ಝೆನ್ ಕೇವಲ ಕಲಿಕೆಯಲ್ಲ ಅದು ಒಂದು ಸಾಧನ, ನಿಮ್ಮ ಕನಸುವ ಮನಸ್ಸನ್ನು ಎಚ್ಚರಿಸುವ ಸಾಧನ, ನಿಮ್ಮ ಸುತ್ತ ಸದಾ ಅರಿವಿನ ಸ್ಥಿತಿಯನ್ನು ಸಾಧ್ಯಮಾಡುವ ಸಾಧನ | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ವಿದ್ಯಾರ್ಥಿ ಝೆನ್ ಮಾಸ್ಟರ್ ನ ಪ್ರಶ್ನೆ ಮಾಡಿದ,
“ ಮಾಸ್ಟರ್, ಆತ್ಮಕ್ಕೆ ಸಾವು ಇದೆಯಾ ಅಥವಾ ಅದು ಅವಿನಾಶಿಯಾ? ದೈಹಿಕ ಸಾವಿನಿಂದ ನಾವು ತಪ್ಪಿಸಿಕೊಳ್ಳುವುದು ಸಾಧ್ಯವಾ ಅಥವಾ ಈ ದೇಹ ಪೂರ್ಣವಾಗಿ ನಾಶವಾಗುವುದು ಖಂಡಿತವಾ? ನಾವು ಮತ್ತೆ ಹುಟ್ಟಿಬರುವ ವಿಷಯ ನಿಜವಾ? ನಮ್ಮ ಆತ್ಮ ಹಲವಾರು ಭಾಗಗಳಲ್ಲಿ ವಿಭಜನೆಗೊಂಡು ಮತ್ತೆ ಪ್ರಕೃತಿಯಲ್ಲಿ ಸೇರಿಕೊಳ್ಳುತ್ತದೆಯಾ ಅಥವಾ ಒಂದೇ ಇಡಿಯಾದ ಅಸ್ತಿತ್ವದಲ್ಲಿ ಇನ್ನೊಂದು ಜೀವವನ್ನು ಸೇರಿಕೊಳ್ಳುತ್ತದೆಯಾ? ನಮ್ಮ ನೆನಪುಗಳು ನಮ್ಮನ್ನು ಬಿಟ್ಟುಹೋಗುವುದು ಸಾಧ್ಯವೆ? ಪುನರ್ಜನ್ಮದ ಸಿದ್ಧಾಂತ ನಿಜವೋ ಸುಳ್ಳೋ? ಕ್ರಿಶ್ಚಿಯನ್ನರು ಹೇಳುವ ಪುನರುತ್ಥಾನ ಸಾಧ್ಯವೆ? ಅಥವಾ ನಮ್ಮ ಆತ್ಮ ಶುದ್ಧ ಪ್ಲೆಟಾನಿಕ್ ಅಧ್ಯಾತ್ಮವನ್ನು ಪ್ರವೇಶ ಮಾಡುತ್ತದೆಯಾ? “
ಮಾಸ್ಟರ್ : ನಿನ್ನ ಬ್ರೇಕ್ ಫಾಸ್ಟ್ ತಣ್ಣಗಾಗುತ್ತಿದೆ.
ಇದು ಝೆನ್ ನ ವಿಧಾನ, ನಿಮ್ಮನ್ನು ಮತ್ತೆ ಈ ಕ್ಷಣಕ್ಕೆ ವಾಪಸ್ಸು ಕರೆದುಕೊಂಡು ಬರುವುದು. ಈಗ ನಿಮ್ಮ ಕಣ್ಣಮುಂದಿರುವ ಬ್ರೇಕ್ ಫಾಸ್ಟ್ ಯಾವ ಸ್ವರ್ಗ, ಅಧ್ಯಾತ್ಮದ ಪ್ರಶ್ನೆಗಳಿಗಿಂತಲೂ ಮುಖ್ಯವಾದದ್ದು. ನಿಮ್ಮ ಮುಂದಿರುವ ಬ್ರೇಕ್ ಫಾಸ್ಟ, ಪುನರ್ಜನ್ಮ, ಆತ್ಮ, ದೇವರು, ಮುಂತಾದ ಎಲ್ಲ ಮೂರ್ಖ ಸಿದ್ಧಾಂತಗಳಿಗಿಂತ ಮುಖ್ಯವಾದದ್ದು. ಏಕೆಂದರೆ ಬ್ರೇಕ್ ಫಾಸ್ಟ್ ಈಗ ನಿಮ್ಮ ಕಣ್ಣ ಮುಂದಿರುವ ಈ ಕ್ಷಣದ ಸತ್ಯ. ಝೆನ್ ಗೆ ಈ ಕ್ಷಣವೇ ಅಲ್ಟಿಮೇಟ್ ಮತ್ತು ಮುಂದೆ ಆಗಬಹುದಾದದ್ದು ಅಸಂಗತ. ಈ ಕ್ಷಣವೊಂದೇ ಶಾಶ್ವತ ಸತ್ಯ ನೀವು ಅನುಭವಿಸಬೇಕಾದದ್ದು ಈ ನಿಜವನ್ನ ಮಾತ್ರ.
