ತ್ರಿಗುಣಮಯೀ ಜಗತ್ತು : ಭಗವದ್ಗೀತೆಯ ಭೋದನೆ

ಇಡೀ ಜಗತ್ತು ತ್ರಿಗುಣಗಳಿಂದ ಮೋಹಿತವಾಗಿರುವುದರಿಂದ ಮತ್ತು ಈ ಮೂರು ಗುಣಗಳು ಎಲ್ಲಾ ಕಡೆ ತುಂಬಿರುವುದರಿಂದ ನಮಗೆ ತ್ರಿಗುಣಾತೀತವಾದುದರ ಕಲ್ಪನೆಯೂ ಅಸಾಧ್ಯ. ಈ ಕಾರಣದಿಂದ ತ್ರಿಗುಣಾತೀತನೂ ಅವ್ಯಯನೂ ಆದ ಆ ಭಗವಂತನನ್ನು (ಶುದ್ಧಾತ್ಮವನ್ನು) ಪೂರ್ಣವಾಗಿ ಗ್ರಹಿಸಲು ನಮಗೆ ಸಾಧ್ಯವಿಲ್ಲ.

ಈ ಪ್ರಪಂಚ ಎಂದರೆ ಅಂತರಂಗ ಮತ್ತು ಬಹಿರಂಗ. ಅಂತರಂಗ ಪ್ರಪಂಚದಲ್ಲಿ ತ್ರೈಗುಣ್ಯದ ಭಾವನೆಗಳು, ಬಾಹ್ಯ ಪ್ರಪಂಚದಲ್ಲಿ ತ್ರೈಗುಣ್ಯ ಪದಾರ್ಥಗಳು. ಸತ್ವ, ರಜಸ್ಸು ಮತ್ತು ತಮಸ್ಸು ಈ ಮೂರರ ಸಮಾವೇಶವೇ ಈ ಪ್ರಪಂಚ. ಮಣ್ಣು ತಮೋಗುಣದ, ನೀರು ರಜೋಗುಣದ ಮತ್ತು ಬೆಂಕಿ ಸತ್ವ ಗುಣದ ಸಂಕೇತ. ಆದ್ದರಿಂದ ಈ ಪ್ರಪಂಚದಲ್ಲಿ ನಮಗೆ ಕಾಣುವ ಪ್ರತಿಯೊಂದು ವಸ್ತುವೂ ಕೂಡಾ ಈ ಮೂರರ ಸಮಾವೇಶ. ನಮ್ಮ ಅಂತರಂಗದ ಭಾವನೆಗಳೂ ಕೂಡಾ ಈ ಮೂರು ಗುಣದ ಸಮಾವೇಶ. ಸೃಷ್ಟಿಯ ಆದಿಯಲ್ಲಿ ಈ ಮೂರು ಗುಣಗಳ ಮಿಶ್ರಣವಾಗಿಯೇ ಸೃಷ್ಟಿ ಪ್ರಾರಂಭವಾಯಿತು. ಇಲ್ಲಿ ಯಾವುದೋ ಒಂದು ಮಾತ್ರ ಶುದ್ಧ ಸತ್ವ ಅನ್ನುವಂತಿಲ್ಲ. ಎಲ್ಲವೂ ಸಮಾನವೇ.

ಹೀಗೆ ಪ್ರತಿಯೊಂದು ಪದಾರ್ಥದಲ್ಲಿಯೂ ಮೂರು ಅಂಶಗಳಿರುವಂತೆ, ನಮ್ಮ ಭಾವದಲ್ಲಿಯೂ ಮೂರು ಅಂಶಗಳಿವೆ. ಈ ಮೂರು ಗುಣಗಳ ಸಂಕೀರ್ಣ ಪ್ರಪಂಚ ಬಹಳ ವಿಚಿತ್ರ. ಇವು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಮನುಷ್ಯ ತೀರ್ಮಾನ ಮಾಡಲಾಗದಷ್ಟು ಗೊಂದಲಗೆಡಿಸುತ್ತವೆ.

ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, “ತ್ರೈಗುಣ್ಯ ವರ್ಜಿತನಾಗಿ (ದ್ದರೂ) ಈ ಮೂರು ಗುಣಗಳನ್ನು ಕೊಡುತ್ತಿರುವವನು ನಾನೇ” ಎಂದು! ಪ್ರತಿಯೊಂದು ಜೀವದ ಜೀವ ಸ್ವಭಾವಕ್ಕನುಗುಣವಾಗಿ, ಅದಕ್ಕೆ ಬೇಕಾದ ಗುಣ ಪ್ರವೃತ್ತಿಯನ್ನು ಕೊಡುವವನು ಆ ಭಗವಂತ. “ನಹಿ ಪ್ರತಿಬಿಂಬಸ್ಯ ಕ್ರಿಯಾ | ಸ ಹಿ ಬಿಂಬ ಕ್ರಿಯೈವ ಕ್ರಿಯಾವಾನ್ ||”. ಬಿಂಬದಲ್ಲಿ ಕ್ರಿಯೆ ಇಲ್ಲದೆ ಪ್ರತಿಬಿಂಬದಲ್ಲಿ ಕ್ರಿಯೆ ಇಲ್ಲ. ಆದ್ದರಿಂದ ಭಗವಂತನ ಅಧೀನವಾಗಿ ಈ ಮೂರು ಗುಣಗಳು ಈ ಪ್ರಪಂಚದಲ್ಲಿ ತುಂಬಿಕೊಂಡಿವೆ. ಆದರೆ, ಸಕಲ ಜೀವರಾಶಿಗೆ ಗುಣ ದಯಪಾಲಿಸುವ ಭಗವಂತ, ಸ್ವತಃ ತ್ರೈಗುಣ್ಯ ವರ್ಜಿತ. ಆತ ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿಲ್ಲ. ಆದ್ದರಿಂದ ಭಗವಂತನನ್ನು “ತ್ರಿಗುಣಾತೀತ ವಿದಾರಕ ಪರಿತೋ ತೇಹಿಸುಭಕ್ತಿಂ ಕರುಣಾಪೂರ್ಣ ಪರಪ್ರದ ಚರಿತಂ ಜ್ಞಾಪಯಮೇತೇ” ಎಂದು ಸ್ತುತಿಸುತ್ತಾರೆ. ಇಡೀ ಜಗತ್ತು ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿದೆ ಆದರೆ ಭಗವಂತ ತ್ರಿಗುಣಾತೀತ. ಅಂದರೆ, ಶುದ್ಧಾತ್ಮ ಅಥವಾ ಪರಬ್ರಹ್ಮವು ತ್ರಿಗುಣಾತೀತ.

ಇಡೀ ಜಗತ್ತು ತ್ರಿಗುಣಗಳಿಂದ ಮೋಹಿತವಾಗಿರುವುದರಿಂದ ಮತ್ತು ಈ ಮೂರು ಗುಣಗಳು ಎಲ್ಲಾ ಕಡೆ ತುಂಬಿರುವುದರಿಂದ ನಮಗೆ ತ್ರಿಗುಣಾತೀತವಾದುದರ ಕಲ್ಪನೆಯೂ ಅಸಾಧ್ಯ. ಈ ಕಾರಣದಿಂದ ತ್ರಿಗುಣಾತೀತನೂ ಅವ್ಯಯನೂ ಆದ ಆ ಭಗವಂತನನ್ನು (ಶುದ್ಧಾತ್ಮವನ್ನು) ಪೂರ್ಣವಾಗಿ ಗ್ರಹಿಸಲು ನಮಗೆ ಸಾಧ್ಯವಿಲ್ಲ. ಅಂದರೆ, ನಿರ್ಗುಣನ ಪ್ರತಿಬಿಂಬಗಳೇ ಆದ ನಮ್ಮ ವಾಸ್ತವ ರೂಪವನ್ನು ಗ್ರಹಿಸಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ನಮ್ಮನ್ನು ನಾವು ಅರಿಯಬೇಕಾದರೆ, ನಾವು ಈ ತ್ರಿಗುಣದ ಚಕ್ರದಿಂದ ಹೊರಕ್ಕೆ ಬರಬೇಕು. ಆದರೆ ಹೊರ ಬರುವ ಮಾರ್ಗ ಯಾವುದು? ಇದಕ್ಕೂ ಭಗವದ್ಗೀತೆಯೇ ಉತ್ತರ ಹೇಳುತ್ತದೆ.  
ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ॥7.14॥

