ಸಂತನಿಗೆ ದೇವತೆಗಳ ಮೇಲೆ ಅನುಕಂಪ ಉಂಟಾಯ್ತು. ಕೊನೆಗೆ, “ಆಗಲಿ. ನನಗೇ ಅರಿವಿಲ್ಲದಂತೆ, ನನ್ನ ಗಮನಕ್ಕೆ ಬಾರದಂತೆ, ನಾನು ಮಾಡಿದೆ ಅಂದುಕೊಳ್ಳುವ ಪ್ರಮೇಯವೇ ಇಲ್ಲದಂತೆ ನನ್ನಿಂದ ಒಳಿತಾಗುವಂಥ ವರ ಕೊಡಿ” ಅಂದ. ಆಮೇಲೆ… । ನಿರೂಪಣೆ: ಅಲಾವಿಕಾ
ತುಂಬಾ ತುಂಬಾ ವರ್ಷಗಳ ಹಿಂದೆ ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ಸಂತನಿದ್ದ. ಅವನೆಷ್ಟು ಸಂತನೆಂದರೆ, ತಾನು ಯಾರಿಗಾದರೂ ಸಹಾಯ ಮಾಡಿದರೆ ‘ತಾನು’ ‘ಮಾಡಿದೆ’ ಎಂದು ತನಗೇ ಗೊತ್ತಿಲ್ಲದಷ್ಟು ಸಂತ! ಒಳಿತು ಮಾಡಿ ಮರೆತುಬಿಡುವಷ್ಟು ಸಂತ. ತಾನೊಬ್ಬ ಇದ್ದೇನೆ ಎಂದೇ ಅಂದುಕೊಳ್ಳದೆ ಪರಿಪೂರ್ಣವಾಗಿ ಬದುಕುತ್ತಿದ್ದ ಸಂತ.
ಇಂಥಾ ಸಂತನಿಗೆ ಏನಾದರೂ ವರ ಕೊಡಲೇಬೇಕೆಂದು ದೇವತೆಗಳು ಪರಮಾತ್ಮನಿಗೆ ದುಂಬಾಲು ಬಿದ್ದವು. ಪರಮಾತ್ಮನೂ “ಅವನಿಗೇನು ಬೇಕೋ ಕೇಳಿಕೊಂಡು ಬನ್ನಿ” ಅಂದು ಕಳಿಸಿದ.
ಭೂಮಿಗೆ ಬಂದ ದೇವತೆಗಳು ಸಂತನನ್ನು ಸುತ್ತುವರಿದು “ನಿನಗೆ ನೀನು ಮುಟ್ಟಿದ ಮಾತ್ರಕ್ಕೆ ಜನರ ಕಾಯಿಲೆ ವಾಸಿಯಾಗುವ ವರ ಬೇಕೆ?” ಎಂದು ಕೇಳಿದವು. ಸಂತ ತಲೆಯಾಡಿಸಿ “ಅದು ಪರಮಾತ್ಮನ ಕೆಲಸ, ಅವನೇ ಮಾಡಿಕೊಳ್ತಾನೆ” ಅಂದ.
“ನೀನು ನೋಡಿದ ಮಾತ್ರಕ್ಕೆ ಜನರ ಬದುಕಲ್ಲಿ ಸಂತಸ ಮೂಡುವ ವರ ಬೇಕೆ?” ಎಂದು ಕೇಳಿದವು.
“ನೋಡಿದ ಮಾತ್ರಕ್ಕೆ ಸಂತಸ ಮೂಡಬೇಕೆಂದರೆ ಆ ಪರಮಾತ್ಮನೇ ದರ್ಶನ ಕೊಡಬೇಕು, ನಾನು ಹುಲುಮಾನವ” ಅಂದ ಸಂತ.
ದೇವತೆಗಳು ಪಟ್ಟುಬಿಡದೆ, “ನಿನ್ನ ನೀತಿ ನಿಜಾಯಿತಿಗಳಿಗೆ ಜನರು ಮಾರುಹೋಗಿ ನಿನ್ನ ಅನುಯಾಯಿಗಳಾಗುವಂತೆ ಮಾಡಬೇಕೆ?” ಅಂದರು.
ಸಂತ “ಬೇಡವೇ ಬೇಡ. ಹಾಗೇನಾದರೂ ಆದರೆ ಜನ ದೇವರಿಂದ ವಿಮುಖರಾಗಿ ಪವಾಡಗಳಿಗೆ ಹಾತೊರೆಯತೊಡಗ್ತಾರೆ. ಜನರು ಪರಮಾತ್ಮನಿಂದ ವಿಮುಖವಾಗಬಾರದು” ಅಂದುಬಿಟ್ಟ.