ಹಾಗಾಗಿ ಝೆನ್ ಕೇವಲ ಕಲಿಕೆಯಲ್ಲ ಅದು ಒಂದು ಸಾಧನ, ನಿಮ್ಮ ಕನಸುವ ಮನಸ್ಸನ್ನು ಎಚ್ಚರಿಸುವ ಸಾಧನ, ನಿಮ್ಮ ಸುತ್ತ ಸದಾ ಅರಿವಿನ ಸ್ಥಿತಿಯನ್ನು ಸಾಧ್ಯಮಾಡುವ ಸಾಧನ.
ಇದು ಝೆನ್ ನ ಚೆಲವು, ಇದು ಝೆನ್ ಜಗತ್ತಿಗೆ ಕೊಟ್ಟಿರುವ ಕ್ರಾಂತಿಕಾರಿ ತಿಳುವಳಿಕೆ. ಝೆನ್ ನ ಪ್ರಯತ್ನ ನಿಮ್ಮನ್ನು ಸದಾ ಎಚ್ಚರದಲ್ಲಿಡುವುದು, ಕನಸು ಕಾಣುವ ನಿಮ್ಮ ಹವ್ಯಾಸವನ್ನು ನಿಮಗೆ ಮನವರಿಕೆ ಮಾಡಿಕೊಡುವುದು. ಮಹಾ ಮಹಾ ಸಂಗತಿಗಳು ಇಲ್ಲ ಅಂತಲ್ಲ ಆದರೆ ಝೆನ್ ಗೆ ಆ ವಿಷಯಗಳ ಬಗೆಗಿನ ಮಾತಿನಲ್ಲಿ ಆಸಕ್ತಿ ಇಲ್ಲ.
ಝೆನ್, ನಂಬುವ ವ್ಯವಸ್ಥೆ ಅಲ್ಲ ಅದು ಅರಿವಿನ ವಿಧಾನ.
ಝೆನ್ ಮಾಸ್ಟರ್ ಹೈಕುನ್, ತನ್ನ ಶಿಷ್ಯರಿಗೆ ಆಶ್ರಮದ ಎದುರು ಚಹಾ ಅಂಗಡಿ ಇಟ್ಟುಕೊಂಡಿದ್ದ ಹೆಂಗಸಿನ ಝೆನ್ ತಿಳುವಳಿಕೆಯ ಬಗ್ಗೆ ಮೇಲಿಂದ ಮೇಲೆ ವರ್ಣಿಸಿ ಹೇಳುತ್ತಿದ್ದ.
ಮಾಸ್ಟರ್ ಮಾತನ್ನು ಶಿಷ್ಯರು ನಂಬುತ್ತಿರಲಿಲ್ಲ, ತಾವೇ ಪರೀಕ್ಷೆ ಮಾಡಲು ಮುಂದಾಗುತ್ತಿದ್ದರು.
ತನ್ನ ಅಂಗಡಿಗೆ ಬಂದ ಸನ್ಯಾಸಿಗಳಿಗೆ, ಆ ಹೆಣ್ಣು ಮಗಳು ಪ್ರಶ್ನೆ ಮಾಡುತ್ತಿದ್ದಳು.
“ ನೀವು ಇಲ್ಲಿ ಬಂದಿರುವುದು ಚಹಾ ಕುಡಿಯಲಿಕ್ಕೋ ಅಥವಾ ನನ್ನ ಝೆನ್ ಜ್ಞಾನ ಪರೀಕ್ಷೆ ಮಾಡಲಿಕ್ಕೋ ? “
ಚಹಾ ಕುಡಿಯಲಿಕ್ಕೆ ಎಂದವರಿಗೆ ರುಚಿಯಾದ ಚಹಾ ಮಾಡಿ ಕುಡಿಸುತ್ತಿದ್ದಳು.
ಝೆನ್ ಬಗ್ಗೆ ಚರ್ಚೆ ಮಾಡಬೇಕು ಎಂದವರನ್ನು, ಪರದೆಯ ಹಿಂದೆ ಬರಲು ಕೇಳಿಕೊಳ್ಳುತ್ತಿದ್ದಳು. ಅವರು ಪರದೆಯ ಹಿಂದೆ ಬಂದೊಡನೆ ಪೊರಕೆ ತೆಗೆದುಕೊಂಡು ಸರಿಯಾಗಿ ಬಾರಿಸಲು ಶುರು ಮಾಡುತ್ತಿದ್ದಳು.
ಹತ್ತರಲ್ಲಿ ಒಂಭತ್ತು ಜನ ಅವಳ ಪೊರೆ ಏಟಿನ ರುಚಿ ಉಂಡಿದ್ದಾರೆ.