ಪರಿಪೂರ್ಣ ನಗು ಜ್ಞಾನೋದಯದ ಭಾಗ : ಝೆನ್ ತಿಳಿವು

ನಾಲ್ಕನೇಯ ಶತಮಾನದಲ್ಲಿ ನಾಟ್ಯ ಶಾಸ್ತ್ರ ವನ್ನು ರಚನೆ ಮಾಡಿದ ಭರತ, ನಗುವಿನ ವಿವಿಧ ಬಗೆಗಳನ್ನ ಅದು ನೀಡುವ ಉಲ್ಲಾಸಕ್ಕೆ ಅನುಗುಣವಾಗಿ ವಿಂಗಡಿಸಿದ. ಈ ನಾಟಕೀಯ ಅಳತೆಗೋಲಿನಲ್ಲಿ ‘ಸಿತ’ ಅತ್ಯಂತ ಪಕ್ವ ಖುಶಿ ನೀಡುವ ಬಗೆ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಝೆನ್ ನಲ್ಲಿ ನಗುವಿಗೆ ತುಂಬ ಆದ್ಯತೆ. ಪರಿಪೂರ್ಣ ನಗು ಜ್ಞಾನೋದಯದ ಭಾಗ ಎನ್ನುವ ತಿಳುವಳಿಕೆ.

ಒಂದು ದಿನ ಮಾಸ್ಟರ್ ಸುಝುಕಿ ರೋಶಿ ತಮ್ಮ ಶಿಷ್ಯರನ್ನೆಲ್ಲ ಕರೆದುಕೊಂಡು ಮಾವಿನ ತೋಟಕ್ಕೆ ಹೋದರು. ಅದು ಮಾವಿನ ಹಣ್ಣಿನ ಸೀಸನ್ ಆದ್ದರಿಂದ ಮಾವಿನ ಮರಗಳ ತುಂಬ ಭರ್ತಿ ಮಾವಿನ ಹಣ್ಣುಗಳು ತುಂಬಿದ್ದವು.

ಝೆನ್ ಕಲಿಯುತ್ತಿದ್ದ ಶಿಷ್ಯರೆಲ್ಲ ಅತ್ಯಂತ ಶಿಸ್ತಿನಿಂದ, ಗಂಭೀರವಾಗಿ ಮಾವಿನ ಹಣ್ಣುಗಳನ್ನ ಕಿತ್ತು ಬಾಕ್ಸ್ ಗೆ ತುಂಬಿ ಪ್ಯಾಕ್ ಮಾಡತೊಡಗಿದರು.

ಮಾಸ್ಟರ್ ರೋಶಿಗೆ ತನ್ನ ಶಿಷ್ಯರ ವರ್ತನೆ ಕಂಡು ರೋಸಿ ಹೋಯಿತು. ಕೊನೆಗೆ ಮಾಸ್ಟರ್ ರೋಶಿ ಸ್ವತಃ ತಾವೇ ಮರ ಏರಿ, ಹಣ್ಣು ಕಿತ್ತು ಎಲ್ಲ ಶಿಷ್ಯರ ಮೇಲೆ ಎಸೆಯುತ್ತ, ಜೋರಾಗಿ ಕೇಕೆ ಹಾಕಿ ಕೂಗಾಡಲು ಶುರು ಮಾಡುವ ತನಕ,

ಶಿಷ್ಯರಿಗೆ, ತಾವು ಪೂರ್ತಿ ಝೆನ್ ಮರೆತದ್ದು, ಮರೆತೇ ಹೋಗಿತ್ತು.

ನಾಲ್ಕನೇಯ ಶತಮಾನದಲ್ಲಿ ನಾಟ್ಯ ಶಾಸ್ತ್ರ ವನ್ನು ರಚನೆ ಮಾಡಿದ ಭರತ, ನಗುವಿನ ವಿವಿಧ ಬಗೆಗಳನ್ನ ಅದು ನೀಡುವ ಉಲ್ಲಾಸಕ್ಕೆ ಅನುಗುಣವಾಗಿ ವಿಂಗಡಿಸಿದ. ಈ ನಾಟಕೀಯ ಅಳತೆಗೋಲಿನಲ್ಲಿ ‘ಸಿತ’ ಅತ್ಯಂತ ಪಕ್ವ ಖುಶಿ ನೀಡುವ ಬಗೆ.

ಸಿತ : ಮಂದಹಾಸ, ಪ್ರಶಾಂತ, ಸೂಕ್ಷ್ಮ ಮತ್ತು ಸಂಸ್ಕರಿಸಿದ ನಗು.

ಹಸಿತ : ಪ್ರಶಾಂತ ನಗು ಆದರೆ ಈ ನಗುವಿನಲ್ಲಿ ಹಲ್ಲುಗಳ ಸ್ವಲ್ಪ ಭಾಗ ಕಾಣಿಸುತ್ತವೆ.

ವಿಹಾಸಿತ ; ವಿಶಾಲ ಖುಶಿಯ ಮುಖಭಾವ ಸ್ವಲ್ಪ ನಗುವಿನ ಸದ್ದಿನೊಂದಿಗೆ.

ಉಪಹಾಸಿತ : ಜೋರಾದ ಸದ್ದಿನ ನಗು, ತಲೆ, ಭುಜ ಮತ್ತು ತೋಳುಗಳ ಚಲನೆಯೊಂದಿಗೆ.

ಅಪಹಾಸಿತ : ಜೋರಾದ ನಗುವಿನೊಂದಿಗೆ ಕಣ್ಣುಗಳಲ್ಲಿ ನೀರು.

ಅತಿಹಾಸಿತ : ಗಹಗಹಿಸಿ, ತೊಡೆಗಳನ್ನು ಬಡಿದುಕೊಳ್ಳುತ್ತ ಬಿದ್ದು ಬಿದ್ದು, ಉರುಳಾಡಿ ನಗುವುದು.

ನಗುವಿಗೆ ಬೌದ್ಧ ಶಾಸ್ತ್ರಗಳಲ್ಲಿ ವಿಶೇಷ ಗಮನ. ಕೆಲವರ ಪ್ರಕಾರ ಬುದ್ಧನ ನಗು ‘ಸಿತ’ ದ ಉತ್ತುಂಗ ಭಾವ. ಈ ತರ್ಕ ಇಂದಿಗೂ ಬೌದ್ಧ ವಲಯದಲ್ಲಿ ಪ್ರಚಲಿತದಲ್ಲಿದೆ. ಕೆಲವು ಸೂತ್ರಗಳು ಬುದ್ಧ ಯಾವ ಯಾವ ಕಾರಣಕ್ಕೆ ನಕ್ಕ ಎನ್ನುವುದನ್ನ ವಿಶೇಷವಾಗಿ ದಾಖಲಿಸುತ್ತವೆ.

Leave a Reply