ನಾನು ಯಾರೂ ಅಲ್ಲ, ಏನೂ ಅಲ್ಲ, ಬುದ್ಧ ಅಷ್ಟೇ

ಬುದ್ಧನ ಮುಖ ಕಂಡಾಗ ಜ್ಯೋತಿಷಿಗೆ ಇನ್ನೂ ಅಚ್ಚರಿಯಾಯಿತು. ಬುದ್ಧನ ಮುಖದಲ್ಲಿ ಚಕ್ರವರ್ತಿಯೊಬ್ಬನಿಗೆ ಇರಬೇಕಾದ ಗಾಂಭೀರ್ಯ, ಅಧಿಕಾರ, ಚೆಲುವು, ಪ್ರಭಾವಳಿ ಎಲ್ಲ ಎದ್ದು ಕಾಣುತ್ತಿತ್ತು. ಆದರೆ ಬುದ್ಧ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡಿದ್ದ ಭಿಕ್ಷುವಾಗಿದ್ದ. ಆಮೇಲೆ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಬುದ್ಧ ಅರಳಿಮರದ ಕೆಳಗೆ ಧ್ಯಾನಸ್ಥನಾಗಿದ್ದಾಗ ಅಲ್ಲಿಗೆ ಒಬ್ಬ ಜ್ಯೋತಿಷಿ ಆಗಮಿಸಿದ, ಆತ ತುಂಬ ಬೆರಗಿನಲ್ಲಿದ್ದ. ಅವನು ಮರಳಿನ ಮೇಲೆ ಮೂಡಿದ್ದ ಬುದ್ಧನ ಹೆಜ್ಜೆ ಗುರುತುಗಳನ್ನ ಹಿಂಬಾಲಿಸಿ ಅಲ್ಲಿಗೆ ಬಂದಿದ್ದ. ಬುದ್ಧನ ಹೆಜ್ಜೆ ಗುರುತುಗಳನ್ನ ಕಂಡಾಗ ಜ್ಯೋತಿಷಿಗೆ ತನ್ನ ಕಣ್ಣುಗಳನ್ನೇ ನಂಬಲಿಕ್ಕಾಗಲಿಲ್ಲ. ಅವನು ಇಷ್ಟು ವರ್ಷ ಅಧ್ಯಯನ ಮಾಡಿದ್ದ ಎಲ್ಲ ಜ್ಯೋತಿಷ ಶಾಸ್ತ್ರಗಳ ಪ್ರಕಾರ ಆ ಹೆಜ್ಜೆ ಗುರುತಿನಲ್ಲಿ ಚಕ್ರವರ್ತಿಯೊಬ್ಬನ ಹೆಜ್ಜೆಯಲ್ಲಿರಬಹುದಾದ ಎಲ್ಲ ಗುರುತುಗಳೂ ಇದ್ದವು. ತಾನು ಇಷ್ಟು ಕಾಲ ಅಧ್ಯಯನ ಮಾಡಿದ್ದ ಜ್ಯೋತಿಷ ತಪ್ಪಿರಬಹುದೆ ಎನ್ನುವ ಸಂಶಯ ಆ ಜ್ಯೋತಿಷಿಯಲ್ಲಿ ಮೂಡಿತು, ಏಕೆಂದರೆ ಅಂಥ ರಣ ಬಿಸಿಲಿನಲ್ಲಿ, ಆ ಕುಗ್ರಾಮದ ಬರಡು ನದಿಯ ದಂಡೆಯ ಮೇಲೆ ಚಕ್ರವರ್ತಿಯೊಬ್ಬ ಬರಿಗಾಲಿನಲ್ಲಿ ಓಡಾಡಿರಬಹುದೆಂದು ಕಲ್ಪಿಸಿಕೊಳ್ಳಲೂ ಆ ಜ್ಯೋತಿಷಿಗೆ ಆಗುತ್ತಿರಲಿಲ್ಲ.

ಆ ಹೆಜ್ಜೆಗುರುತಿನ ಒಡೆಯನನ್ನು ಭೇಟಿ ಮಾಡಲೇಬೇಕೆಂದು ಜ್ಯೋತಿಷಿ ಹೆಜ್ಜೆಗುರುತುಗಳನ್ನು ಹಿಂಬಾಲಿಸುತ್ತ ಬಂದಾಗ ಆತ ಅರಳಿಮರದ ಕೆಳಗೆ ಧ್ಯಾನಸ್ಥನಾಗಿದ್ದ ಬುದ್ಧನಿಗೆ ಎದುರಾದ. ಬುದ್ಧನ ಮುಖ ಕಂಡಾಗ ಜ್ಯೋತಿಷಿಗೆ ಇನ್ನೂ ಅಚ್ಚರಿಯಾಯಿತು. ಬುದ್ಧನ ಮುಖದಲ್ಲಿ ಚಕ್ರವರ್ತಿಯೊಬ್ಬನಿಗೆ ಇರಬೇಕಾದ ಗಾಂಭೀರ್ಯ, ಅಧಿಕಾರ, ಚೆಲುವು, ಪ್ರಭಾವಳಿ ಎಲ್ಲ ಎದ್ದು ಕಾಣುತ್ತಿತ್ತು. ಆದರೆ ಬುದ್ಧ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡಿದ್ದ ಭಿಕ್ಷುವಾಗಿದ್ದ.

