ಕಾಳಿದಾಸನ ಸಂಸ್ಕೃತ ಕಾವ್ಯ ‘ಋತುಸಂಹಾರ’ದ ಕಿರುಪರಿಚಯ ಮತ್ತು ಕೆಲವು ಕಾವ್ಯಹನಿಗಳನ್ನು ಅನುವಾದ ಮಾಡಿದ್ದಾರೆ, ಹೆಸರಾಂತ ಬರಹಗಾರರಾದ ಶ್ರೀ ಕೇಶವ ಮಳಗಿ…
ಕಾಳಿದಾಸನ ಸಂಸ್ಕೃತ ಕಾವ್ಯ ‘ಋತುಸಂಹಾರ’ ಮನುಷ್ಯ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ನಿಸರ್ಗವನ್ನು ಬೆರಗಿನಿಂದ ನೋಡುತ್ತ, ಚಕಿತಗೊಳ್ಳುವ ಪದ್ಯಗಳ ಗೊಂಚಲು. ಆರು ಋತುಗಳಲ್ಲಿ (ವಸಂತ, ಗ್ರೀಷ್ಮ, ವರ್ಷ, ಶರದ, ಹೇಮಂತ, ಶಿಶಿರ) ಮನುಷ್ಯನ ಬದಲಾಗುವ ಸ್ವಭಾವ, ಬಯಕೆ, ಮನೋಕಾಮನೆಗಳನ್ನು ವಿಸ್ಮಯಕರವಾಗಿ ಸೆರೆ ಹಿಡಿಯುತ್ತದೆ. ಪ್ರಕೃತಿಯನ್ನು ಬಿಟ್ಟರೆ ಮನುಷ್ಯನಿಗೆ ಬೇರೆ ಬದುಕಿಲ್ಲ, ಅದನ್ನು ಅರಿತು, ಹೊಂದಿಕೊಳ್ಳುವುದೇ ಆತನಿಗಿರುವ ಬಾಳ ದಾರಿ ಎಂದು ಸೂಚ್ಯವಾಗಿ ಅರುಹುತ್ತದೆ. ಭಾವೋದ್ವೇಗ, ಹಗುರತೆ, ಹಮ್ಮುಬಿಮ್ಮು, ಚಿಂತೆ, ವಿರಹ, ಮಿಲನ, ಸಂತಸ, ಸುಖಗಳು ಇಲ್ಲಿ ತೆರೆದುಕೊಳ್ಳುವ ಬಗೆ ಆಕರ್ಷಕ. ನಿಸರ್ಗದಲಿ ಅಡಗಿರುವ ಮರಗಿಡ, ಹಣ್ಣು, ಹಕ್ಕಿ,ಹೂವಿನ ಪರಿಮಳ, ನೀರ ಹರಿವು, ಗಾಳಿ, ಮಳೆಗಳನ್ನು ನಾವು ಇಲ್ಲಿಯವರೆಗೂ ನೋಡಿಯೇ ಇರಲಿಲ್ಲವಲ್ಲ, ಎನ್ನುವ ರೀತಿಯಲ್ಲಿ ಸಹೃದಯ ಓದುಗರ ಮುಂದಿಡುವುದು ಕವಿಯ ಚಕ್ಯತೆ.