ಈಗಂತೂ ದೇವತೆಗಳಿಗೆ ತೀರಾ ನಿರಾಸೆಯಾಯ್ತು. ಅವರು ಅವನನ್ನು ಸುತ್ತುವರಿದು, “ಏನಾದರೊಂದು ವರ ಕೇಳಲೇಬೇಕು, ಇಲ್ಲದಿದ್ರೆ ನಾವಂತೂ ಇಲ್ಲಿಂದ ಹೋಗೋದಿಲ್ಲ” ಎಂದು ಹಠ ಹೂಡಿದವು.
ಸಂತನಿಗೆ ಅವರ ಮೇಲೆ ಅನುಕಂಪ ಉಂಟಾಯ್ತು. ಕೊನೆಗೆ, “ಆಗಲಿ. ನನಗೇ ಅರಿವಿಲ್ಲದಂತೆ, ನನ್ನ ಗಮನಕ್ಕೆ ಬಾರದಂತೆ, ನಾನು ಮಾಡಿದೆ ಅಂದುಕೊಳ್ಳುವ ಪ್ರಮೇಯವೇ ಇಲ್ಲದಂತೆ ನನ್ನಿಂದ ಒಳಿತಾಗುವಂಥ ವರ ಕೊಡಿ” ಅಂದ.
ದೇವತೆಗಳು ಸಧ್ಯ ಇವನೇನೋ ಒಂದು ಕೇಳಿದನಲ್ಲ ಅಂತ ಸಮಾಧಾನವಾಯ್ತು. ತಮ್ಮತಮ್ಮಲ್ಲೆ ಚರ್ಚೆ ಮಾಡಿ, ಅವನ ಇಕ್ಕೆಲಗಳಲ್ಲಿ ಮತ್ತು ಬೆನ್ನ ಹಿಂದೆ ನೆರಳು ಬಿದ್ದಾಗ, ಆ ನೆರಳು ಯಾವುದರ ಮೇಲೆ ಬೀಳುತ್ತದೋ ಆ ಜಾಗ ಹಸನಾಗುವಂತೆ, ಜೀವಿಗಳ ಮೇಲೆ/ವ್ಯಕ್ತಿಗಳ ಮೇಲೆ ಬಿದ್ದರೆ ಅವರು ಎಲ್ಲ ಬಗೆಯಲ್ಲೂ ಉದ್ಧಾರವಾಗುವಂತೆ ವರ ಕೊಡೋಣವೆಂದು ನಿರ್ಧರಿಸಿದರು. ಆದರೆ ಈ ಒಳ್ಲೆಯ ಕೆಲಸಗಳು ಸಂತನ ಅರಿವಿಗೆ ಬರದಂತೆ ಆಗಬೇಕಿದ್ದರಿಂದ ನೆರಳಿನ ವಿಷಯ ಅವನಿಗೆ ಹೇಳುವ ಹಾಗಿರಲಿಲ್ಲ. ಆದ್ದರಿಂದ ಮೌನವಾಗಿ ಅವನ ಮುಂದೆ ನಿಂತು ಮನಸಲ್ಲೇ ವರ ಕೊಟ್ತು ಹೊರಟುಹೋದವು.
ಆ ಕ್ಷಣದಿಂದ ಸಂತ ನಡೆದಾಡಿದ ಜಾಗವೆಲ್ಲ ಸಂಪನ್ನವಾಯ್ತು. ಆ ವಿನಮ್ರ ಸಂತನ ಮೌನ ಕೃಪೆಗಾಗಿ ಜನ ಅವನ ಸುತ್ತ ನೆರೆಯುತ್ತಿದ್ದರೂ ಅವನಿಗೆ ತೊಂದರೆಯಾಗದಿರಲೆಂದು ಅವನ ಹತ್ತಿರ ಹೋಗುತ್ತಿರಲಿಲ್ಲ. ಅವನನ್ನು ಮಾತಾಡಿಸುತ್ತಿರಲಿಲ್ಲ. ಅವನಿಗಾಗಿ ಕಾದು ನಿಂತು, ನೆರಳು ಸೋಕಿಸಿಕೊಂಡು, ಬೆನ್ನ ಹಿಂದೆ ಕೈಮುಗಿದು ಹೊರಟುಹೋಗುತ್ತಿದ್ದರು.
ದಿನಕಳೆದಂತೆ ಜನರ ಪ್ರೀತಿಯ ಅಗಾಧ ಆಕಾಶದಲ್ಲಿ ಸಂತ ನೆಲೆಗೊಂಡ. ಜನ ಅವನೊಡನೆ ಅದೆಷ್ಟು ಮೌನವಾಗಿ ಸಂವಹನ ಮಾಡುತ್ತಿದ್ದರೆಂದರೆ, ಬರಬರುತ್ತ ಅವನ ಹೆಸರನ್ನೂ ಅವರು ಮರೆತುಬಿಟ್ಟರು. ಕೊನೆಗೆ “ಪವಿತ್ರ ನೆರಳು” ಅನ್ನುವುದೇ ಅವನ ಹೆಸರಾಗಿಹೋಯ್ತು.