ಅರ್ಥ: ಗುಣಮಯವಾದ ನನ್ನ ಮಾಯೆ ಅತ್ಯಂತ ಶಕ್ತಿಶಾಲಿ, ಅದನ್ನು ದಾಟುವುದು ಸುಲಭವಲ್ಲ. ಯಾರು ನನ್ನಲ್ಲಿ ಮೊರೆ ಹೋಗುತ್ತಾರೋ ಅವರು ಈ ಮಾಯೆಯನ್ನು ದಾಟುತ್ತಾರೆ!

ಭಗವಂತನನ್ನು ಸೇರುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ. ಆತ ಮಿಥ್ಯಾ ಜಗತ್ತಿನ ಮಾಯಾ ಪರದೆಯನ್ನು ಸರಿಸಿ ದರ್ಶನ ಕೊಡಬಲ್ಲ. ಭಗವಂತನಲ್ಲದೆ ನನಗೆ ಬೇರೆ ಅಸ್ತಿತ್ವವಿಲ್ಲ ಎನ್ನುವ ಎಚ್ಚರದಿಂದ ನಾವು ನಮ್ಮನ್ನು ಆತನಿಗೆ ಅರ್ಪಿಸಿಕೊಂಡರೆ ಆತ ನಮ್ಮನ್ನು ತ್ರಿಗುಣದಿಂದ ಪಾರುಗಾಣಿಸಿ, ಅತೀತನಾದ ತನ್ನನ್ನು ತೋರಿಸಿಕೊಳ್ಳಬಲ್ಲ. ಇಲ್ಲಿ ಭಗವಂತನಿಗೆ ಶರಣಾಗುವುದು ಅಂದರೆ, ಸ್ವಾರ್ಥವನ್ನು ಕಳಚಿಕೊಂಡು, ನಾನು ಈ ಜೀವ, ನನ್ನ ನಾಮರೂಪಾದಿಗಳು ಇಂತಿಂಥವು ಅನ್ನುವ ಅಹಂಕಾರವನ್ನು ಕಳಚಿಕೊಂಡು, ನಮ್ಮ ಅಂತರಂಗವನ್ನು, ನಮ್ಮ ಶುದ್ಧಾತ್ಮವನ್ನು ಕಂಡುಕೊಂಡು ಅದಕ್ಕೆ ಆತುಕೊಳ್ಳುವುದು. ನನ್ನ ಆತ್ಮದ ಅರಿವೇ, ಅದರ ನಿಜಸ್ವರೂಪದ ಅರಿವೇ ಮುಕ್ತಿಯ ಏಕೈಕ ದಾರಿಯೆಂದು ಈ ಅರಿವಿಗೆ ಶರಣಾಗುವುದು. ಹೀಗೆ ಸ್ವಾರ್ಥವೇ ಇಲ್ಲವಾದ ಮೇಲೆ, ಅಹಂಕಾರವೇ ಇಲ್ಲವಾದ ಮೇಲೆ, ನಮ್ಮಲ್ಲಿ ತ್ರಿಗುಣಗಳಿಗೆ ನೆಲೆಯಾದರೂ ಎಲ್ಲಿ? ತ್ರಿಗುಣಗಳು ಕಳಚಿಕೊಂಡ ಮೇಲೆ, ಮುಕ್ತಿಯೇ ನಮ್ಮ ಪಾಲಿಗೆ ಉಳಿಯುವ ಏಕೈಕ ದಾರಿ!

Leave a Reply