ಋತುವಿಗೆ ತಕ್ಕಂತೆ ಪ್ರಕೃತಿಯ ಹೊರನೋಟ ಬದಲಾಗುತ್ತದೆ. ಆದರೆ, ಋತುಚಕ್ರಗಳು ನಿರಂತರ. ಅಂತೆಯೇ, ಮನುಷ್ಯನ ಹೊರಾವರಣ ರೂಪಾಂತರಗೊಳ್ಳುತ್ತದೆ. ಆದರೆ, ಮನುಷ್ಯರ ಆದಿಮ ಬಯಕೆ-ಭಾವನೆಗಳು ಎಂದಿಗೂ ಬದಲಾಗವು ಎನ್ನುವುದನ್ನು ಕಾವ್ಯ ಹೇಳುತ್ತದೆ. ಋತುಸಂಹಾರ ಮನುಷ್ಯನ ದಿಗ್ವಿಜಯದ, ಮಹತ್ತರ ಸಾಧನೆಗಳ ಕಥೆಗಳನ್ನು ಹೇಳುವುದಿಲ್ಲ. ಬದಲಿಗೆ, ಅದು ಕಥಿಸುವುದು ಹೃದಯವನು ಗೆಲ್ಲುವಲಿ ಬೇಕಿರುವುದು ಏನು? ಎಂಬ ಒಡೆದು ತೆರೆದಿಟ್ಟ ಒಡಪು. ಸೆಲೆಯನು ಅಡ್ಡಗಟ್ಟಿದ ಮಣ್ಣನು ಸರಿಸಿದಾಗ ನದಿಯಾಗಿ ಹರಿಯುವ ನೀರಿನಂತೆ, ಎದೆಯ ಅಂತಃಕರಣದ ನಾಡಿಗಳನು ತಟ್ಟಿದಾಗ ಅಗೋಚರ ಭಾವಪ್ರವಾಹ ಉಕ್ಕುಕ್ಕಿ ಹರಿಯಬಲ್ಲುದು ಎಂಬುದನ್ನು ‘ಋತುಸಂಹಾರ’, ‘ಮೇಘದೂತ’ ಎತ್ತಿ ತೋರಿಸುತ್ತವೆ.
ಇಲ್ಲಿರುವ ಕೆಲವೇ ಸ್ವೈರ ಅನುವಾದಗಳು ಶಿಶಿರ ಋತುವಿನಲ್ಲಿ ಮನುಷ್ಯನ ಪಾಡನ್ನು ಹಾಡುತ್ತವೆ.
ಋತು ಸಂಹಾರ: ಹೇಮಂತ, ಶಿಶಿರ ಉಪ್ಪರಿಗೆಯಲಿನ ಶರತ್ಕಾಲದ ಇರುಳ ಚಂದಿರನ ಬೆಳದಿಂಗಳು; ನವಿರು ಇಬ್ಬನಿಯ ತಂಗಾಳಿ, ಮೈಗೆ ಲೇಪಿಸುವ ಗಂಧ. ಇವ್ಯಾವೂ ಜನಕೆ ಸುಖವ ನೀಡದ ಕಾಲವಿದು! * ಜನ ಬೆಂಕಿ ಕಾಯಿಸುತ, ಇಲ್ಲವೇ ನೇಸರನ ಬಿಸಿಲಿಗೆ ಮೈಯೊಡ್ಡಿ ಕೂರುವ ಕಾಲ, ತರುಣಿಯರು ಕೌದಿಯನು ಕವುಚಿಕೊಂಡಿಹರು, ಮನೆಯ ಕಿಟಕಿಗಳೋ, ಮುಚ್ಚಿಕೊಂಡಿಹವು. * ಈ ಚಳಿಗಾಲ ರುಚಿಕರ ಸಿಹಿ ತಿನಿಸು, ಘಮಿಸುವ ಕಷಾಯ, ಸಣ್ಣಕ್ಕಿ ಅನ್ನ, ನೊರೆ ತುಂಬಿದ ಕಬ್ಬಿನ ಹಾಲು ಸುಖವ ನೀಡುವ ಪ್ರೇಮದುನ್ಮಾದದ ಅಪ್ಪುಗೆ, ಸುರತ ಸುಖಗಳನು ನೀಡಬಹುದು. ಇರಲಿ, ಪ್ರೇಮಿಗಳನು ಅಗಲಿ ದೂರವಿರುವ ಸಂಗಾತಿಗಳಿಗೂ ಈ ಶಿಶಿರಋತು ನೆಮ್ಮದಿಯನೇ ತರಲಿ! * ಹೂವಿನ ಸುಗಂಧದ ಮದಿರೆಯ ಪರಿಮಳ ಬಾಯಿಂದ ಸೂಸುತಿದೆ ಬಿಸಿಯುಸಿರ ಸುವಾಸನೆ ಮೈಗಳನು ಸುತ್ತುತಿದೆ ಮದನನ ಮೋಹಕತೆಗೊಳಗಾದ ತರುಣ ಸಂಗಾತಿಗಳು ಒಬ್ಬರನೊಬ್ಬರು ತಬ್ಬಿ ನಿದಿರೆಯನು ನಟಿಸುತಿಹರು. * ಬೆಳಗು ನೇಸರ ಬೆಳಕಲಿ ಹೂವಿನಂತಹ ಮುಖದ ತರುಣಿ, ಕೈಯಲಿದೆ ಕನ್ನಡಿ. ಗೆಣೆಕಾರ ಗಾಯಗೊಳಿಸಿರುವ ಕಚ್ಚಿ ತುಟಿಗಳನು, ಗೀರಿದ ಗಾಯಗಳ ನೋಡಿ, ಸವರಿಕೊಳ್ಳುತಲಿಹಳು. * ಗಂಡಂದಿರು ನೂರೆಂಟು ತಪ್ಪೆಸಗಿರಬಹುದು ಆಗೀಗ ಹೀಯಾಳಿಸಿರಲೂ ಬಹುದು, ಈದೀಗ ದಿಗಿಲು ತುಂಬಿದ ಮನದಲಿ ನಡಗುತಲಿಹರು, ಹಾಸಿಗೆಯ ಸುಖವ ಬಯಸುತಲಿಹರು! ರವಷ್ಟು ಧಿಮಾಕಿನಲಿ ಇದನೆಲ್ಲ ನಿರುಕಿಸುವ ಹೆಂಗಳೆಯರು ಅವರ ಕುಕೃತ್ಯಗಳನು ಉದಾರವಾಗಿ ಕ್ಷಮಿಸುತಿಹರು! * ಇಲ್ಲೊಬ್ಬಳು ತರುಣಿ, ಪರಿಮಳವ ಸೂಸಿ ಬಾಡಿದ ಹೂದಂಡೆಯನು ದಟ್ಟ ಮೋಡದ ಹಾಗಿರುವ ಕೂದಲ ರಾಶಿಯ ತುರುಬಿಂದ ತೆಗೆಯುತಲಿಹಳು. ಎದೆಯ ಭಾರಕೆ ನಲುಗಿ ಬಾಗುತಿರುವಂತೆ ಬಗ್ಗಿಸಿದ ತಲೆಯನೆತ್ತಿ ಮತ್ತೊಮ್ಮೆ ತುರುಬನ್ನು ಕಟ್ಟಿಕೊಳ್ಳುತಲಿಹಳು! * ಹುಲ್ಲಿನ ಅಂಚಿಂದ ಜಾರುತಿರುವ ಇಬ್ಬನಿ ಚಳಿಗಾಲದ ಬೆಳಗಿನ ಕಂಬನಿ. ತರುಣಿಯರ ಅಂಗಾಂಗ ನಜ್ಜುಗುಜ್ಜು, ದೇಹಕೆ ದಣಿವು. ಇರಲಿ, ಅದಕೆ ಸಾಟಿಯಿಲ್ಲದ ಸೊಬಗನೇ ಈ ಋತು ದಯಪಾಲಿಸುವುದು! * ಸಪೂರ ಕಾಲುಗಳ ತರುಣಿ, ಕೇಳಿಲ್ಲಿ: ಚೆಲುವಿನಲಿ ಹೊಳೆಯುವ ಬತ್ತದ ಗದ್ದೆ ಮೌನದ ಕನಸಿನ ಹಾಗೆ ಕಂಗೊಳಿಸುತಿಹುದು, ಮಂಜು ಮೂಡುವ ಕಾಲ. ಕೇಳುತಿದೆ ಕೊಕ್ಕರೆಗಳ ಮಿಲನ ಕಲರವ ತರುಣಿಯರ ಹೃದಯವನು ಮೋಹಗೊಳಿಸುತಿಹವು. ಉತ್ಕಟ ಪ್ರೇಮವನುಕ್ಕಿಸುವ ಚಳಿಗಾಲವೆಂದರೆ ಎಲ್ಲ ಬಾಲೆಯರಿಗೂ ಹಿತ. ಸುಖ ನೆಮ್ಮದಿಯ ತರುವ ಕಾಲ!