ಭಗವದ್ಗೀತೆಯ ಈ ಶ್ಲೋಕಗಳ ಮುಖಾಂತರ ಶ್ರೀಕೃಷ್ಣ, ತನಗೆ ಎಂಥಾ ಭಕ್ತರು ಪ್ರಿಯ ಎಂದು ಹೇಳುತ್ತಿದ್ದಾನೆ…
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ । ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ ॥೧೩॥ ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ । ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ ॥೧೪॥
“ಯಾವ ಜೀವಿಗಳಲ್ಲೂ ಹಗೆಯಿರದವರು, ಎಲ್ಲರ ಜೊತೆ ಸ್ನೇಹದಿಂದಿರುವವರು, ದುಃಖವನ್ನು ಕಂಡು ಕರಗುವವರು, ನಾನು-ನನ್ನದು ಎಂಬ ಹಮ್ಮಿರದವರು, ಸುಖದಲ್ಲಿ ಹಿಗ್ಗದವರು, ದುಃಖದಲ್ಲಿ ಕುಗ್ಗದವರು, ತಾಳ್ಮೆ ತಪ್ಪದವರು, ಯಾವಾಗಲೂ ತೃಪ್ತಿಯಿಂದಿರುವವರು, ಧ್ಯಾನಸಾಧನೆಯಲ್ಲಿ ತೊಡಗಿದವರು, ಬದ್ಧನಿಶ್ಚಯರಾದವರು,
ತಮ್ಮೆಲ್ಲಾ ಅರಿವನ್ನೂ ನನಗೆ ಅರ್ಪಿಸಿದವರು – ಇಂಥ ನನ್ನ ಭಕ್ತರು ನನಗೆ ಅಚ್ಚುಮೆಚ್ಚು” ಅನ್ನುತ್ತಿದ್ದಾನೆ ಶ್ರೀಕೃಷ್ಣ
ಭಗವಂತನಿಗೆ ಭಕ್ತನ ಯಾವೆಲ್ಲ ಗುಣಗಳು ಇಷ್ಟವಾಗುತ್ತವೆ ಎಂದು ಕೃಷ್ಣ ವಿವರಿಸುತ್ತಾ ಮೊದಲನೆಯದಾಗಿ ಹೇಳುತ್ತಾನೆ: “ಅದ್ವೇಷ್ಟಾ ಸರ್ವಭೂತಾನಾಂ” ಎಂದು. ಅಂದರೆ ಯಾರನ್ನೂ ದ್ವೇಷಿಸದಿರುವುದು. ಇದು ಭಗವದ್ಭಕ್ತನಲ್ಲಿ ಇರಬೇಕಾದ ಮೊದಲನೇ ಗುಣ. ದ್ವೇಷದಲ್ಲಿ ಎರಡು ವಿಧ. ಒಂದು – ಒಳ್ಳೆಯವರನ್ನು (ಅವರ ಉದ್ಧಾರವನ್ನು ಕಂಡು) ದ್ವೇಷಿಸುವುದು; ಇನ್ನೊಂದು ಕೆಟ್ಟವರನ್ನು(ಅವರ ಕೆಟ್ಟತನವನ್ನು ಕಂಡು) ದ್ವೇಷಿಸುವುದು. ದ್ವೇಷ ಬರುವುದು ಅಸಹನೆ ಮತ್ತು ಹೊಟ್ಟೆಕಿಚ್ಚಿನಿಂದಾಗಿ. ಇನ್ನೊಬ್ಬರ ಉತ್ಕರ್ಷವನ್ನು ಕಂಡು ಸಂಕಟಪಡುವುದು