“ಪ್ರೀತಿಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಯಾವ ಗೊಂದಲವಿಲ್ಲ. ಅವರು ಪ್ರೀತಿಗಾಗಿ ಚಡಪಡಿಸುತ್ತಿದ್ದಾರೆ; ಕೊನೆಯಿಲ್ಲದ ಹಾಗೆ ಸತತವಾಗಿ ಪ್ರೀತಿಯ ಕುರಿತಾದ ಖುಶಿಯ, ದುಃಖದ ಕಥೆಗಳ ಪುಸ್ತಕ ಓದುತ್ತಾರೆ, ಸಿನೇಮಾ ನೋಡುತ್ತಾರೆ, ನೂರಾರು ಭಾವನಾತ್ಮಕ ಪ್ರೇಮದ ಹಾಡುಗಳನ್ನ ಕೇಳುತ್ತಾರೆ ಆದರೆ ಯಾರಿಗೂ ಪ್ರೀತಿಯ ಬಗ್ಗೆ ಕಲಿಯಬೇಕಾದದ್ದು ಸಾಕಷ್ಟು ಇದೆ ಎನ್ನುವುದರ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ” ಅನ್ನುತ್ತಾರೆ ಎರಿಕ್ ಫ್ರಾಮ್ (Erich Fromm) । ಕನ್ನಡಕ್ಕೆ : ಚಿದಂಬರ ನರೇಂದ್ರ
Is Love an Art ?
ಪ್ರೀತಿ ಒಂದು ಕಲೆಯೇ? ಹಾಗಾದರೆ ಪ್ರೀತಿಯನ್ನು ಸಾಧಿಸಲು ತಿಳುವಳಿಕೆ ಮತ್ತು ಪ್ರಯತ್ನ ಅವಶ್ಯಕ. ಅಥವಾ ಪ್ರೀತಿ ಒಂದು ಮಧುರ ಸಂವೇದನೆಯೇ? ಹೀಗಾದರೆ ಪ್ರೀತಿಯ ಅನುಭವ ಒಂದು ಅದೃಷ್ಟದ ಆಟ, ಒಬ್ಬರು ಅದೃಷ್ಟವಂತರಾದರೆ ಮಾತ್ರ ಕೈಗೆಟುವಂಥದು. ಈ ಪುಟ್ಟ ಪುಸ್ತಕದಲ್ಲಿ ಪ್ರೀತಿಯ ಕುರಿತಾಗಿ ಮೇಲೆ ಮೊದಲು ಹೇಳಿದ ಸಂಗತಿಯನ್ನ ಶೋಧಿಸಲು ಪ್ರಯತ್ನ ಮಾಡುತ್ತಿದ್ದೇನೆ ಆದರೆ ನಿಸ್ಸಂಶಯವಾಗಿ ಬಹುಸಂಖ್ಯಾತರು ಪ್ರೀತಿಯ ಕುರಿತಾದ ಎರಡನೇಯ ವ್ಯಾಖ್ಯಾನವನ್ನು ಧೃಡವಾಗಿ ನಂಬುತ್ತಾರೆ.
ಪ್ರೀತಿಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಯಾವ ಗೊಂದಲವಿಲ್ಲ. ಅವರು ಪ್ರೀತಿಗಾಗಿ ಚಡಪಡಿಸುತ್ತಿದ್ದಾರೆ; ಕೊನೆಯಿಲ್ಲದ ಹಾಗೆ ಸತತವಾಗಿ ಪ್ರೀತಿಯ ಕುರಿತಾದ ಖುಶಿಯ, ದುಃಖದ ಕಥೆಗಳ ಪುಸ್ತಕ ಓದುತ್ತಾರೆ, ಸಿನೇಮಾ ನೋಡುತ್ತಾರೆ, ನೂರಾರು ಭಾವನಾತ್ಮಕ ಪ್ರೇಮದ ಹಾಡುಗಳನ್ನ ಕೇಳುತ್ತಾರೆ ಆದರೆ ಯಾರಿಗೂ ಪ್ರೀತಿಯ ಬಗ್ಗೆ ಕಲಿಯಬೇಕಾದದ್ದು ಸಾಕಷ್ಟು ಇದೆ ಎನ್ನುವುದರ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ.
