ಧ್ಯಾನ ಒಂದು ಆದರ್ಶ; ಇಲ್ಲಿ ಸರಿ ತಪ್ಪುಗಳಿಲ್ಲ, ತಿದ್ದಿ ಸರಿಪಡಿಸಿಕೊಳ್ಳಬೇಕಾದ್ದು ಏನೂ ಇಲ್ಲ, ಧ್ಯಾನದಲ್ಲಿ ಸಾಧ್ಯವಾಗುವುದೆಲ್ಲ ನಮ್ಮ ಮೈಂಡ್ ನ ಆಟವಾಗಿರುವುದರಿಂದ ಅತೃಪ್ತಿಕರ ಧ್ಯಾನ ಎಂಬುವುದಿಲ್ಲ. ಧ್ಯಾನದಲ್ಲಿ ಹೊಮ್ಮುವ ವಿಚಾರಗಳನ್ನು ಸರಿ ತಪ್ಪು ಎಂದು ತೀರ್ಮಾನ ಮಾಡುವ ಅವಶ್ಯಕತೆಯಿಲ್ಲ ~ Dilgo Khyentse Rinpoche । ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನದಲ್ಲಿ ನಮ್ಮನ್ನು ನಾವು ತೊಡಗಿಸಿತೊಂಡಾಗ ಅದು ನಮ್ಮ ಊಟದಷ್ಟೇ, ಉಸಿರಾಟದಷ್ಟೇ ಸಹಜವಾಗಿರಬೇಕು. ಧ್ಯಾನ ನಮಗೆ ವಿಶೇಷವಾದ, ಔಪಚಾರಿಕ, ಸಿದ್ಧ ಮಾದರಿಯ ಕ್ರಿಯೆ ಆಗಬಾರದು, ಹೆಮ್ಮೆಯಿಂದ ಕೂಡಿದ ಗಂಭೀರ ಘನತೆಯ ಕ್ರಿಯೆ ಆಗಬಾರದು. ನಮಗೆ ಗೊತ್ತಿರಬೇಕು ಧ್ಯಾನ ಎಂದರೆ ಪ್ರಯತ್ನ, ತರಬೇತಿ, ಅಭ್ಯಾಸ, ಗುರಿ, ಬಿಡುಗಡೆ ಮತ್ತು ಶರಣಾಗತಿಯ ನಡುವಿನ ದ್ವಂದ್ವದ ಮೀರುವಿಕೆ.
ಧ್ಯಾನ ಒಂದು ಆದರ್ಶ; ಇಲ್ಲಿ ಸರಿ ತಪ್ಪುಗಳಿಲ್ಲ, ತಿದ್ದಿ ಸರಿಪಡಿಸಿಕೊಳ್ಳಬೇಕಾದ್ದು ಏನೂ ಇಲ್ಲ, ಧ್ಯಾನದಲ್ಲಿ ಸಾಧ್ಯವಾಗುವುದೆಲ್ಲ ನಮ್ಮ ಮೈಂಡ್ ನ ಆಟವಾಗಿರುವುದರಿಂದ ಅತೃಪ್ತಿಕರ ಧ್ಯಾನ ಎಂಬುವುದಿಲ್ಲ. ಧ್ಯಾನದಲ್ಲಿ ಹೊಮ್ಮುವ ವಿಚಾರಗಳನ್ನು ಸರಿ ತಪ್ಪು ಎಂದು ತೀರ್ಮಾನ ಮಾಡುವ ಅವಶ್ಯಕತೆಯಿಲ್ಲ. ಆದ್ದರಿಂದ ನಾವು ಸುಮ್ಮನೇ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗಿರುವ ಸ್ಥಿತಿಯಲ್ಲಿ ಸುಮ್ಮನೇ ಲೀನರಾಗಬೇಕು, ಪ್ರಜ್ಞಾಪೂರ್ವಕವಾಗಿ ಹುಟ್ಟುತ್ತಿರುವ ವಿವರಗಳನ್ನು, ‘ ನಾನು ಧ್ಯಾನ ಮಾಡುತ್ತಿದ್ದೇನೆ’ ಎನ್ನುವುದನ್ನೂ ಮರೆಯುತ್ತ .
ನಮ್ಮ ಧ್ಯಾನ ಯಾವ ಪ್ರಯತ್ನ, ಯಾವ ಒತ್ತಡ, ಯಾವ ಆಯಾಸ, ನಿಯಂತ್ರಿಸುವ ನಿರ್ದೇಶಿಸುವ ಯಾವ ಹುಕಿ ಮತ್ತು ಪ್ರಶಾಂತವಾಗಿರಬೇಕು ಎನ್ನುವ ಬಯಕೆಯಿಂದ ಹೊರತಾಗಿರಬೇಕು. ಈ ಯಾವುದಾದರೂ ನಮ್ಮನ್ನು ಗೊಂದಲಕ್ಕೆ ದೂಡುತ್ತಿದೆಯೆಂದರೆ ಸ್ವಲ್ಪ ಹೊತ್ತು ಧ್ಯಾನ ನಿಲ್ಲಿಸಿ ವಿಶ್ರಾಂತಿ ಮಾಡಿ ಮತ್ತೆ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು.
ಧ್ಯಾನದಲ್ಲಿ ಅಥವಾ ಧ್ಯಾನದ ನಂತರ ಯಾವುದಾದರೂ ಆಸಕ್ತಿಕರ ಅನುಭವಗಳಾದರೆ ಅವಕ್ಕೆ ಯಾವ ವಿಶೇಷ ಅರ್ಥ ಹಚ್ಚಲು ಹೋಗಬಾರದು. ಈ ಅನುಭವಗಳ ಬಗ್ಗೆ ಯೋಚಿಸುವುದು ಧ್ಯಾನದಿಂದ ನಮ್ಮ ಗಮನವನ್ನು ಬೇರೆಡೆ ಸೆಳೆಯುವ ಮತ್ತು ಧ್ಯಾನವನ್ನು ಅಸಹಜಗೊಳಿಸುವ ಪ್ರಯತ್ನವಾಗಿರುತ್ತದೆ. ಈ ಅನುಭವಗಳನ್ನು ನಮ್ಮ ಅಭ್ಯಾಸದ ಕುರುಹುಗಳು ಮತ್ತು ಕ್ಷಣಿಕ ಆಗುಹೋಗುಗಳೆಂದು ಮಾನ್ಯ ಮಾಡಬೇಕು. ಈ ಅನುಭವಗಳನ್ನು ಮತ್ತೆ ಮತ್ತೆ ಹೊಂದುವ ಪ್ರಯತ್ನಕ್ಕಿಳಿಯಬಾರದು, ಹಾಗೆ ಮಾಡುವುದೆಂದರೆ ಮೈಂಡ್ ನ ಸಹಜ ಸ್ವಾಭಾವಿಕತೆಯನ್ನ ವಿರೂಪಗೊಳಿಸಿದಂತೆ.