ಜ್ಯೋತಿಷಿ ಬುದ್ಧನ ಎದುರು ತಲೆಬಾಗಿ ವಂದನೆ ಸಲ್ಲಿಸಿ ಪ್ರಶ್ನೆ ಮಾಡಿದ, “ ಮಹಾನುಭಾವ ಯಾರು ನೀನು? ಭಿಕ್ಷುವಿನಂತೆ ಈ ಮರದ ಕೆಳಗೆ ಕುಳಿತು ಏನು ಮಾಡುತ್ತಿರುವೆ. ನಿನ್ನ ಚೆಹರೆಯಲ್ಲಿ ಈ ಜಗತ್ತನ್ನಾಳುವ ಚಕ್ರವರ್ತಿಗಿರಬೇಕಾದ ಎಲ್ಲ ಲಕ್ಷಣಗಳಿವೆ. ಒಂದು ನಾನು ಈ ವರೆಗೆ ಓದಿರುವ ಎಲ್ಲ ಶಾಸ್ತ್ರಗಳು ತಪ್ಪು ಅಥವಾ ನಾನು ಯಾವುದೋ ಭ್ರಮೆಯಲ್ಲಿರುವೆ. ನನ್ನ ಅನುಮಾನವನ್ನು ಪರಿಹರಿಸು. “

“ ಶಾಸ್ತ್ರಗಳು ಸರಿ ಇರಬಹುದು ಆದರೆ ಯಾರೂ ಅಲ್ಲದ, ಏನೂ ಅಲ್ಲದ ಸ್ಥಿತಿಯೊಂದಿದೆ ಅವನು ಚಕ್ರವರ್ತಿಯಲ್ಲ, ಅವನನ್ನು ಯಾವ ಗುಂಪಿನಲ್ಲೂ ಇಡಲು ಸಾಧ್ಯವಿಲ್ಲ. ನಾನು ಆ ಸ್ಥಿತಿ, ನಾನು ಇರುವೆನಾದರೂ, ನಾನು ಯಾರೂ ಅಲ್ಲ.” ಬುದ್ಧ ಜ್ಯೋತಿಷಿಯ ಪ್ರಶ್ನೆಗೆ ಉತ್ತರಿಸಿದ.

“ ನಿನ್ನ ಮಾತುಗಳನ್ನ ಕೇಳುತ್ತಿರುವಾಗ ನನಗೆ ಕುತೂಹಲ ಹೆಚ್ಚುತ್ತಿದೆ, ಇನ್ನೂ ಅಚ್ಚರಿಯಾಗುತ್ತಿದೆ. ನೀನು ವರ್ಣಿಸುತ್ತಿರುವಂಥ ಮನುಷ್ಯನೊಬ್ಬ ಇರಬಹುದಾ. ನೀನೇನಾದರೂ ಈ ಜಗತ್ತನ್ನು ಕಾಪಾಡಲು ಬಂದಿರುವ ಭಗವಂತನಾ ಅಥವಾ ಗಂಧರ್ವ ಪುರುಷನಾ? ನಿನ್ನ ಕಣ್ಣುಗಳನ್ನ ನೋಡಿದರೆ ನನಗೆ ಹಾಗೆನಿಸುತ್ತಿದೆ.” ಜ್ಯೋತಿಷಿ ಮತ್ತೆ ಬುದ್ಧನನ್ನು ಪ್ರಶ್ನೆ ಮಾಡಿದ.

“ ಅಲ್ಲ, ನಾನು ದೇವನೂ ಅಲ್ಲ, ಗಂಧರ್ವನೂ ಅಲ್ಲ. ನಾನು ಯಾರೂ ಅಲ್ಲ, ಏನೂ ಅಲ್ಲ .” ಬುದ್ಧ ತನ್ನ ಮಾತುಗಳನ್ನ ಪುನರುಚ್ಚರಿಸಿದ.

ಆದರೆ ಜ್ಯೋತಿಷಿ ಸುಮ್ಮನಾಗಲಿಲ್ಲ ಬುದ್ದನನ್ನು ಕೇಳುತ್ತಲೇ ಹೋದ, “ ನೀನು ವೇಷ ಮರೆಸಿಕೊಂಡಿರುವ ರಾಜನಾ? ಯಾರು ನೀನು ? ನೀನು ಪ್ರಾಣಿಯಾಗಿರುವುದು ಸಾಧ್ಯವಿಲ್ಲ, ಮರ, ನದಿ, ಬಂಡೆಯಾಗಿರುವುದು ಸಾಧ್ಯವಿಲ್ಲ. ಯಾರು ನೀನು? “

ಬುದ್ಧ, ಜ್ಯೋತಿಷಿಗೆ ಕೊಟ್ಟ ಉತ್ತರವನ್ನು ತಿಳಿದುಕೊಳ್ಳುವುದು ಬಹಳ ಮಹತ್ವದ್ದು. ಬುದ್ದ ಹೇಳಿದ,

“ನಾನು ಕೇವಲ ಬುದ್ಧ, ನಾನು ಕೇವಲ ಅರಿವು ಬೇರೇನೂ ಅಲ್ಲ. ನಾನು ಯಾವ ಮನುಷ್ಯ ಪ್ರಕಾರಕ್ಕೂ ಸೇರುವುದಿಲ್ಲ. ಹೀಗೆ ಪ್ರಕಾರಗಳನ್ನು ಮಾಡುವುದೇ ಮನುಷ್ಯನನ್ನು ಗುರುತಿಸುವುದಕ್ಕಾಗಿ ಆದರೆ ನನಗೆ ಯಾವ ಗುರುತೂ ಇಲ್ಲ ಹಾಗಾಗಿ ನಾನು ಯಾವ ಪ್ರಕಾರಕ್ಕೂ ಸೇರುವುದಿಲ್ಲ. ನಾನು ಕೇವಲ ಬುದ್ಧ ಅಷ್ಟೇ. “

Leave a Reply