ಜನರ ಈ ವಿಶಿಷ್ಟ ವರ್ತನೆ ಹಲವಾರು ಆಧಾರಗಳನ್ನು ಅವಲಂಬಿಸಿದೆ, ಈ ಆಧಾರಗಳು ಕೆಲವೊಮ್ಮೆ ಒಂದೊಂದಾಗಿ ಅಥವಾ ಒಮ್ಮೊಮ್ಮೆ ಸಮಗ್ರವಾಗಿ ಅವರ ಈ ವರ್ತನೆಗೆ ಪುಷ್ಟಿ ಕೊಡುತ್ತವೆ. ಬಹುತೇಕ ಜನರು ಪ್ರೀತಿಯ ಸಮಸ್ಯೆಯನ್ನು ಪ್ರಾಥಮಿಕವಾಗಿ ಪ್ರೀತಿಸುವುದಕ್ಕಿಂತ, ಪ್ರೀತಿಸಲ್ಪಡುವುದರ ಕುರಿತಾದ ಸಮಸ್ಯೆ ಎಂದು ಗುರುತಿಸುತ್ತಾರೆ. ಹಾಗಾಗಿ ಅವರ ಮುಖ್ಯ ಸಮಸ್ಯೆ ‘ ಹೇಗೆ ಪ್ರೀತಿಸಲ್ಪಡುವುದು, ಹೇಗೆ ಪ್ರೀತಿಗೆ ಪಾತ್ರರಾಗುವುದು’ ಎನ್ನುವುದು. ಈ ಒಂದು ಹುಡುಕಾಟದಲ್ಲಿ ಅವರು ಹಲವಾರು ದಾರಿಗಳನ್ನು ಶೋಧಿಸುತ್ತಾರೆ. ಒಂದು ದಾರಿ ಮುಖ್ಯವಾಗಿ ಗಂಡಸರಿಗೆ ಸಂಬಂಧಿಸಿದ್ದು, ಬದುಕಿನಲ್ಲಿ ಯಶಸ್ವಿಯಾಗುವುದು, ಅಧಿಕಾರವನ್ನು ಹೊಂದುವುದು ಮತ್ತು ತಮ್ಮ ಸಾಮಾಜಿಕ ವ್ಯವಸ್ಥೆ ಅನುಮತಿಸುವ ಹಂತಗಳಲ್ಲಿ ಅತ್ಯಂತ ಹೆಚ್ಚಿನ ಮಟ್ಟ ಮುಟ್ಟುವುದು. ಇನ್ನೊಂದು ದಾರಿ ವಿಶೇಷವಾಗಿ ಹೆಂಗಸರು ತುಳಿಯುವಂಥದು, ಆಕರ್ಷಕವಾಗಿ ಕಾಣಿಸಿಕೊಳ್ಳುವಂತೆ ತಮ್ಮ ದೇಹ, ಉಡುಪು ಇತ್ಯಾದಿಗಳನ್ನು ಚೆಂದವಾಗಿರಿಸಿಕೊಳ್ಳಲು ಪ್ರಯತ್ನ ಮಾಡುವುದು. ತಮ್ಮನ್ನು ಸುಂದರವಾಗಿ ಇತರರ ಎದುರು ಪ್ರಸ್ತುತ ಪಡಿಸಿಕೊಳ್ಳುವ ಇತರ ದಾರಿಗಳನ್ನ ಗಂಡಸರು, ಹೆಂಗಸರು ಇಬ್ಬರೂ ಬಳಸುತ್ತಾರೆ, ಆಹ್ಲಾದಕರ ಹಾವಭಾವಗಳನ್ನು ರೂಢಿಸಿಕೊಳ್ಳುವುದು, ಆಸಕ್ತಿದಾಯಕ ಸಂಭಾಷಣಾ ಕಲೆಯನ್ನು ಬಳಸುವುದು, ಒಬ್ಬರಿಗೊಬ್ಬರು ಸಹಾಯ ಮಾಡುವುದು, ಸಭ್ಯತೆ ಮತ್ತು ಆಕ್ರಮಣಶೀಲವಲ್ಲದ ವರ್ತನೆಯನ್ನ ಮೈಗೂಡಿಸಿಕೊಳ್ಳುವುದು ಮುಂತಾಗಿ.
ಪ್ರೀತಿಗೆ ಪಾತ್ರರಾಗಲು ಜನ ಬಳಸುವ ಈ ಹಲವಾರು ದಾರಿಗಳು ಮುಖ್ಯವಾಗಿ ಯಶಸ್ವಿಯಾಗಲು, ಗೆಳೆಯರನ್ನು ಗೆಲ್ಲಲು, ಇತರರನ್ನು ಪ್ರಭಾವಿಸಲು ಬಳಸುವ ತಂತ್ರಗಳೇ ಆಗಿವೆ. ನಿಜವಾಗಿ ನಮ್ಮ ಸಂಸ್ಕೃತಿಯಲ್ಲಿ ‘ಪ್ರೀತಿಗೆ ಪಾತ್ರವಾಗುವುದು’ ಎನ್ನುವುದರ ಬಗ್ಗೆ ಬಹುತೇಕ ಜನರ ತಿಳುವಳಿಕೆಯೆಂದರೆ ಜನಪ್ರಿಯರಾಗುವುದು ಮತ್ತು ಸೆಕ್ಸ್ ಅಪೀಲ್ ಬೆಳೆಸಿಕೊಳ್ಳುವುದರ ಸಮ್ಮಿಶ್ರಣ.
(….. ಮುಂದುವರೆಯುವುದು)
ಮುಂದುವರೆದ ಭಾಗವನ್ನು ಓದಲು ಕಾತುರನಾಗಿದ್ದೇನೆ, ಮೇಲೆ ತಿಳಿಸಿದ ಕೆಲವು ವಿಷಯಗಳಲ್ಲಿ ನನ್ನದೇ ಅದಾ ಭಿನ್ನಾಭಿಪ್ರಾಗಳಿವೆ, ಪೂರ್ತಿ ಓದಿದ ನಂತರ ಅದರ ಬಗ್ಗೆ ತಿಳಿಸಲೆತ್ನಿಸುತ್ತೇನೆ.