ವೈದ್ಯ ಮಾಧೋ’ನ ಕಾಳಜಿ ಯಾತರದ್ದು!? : ಮಾಧವ ಲಾಹೋರಿ ಕಥೆಗಳು

ತನ್ನ ಊರಿನ ಶ್ರೀಮಂತನಿಗೆ ಹುಷಾರಿಲ್ಲವೆಂದು ತಿಳಿದ ಕೂಡಲೇ ನಾಟಿವೈದ್ಯ ಮಾಧೋ ಇದ್ದ ಕೆಲಸ ಬಿಟ್ಟು ಅವನ ಬಳಿ ಓಡಿದ್ದೇಕೆ!? ಓದಿ ಈ ಚಿಕ್ಕಥೆ… ಮರುರೂಪ ~ ಆನಂದಪೂರ್ಣ

ನಾಟಿವೈದ್ಯನೂ ಆಗಿದ್ದ ಮಾಧವ ಲಾಹೋರಿ, ಒಮ್ಮೆ ತನ್ನ ಹೆಂಡತಿಯ ತಂಗಿಗೆ ಗಂಡು ನೋಡಲು ಪಕ್ಕದ ಊರಿಗೆ ಹೊರಟ. ಅವನು ಆ ಊರಲ್ಲಿ ಬಂಡಿ ಇಳಿಯುತ್ತಲೇ ತನ್ನ ಊರಿನವನೊಬ್ಬ ಸಿಕ್ಕು, ತಮ್ಮ ಊರಿನ ಶ್ರೀಮಂತ ವ್ಯಾಪಾರಿ ಜ್ವರದಿಂದ ಮುಚ್ಚಿದ ಕಣ್ಣು ತೆರೆಯದ ಸ್ಥಿತಿಯಲ್ಲಿದ್ದಾನೆಂದು ಆತಂಕದಿಂದ ಹೇಳಿದ.

ಅದನ್ನು ಕೇಳಿದ ಕೂಡಲೇ ಮಾಧೋ, ಗಂಡು ನೋಡುವ ಕೆಲಸ ಅಷ್ಟಕ್ಕೇ ಬಿಟ್ಟು, ಬಾಡಿಗೆ ಕೂಡಾ ಮಾತಾಡದೆ ಬಂಡಿ ಏರಿ, ತನ್ನ ಊರಿಗೆ ಬಂದು, ಮನೆ ತಲುಪಿಕೊಂಡು, ಬಂಡಿಯವನು ಕೇಳಿದಷ್ಟು ಬಾಡಿಗೆ ಕೊಟ್ಟು, ಹೆಂಡತಿಯ ಬೈಗುಳಕ್ಕೂ ಕಿವಿಗೊಡದೆ ಅವಸರದಿಂದ ತನ್ನ ಔಷಧಿ ಪೆಟ್ಟಿಗೆ ತೆಗೆದುಕೊಂಡು ಶ್ರೀಮಂತನ ಮನೆಯ ಕಡೆ ಹೊರಟ. ನಡುವೆ ಒಂದು ಹೊಳೆ ದಾಟಿದರೆ ಆಚೆ ದಡದಲ್ಲೇ ಶ್ರೀಮಂತನ ಮನೆ.

ಹೊಳೆಯಲ್ಲಿ ನೆರೆ ಬಂದುದರಿಂದ ದೋಣಿಯವನು ತಾನು ದೋಣಿ ನಡೆಸಲಾರೆ ಅಂದುಬಿಟ್ಟ. ಪಟ್ಟುಬಿಡದ ಮಾಧೋ, ಅವನಿಗೆ ಹಚ್ಚಿಗೆ ದುಡ್ಡಿನ ಆಶೆ ತೋರಿಸಿ ಅಂತೂ ನದಿ ದಾಟಿ ಶ್ರೀಮಂತನ ಮನೆ ಮುಟ್ಟಿದ. ದೋಣಿ ಇಳಿದವನೇ ಮದ್ದಿನ ಪೆಟ್ಟಿಗೆ ಎತ್ತಿಕೊಂಡು ಓಡುತ್ತಾ ಶ್ರೀಮಂತನ ಮನೆಯೊಳಕ್ಕೆ ಹೋದ. ನರಳುತ್ತಾ ಮಲಗಿದ್ದ ಭೂಪೇಂದ್ರನ ಬಾಯಿಗೆ ಕಷಾಯ ಕುಡಿಸಿದ. ಆಮೇಲೆ ಎಷ್ಟು ಅವಸರವಾಗಿ ಬಂದಿದ್ದನೋ ಅಷ್ಟೇ ಅವಸರವಾಗಿ ಪಕ್ಕದ ಊರಿಗೆ ಮರಳಿ ಹೊರಟುಬಿಟ್ಟ.

ಮಾಧವ ಲಾಹೋರಿಯ ಧಾವಂತ ನೋಡಿದ ಆ ಊರಿನ ಕೆಲವರು “ಮಾಧೋನಂಥ ವೈದ್ಯ ಈ ಕಾಲದಲ್ಲಿ ಯಾರೂ ಇರಲಿಕ್ಕಿಲ್ಲ. ಅವನಿಗೆ ರೋಗಿಗಳ ಮೇಲಿರುವ ಕಾಳಜಿ ಅದ್ಭುತವೇ ಸರಿ” ಎಂದು ಹೊಗಳತೊಡಗಿದರು. ಇದನ್ನು ಕೇಳಿಸಿಕೊಂಡ ಮಾಧೋನ ಹೆಂಡತಿ ಖುಷಿಯಿಂದ ಗಂಡನಿಗೆ ವರದಿ ಒಪ್ಪಿಸಿದಳು.

ಮಾಧೋ ಮುಗುಳ್ನಗುತ್ತ, “ಕಾಳಜಿ ಇರೋದು ಹೌದು, ಆದರೆ ನನ್ನ ವೈದ್ಯವೃತ್ತಿಯ ಮೇಲೆ! ನಾನು ಅವಸರದಲ್ಲಿ ಹೋಗಿ ಕಷಾಯ ಕುಡಿಸದೇ ಇದ್ದಿದ್ದರೆ, ಆ ಶ್ರೀಮಂತನಿಗೆ ಯಾವ ಮದ್ದೂ ಇಲ್ಲದೆಯೇ ಗುಣವಾಗಿಬಿಡುತ್ತಿತ್ತು! ಈ ಮೊದಲು ಎರಡು-ಮೂರು ಸಲ ಹಾಗಾಗಿದೆ. ಈ ಸಲ ಬೇಗನೆ ಹೋಗಿ ಮದ್ದು ಕೊಟ್ಟು ಬಂದಿದ್ದರಿಂದ, ನನ್ನ ಮದ್ದಿನಿಂದಲೇ ಗುಣವಾದ ಹಾಗೆ ಆಗುತ್ತದೆ. ಇದರಿಂದ ನನ್ನ ಹಣವೂ ವಸೂಲಾಗುತ್ತದೆ, ನನ್ನಿಂದ ಗುಣವಾಯ್ತು ಅನ್ನುವ ಕೀರ್ತಿಯೂ ಹಬ್ಬುತ್ತದೆ” ಅಂದ.

ಇವನ ಈ ಕೀರ್ತಿಯಿಂದಲೇ ಮಾಧೋನ ಹೆಂಡತಿ ತಂಗಿಗೆ ಪಕ್ಕದೂರಿನ ಗಂಡು ನಿಕ್ಕಿಯಾದನೆಂದು ಪ್ರತ್ಯೇಕ ಹೇಳಬೇಕಿಲ್ಲ ತಾನೆ!?  

Leave a Reply