರಥಮ ಸೂತ್ರ’ ಎಂದು ಬರೆಯಲಾಗಿದೆ. ಅತ್ಯಂತ ಸುಂದರವಾದ ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ‘ಕೊಸೆನ್’ ಎಂಬ ಕಲಾವಿದ ಇದನ್ನು
ಬರೆದಿದ್ದು. ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ನಕಲು ಮಾಡಿಕೊಂಡು ಕೆತ್ತುತ್ತಿದ್ದರು.
ಕೊಸೆನ್‌ಗೆ ಒಬ್ಬ ಧೈರ್ಯವಂತ ಶಿಷ್ಯ ಇದ್ದ. ಅಕ್ಷರ ಕಲೆಯಲ್ಲಿ (ಕ್ಯಾಲಿಗ್ರಫಿ) ಪರಿಣತಿ ಪಡೆದಿದ್ದ ಕೊಸೆನ್ ಮೊದಲ ಬಾರಿಗೆ ಅಕ್ಷರಗಳನ್ನು ಹಾಳೆಯ ಮೇಲೆ ಬರೆದಾಗ ಅವನೂ ಅಲ್ಲೇ ಇದ್ದ. “ಗುರುವೇ, ಇದು ಚೆನ್ನಾಗಿಲ್ಲ” ಅಂದ. ಗುರು ಮತ್ತೊಮ್ಮೆ ಬರೆದು “ಹೇಗಿದೆ?” ಎಂದು
ಕೇಳಿದ. “ಕೆಟ್ಟದಾಗಿದೆ, ಮೊದಲಿನದೇ ಎಷ್ಟೋ ವಾಸಿ” ಅಂದ ಶಿಷ್ಯ.
ಗುರು ತಾಳ್ಮೆಯಿಂದ ಮತ್ತೆ ಬರೆದ. ಶಿಷ್ಯನಿಗೆ ಅದೂ ಇಷ್ಟವಾಗಲಿಲ್ಲ. ಮತ್ತೆ ಬರೆದ. ಮತ್ತೆ ಚೆನ್ನಾಗಿಲ್ಲ ಅನ್ನುವ ಅಭಿಪ್ರಾಯ ಬಂತು. ಹೀಗೇ ಎಂಬತ್ತನಾಲ್ಕು ಸಲ ‘ಪ್ರಥಮ ಸೂತ್ರ’ ಅನ್ನುವ ಶೀರ್ಷಿಕೆ ಬರೆದ. ಶಿಷ್ಯನಿಗೆ ಯಾವುದೂ ಇಷ್ಟವಾಗಲಿಲ್ಲ. ಇದು ಹೀಗೇ ಮುಂದುವರಿಯುತ್ತಿದ್ದಾಗೆ ಶಿಷ್ಯ ಸ್ವಲ್ಪ ಹೊತ್ತು ಹೊರಗೆ ಹೋಗಬೇಕಾಗಿ ಬಂತು. ಅವನ ಟೀಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ ಅಂದುಕೊಂಡ ಗುರು ನಿರಾಳ ಮನಸ್ಸಿನಿಂದ ಸರಸರನೆ ‘ಪ್ರಥಮ ಸೂತ್ರ’ ಎಂದು ಬರೆದ. ಮರಳಿ ಬಂದ ಶಿಷ್ಯ ಅದನ್ನು ಕಂಡವನೇ, “ಅದ್ಭುತ ಕಲಾಕೃತಿ!” ಎಂದು ಉದ್ಗರಿಸಿದ.
ನಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆ ಎಂದಾದಾಗ ನಾವು ವಿಚಲಿತರಾಗುತ್ತೇವೆ. ಇಂಥ ಮನಸ್ಥಿತಿಯಲ್ಲಿ ನಮ್ಮಿಂದ ಉತ್ತಮವಾದ್ದನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮತ್ತೊಬ್ಬರನ್ನು ಮೆಚ್ಚಿಸಲು ಅಲ್ಲದೆ, ಸಹಜವಾಗಿ ಪ್ರಯತ್ನ ಹಾಕಿದಾಗ ಮಾತ್ರ ಅತ್ಯುತ್ತಮವಾದ್ದನ್ನು ಕೊಡಲು ಸಾಧ್ಯವಾಗುತ್ತದೆ – ಶಿಷ್ಯನಿಂದ ಝೆನ್ ಗುರು ಪಾಠ ಕಲಿತ.