ದ್ವೇಷ. ಒಳ್ಳೆಯವನಿರಲಿ, ಕೆಟ್ಟವನಿರಲಿ, ಹೊಟ್ಟೆಕಿಚ್ಚು ಅಸಹನೆ ಬೇಡ. ಎಲ್ಲಿ ಒಳ್ಳೆಯತನವಿದೆ ಅದನ್ನು ಪ್ರೀತಿಸು, ಸ್ನೇಹ ಬೆಳೆಸು. ದುಷ್ಟರನ್ನು ದೂರ ಬಿಟ್ಟುಬಿಡು. ಒಳ್ಳೆಯತನವನ್ನು, ಒಳ್ಳೆಯವರನ್ನು ಪ್ರೀತಿಸು. ಇನ್ನೊಬ್ಬರ ಕಷ್ಟವನ್ನು ಕಂಡು ಕರಗು. ನಾನು, ನನ್ನದು, ನನ್ನಿಂದ ಎನ್ನುವ ಅಹಂಕಾರ ಮಮಕಾರವನ್ನು ಬಿಟ್ಟುಬಿಡು. ಹೇಗೆ ಅಹಂಕಾರ ಒಳ್ಳೆಯದಲ್ಲವೋ ಹಾಗೇ ಅತಿಯಾದ ಮಮಕಾರವೂ ಒಳ್ಳೆಯದಲ್ಲ. ಇನ್ನೊಬ್ಬರ ಮೇಲೆ ಕ್ಷಮಾ ಭಾವನೆ ಇರಲಿ, ಪ್ರತೀಕಾರ ಬೇಡ.
ಮುಂದುವರಿದು ಕೃಷ್ಣ ಹೇಳುತ್ತಾನೆ: “ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ” ಎಂದು. ಯಾವುದೇ ಒಬ್ಬ ಮನುಷ್ಯ ಸುಖವಾಗಿರಬೇಕಾದರೆ ಇರಬೇಕಾದ ಚಿತ್ತವೃತ್ತಿ ‘ಅತೃಪ್ತಿ ಇಲ್ಲದೆ ಇರುವುದು’. ಜೀವನದಲ್ಲಿ ನಮ್ಮೆಲ್ಲ ದುಃಖಗಳಿಗೆ ಕಾರಣ ಅತೃಪ್ತಿ. ಇಲ್ಲದೆ ಇರುವುದರ ಬಗೆಗೆ ಅತೃಪ್ತಿ ಪಡುವುದರ ಬದಲು ಇರುವುದರ ಬಗ್ಗೆ ತೃಪ್ತಿ ಪಡು. ಏನಿದೆ ಅದರಲ್ಲಿ ತೃಪ್ತಿ ಪಡುವುದನ್ನು ಅಭ್ಯಾಸ ಮಾಡು. ಸದಾ ಯೋಗಿಯಾಗು…
ಇಲ್ಲಿ ಯೋಗಿ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ವಿವಿಧ ಆಸನಗಳ ಅಭ್ಯಾಸ ಯೋಗವಲ್ಲ. ಮನಸ್ಸನ್ನು ಏಕಾಗ್ರಗೊಳಿಸಲು ಮಾಡಬೇಕಾದ ಪ್ರಕ್ರಿಯೆ ಯೋಗ. ಹಾಗೆಯೇ, ಯಾವುದನ್ನೂ ಕೆಟ್ಟ ಭಾವದಿಂದ ಕಾಣದೆ ಇರಲು ಪ್ರಯತ್ನಿಸು. ಅಧ್ಯಾತ್ಮದ ದಾರಿಯಲ್ಲಿ ಅಚಲವಾದ ನಿರ್ಧಾರವಿರಲಿ. ಏನೇ ಬರಲಿ ದೃಢನಿಶ್ಚಯದಿಂದ ಮುಂದೆ ಸಾಗು. ಮನಸ್ಸು ಭಗವಂತನಿಗಾಗಿ ಹಾತೊರೆಯಲಿ, ಬುದ್ಧಿ ಭಗವಂತನನ್ನು ಅರಿಯಲಿ. ಈ ರೀತಿ ಯಾರು ನನ್ನನ್ನು ಪ್ರೀತಿಸುತ್ತಾರೋ ಅವರು ನನಗೆ ಅತ್ಯಂತ ಪ್ರಿಯರು ಅನ್ನುತ್ತಾನೆ ಕೃಷ್ಣ.